ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ಪೈರೇಟ್ಸ್‌

ಕಬಡ್ಡಿ: ಕೊನೆಯ ನಿಮಿಷದಲ್ಲಿ ಎಡವಟ್ಟು ಮಾಡಿಕೊಂಡ ಮುಂಬಾ, ಪಟ್ನಾಕ್ಕೆ ರೋಚಕ ಗೆಲುವು
Last Updated 5 ಮಾರ್ಚ್ 2016, 20:11 IST
ಅಕ್ಷರ ಗಾತ್ರ

ನವದೆಹಲಿ: ಕೊನೆಯ ಒಂದು ನಿಮಿಷ ದಲ್ಲಿ ಅಪೂರ್ವ ಪ್ರದರ್ಶನ ನೀಡಿದ ಪಟ್ನಾ ಪೈರೇಟ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ ಮೂರನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದರೆ, ಹೋದ ವರ್ಷದ ಚಾಂಪಿಯನ್‌ ಯು ಮುಂಬಾ ತಾನೇ ಮಾಡಿಕೊಂಡ ಎಡವಟ್ಟಿನಿಂದಾಗಿ ರನ್ನರ್ಸ್‌ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಮೊದಲರ್ಧದಲ್ಲಿ ಪೈರೇಟ್ಸ್‌ ತಂಡ 19–11ರಲ್ಲಿ ಮುನ್ನಡೆ ಹೊಂದಿತ್ತು. ಆದರೆ ಎರಡನೇ ಅವಧಿಯಲ್ಲಿ ಕಂಡು ಬಂದ ಪ್ರಬಲ ಪೈಪೋಟಿ ಪ್ರತಿಯೊಬ್ಬ ಕಬಡ್ಡಿ ಪ್ರೇಮಿಯನ್ನು ರೋಮಾಂಚಿತ ಗೊಳಿಸಿತು. 40ನೇ ನಿಮಿಷದಲ್ಲಿ ಮೂರು ಪಾಯಿಂಟ್ಸ್ ಗಳಿಸಿದ ಪೈರೇಟ್ಸ್‌ 31–28 ಪಾಯಿಂಟ್ಸ್‌ನಿಂದ ವಿಜಯದ ಸಂಭ್ರಮ ಆಚರಿಸಿತು. ಹೀಗಾಗಿ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಪೈರೇಟ್ಸ್‌ ತಂಡಕ್ಕೆ ಹಬ್ಬದ ವಾತಾವರಣ. ಪಂದ್ಯ ಗೆಲ್ಲುತ್ತಿದ್ದಂತೆ ಆಟಗಾರರು ಅಂಕಣದ ಲ್ಲಿಯೇ ಕುಣಿದಾಡಿ ಸಂಭ್ರಮಿಸಿದರು. ಟ್ರೋಫಿ ಪ್ರದಾನದ ವೇಳೆ ಪರಸ್ಪರ ತಬ್ಬಿಕೊಂಡು ಖುಷಿಪಟ್ಟರು.

ಆರಂಭಿಕ ಮುನ್ನಡೆ: ಮೊದಲ ಬಾರಿಗೆ ಫೈನಲ್ ತಲುಪಿದ್ದ ಪೈರೇಟ್ಸ್‌ ಆರಂಭದ 20 ನಿಮಿಷಗಳಲ್ಲಿ ಅತ್ಯಂತ ಸೊಗಸಾಗಿ ಆಡಿತು. ಮುಂಬಾ ತಂಡ ರೈಡಿಂಗ್‌ನಲ್ಲಿ ಬಲಿಷ್ಠವಾಗಿರುವ ಅಂಶವನ್ನು ಚೆನ್ನಾಗಿ ಅರಿತಿದ್ದ ಪೈರೇಟ್ಸ್‌ ಈ ವಿಭಾಗದಲ್ಲಿ ಹೆಚ್ಚು ಪಾಯಿಂಟ್ಸ್‌ ಬಿಟ್ಟುಕೊಡಲಿಲ್ಲ.

ಮುಂಬಾ ತಂಡ ಅನೂಪ್‌ ಕುಮಾರ್‌, ಮೋಹಿತ್‌ ಚಿಲಾರ, ಕರ್ನಾ ಟಕ ಮೂಲದ ರಿಶಾಂಕ್ ದೇವಾಡಿಗ, ಉಪನಾಯಕ ರಾಕೇಶ್‌ ಕುಮಾರ್ ಅವರಂಥ ಬಲಿಷ್ಠ ರೈಡರ್‌ಗಳನ್ನು ಹೊಂದಿತ್ತು. ಇವರನ್ನೇ ಗುರಿಯಾಗಿರಿಸಿ ಕೊಂಡು ಪೈರೇಟ್ಸ್‌ ಆಡಿತು. ಆದ್ದರಿಂದ ಸತತ ಮೂರನೇ ವರ್ಷ ಫೈನಲ್ ಆಡಿದ ಮುಂಬಾಗೆ ಮೊದಲರ್ಧದಲ್ಲಿ ಹಿನ್ನಡೆ ಎದುರಾಯಿತು.

ಉಭಯ ತಂಡಗಳು ಆರಂಭದಲ್ಲಿ ತಲಾ ಒಂದು ಪಾಯಿಂಟ್ಸ್‌ ಕಲೆ ಹಾಕಿ ಸಮಬಲದ ಹೋರಾಟ ತೋರಿದವು.
ಬಳಿಕ ರಕ್ಷಣಾ ವಿಭಾಗದಲ್ಲಿ ಚುರು ಕಾದ ಪೈರೇಟ್ಸ್‌ 5–2, 10–2, 13–2, 14–4 ಹೀಗೆ ಮುನ್ನಡೆಯನ್ನು  ಹೆಚ್ಚಿಸಿಕೊಂಡಿತು.
ಈ ಬಾರಿಯ ಲೀಗ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ ಹತ್ತರಲ್ಲಿ ಗೆಲುವು ಪಡೆದಿ ರುವ ಪೈರೇಟ್ಸ್‌ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿತು. ಇದಕ್ಕೆ ಮುಂಬಾ ತಂಡದ ‘ಕಾಣಿಕೆ’ಯೂ ಇದೆ. ಲೀಗ್‌ನಲ್ಲಿ 12 ಪಂದ್ಯಗಳಲ್ಲಿ ಗೆಲುವು ಪಡೆದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ್ದ ಮುಂಬಾ ರೈಡಿಂಗ್‌ನಲ್ಲಿ ಸಂಘಟಿತ ಹೋರಾಟ ತೋರಲಿಲ್ಲ.

ಪೈರೇಟ್ಸ್‌ ತಂಡ ವೇಗವಾಗಿ ಪಾಯಿಂಟ್ಸ್ ಗಳಿಸಲು ಕಾರಣವಾಗಿದ್ದು ರೈಡರ್‌ ರೋಹಿತ್ ಕುಮಾರ್‌. ಇವರ ಪಾದರಸದಂತ ವೇಗ ಮತ್ತು ಚುರುಕಿನ ಪಾದಚಲನೆ ಮುಂಬಾದ ರಕ್ಷಣಾ ವಿಭಾಗವನ್ನು ಕಂಗೆಡೆಸಿತು. ರೋಹಿತ್‌ ಎಂಟು ಪಾಯಿಂಟ್ಸ್‌ ಕಲೆ ಹಾಕಿದರು.

ಮೊದಲ ಅವಧಿಯ ಆಟ ಮುಗಿ ಯಲು ಮೂರು ನಿಮಿಷ ಬಾಕಿಯಿದ್ದಾಗ ರೋಹಿತ್‌ ಒಂದೇ ರೈಡಿಂಗ್‌ನಲ್ಲಿ ಮೂರು ಪಾಯಿಂಟ್ಸ್‌ ಹೆಕ್ಕಿ ತಂದರು. ಎದುರಾಳಿ ಅಂಕಣದಲ್ಲಿ ಎಡಭಾಗ ದಿಂದ ಅತ್ಯಂತ ಸೊಗಸಾಗಿ ಪಾಯಿಂಟ್ ಗೆರೆ ಮುಟ್ಟಿದರು. ಇದರಿಂದ ಪೈರೇಟ್ಸ್‌ 18–6ರಲ್ಲಿ ಮುನ್ನಡೆ ಪಡೆದು ಕೊಂಡಿತ್ತು. ಮೊದಲ ಅವಧಿಯ ಏಳು ನಿಮಿಷಗಳ ಆಟ ಮುಗಿಯುವಷ್ಟರಲ್ಲಿ ಮುಂಬಾವನ್ನು ಆಲೌಟ್ ಮಾಡಿದ್ದರಿಂದ ಎರಡು ಲೋನಾ ಪಾಯಿಂಟ್ಸ್ ಕೂಡ ಪೈರೇಟ್ಸ್‌ ಖಾತೆ ಸೇರಿದ್ದವು.

ರೋಚಕ ಹೋರಾಟ: ಎರಡನೇ ಅವಧಿಯಲ್ಲಿ ರೈಡಿಂಗ್ ಮತ್ತು ರಕ್ಷಣಾ ವಿಭಾಗದಲ್ಲಿ ಪ್ರಾಬಲ್ಯ ಮೆರೆದ ಮುಂಬಾ ಸಮಬಲದ ಹೋರಾಟ ತೋರಿತು.

11–19 ರಲ್ಲಿ ಹಿನ್ನಡೆ ಹೊಂದಿದ್ದ ತಂಡ, ಕೆಲವೇ ಹೊತ್ತಿನಲ್ಲಿ 20–24, 22–25, 23–25–26ರಲ್ಲಿ ಅಂತರವನ್ನು ಕಡಿಮೆ ಮಾಡಿಕೊಂಡಿತು. ಆದ್ದರಿಂದ ಪಂದ್ಯದ ಪ್ರತಿ ನಿಮಿಷವೂ ಅತ್ಯಂತ ರೋಚಕತೆಯಿಂದ ಕೂಡಿತ್ತು. ಪಂದ್ಯ ಮುಗಿಯಲು ಮೂರು ನಿಮಿಷ ಬಾಕಿಯಿ ದ್ದಾಗ ಮುಂಬಾ 26–28ರಲ್ಲಿ ಹಿನ್ನಡೆಯ ಲ್ಲಿತ್ತು. ಆಗ ಪೈರೇಟ್ಸ್‌ ತಂಡದ ರೋಹಿತ್‌ ಔಟಾಗಿದ್ದರಿಂದ ಮುಂಬಾ 27–28ರಲ್ಲಿ ಅಂತರ ಕಡಿಮೆ ಮಾಡಿಕೊಂಡಿತು.

ಎರಡು ನಿಮಿಷದ ಆಟ ಬಾಕಿ ಉಳಿದಾಗ ಉಭಯ ತಂಡಗಳು 28–28ರಲ್ಲಿ ಸಮಬಲ ಸಾಧಿಸಿದ್ದವು. ಈ ವೇಳೆ   ಒಂದು ಪಾಯಿಂಟ್ ತಂದು ಕೊಟ್ಟ ರೈಡರ್‌ ರೋಹಿತ್‌ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಬಳಿಕ ರೈಡಿಂಗ್ ಬಂದ ಮುಂಬಾ ತಂಡದ ಅನೂಪ್‌ ಸೈಡ್‌ ಗೆರೆಯನ್ನು ತುಳಿದು ಎದುರಾಳಿ ತಂಡಕ್ಕೆ ಒಂದು ಪಾಯಿಂಟ್‌ ‘ಉಡುಗೊರೆ’ ರೂಪದಲ್ಲಿ ನೀಡಿದರು. ಪಂದ್ಯದ ಕೊನೆಯ ರೈಡ್‌ನಲ್ಲಿ ಜೀವಾ ಕುಮಾರ್ ಔಟಾದರು. ಆದ್ದರಿಂದ ಪೈರೇಟ್ಸ್‌ ತಂಡಕ್ಕೆ ಒಂದೇ ನಿಮಿಷದಲ್ಲಿ ಮೂರು ಪಾಯಿಂಟ್ಸ್ ಗಳಿಸಲು ಸಾಧ್ಯವಾಯಿತು. ಇದು ಪೈರೇಟ್ಸ್ ತಂಡದ ಗೆಲುವಿಗೂ ಕಾರಣವಾಯಿತು.

ಪುಣೇರಿಗೆ ಮೂರನೇ ಸ್ಥಾನ: ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದ್ದ ಪುಣೇರಿ ಪಲ್ಟನ್ ತಂಡ ಮೂರನೇ ಸ್ಥಾನ ಪಡೆಯಿತು.

ಇದು ಕಬಡ್ಡಿ ಲೀಗ್‌ನಲ್ಲಿ ಪುಣೇರಿ ತಂಡದ ಶ್ರೇಷ್ಠ ಸಾಧನೆ ಎನಿಸಿತು. ಏಕೆಂ ದರೆ ಆರಂಭದ ಎರಡು ಆವೃತ್ತಿಗಳಲ್ಲಿ ಲೀಗ್‌ ಹಂತದಿಂದಲೇ ಈ ತಂಡ ಹೊರ ಬಿದ್ದಿತ್ತು. ಅಷ್ಟೇ ಏಕೆ, ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಪ್ರಮುಖ ರೈಡರ್‌ಗಳಾದ ಮಂಜಿತ್‌ ಚಿಲಾರ ಮತ್ತು ಅಜಯ್‌ ಠಾಕೂರ್ ಅವರ ಗಮನಾರ್ಹ ಪ್ರದರ್ಶನದ ಬಲ ದಿಂದಾಗಿ ಪುಣೇರಿ ಮೂರನೇ ಸ್ಥಾನ ಪಡೆದುಕೊಂಡಿತು.

ಫೈನಲ್‌ ಪಂದ್ಯಕ್ಕೂ ಮುನ್ನ ನಡೆದ ಈ ಹೋರಾಟದಲ್ಲಿ ಪುಣೇರಿ 31–27 ಪಾಯಿಂಟ್ಸ್‌ನಿಂದ ಬೆಂಗಾಲ್‌ ವಾರಿ ಯರ್ಸ್ ಎದುರು ಜಯಭೇರಿ ಮೊಳಗಿಸಿತು.

ಆರಂಭದಲ್ಲಿ ಉಭಯ ತಂಡಗ ಳಿಂದ ಸಮಬಲದ ಹೋರಾಟ ಕಂಡು ಬಂದರೂ ಕೆಲ ಹೊತ್ತಿನಲ್ಲಿ ಪುಣೇರಿ ಪ್ರಾಬಲ್ಯ ಮೆರೆಯಿತು. 15–8, 24–18 ರಲ್ಲಿ ಮುನ್ನಡೆ ಹೊಂದಿತ್ತು. ರೈಡಿಂಗ್‌ ನಲ್ಲಿ ಚುರುಕುತನ ತೋರಿದ ಬೆಂಗಾಲ್‌ ಅಂತರವನ್ನು 24–29ಕ್ಕೆ ಕಡಿಮೆ ಮಾಡಿಕೊಂಡಿತು. ಕೊನೆಯಲ್ಲಿ ಎದು ರಾಳಿ ತಂಡ ರೈಡಿಂಗ್‌ನಲ್ಲಿ ಹೆಚ್ಚು ಪಾಯಿಂಟ್ಸ್‌ ಬಿಟ್ಟುಕೊಡಲಿಲ್ಲ. ದೀಪಕ್ ನಿವಾಸ್‌ ಹೂಡ, ಮಂಜಿತ್‌ ಮತ್ತು ಅಜಯ್‌ ಮಿಂಚಿದರು. ಈ ತಂಡ ರೈಡಿಂಗ್‌ನಿಂದ ಒಟ್ಟು 15 ಪಾಯಿಂಟ್ಸ್ ಗಳಿಸಿತು. ಟ್ಯಾಕಲ್‌ ಮೂಲಕ ಹತ್ತು, ಎರಡು ಬೋನಸ್ ಮತ್ತು ನಾಲ್ಕು ಲೋನಾ ಪಾಯಿಂಟ್ಸ್‌ ಗಳಿಸಿತು.

₹ 1 ಕೋಟಿ ಬಹುಮಾನ
ಚಾಂಪಿಯನ್ ತಂಡಕ್ಕೆ ₹ 1 ಕೋಟಿ ಮತ್ತು ರನ್ನರ್ಸ್ ಅಪ್ ಸ್ಥಾನ ಪಡೆದ ತಂಡ ₹ 50 ಲಕ್ಷ ಬಹುಮಾನವನ್ನು ಪಡೆದುಕೊಂಡಿತು. ಮೂರನೇ ಸ್ಥಾನ ಗಳಿಸಿದ ಪುಣೇರಿ ₹ 30 ಲಕ್ಷ ಮತ್ತು ನಾಲ್ಕನೇ ಸ್ಥಾನ ಪಡೆದ ಬೆಂಗಾಲ್‌ ತಂಡಕ್ಕೆ  ₹ 20 ಲಕ್ಷ ಕೊಡಲಾಯಿತು.

ವೈಯಕ್ತಿಕ ಪ್ರಶಸ್ತಿಗಳು
* ಉತ್ತಮ ರೈಡರ್‌: ರಿಶಾಂಕ್ ದೇವಾಡಿಗ

* ಉತ್ತಮ ಡಿಫೆಂಡರ್‌: ಸಂದೀಪ್‌ ನರ್ವಾಲ್‌
* ಮೌಲ್ಯಯುತ ಆಟಗಾರ: ರೋಹಿತ್‌ ಕುಮಾರ್‌
* ಉದಯೋನ್ಮುಖ ಆಟಗಾರ: ಸಂದೀಪ್ ನರ್ವಾಲ್‌

ಮುಖ್ಯಾಂಶಗಳು
* ಪುಣೇರಿ ಪಲ್ಟನ್ ತಂಡಕ್ಕೆ ಮೂರನೇ ಸ್ಥಾನ

* ಮೊದಲರ್ಧದಲ್ಲಿ 19–11ರಲ್ಲಿ ಮುನ್ನಡೆಯಲ್ಲಿದ್ದ ಪೈರೇಟ್ಸ್‌
* ಎಂಟು ಪಾಯಿಂಟ್ಸ್ ಗಳಿಸಿದ ರೋಹಿತ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT