ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕಟ್ಟುಗಳಿಲ್ಲದ ದಾರಿಯಲ್ಲಿ...

Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇಲ್ಲಿನ ತರಗತಿಗಳಲ್ಲಿ ಪಠ್ಯಪುಸ್ತಕಗಳಿಲ್ಲ. ತರಗತಿ ಕೋಣೆಗಳ ಚೌಕಟ್ಟೂ ಇಲ್ಲಿಲ್ಲ. ಅಷ್ಟು ಮಾತ್ರವೇಕೆ, ಯುಜಿಸಿ ವೇತನದ ಪ್ರಾಧ್ಯಾಪಕರೂ ಇಲ್ಲಿಲ್ಲ. ವಿದ್ಯಾರ್ಥಿಗಳು ಇಷ್ಟು ಗಂಟೆಗೇ ಬರಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಎಲ್ಲಕ್ಕೂ ಮುಖ್ಯವಾಗಿ ನಿರ್ದಿಷ್ಟ ಪಠ್ಯಕ್ರಮವಿಲ್ಲ. ವಾರ್ಷಿಕ ಪರೀಕ್ಷೆಗಳೂ ನಡೆಯುವುದಿಲ್ಲ. ಆದರೂ ಅದೊಂದು ವಿಶ್ವವಿದ್ಯಾಲಯ. ಅದರ ಹೆಸರು ಸ್ವರಾಜ್ ಯೂನಿವರ್ಸಿಟಿ!

ಹೌದು. ದೇಶದ ಎಲ್ಲ ವಿ.ವಿ.ಗಳಿಗಿಂತಲೂ ಭಿನ್ನವಾಗಿ ಕಲಿಕೆಯನ್ನು ಆನಂದಮಯವಾಗಿಸುವ ವಿ.ವಿ.ಯ ಪರಿಕಲ್ಪನೆಯ ಸಾಕಾರ ರೂಪ ಈ ‘ಸ್ವರಾಜ್ ಯೂನಿವರ್ಸಿಟಿ’. ಐದು ವರ್ಷಗಳ ಹಿಂದೆ ರಾಜಸ್ತಾನದ ಉದಯಪುರದ ಬಳಿಯ ಬಯಲುಭೂಮಿಯಲ್ಲಿ ಈ ವಿ.ವಿ. ಸ್ಥಾಪನೆಯಾಯಿತು. ಹೇಳಿಕೊಳ್ಳಲು ವಿಳಾಸವಿರಲಿ ಎಂಬ ಏಕೈಕ ಉದ್ದೇಶದಿಂದ ಒಂದಷ್ಟು ಸಾದಾ ಕೊಠಡಿಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಆದರೆ, ಈ ವಿ.ವಿ.ಯಲ್ಲಿ ಓದುವ ವಿದ್ಯಾರ್ಥಿಗಳು ವರ್ಷದುದ್ದಕ್ಕೂ ದೇಶದ ಬೇರೆ ಬೇರೆ ಊರುಗಳನ್ನು ಸುತ್ತುತ್ತಾ ಇರುತ್ತಾರೆ. ಹತ್ತಾರು ಜನರಿಂದ ಕೂಡಿದ ಗುಂಪುಗಳಲ್ಲಿ ಹೋಗುವ ಇವರ ಬಳಿ ಹಾಕಿಕೊಳ್ಳಲು ಬಟ್ಟೆ, ಹೊದ್ದುಕೊಳ್ಳಲು ಹೊದಿಕೆ ಬಿಟ್ಟರೆ ಬೇರೇನೂ ಇರುವುದಿಲ್ಲ. ಖರ್ಚು ಮಾಡಲು ಹಣವೂ ಇಲ್ಲ. ಮಾತನಾಡಲು ಮೊಬೈಲ್ ಕೂಡಾ ಇರುವುದಿಲ್ಲ. ಸೈಕಲ್‌ಗಳಲ್ಲಿ ‘ಲರ್ನಿಂಗ್‌ ಜರ್ನಿ’ ಎಂಬ ಹೆಸರಿನೊಂದಿಗೆ ಹತ್ತಾರು ಹಳ್ಳಿಗಳಿಗೆ ಹೋಗಿ ಅಲ್ಲಿ ತಮ್ಮಿಂದ ಆದ ಕೆಲಸ ಮಾಡುತ್ತಾರೆ. ಅದರಿಂದ ಬರಬಹುದಾದ ಆದಾಯದಲ್ಲಿ ಊಟ ಮಾಡುತ್ತಾರೆ. ಹೊಲದಲ್ಲಿ ನೆಲ ಹದ ಮಾಡುವುದರಿಂದ ಹಿಡಿದು, ಕಳೆ ಕೀಳುವ, ಸಸಿಗಳಿಗೆ ನೀರು ಹಾಕುವ, ಅಡುಗೆ ಮಾಡುವುದೂ ಸೇರಿದಂತೆ ಯಾವುದೇ ಕೆಲಸ ಕೊಟ್ಟರೂ ಅದನ್ನು ಮಾಡುತ್ತಾರೆ. ಈ ವಿದ್ಯಾರ್ಥಿಗಳು ಹೀಗೆ ಎರಡು ವರ್ಷಗಳವರೆಗೆ ಸ್ವರಾಜ್‌ ವಿ.ವಿ.ಯ ವಿದ್ಯಾರ್ಥಿಗಳಾಗಿ ಇರುತ್ತಾರೆ.

ಕೋರ್ಸ್‌ ಪೂರ್ಣಗೊಳಿಸಿದ್ದಕ್ಕಾಗಿ ಇವರಿಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕವನ್ನೇನೂ ಕೊಡುವುದಿಲ್ಲ. ಪ್ರಮಾಣಪತ್ರ ಅಥವಾ ಅಂಕಪಟ್ಟಿಯನ್ನೂ ಕೊಡುವುದಿಲ್ಲ. ಆದರೂ, ಲಂಡನ್‌ನ ಸ್ಕೂಲ್‌ ಆಫ್‌ ಓರಿಯಂಟಲ್‌ ಅಂಡ್‌ ಆಫ್ರಿಕನ್‌ ಸ್ಟಡೀಸ್‌ ಕಾಲೇಜಿನಲ್ಲಿ ಪದವಿ ಓದಿದ ಮುಂಬೈ ಮೂಲದ ಅರ್ಪಿತಾ, ಅಮೆರಿಕದಲ್ಲಿ ಆರು ವರ್ಷ ಕಾಲ ಉದ್ಯೋಗದಲ್ಲಿದ್ದ ಪುಣೆಯ ಸಮೀರ್‌ ಹಾಗೂ ಪ್ರಜ್ಞಾ ಖಾಡಿಲ್‌ಕರ್‌, ಅಹಮದಾಬಾದ್‌ ಮೂಲದ ಸುಮಿತ್ರಾ, ಭೋಪಾಲ್‌ನ ಭಾದ್ರಪದ್‌ ಸೇರಿದಂತೆ ಹತ್ತಾರು ಜನ ಸ್ವರಾಜ್‌ ವಿ.ವಿ.ಯಲ್ಲಿ ‘ಅಧ್ಯಯನ’ ಮಾಡುತ್ತಿದ್ದಾರೆ.

ಹೊಸ ಕನಸು
ಬೋಧನಾ ಕೊಠಡಿಯಿಂದ ಹೊರತಾದ ಶಿಕ್ಷಣವನ್ನು ನೀಡುವ ಬಗ್ಗೆ ಮೊದಲು ಕನಸು ಕಂಡಿದ್ದು ಮನಿಷ್ ಜೈನ್‌, ರೇವಾ ದಂಡಗೆ ಹಾಗೂ ನಿತಿನ್‌ ಪರಾಂಜಪೆ. ಇವರ ಕನಸಿಗೆ ನೀರೆರೆಯುವ ಸಲುವಾಗಿ ಕೃಷಿ ವಿ.ವಿ.ಯೊಂದರಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧಿಕಾರಿಯೊಬ್ಬರು ಒಂದಷ್ಟು ಭೂಮಿಯನ್ನು ಖರೀದಿಸಿ ಸ್ವರಾಜ್‌ ವಿ.ವಿ.ಗೆ ನೀಡಿದರು.

‘ಐದು ವರ್ಷಗಳ ಅವಧಿಯಲ್ಲಿ ಸುಮಾರು 55 ವಿದ್ಯಾರ್ಥಿಗಳು ಈ ವಿ.ವಿ.ಯಿಂದ ಹೊರಬಂದಿದ್ದಾರೆ. ಅವರು ಬಯಸಿದ ಕ್ಷೇತ್ರಗಳಲ್ಲೇ ಅಧ್ಯಯನ ಮಾಡಲು ತಿಳಿಸಿದ್ದೇವೆ. ಎಷ್ಟೋ ತಂದೆ–ತಾಯಂದಿರು ತಮ್ಮ ಮಕ್ಕಳು ಡಾಕ್ಟರ್‌ ಆಗಬೇಕು, ಎಂಜಿನಿಯರ್‌ ಆಗಬೇಕು ಎಂದು ಬಯಸುತ್ತಾರೆ. ಆದರೆ, ತಾವು ಆ ಕೋರ್ಸ್‌ ಕಲಿಯಬೇಕು ಎಂಬ ಆಸಕ್ತಿಯೇ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಅಂತಹವರನ್ನು ಗುರುತಿಸಿ ಸ್ವರಾಜ್ ವಿ.ವಿ. ಬಗ್ಗೆ ತಿಳಿಸುವುದು ನಮ್ಮ ಕೆಲಸ’ ಎನ್ನುತ್ತಾರೆ ವಿ.ವಿ.ಯ ಫೆಲಿಸಿಟೇಟರ್‌ ಆಗಿರುವ ಪ್ರಜ್ಞಾ.

ರಾಜಸ್ತಾನದ ಉದಯಪುರದಿಂದ 30 ಕಿ.ಮೀ. ದೂರದಲ್ಲಿರುವ ಕ್ಯಾಂಪಸ್‌ಗೆ ‘ತಪೋವನ ಆಶ್ರಮ’ ಎಂದು ಹೆಸರು. ಇಲ್ಲಿ ವರ್ಷದಲ್ಲಿ ಮೂರು ತಿಂಗಳು ಮಾತ್ರ ವಿದ್ಯಾರ್ಥಿಗಳು ಸೇರುತ್ತಾರೆ. ನಂತರ ತಮ್ಮ ಆಸಕ್ತಿಗೆ ಅನುಗುಣವಾಗಿ ಊರೂರಿಗೆ ಹೋಗುತ್ತಾರೆ. ಒಬ್ಬರಿಗೆ ಪೇಂಟಿಂಗ್‌ ಮಾಡುವುದು ಇಷ್ಟವಿದ್ದರೆ, ಇನ್ನೊಬ್ಬರಿಗೆ ಸಾವಯವ ಕೃಷಿ ಇಷ್ಟ. ಮತ್ತೊಬ್ಬರಿಗೆ ವ್ಯರ್ಥವಾಗಿ ಹರಿಯುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದರಲ್ಲಿ ಆಸಕ್ತಿ. ಅಂಥವರ ಆಸಕ್ತಿ ಗುರುತಿಸಿ ಆ ಕೆಲಸದಲ್ಲಿ ತೊಡಗಿರುವವರ ಬಳಿ ಕಳಿಸಲಾಗುತ್ತದೆ.

ಸ್ವರಾಜ್ ಯೂನಿವರ್ಸಿಟಿಯ 14 ಜನ ವಿದ್ಯಾರ್ಥಿಗಳ ತಂಡ ಇತ್ತೀಚೆಗೆ ಧಾರವಾಡ ಬಳಿ ಇರುವ ದಡ್ಡಿಕಮಲಾಪುರದ ಡಾ. ಸಂಜೀವ ಕುಲಕರ್ಣಿ ಅವರ ತೋಟಕ್ಕೆ ಬಂದಿತ್ತು. ನಸುಕಿನಲ್ಲೇ ಎದ್ದು ಕೆಲಸಕ್ಕೆ ಅಣಿಯಾಗುವ ಈ ವಿದ್ಯಾರ್ಥಿಗಳಿಗೆ ಬೇಸರವೆಂಬುದೇ ಇಲ್ಲ. ಸಾವಯವ ಕೃಷಿ ಮಾಡುವುದು ಮುಗಿದರೆ, ಕೆಲವರು ಮಧ್ಯಾಹ್ನದ ಊಟಕ್ಕಾಗಿ ರೊಟ್ಟಿ ತಯಾರಿಸುವ, ತರಕಾರಿ ಹೆರಚುವ ಕೆಲಸದಲ್ಲಿ ತೊಡಗಿಕೊಂಡರು. ಇನ್ನುಳಿದವರು ರಫಿ, ಕಿಶೋರ್‌ ಹಾಡು ಕೇಳುತ್ತಾ ಬಿಳಿ ಗೋಡೆಯ ಮೇಲೆ ಚಿತ್ತಾರ ಬಿಡಿಸುವ ಕೆಲಸಕ್ಕೆ ಅಣಿಯಾದರು.

ಡಾ. ಕುಲಕರ್ಣಿ ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ಅವರಿಗೆ ವಾಸ್ತವ್ಯದ ವ್ಯವಸ್ಥೆ, ಊಟ, ಉಪಹಾರದ ಜವಾಬ್ದಾರಿಯನ್ನು ನಿರ್ವಹಿಸಿದರು. ಕೆಲಸದ ಮಧ್ಯೆ ಉಪನ್ಯಾಸಗಳು, ಸಿನಿಮಾ ಪ್ರದರ್ಶನ, ಹಾಡು–ಹಸೆಯಂತಹ ಮನರಂಜನೆಯೂ ಇತ್ತು.

ಪದವಿಯ ಹಂಗು ತೊರೆದು...
‘ಪ್ರಾಚ್ಯಶಾಸ್ತ್ರ ಅಧ್ಯಯನ ಮಾಡಿದ ನನಗೆ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ ಎನಿಸಿತು. ಹೊಸಬಗೆಯ ಕಲಿಕೆಗಾಗಿ ಹುಡುಕಾಟ ನಡೆಸಿದ್ದೆ. ಅದಕ್ಕೆ ಸರಿಯಾಗಿ ಸ್ವರಾಜ್‌ ವಿ.ವಿ. ಸಿಕ್ಕಿದೆ. ನಾನು ಬಯಸಿದ್ದನ್ನು ಕಲಿಯುತ್ತಾ ಹಾಯಾಗಿದ್ದೇನೆ. ಉದ್ಯೋಗ ಸಿಗುತ್ತದಾ ಎಂದು ನೀವು ಕೇಳಬಹುದು. ಬರೀ ಡಿಗ್ರಿ ಸರ್ಟಿಫಿಕೇಟ್‌ ಹಿಡಿದುಕೊಂಡು ಕೆಲಸಕ್ಕಾಗಿ ಅಲೆಯುವ ಬದಲು ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಕೆಲಸ ಮಾಡುವುದು ಹೆಚ್ಚು ಖುಷಿ ಕೊಡುತ್ತದೆ. ನನ್ನ ಸ್ನೇಹಿತನೊಬ್ಬ ‘ಮಿಲೆಟ್ಸ್‌ ಆಫ್‌ ಮೇವಾರ್‌’ ಎಂಬ ಹೋಟೆಲ್‌ ನಡೆಸುತ್ತಿದ್ದಾನೆ. ಫಿಜ್ಜಾ, ಬರ್ಗರ್‌ಗಳನ್ನು ಆತ ತಯಾರಿಸುವುದೇ ಸಿರಿ ಧಾನ್ಯಗಳಿಂದ. ಆ ಹೋಟೆಲ್‌ ಉತ್ತಮವಾಗಿಯೇ ನಡೆಯುತ್ತಿದೆ. ಇದಕ್ಕೆ ಡಿಗ್ರಿ ಸರ್ಟಿಫಿಕೇಟ್‌ ಏಕೆ ಬೇಕು’ – ಹೀಗೆ ಪಟಪಟನೆ ಮಾತನಾಡುವ ಅರ್ಪಿತಾ ಅವರಿಗೆ ತಾವು ಸಾಗುತ್ತಿರುವ ಹಾದಿಯ ಬಗ್ಗೆ ಸಂಪೂರ್ಣ ಸಮಾಧಾನವಿದೆ.

ಇವೆಂಟ್‌ ಮ್ಯಾನೇಜ್‌ಮೆಂಟ್‌ನಲ್ಲಿ ಆಸಕ್ತಿ ಹೊಂದಿರುವ ಭಾದ್ರಪದ್‌ ಅವರಿಗೆ, ಸ್ವರಾಜ್‌ ವಿ.ವಿ.ಯಲ್ಲಿ ಕ್ಲಾಸುಗಳು, ಪರೀಕ್ಷೆಗಳು ಇಲ್ಲದಿರುವುದೇ ಖುಷಿ ನೀಡಿದೆ. ‘ಕ್ಲಾಸ್‌ ರೂಮಿನಲ್ಲಿ ಕುಳಿತು ಬೋರಾದ ಬಳಿಕ ಈ ವಿ.ವಿ.ಗೆ ಸೇರಿದ್ದೇನೆ. ದೇಶ ಸುತ್ತುತ್ತಲೇ ಕಲಿಯುವುದು ತುಂಬಾ ಖುಷಿ ನೀಡಿದೆ’ ಎನ್ನುತ್ತಾರೆ.

ಅಹಮದಾಬಾದ್‌ನ ಸುಮಿ (ಸುಮಿತ್ರಾ) ತಮ್ಮ ಮಕ್ಕಳನ್ನು ತಾವು ಹೋದಲ್ಲೆಲ್ಲ ಕರೆದೊಯ್ಯುತ್ತಾರೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಗ್ಯಾಸ್ ಬಳಕೆ ಮಾಡದೇ ಉರುವಲಿನಿಂದ ಅಡುಗೆ ಮಾಡುವ ಕಲೆ ಅವರಿಗೆ ಕರಗತವಾಗಿದೆ.

ಕರ್ನಾಟಕದಲ್ಲಿಯೂ ಇಂತಹ ವಿ.ವಿ.ಯನ್ನು ಆರಂಭಿಸುವ ಬಗ್ಗೆ ಡಾ. ಸಂಜೀವ ಕುಲಕರ್ಣಿ ಚಿಂತನೆ ನಡೆಸಿದ್ದಾರೆ. ಗಾಂಧಿ ತತ್ವಗಳು, ಪ್ರಗತಿಪರ ವಿಚಾರಧಾರೆ, ಸಾವಯವ ಕೃಷಿಯ ಬಗ್ಗೆ ವಿಶೇಷ ಒಲವು ಹೊಂದಿರುವ ಕುಲಕರ್ಣಿ ಅವರು ಸ್ವರಾಜ್‌ ವಿ.ವಿ.ಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳು ತಮ್ಮಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದರು. ಈಗ ಅವರಲ್ಲಿ ಸ್ವರಾಜ್ಯ ವಿಶ್ವವಿದ್ಯಾಲಯದ ಕನಸು ಮತ್ತಷ್ಟು ಚಿಗುರಿದೆ. ಅಂದಹಾಗೆ, ಸಮಾನ ಮನಸ್ಕರು ಸಂಜೀವ ಕುಲಕರ್ಣಿ ಅವರನ್ನು ಸಂಪರ್ಕಿಸಬಹುದು (ಫೋನ್: 94481 43100).

ಐಷಾರಾಮ ದೂರ
ಗಾಂಧಿ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಸ್ವರಾಜ್‌ ವಿ.ವಿ. ಸಂಸ್ಥಾಪಕರು ಸರಳ ಜೀವನ ಶೈಲಿಯನ್ನೇ ರೂಢಿಸಿಕೊಂಡಿದ್ದಾರೆ. ಹಾಗಾಗಿ ವಿ.ವಿ.ಯ ಭೌತಿಕ ಕುರುಹು ಇರುವ ಉದಯಪುರದ ತಪೋವನ ಆಶ್ರಮದಲ್ಲಿ ಅತ್ಯಂತ ಸರಳ ಕಟ್ಟಡವಿದೆ. ಇಲ್ಲಿರುವ ಖೋಜಿ (ಕಲಿಕಾರ್ಥಿ)ಗಳು ಡಾರ್ಮಿಟರಿಯಲ್ಲಿ ವಾಸವಿರುತ್ತಾರೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವಾಸದ ಕೋಣೆಗಳಿವೆ.

ಹೈಟೆಕ್‌ ಎಲೆಕ್ಟ್ರಾನಿಕ್‌ ಉಪಕರಣಗಳಾದ ಎಸಿ, ಟೆಲಿವಿಷನ್‌, ಕಂಪ್ಯೂಟರ್‌, ಇಂಟರ್ನೆಟ್‌, ಮೊಬೈಲ್‌ ಫೋನ್‌ ಸೇರಿದಂತೆ ಯಾವುದೇ ವಸ್ತುಗಳ ಬಳಕೆ ಇಲ್ಲಿಲ್ಲ. ಈ ವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಯಾವುದೇ ವಿದ್ಯಾರ್ಹತೆ ಬೇಕಿಲ್ಲ. 18ರಿಂದ 30ರ  ವಯೋಮಾನದ ಯುವಕ–ಯುವತಿಯರು ಅರ್ಜಿ ಸಲ್ಲಿಸಲು ಅರ್ಹರು. ಮಾಹಿತಿಗೆ  ಭೇಟಿ  ನೀಡಿ swarajuniversity.org.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT