ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛದ್ಮವೇಷ

ಯಶವಂತ ಹೇಳಿದ ಕಥೆ
Last Updated 7 ನವೆಂಬರ್ 2015, 19:32 IST
ಅಕ್ಷರ ಗಾತ್ರ

ಕತೆಗಾರ್ತಿಯಾಗಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಸುನಂದಾ ಪ್ರಕಾಶ ಕಡಮೆ ಅವರು ಇದೀಗ ಮೊದಲ ಬಾರಿಗೆ ಮಕ್ಕಳಿಗೂ ಬರೆದಿದ್ದಾರೆ. ಅವರ ಈ ಚೊಚ್ಚಲ ಮಕ್ಕಳ ಕಾದಂಬರಿ ‘ಎಳನೀರು’, ಒಬ್ಬ ಶಿಕ್ಷಕಿಯ ಸುತ್ತಲಿನ ಮಕ್ಕಳ ಸಮಯವನ್ನ ಅನಾವರಣಗೊಳಿಸುತ್ತ ಹೋಗುತ್ತದೆ. ಮಕ್ಕಳ ಜೀವನದಲ್ಲಿಯೇ ನಡೆಯುವ ಪ್ರಸಂಗಗಳು ಕತೆಯಾಗಿ ಕಲ್ಪನೆಯಲ್ಲಿ ರೂಪಾಂತರಗೊಳ್ಳಬಲ್ಲವು ಎನ್ನುವ ಸಣ್ಣದೊಂದು ಪ್ರಯೊಗವನ್ನೇ ಈ ಶಿಕ್ಷಕಿ ಕಾಣುತ್ತಾಳೆ.

ಮಕ್ಕಳದೇ ಮಾತು, ಅವುಗಳದೇ ಅನುಭವಗಳು ಕತೆಯಾಗುತ್ತ ಹೋಗುತ್ತವೆ. ಅಂಥ ಒಂದು ಕತೆ ಯಶವಂತ ಅನ್ನುವ ಹುಡುಗ ಶಾಲೆಯಲ್ಲಿ ಛದ್ಮವೇಷ ಧರಿಸಿದ ಪ್ರಸಂಗದ್ದು. ಯಶವಂತ ತಾನು ಇದು ನಡೆದ ಘಟನೆ ಅಂತ ಹೇಳುತ್ತಲೇ, ಒಂದಿಷ್ಟೆಲ್ಲ ಕೈಗಂಟನ್ನ ಅದಕ್ಕೆ ಸೇರಿಸುತ್ತಾನೆ! ಅದೇ ಕತೆಯಾಗಿ ಬಿಡುವ ಮ್ಯಾಜಿಕ್ ನಡೆದು ಹೋಗುತ್ತದೆ!


ಕಳೆದ ವರ್ಷ ನಾನು ಐದನೇಯತ್ತೆಯಲ್ಲಿರುವಾಗ ನಡೆದ ಘಟನೆ ಇದು. ಆ ವರ್ಷ ಮಕ್ಕಳ ದಿನಾಚರಣೆ ಇತ್ತು. ಆ ನಿಮಿತ್ತ ಕುಮಟೆಯ ಸೇಂಟ್ ಜೋಸೆಫ್ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಛದ್ಮವೇಷ ಸ್ಪರ್ಧೆ ಇತ್ತು. ಬೆಳಗಿನ ವೇಳೆಯಲ್ಲಿ ನಮ್ಮ ತರಗತಿಗೆ ಒಂದು ನೋಟೀಸ್ ಬಂತು. ನಮ್ಮ ಯಶೋದಾ ಟೀಚರ್ರು ಅದನ್ನು ಓದಿ ಹೇಳುತ್ತ ಯಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿ ಉಂಟು, ಅಂಥವರು ಇಲ್ಲಿ ಹೆಸರು ಕೊಡಿ ಅಂದರು.

ಒಮ್ಮೆಲೇ ಏನು ಹೇಳಬೇಕೆಂದೇ ತಿಳಿಯದೇ ಎಲ್ಲ ಮಕ್ಕಳೂ ಸುಮ್ಮನೇ ಕುಳಿತಿದ್ದೆವು. ಆಗ ಯಶೋದಾ ಟೀಚರ್ರಿಗೆ ಸಿಟ್ಟು ಬಂದು ‘ಯಾರಾದ್ರೂ ಒಬ್ಬರೂ ಭಾಗವಹಿಸೋದಿಲ್ವೇ? ಯಾಕೆ ಹಾಗೆ ಗರಬಡಿದವರ ಹಾಗೆ ಕೂತಿರಿ?’ ಅಂತ ಬೈದರು. ಆಗ ನಾನು ಕೈ ಎತ್ತಿ– ‘ಯಾವ ವೇಷ ಹಾಕಬೇಕೋ ನೀವು ಹೇಳಿಕೊಡಿ ಟೀಚರ್, ನಾನು ಭಾಗವಹಿಸುವೆ’ ಅಂತ ಅಂದುಬಿಟ್ಟೆ. ಇದೇ ನಂತರದ ನನ್ನ ಫಜೀತಿಗೆ ಕಾರಣವಾಯಿತು.

ಅದಕ್ಕೆ ಟೀಚರ್ರು ‘ಏಳನೇಯತ್ತೆಯಲ್ಲಿ ನಿನ್ನ ಅಣ್ಣ ಇದ್ದಾನಲ್ಲ, ಅವನ ಹತ್ರ ಕೇಳು, ಯಾವ ವೇಷ ಆದ್ರೂ ಅಡ್ಡಿಲ್ಲ, ಆವತ್ತು ಅವನೂ ನಿನ್ನ ಜೊತೆ ಬರಬೇಕಾಗ್ತದೆ. ನಿನಗೆ ತಯಾರು ಮಾಡಲು ಒಬ್ಬರು ಬೇಕಲ್ಲ ಹಾಗೆ’ ಅನ್ನುತ್ತ ನನ್ನ ಹೆಸರು ಬರೆದುಕೊಂಡು ‘ಇನ್ಯಾರಾದರೂ ಹೆಸರು ಕೊಡ್ತೀರೇನು?’ ಅಂತ ಕೇಳಿ, ‘ಸಾಕು ಬಿಡಿ ಕ್ಲಾಸಿಗೆ ಒಬ್ಬರೇ’ ಅಂತ ನೋಟೀಸನ್ನು ಹಿಂತಿರುಗಿಸಿದರು. ಮತ್ತೆ ಕ್ಲಾಸು ಬಿಟ್ಟ ನಂತರ ನನ್ನ ಮುಖ ನೋಡುತ್ತ ‘ಯಾವುದಾದರೂ ವೇಷ ಅಡ್ಡಿಲ್ಲ. ಗಾಂಧಿ, ಬಸವಣ್ಣ, ನೆಹರು, ರಾಜಕಾರಣಿ, ಬುದ್ಧ, ಹೀಗೆ. ನಿನ್ನ ಅಣ್ಣನಿಗೆ ಹೇಳು, ಅವನಿಗೆ ಗೊತ್ತಾಗ್ತದೆ’ ಅನ್ನುತ್ತ ತರಗತಿಯಿಂದ ಹೊರ ಹೋದರು.

ನಾನು ಶಾಲೆಯಿಂದ ಹೊರಬಂದು ಮನೆಯ ದಾರಿಯಲ್ಲಿ ಹೊರಟಾಗ ನನ್ನ ಅಣ್ಣ ಜೊತೆಯಾದ. ಅವನೇ ತಮಾಷೆ ಮಾಡುತ್ತ ಕೇಳಿದ. ‘ಏನೋ ಛದ್ಮವೇಷಕ್ಕೆ ಹೆಸರು ಕೊಟ್ಟೆಯಂತಲ್ಲ? ತಲೆಗಿಲೆ ಸರಿ ಇದೆಯೋ ನಿಂಗೆ? ಅದೂ ಕುಮಟೆಗೆ ಹೋಗೋಕೆ’ ಅಂದ. ನಾನೂ ಅವಸರದಲ್ಲಿ ‘ಇಲ್ಲಣ್ಣ ನಾನಾಗೇ ಕೊಡಲಿಲ್ಲ, ಟೀಚರ್ರೇ ಅಣ್ಣ ಇದ್ದವರು ಹೆಸರು ಕೊಡಿ, ಅವರು ನಿಮ್ಮನ್ನು ಕರಕೊಂಡು ಹೋಗ್ತಾರೆ, ಇಲ್ಲದಿದ್ದರೆ ಕುಮಟೆಗೆ ಕರೆದೊಯ್ಯುವುದೇ ನಮಗೆ ಸಮಸ್ಯೆ, ಅಂತ ಹೇಳಿ ನನ್ನ ಹೆಸರೇ ಬರಕೊಂಡರು’ ಅಂತ ಸಣ್ಣಮುಖ ಮಾಡಿ ಅಂದೆ.

‘ಹೌದು ಬಿಡು, ನನಗೂ ಸಿಕ್ಕು ಹೇಳಿದರು, ಆಮ್ಯಾಲ್ ಯಾವ್ ಪಾರ್ಟ ಹಾಕ್ತೀ?’ ಅಂತ ರೇಗಿಸುವ ಧಾಟಿಯಲ್ಲಿ ಕೇಳಿದ. ‘ನಂಗೆ ಏನೂ ಗೊತ್ತಾಗೂದಿಲ್ಲ, ನೀನೇ ಹೇಳು’ ಅಂದೆ. ‘ಗಾಂಧೀಜಿ ಮಾಡು, ಬೆಸ್ಟ್’ ಅಂದವನೇ ಅದರ ಹಿಂದೆಯೇ ‘ಆದರೆ ತಲೇ ಬೋಳಿಸಿಕೊಳ್ಳಬೇಕಾಗ್ತದೆ’ ಅನ್ನುತ್ತ ನಕ್ಕ.

ನಾನು ಒಮ್ಮೆಲೇ ಸ್ವಲ್ಪ ಬೇಸರದಿಂದ ನನ್ನ ತಲೆಗೂದಲ ಮೇಲೆ ಮೆಲ್ಲಗೆ ಕೈಯಾಡಿಸಿಕೊಂಡೆ. ಪುನಃ ಅಣ್ಣನನ್ನು ‘ಹೌದೇ? ತಲೆ ಬೋಳಿಸಿಕೊಳ್ಳದೇ ಇದ್ದರೆ ಏನಾಗ್ತದೆ?’ ಅಂತ ಕೇಳಿದೆ. ‘ಏ ಮಳ್ಳಾ, ಫೋಟೋದಲ್ಲಿ ಗಾಂಧೀಜಿ ತಲೆ ಮೇಲೆ ಹೀಂಗೆ ಒರಟೊರಟು ಕೂದ್ಲು ಇದ್ದದ್ದು ಯಾವಾಗಾದ್ರೂ ನೋಡೀದ್ಯೋ ನೀನು?’ ಎನ್ನುತ್ತ ತಲೆಗೊಂದು ರಪ್ಪನೆ ಕೊಟ್ಟ.

‘ಏನೂ ಆಗೊಲ್ಲ, ನಾಲ್ಕೇ ದಿನದಲ್ಲಿ ಕೂದ್ಲು ಬಂದು ಬಿಡ್ತದೆ’ ಅಂತ ರಮಿಸಿದ ಅಣ್ಣ. ‘ತಲೆ ಬೋಳಿಸಿಕೊಳ್ಳದೇ ಹಾಗೇ ಕಾಣುವಂತೆ ಯಾವುದಾದರೂ ಬಣ್ಣ ಹಚ್ಚಿಕೊಳ್ಳುವೆ’ ಅಂದೆ ನಾನು. ಅದಕ್ಕೆ ಅಣ್ಣ ಚಿಂತಿತನಾಗಿ ‘ಹಾಗೆಲ್ಲ ಮಾಡಿದರೆ ಪ್ರೈಸು ಬರೊಲ್ಲ ನೋಡು’ ಅಂತ ಹೆದರಿಸಿದ. ಮನೆಯ ದಾರಿಯಲ್ಲಿ ನಡೆಯುತ್ತ ಇಬ್ಬರಿಗೂ ಛದ್ಮವೇಷದ್ದೇ ಚಿಂತೆ.

‘ಅಲ್ಲೀತನಕ ಹೋಗಿ ಪ್ರೈಸು ತರದೇ ವಾಪಸ್ಸು ಬರಬಾರ್ದು, ಚೊಲೋ ಏನಾದರೂ ಮಾಡ್ಬೇಕು’ ಅಂದ ಅಣ್ಣ ಕಾಲಿಗೆ ಸಿಕ್ಕ ಸಣ್ಣ ಕಲ್ಲೊಂದನ್ನು ಒದೆಯುತ್ತ. ನನಗೂ ಹೌದಲ್ಲ ಅನ್ನಿಸಿತು. ನಾನು ಥಟ್ಟನೆ ‘ಬಸವಣ್ಣ ಮಾಡ್ತೇನೆ’ ಅಂದೆ. ‘ಅದಕ್ಕೆ ಫೋಟೋದಲ್ಲಿರೋ ಬಸವಣ್ಣನ ತರಹಾ ರಾಜರ ಕಾಲದ ಆಭರಣ ತಲೆಗೆ ಪೇಟಾ ಎಲ್ಲ ಎಲ್ಲಿಂದ ತರೋದು?’ ಅಂದ ಅಣ್ಣ.

‘ಯಾಕೆ ಗಾಂಧಿ ಬೇಡ, ಬಸವಣ್ಣನೇ ಬೇಕು?’ ಕೇಳಿದ ಅಣ್ಣ. ‘ನನಗೆ ತಲೇ ಬೋಳಿಸಿಕೊಳ್ಳೋದು ಸೇರೂದಿಲ್ಲ’ ಅಂದೆ. ‘ಹೋಗ್ಲಿ ಬಿಡು, ಬುದ್ಧ ಮಹಾವೀರ ಮಾಡ್ತೀಯೇನು?’ ಪುನಃ ಅಣ್ಣ ಕೇಳಿದ. ನಾನದಕ್ಕೆ ‘ಇಲ್ಲ ಬಸವಣ್ಣನೇ ಮಾಡ್ತೇನೆ’ ಅಂದೆ. ಆ ಪೇಟ, ಆ ಆಭರಣ, ಮೈತುಂಬ ಬಟ್ಟೆ ಹಾಕಿಕೊಳ್ಳುವ ಯೋಚನೆ ನನಗೆ.

ಪಾರ್ಟು ಮಾಡಿದರೂ ಖುಷೀಯಾಗೋವಂಥದ್ದು ಮಾಡಬೇಕು, ಅದು ಬಿಟ್ಟು ಎಲ್ಲರ ಎದುರು ಅದು ಹ್ಯಾಗೆ ಮೈ ಬಿಟ್ಟು ನಿಲ್ಲೋದು? ನಾಚಿಕೆ ನಂಗೆ, ಈ ಅಣ್ಣನಿಗೆ ಹೇಗೆ ಹೇಳೋದು ಅದನ್ನ? ಅಂತ ಸ್ವಲ್ಪ ಹೊತ್ತು ಚಿಂತೆಯಾಯಿತು. ಅಷ್ಟರಲ್ಲಿ ಮನೆಗೆ ಬಂದು ತಲುಪಿದ್ದೆವು.

ಮನೆಯಲ್ಲೂ ನಾವು ಅದೇ ವಿಷಯ ಗಂಭೀರವಾಗಿ ಮಾತಾಡ್ತಿರೋದು ನೋಡಿ ಅಮ್ಮ ‘ಏನೋ ಅದು? ಛದ್ಮವೇಷ ಅಂದ್ರೆ?’ ಅಂತ ಕೇಳಿದ್ದಳು. ‘ಅದೇ ಸ್ಪರ್ಧೆನಮ್ಮಾ, ಯಾವದಾದ್ರೂ ದೊಡ್ಡ ವ್ಯಕ್ತಿಗಳ ಪಾರ್ಟು ಹಾಕಿ ಸ್ಟೇಜ್ ಮೇಲೆ ನಿಲ್ಲೋದು, ಯಾವ ಪಾರ್ಟು ಚೊಲೋ ಮಾಡಿದ್ದಾರೋ ಅವರಿಗೆ ಬಹುಮಾನ ಕೊಡ್ತಾರೆ, ಕುಮಟೆಯ ಒಂದ ಶಾಲೇಲಿ, ನಂಗೇ ಇವನನ್ನು ಕರ್ಕೊಂಡು ಹೋಗ್ಲಿಕ್ಕೆ ಟೀಚರ್ ಹೇಳಿದ್ದು’ ಅಂದ ಅಣ್ಣ.

‘ಅಯ್ಯೋ ಕುಮಟೆಗೇನೋ, ಬಸ್ಸು ಗಿಸ್ಸು ಹ್ಯಾಗೆ ಹತ್ತೋದು ಇಳಿಯೋದು ಮಾಡತೀರಿ? ಅಲ್ಲಿ ಎಲ್ಲಿ ಅಂತ ಹುಡುಕೋದು ಆ ಶಾಲೆ? ಇಲ್ಲಾ ಅಂದ್ಬಿಡು, ಮನೇಲಿ ಬೇರೆ ಏನೋ ಕೆಲಸ ಇದೆ ಅಂತ ಹೇಳಿ ಬಾ ನಾಳೆ’ ಅಂದರು ಅಮ್ಮ. ‘ಇಲ್ಲಮ್ಮ ಟೀಚರ್ರು ನನ್ ಜವಾಬ್ದಾರಿ ಮೇಲೆ ಇವನ ಹೆಸರು ಬರಕೊಂಡಿದ್ದು. ಇಡೀ ಶಾಲೆಯಿಂದ ಮತ್ಯಾರೂ ಹೋಗೂದಿಲ್ಲ, ಹೆಡ್ ಮಾಸ್ತರ್ ಬೈತಾರೆ ಆಮ್ಯಾಲೆ, ನನಗೆಲ್ಲಾ ಗೊತ್ತಾಗತದೆ, ನೀನು ಚಿಂತೆ ಮಾಡ್ಬೇಡಾ’ ಅಂತ ಅಮ್ಮನಿಗೇ ಬುದ್ಧಿ ಹೇಳಿದ ಅಣ್ಣ ಈಗ ತಾನೇ ಚಿಂತಿತನಾಗಿ ಕೂತ.

ನಾನೂ ಅವನ ಬಳಿ ಹೋಗಿ ಸಪ್ಪೆ ಮುಖ ಹೊತ್ತು ಕೂತೆ. ‘ಬೇರೆ ಏನಾದರೂ ಮಾಡಸ್ತೇನೆ, ಯೋಚಿಸುವಾ’ ಅಂದ ಅಣ್ಣ– ‘ಪೋಸ್ಟ್‌ ಡಬ್ಬ ಆಗ್ತೀ? ರಟ್ಟಿನಲ್ಲೇ ಪೋಸ್ಟಿನ ಡಬ್ಬ ತರಹ ಮಾಡೋದು, ಅದಕ್ಕೆ ಕೆಂಪು ಹಾಳೆ ಹಚ್ಚೋದು, ನೀನು ಅದರ ಮಧ್ಯೆ ಸೇರಿಕೊಂಡು ಹೋಗೋದು, ಪೋಸ್ಟ್‌ ಡಬ್ಬಕ್ಕೆ ಕಾಲು ಬಂದ ಹಾಗೆ ಮಜಾ ಇರ್ತದೆ’ ಅಂದ. ಆ ನಿರ್ಜೀವ ವಸ್ತು ನನಗ್ಯಾಕೋ ಸೇರಿಬರಲಿಲ್ಲ. ನನ್ನ ದೋಸ್ತರ ಹತ್ತಿರ ವಿಚಾರಿಸಿಕೊಂಡು ಬರ್ತೇನೆ ಇರು ಅನ್ನುತ್ತ ಹೊರ ಹೋದ ಅಣ್ಣ ವಾಪಸ್ ಬಂದಿದ್ದು ಒಂದು ತಾಸಿನ ನಂತರ.

ಹಿಂತಿರುಗಿದ ಅಣ್ಣನ ತಲೆಯಲ್ಲಿ ಹೊಸದೊಂದೇ ಆಲೋಚನೆಯಿತ್ತು. ಅದೇ ನನ್ನನ್ನು ತೆಂಗಿನಕಾಯಿಯ ಗಿಡದಂತೆ ಕಾಣುವ ಹಾಗೆ ವೇಷ ಹಾಕೋದು. ಅವನ ದೋಸ್ತರು ಕೊಟ್ಟ ಐಡಿಯಾ ಅಂತೆ ಅದು. ನನ್ನ ಬಳಿ ಅಣ್ಣ ಹೇಳಿದ ಕೂಡಲೇ, ಅದು ಹ್ಯಾಂಗೆ ನಾನು ತಯಾರಾಗುವುದು ಅನ್ನಿಸಿತಾದರೂ ನನಗೆ ಒಂದು ರೀತಿಯ ಸಂತೋಷವೇ ಆಯಿತು.

ರಾತ್ರಿ ಅಣ್ಣ ಊಟದ ನಂತರ ಅವನ ಮನೆ ಅಭ್ಯಾಸ ಮಾಡುತ್ತ ಕೂತಾಗ ನಾನು ಅವನ ಬಳಿ ಹೋಗಿ ‘ಅಣ್ಣಾ, ತೆಂಗಿನ ಗರಿ ಹ್ಯಾಗೆ ಮಾಡೋದು?’ ಕೇಳಿದೆ. ‘ಈಗ ನೀನೂ ಅಭ್ಯಾಸ ಮಾಡಿಕೋ, ನಾಳೆ ನನ್ನ ದೋಸ್ತರು ಬಂದು ತಯಾರು ಮಾಡತಾರೆ’ ಅಂದ. ‘ಅದೇ ಅದು ಹ್ಯಾಂಗೇ ಅಂತ?‘ ಎಂದು ಕೇಳಿದ್ದಕ್ಕೆ ‘ನೀನು ಹೋಗ್ತಿಯೋ ಇಲ್ಲೋ, ನನಗೆ ಅಭ್ಯಾಸ ಉಂಟು’ ಅನ್ನುತ್ತ ಗದರಿಬಿಟ್ಟ.

ನನಗೆ ಇನ್ನೇನು ನಿದ್ದೆ ಬರಹತ್ತಿತು ಅನ್ನುವಾಗ ಅಣ್ಣ ನನ್ನ ಹತ್ತಿರ ಬಂದು ಒಂದು ಹಾಳೆ ಕೊಡುತ್ತ ‘ತೆಂಗಿನಗಿಡದ ವೇಷ ಹಾಕಿದಾಗ ನೀನು ಏನೇನು ಹೇಳಬೇಕು ಅಂತ ಇದರಲ್ಲಿ ಬರೆದಿದ್ದೇನೆ, ಓದಿಕೋ. ಚೋಲೋ ಬಾಯಿಪಾಠ ಮಾಡು, ನಡುನಡುವೆ ತಪ್ಪಬೇಡ’ ಅಂದ. ನಾನು ಹಾಳೆ ತೆಗೆದುಕೊಂಡು ಓದಿದೆ.

‘ನಾನು ಯಾರು ಹೇಳಿ ನೋಡುವಾ. ಗೊತ್ತಾಗಿಲ್ಲವೇ? ನಾನು ಈ ಮೊದಲು ತುಂಬ ಎತ್ತರವಿದ್ದೆ. ಆಕಾಶ ಕಾಣುವ ಹಾಗೆ. ನೀವು ಕಲುಷಿತ ನೀರು, ಕಲುಷಿತ ಗೊಬ್ಬರ ಹಾಕಿದಿರಿ. ಹಾಗಾಗಿ ಇಷ್ಟು ಕುಳ್ಳ ಆಗಿಬಿಟ್ಟೆ. ಇಲ್ಲಿಯ ಹವೆಯೂ ಕಲುಷಿತ, ಹಾಗಾಗಿ ನನ್ನ ಗರಿಗಳನ್ನು ನೋಡಿ, ಎಷ್ಟು ಸೊರಗಿವೆ ಅಂತ, ಅಚ್ಚ ಹಸಿರು ಬಣ್ಣ ಕೂಡ ಇಲ್ಲ. ಸತ್ವ ಕಳಕೊಂಡು ನಾನು ಕೂಡ ಹೇಗೆ ಬಳಕುತ್ತಿದ್ದೇನೆ ನೋಡಿ. ಹಾಗಾಗಿ ನನ್ನ ಕೈಲಿ ನಿಮಗೆ ಒಳ್ಳೆಯ ಫಲಗಳನ್ನು ಕೂಡ ಕೊಡಲಾಗುತ್ತಿಲ್ಲ, ನೀವೇ ಯೋಚಿಸಿ. ನನ್ನನ್ನು ಉಳಿಸಿ ಬೆಳೆಸಿ. ಮೊದಲಿನ ಕಲ್ಪವೃಕ್ಷವನ್ನಾಗಿ ಮಾಡಿ’ ಎಂದಿತ್ತು.

ನನಗೆ ಒಮ್ಮೆ ವಿಚಿತ್ರ ಅನ್ನಿಸಿತು. ಇನ್ನೊಮ್ಮೆ ಹೌದಲ್ಲ ಅನ್ನಿಸಿತು. ಅಣ್ಣ ಹೇಗೆ ಬೇರೆ ತರಹ ಯೋಚಿಸುತ್ತಾನಲ್ಲ ಅನ್ನಿಸಿತು. ಏಳೆಂಟು ಬಾರಿ ಓದಿಕೊಂಡೆ, ನನಗೆ ನಿದ್ದೆ ಬಂತು. ಮಾರನೇ ದಿನ ಸಂಜೆ ಶಾಲೆ ಬಿಟ್ಟ ಕೂಡಲೇ ಅಣ್ಣನ ದೋಸ್ತರು ಉದ್ದುದ್ದ ತಂತಿಗಳು, ಹಸಿರು ಬಣ್ಣದ ಹಾಳೆಗಳು, ಕಂದು ಬಣ್ಣದ ರಟ್ಟು ಮುಂತಾದವನ್ನು ತಂದು ನನ್ನನ್ನು ನಿಲ್ಲಿಸಿಕೊಂಡು ಅಳತೆ ನೋಡಿ, ತಂತಿ ಹಾಗೂ ಹಾಳೆಗಳನ್ನು ಕತ್ತರಿಸತೊಡಗಿದರು.

ಕತ್ತಿನಿಂದ ಕೆಳಗೆ ನೆಲದವರೆಗೆ ಕಂದು ಬಣ್ಣದ ರಟ್ಟಿನ ಗೋಲ, ಆ ಗೋಲಕ್ಕೆ ನನ್ನ ಕೈ ಬರುವಲ್ಲಿ ಸರಿಯಾಗಿ ಅತ್ತಿತ್ತ ಎರಡು ರಂಧ್ರ. ನಾನು ಅದರಲ್ಲಿ ಸೇರಿಕೊಂಡು ನಡೆದಾಡಲು ಬರುತ್ತದೋ ನೋಡಿದೆ. ಅಣ್ಣ ಹಾಗೂ ಅವನ ದೋಸ್ತರು ಅದಕ್ಕೆ ಖರೇ ಖರೇ ಕಾಣುವಂತೆ ತೆಂಗಿನ ಕಾಂಡಕ್ಕಿರುವಂತೆ ಹೆಡೆ ಉದುರಿದ ಚಿತ್ತಾರವನ್ನು ಬಣ್ಣದ ಪೆನ್ಸಿಲ್ಲಿನಲ್ಲಿ ಬರೆಯಬೇಕು ಅಂತ ಮಾತಾಡಿಕೊಂಡರು.

ತಂತಿಗಳೆಲ್ಲ ತೆಂಗಿನ ಗರಿಯ ಆಕಾರಕ್ಕೆ ಕಟ್ಟಿಸಿಕೊಂಡು ಅದಕ್ಕೆ ಹಸಿರು ಹಾಳೆ ಸುತ್ತಲಾಯಿತು. ಈಗ ಪಕ್ಕಾ ಗರಿಗಳಂತೆ ಕಾಣುವ ಏಳೆಂಟು ತಂತಿ ಗರಿಗಳು ತಯಾರಾದವು. ನನ್ನ ಮುಖವನ್ನಷ್ಟೇ ಕಾಣುವಂತೆ ಬಿಟ್ಟು ನನ್ನ ಕತ್ತಿನ ಸುತ್ತಲೂ ಒಂದು ಲೋಹದ ಪಟ್ಟಿಗೆ ಆ ಗರಿಗಳನ್ನು ಕಟ್ಟಲಾಯಿತು. ನನಗೆ ಇರುಸುಮುರುಸಾದರೂ ತಡೆದುಕೊಂಡೆ. ಯಾಕೆಂದರೆ ಟೀಚರ್ರನ್ನು ಮೆಚ್ಚಿಸುವುದಷ್ಟೇ ಅಲ್ಲದೇ ಅಣ್ಣ ಹಾಗೂ ಅಣ್ಣನ ದೋಸ್ತರ ಹತ್ತಿರವೂ ನಾನು ಶಾಭಾಶ್ ಅನ್ನಿಸಿಕೊಳ್ಳಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಬಹುಮಾನ ಬಂದರೆ ಶಾಲೆಯ ಪ್ರಾರ್ಥನೆಯ ನಂತರ ನನಗೆ ಹೆಡ್‌ಮಾಸ್ತರ್ರು ನಿಲ್ಲುವ ಜಾಗಕ್ಕೆ ಕರೆದು ಎಲ್ಲ ಮಕ್ಕಳಿಂದ ಚಪ್ಪಾಳೆ ಹೊಡೆಸುತ್ತಾರೆ ಎಂಬ ಯೋಚನೆಯೇ ನನಗೆ ಉತ್ಸಾಹ ಮೂಡಿಸುತ್ತಿತ್ತು.

ಭಾಗಾಯತದಲ್ಲಿ ಉದುರಿ ಬಿದ್ದ ಎಂಟು ಹತ್ತು ಸಣ್ಣ ಪುಟ್ಟ ಬೊಂಡೆಕಾಯಿಗಳನ್ನು ಹೆಕ್ಕಿ ತಂದು ಒಂದೆಡೆ ಸೇರಿಸಿ ಕಟ್ಟಿ ನನ್ನ ಕತ್ತಿಗೆ ಜೋತು ಬಿಡಲಾಯಿತು. ನಿಜವಾದ ಹಿಂಗಾರದ ಹೂವೊಂದನ್ನು ಸಿಕ್ಕಿಸಲಾಯಿತು. ‘ಈಗ ಪಕ್ಕಾ ತೆಂಗಿನ ಗಿಡ’ ಅಂದ ಅಣ್ಣನ ದೋಸ್ತ. ಆಗ ಅಣ್ಣ ‘ಎಲ್ಲಿ ಹೇಳು ನೋಡುವಾ ನಾನು ನಿನ್ನೆ ಬರಕೊಟ್ಟಿದ್ದು’ ಅಂದ. ನನಗೆ ಫಜೀತಿಗಿಟ್ಟುಕೊಂಡಿತು.

ನಾನು ಶುರು ಮಾಡಿದೆ ಆದರೆ ಮುಂದುವರೆಸಲಾಗಲಿಲ್ಲ. ಮರೆತು ಮರೆತು ಹೋಗುತ್ತಿತ್ತು. ಅಣ್ಣ ‘ಇವರೆಲ್ಲ ಬಂದು ಇಷ್ಟೆಲ್ಲ ಮಾಡಿದ್ದು ದಂಡ ಮಾಡಬೇಡ. ಸರೀ ಬಾಯಿಪಾಠ ಮಾಡು’ ಅಂತ ಕೊಂಚ ಗಡುಸಾಗಿಯೇ ಹೇಳಿದ. ಅಣ್ಣನ ದೋಸ್ತರೆಲ್ಲ ಪುನಃ ನನ್ನನ್ನು ಆ ವೇಷದಿಂದ ಬಿಡುಗಡೆಗೊಳಿಸಿ ಒಂದು ಕೊತ್ತಲ ಚೀಲದಲ್ಲಿ ಅದನ್ನೆಲ್ಲ ತುಂಬಿಟ್ಟರು. ನಾಳೆ ಅದನ್ನೇ ಎತ್ತಿಕೊಂಡು ಹೋಗುವುದು ಎಂದಾಯಿತು.

ನನಗೋ ರಾತ್ರಿಯೆಲ್ಲ ಒಂದು ರೀತಿಯ ಕನಸು ಎಚ್ಚರ ಕನಸು ಎಚ್ಚರ. ಬೆಳಿಗ್ಗೆ ಅಮ್ಮ ಬೇಗ ದೋಸೆ ಚಹ ಮಾಡಿಕೊಟ್ಟಳು. ನಾವು ಗೋಕರ್ಣಕ್ಕೆ ನಡೆದು ಹೋಗಿ ಅಲ್ಲಿಂದ ಕುಮಟೆ ಬಸ್ಸು ಹತ್ತಿದೆವು. ಬಸ್ಸಿನಲ್ಲಿ ನಾನು ಅಣ್ಣನ ಬಳಿ ‘ಬಹುಮಾನ ಬರ್ತದೋ?’ ಅಂತ ಕೇಳಿದೆ. ಅದಕ್ಕವನು ‘ನಾನು ಹೇಳಿಕೊಟ್ಟ ಹಾಗೆ ಮಾಡಿದರೆ ಖಂಡಿತ ಬರತದೆ’ ಅಂದ. ನಾನು ಪುನಃ ಅವ ಬರೆದುಕೊಟ್ಟದ್ದನ್ನು ಬಾಯಿಪಾಠ ಮಾಡುತ್ತ ಕೂತೆ.

ನಮ್ಮ ಬಳಿಯಿದ್ದ ತೆಂಗಿನ ವೇಷದ ಸಾಮಾನುಗಳ ಚೀಲವನ್ನು ಕಂಡೆಕ್ಟರ್ರು ಬಸ್ಸಿನ ಮುಂದೆ ಡ್ರೈವರ್ ಹತ್ತಿರವಿದ್ದ ಖಾಲಿ ಜಾಗೆಯಲ್ಲಿ ಇಡು ಅಂತ ಹೇಳಿ ಇರಿಸಿದರು. ‘ಚೀಲದಲ್ಲಿ ಏನದು? ಎಲ್ಲಿಗೆ ಹೊರಟಿರಿ? ಏನು ಮಾಡುತ್ತಿದ್ದೀರಿ?’ ಅಂತೆಲ್ಲ ಕೇಳಿ ತಿಳಿದುಕೊಂಡು ಖುಷಿಪಟ್ಟರು. ನನ್ನಷ್ಟಕ್ಕೇ ನನಗೆ ಹೆಮ್ಮೆ ಅನ್ನಿಸಿತು. ಅಣ್ಣ ನನ್ನತ್ತ ತಿರುಗಿ ‘ಈಗೊಮ್ಮೆ ಹೇಳು ನೋಡುವಾ’ ಅಂದ. ನಾನಾಗ ಭಾಳ ಸರ್ತಿ ಓದಿಕೊಂಡದ್ದರಿಂದ ಸರಿಯಾಗಿ ಮರೆಯದೇ ಪಾಠ ಒಪ್ಪಿಸಿದೆ.

‘ಮತ್ತೆ ಮತ್ತೆ ಓದಿಕೋ, ಹಾಳೆ ಕೈಯಲ್ಲಿದ್ದರೆ ಚೊಲೋ ಅಲ್ಲ, ತೆಂಗಿನಗಿಡದ ಕೈಲಿ ಹಾಳೆ ಯಾಕೆ ಬಂತು ಅಂತ ಜನ ನಗ್ತಾರೆ’ ಅಂದ ಅಣ್ಣ. ಅಂತೂ ಬಸ್ಸಿಳಿದು ನಮ್ಮ ಪಕ್ಕ ಕೂತು ಬಂದ ಒಬ್ಬ ಅಜ್ಜನ ಹತ್ತಿರವೇ ಶಾಲೆಯ ಗುರುತು ವಿಚಾರಿಸಿ ಆ ಬದಿ ನಡೆದೆವು. ಹದಿನೈದು ನಿಮಿಷ ನಡೆದ ನಂತರ ಸೇಂಟ್ ಜೋಸೆಫ್ ಶಾಲೆ ಸಿಕ್ಕಿತು. ಅಲ್ಲಿ ಎಲ್ಲ ನಮ್ಮ ತರಹ ವೇಷಭೂಷಣ ಹಾಕುವ ಮಕ್ಕಳು ಹಾಗೂ ಅವರಿಗೆ ತಯಾರು ಮಾಡಲು ಬಂದ ಜನಗಳದೇ ಗದ್ದಲ.

ಅಣ್ಣ ನನಗೆ ಬೇಗ ಬೇಗ ಚೀಲದೊಳಗಿನ ತೆಂಗಿನಗಿಡದ ಆಭರಣ ತೆಗೆದು ಒಂದೊಂದೇ ತೊಡಿಸತೊಡಗಿದ. ಅದಕ್ಕೆ ಮೊದಲು ‘ಒಂದು ಎರಡು ಮಾಡುತ್ತಿಯೋ? ನೀರುಗೀರು ಕುಡಿಯುತ್ತಿಯೋ?’ ಅಂತ ವಿಚಾರಿಸಿದ. ಆ ಸಂಭ್ರಮದ ಸಮಯದಲ್ಲಿ ನನಗೆ ಏನೂ ಬೇಡವಾಗಿತ್ತು. ಅಲ್ಲಿಯ ಕಾರ್ಯಕ್ರಮ ನಡೆಸುವ ಒಬ್ಬರು ಬಂದು ನನ್ನ ಹೆಸರು, ಶಾಲೆಯ ಹೆಸರು, ಊರಿನ ಹೆಸರು ಮತ್ತು ಹಾಕುತ್ತಿರುವ ಛದ್ಮವೇಷದ ವಿವರಗಳನ್ನು ಬರಕೊಂಡು ಹೋದರು. 

ಬೊಂಡೇಕಾಯಿಗಳು ಕೆಲವೊಂದು ಚೀಲದಲ್ಲೇ ತೊಟ್ಟು ಕಳಚಿ ಉದುರಿದ್ದವು. ಅದನ್ನು ಕೈಯಲ್ಲೇ ಹಿಡಿದುಕೋ ಅಂದ ಅಣ್ಣ. ಅಲ್ಲಿ ತರಕಾರಿ ಮಾರುವ ಪಾತ್ರ ಹಾಕಲು ಬಂದ ಹುಡುಗಿಯ ತಾಯಿ ‘ನನ್ನ ಬಳಿ ತೆಂಗಿನ ಕಾಯಿ ಉಂಟು, ಅದನ್ನೂ ಬೇಕಾದರೆ ಅವನ ಕತ್ತಿಗೆ ಕಟ್ಟು’ ಅಂತ ಅಣ್ಣನಿಗೆ ಸಲಹೆ ಕೊಟ್ಟದುದಕ್ಕೆ ಅಣ್ಣ, ‘ಹೆ ಹೇ ಬೇಡ ಬೇಡ, ಮರ ಸುಲಿದ ತೆಂಗಿನಕಾಯಿ ಕೊಡ್ತದೆಯೇ ಅಂತ ಯಾರಾದರೂ ಕೇಳಿದರೆ?’ ಅಂದದ್ದಕ್ಕೆ ಅಲ್ಲಿದ್ದವರೆಲ್ಲ ನಕ್ಕರು.

ಅಂತೂ ಒಬ್ಬೊಬ್ಬರದೇ ಹೆಸರು ಮತ್ತು ಅದರ ಜೊತೆ ಅವರವರ ಶಾಲೆಯ ಹೆಸರು ಹಿಡಿದು ಕರೆಯಲು ಶುರುವಾಗಿಯೇ ಬಿಟ್ಟಿತ್ತು. ನನಗೆ ಇದೀಗ ಸ್ವಲ್ಪ ಕಾಲು ನಡುಕ ಬಂದ ಅನುಭವವಾಯಿತು. ಅಣ್ಣ ನನ್ನ ಮುಖ ನೋಡುತ್ತ ‘ಹೆದರಬೇಡ ಏನೂ ಆಗುವುದಿಲ್ಲ, ಪಾರ್ಟು ಕೆಟ್ಟರೆ ಬಹುಮಾನ ಅಷ್ಟೇ ಸಿಗೂದಿಲ್ಲ, ಇನ್ನೇನೂ ದೊಡ್ಡ ಅನಾಹುತ ಆಗೂದಿಲ್ಲ’ ಅಂತ ರಮಿಸಿದ.

‘ನೀನು ಗಾಳಿಗೆ ಮರ ಅಲುಗಾಡುವುದನ್ನು ನೋಡಿದ್ದೀಯಲ್ಲ? ಹಾಗೆ ಸುಮ್ಮನೇ ಚೂರು ಬಳಕುತ್ತ ನಿಂತು ಬಾಯಿಪಾಠ ಮಾಡಿದ್ದನ್ನು ಹೇಳು’ ಅಂತ ಕೊನೆಯದಾಗಿ ಹೇಳಿದ. ನಾನು ಸ್ವಲ್ಪ ನಿಂತಲ್ಲೇ ಅಲುಗಾಡಿ ತೋರಿಸಿ ‘ಹೀಗೋ?’ ಅಂತ ಕೇಳಿದೆ. ಆಗ ಅವನು ಸ್ಟೇಜಿನಲ್ಲಿ ಬಂದ ಭಕ್ತ ಕನಕದಾಸನ ವೇಷ ನೋಡುವುದರಲ್ಲಿ ಮಗ್ನನಾಗಿದ್ದ.

ಅದರ ನಂತರದಲ್ಲೇ ನನ್ನ ಹೆಸರೂ ಕೂಗಿದ್ದರಿಂದ ಅಣ್ಣ ನನ್ನನ್ನು ಸ್ಟೇಜಿನವರೆಗೆ ತಂದು ಬಿಟ್ಟ. ನನಗೆ ಕಾಲಿನವರೆಗೆ ಹಾಕಿದ್ದ ಕಾಂಡದ ರೂಪದ ರಟ್ಟು ಮೆಟ್ಟಿಲಿಗೆ ತಾಗುತ್ತಿದ್ದುದರಿಂದ ಅಲ್ಲಿದ್ದ ಒಬ್ಬರು ನನ್ನನ್ನು ಆ ರಟ್ಟಿನ ಸಮೇತ ಎತ್ತಿ ಸ್ಟೇಜಿನ ಮೇಲೆ ಹತ್ತಿಸಿದ್ದರು. ನಾನು ನಿಧಾನ ಸರಿಯುತ್ತ ಸ್ಟೇಜಿನ ಮಧ್ಯ ಭಾಗದಲ್ಲಿ ಹೋಗಿ ನಿಂತೆ. ಮೈ ಕೈ ಎಲ್ಲ ಬೆವರಿಹೋಗಿತ್ತು. ಯಾರೋ ಬಂದು ಮೈಕು ನನ್ನ ಕೈಯಲ್ಲಿ ನೀಡಿ ಹೋದರು.

ನನಗೆ ಗಂಟಲು ಒಣಗಿ ಬಂದು ಅಣ್ಣ ಬರೆದುಕೊಟ್ಟದ್ದೆಲ್ಲ ಮರೆತು ಹೋಗಿ ಚೂರು ಮೈ ಅತ್ತಿತ್ತ ಅಲುಗಾಡಿಸುತ್ತ, ನನ್ನದೇ ಭಾಷೆಯಲ್ಲಿ ನಾನು ಗ್ರಹಿಸಿದಷ್ಟು ಹೇಳತೊಡಗಿದೆ. ನಾನೊಂದು ತೆಂಗಿನ ಮರ. ನನಗೆ ಇಲ್ಲಿ ಸರೀ ಗಾಳಿ ಇಲ್ಲ, ಸರೀ ನೀರು ಇಲ್ಲ, ಸರೀ ಗೊಬ್ಬರ ಇಲ್ಲ, ಇಲ್ಲಿ ಎಲ್ಲ ಹೊಲಸಾಗಿದೆ, ಅದಕ್ಕೇ ನೋಡಿ ಹೀಗಿದ್ದೇನೆ, ನನ್ನನ್ನು ಇನ್ನು ಮೇಲೆ ಕಲ್ಪವೃಕ್ಷ ಅಂತ ಕರೆಯಬೇಡಿ ಅಂತೆಲ್ಲ ಬಾಯಿಗೆ ಬಂದದ್ದು ತೊದಲುತ್ತ ಹೋ ಅಂತ ಅತ್ತುಬಿಟ್ಟೆ. ಅಣ್ಣ ಹೇಳಿದ್ದು ಮರೆತಿದ್ದಕ್ಕೆ ನನಗೆ ಅಳುವೇ ಉಕ್ಕಿಬಿಟ್ಟಿತ್ತು. ನನ್ನ ಅಲುಗಾಟಕ್ಕೆ ಕೆಲವು ಗರಿಗಳೂ ಬೊಂಡೇಕಾಯಿಗಳೂ ಒಂದೊಂದಾಗಿ ಉದುರಿಯೂ ಬಿದ್ದವು.

ಕೆಳಗಡೆ ಸಭಿಕರಲ್ಲಿ ದೊಡ್ಡ ಚಪ್ಪಾಳೆ, ನಗು, ಸೀಟಿ ಹೊಡೆದ ಸದ್ದು ಕೇಳಿಬಂತು. ಒಬ್ಬರು ಬಂದು ನನ್ನನ್ನು ಎತ್ತಿ ಪುನಃ ಸ್ಟೇಜಿನ ಕೆಳಗೆ ಇಳಿಸಿದರು. ಅಣ್ಣ ಬಂದು ಕೈ ಹಿಡಿಯುತ್ತ ‘ನಾನು ಅತ್ತುಬಿಡು ಅಂತ ಹೇಳಿರಲಿಲ್ಲ, ಆದರೆ ನೀನು ಅತ್ತಿದ್ದಕ್ಕೆ ಚೊಲೋ ಮಾಡಿದಿ, ಅಗದೀ ಪರಫೆಕ್ಟ ಆಯ್ತು’ ಅನ್ನುತ್ತ ತಾನೂ ಹಾಹಾಹ್ಹಾ ನಕ್ಕ. ನನಗೂ ಸಾಕು ಸಾಕಾಗಿತ್ತು. ಅಣ್ಣ ಎಲ್ಲ ವೇಷ ಕಳಚಿ ಚೀಲದಲ್ಲಿ ತುಂಬುತ್ತಿರುವಾಗ ಇತ್ತ ನಾನು ನನ್ನ ಅಂಗಿ ಹುಡುಕಿ ಹಾಕಿಕೊಂಡು ನಿರಾಳನಾದೆ.

ಎಲ್ಲ ಮುಗಿದು ಹತ್ತು ನಿಮಿಷ ವಿರಾಮದ ನಂತರ ಬಹುಮಾನ ಅನೌನ್ಸ್‌ ಮಾಡತೊಡಗಿದರು. ನನಗೆ ಅದರ ಕುರಿತು ಜಿಗುಪ್ಸೆ ಹುಟ್ಟಿಬಿಟ್ಟಿತ್ತು. ಮೂರನೇ ಬಹುಮಾನ ಅಕ್ಕಮಹಾದೇವಿ ಪಾತ್ರಕ್ಕೆ ಅಂತ ವೇದಿಕೆಗೆ ಕರೆದು ಆ ಶಾಲೆಯ ಮುಖ್ಯಾಧ್ಯಾಪಕರೇ ಕೈಯಾರೆ ಬಹುಮಾನ ಕೊಟ್ಟರು. ‘ಮೂರನೇ ಬಹುಮಾನ ಮೊದಲು ಕರೆದರು ನೋಡು’ ಅಂದ ಅಣ್ಣ. ನನಗೆ ಅಲ್ಲಿಂದ ಹಿಂದಿರುಗಿ ಮನೆಗೆ ಬಂದರೆ ಸಾಕಾಗಿತ್ತು. ಅಣ್ಣ ‘ಎರಡನೆಯದು ಬಂದರೂ ಬರಬಹುದು, ಎಲ್ಲ ಮುಗಿದ ನಂತರ ಮನೆಗೆ ಹೋಗೋಣ’ ಅಂದ. ಎರಡನೇ ಬಹುಮಾನ ಸೀಮೆ ಎಣ್ಣೆ ಮಾರುವವನ ವೇಷ ಹಾಕಿದ್ದ ಹುಡುಗನಿಗೆ ಸಿಕ್ಕಿತು. ಅಣ್ಣ ಈಗ ‘ಏ ಹೋಯ್ತು ಬಾಬಾ, ಮನೆಗೆ ಹೋಗುವಾ’ ಅಂದ. ನಾವಿಬ್ಬರೂ ನಿರಾಸೆ ಹೊತ್ತು ಗೇಟಿನ ಕಡೆಗೆ ನಾಲ್ಕಾರು ಹೆಜ್ಜೆ ನಡೆಯತೊಡಗಿದ್ದೆವು.

ವೇದಿಕೆಯಲ್ಲಿ ಮೊದಲ ಬಹುಮಾನ ಮೊದಲ ಬಹುಮಾನ ಅಂತ ಆರು ಬಾರಿ ಹೇಳಿದರೇ ವಿನಃ ಫಲಿತಾಂಶ ಹೊರಹಾಕಲು ಚೂರು ತಡಮಾಡಿ, ನಂತರ ಸ್ವಲ್ಪ ಮೌನವಾಗಿ ‘ಮೊದಲ ಬಹುಮಾನ ತೆಂಗಿನ ಗಿಡಕ್ಕೇ’ ಅನ್ನುತ್ತ ನನ್ನ ಹಾಗೂ ನಮ್ಮ ಶಾಲೆಯ ಹೆಸರು ಹೇಳಿ ಕರೆದಿದ್ದರು. ಇಡೀ ಸಭಾಂಗಣದ ತುಂಬ ಕಿವಿಗಡಚಿಕ್ಕುವ ಚಪ್ಪಾಳೆ ಸದ್ದು. ನನಗಿಂತ ಅಣ್ಣನಿಗೇ ಹೆಚ್ಚು ಖುಷಿಯಾಗಿತ್ತು. ಅಲ್ಲೇ ಹೋ ಅಂತ ಕುಣಿದೇ ಬಿಟ್ಟಿದ್ದ. ಬಹುಮಾನವಾಗಿ ಒಂದು ದೊಡ್ಡ ಗೋಡೆ ಗಡಿಯಾರ ಹಾಗೂ ನೂರು ರೂಪಾಯಿ ಭಕ್ಷೀಸು ಕೊಟ್ಟರು. ಬಹುಮಾನದ ಸಂಗತಿ ಹಾಗಿರಲಿ. ಆ ಬಹುಮಾನ ಬಂದಾಗ ನನ್ನ ಅಣ್ಣನ ಮುಖದಲ್ಲಿ ಮಿಂಚಿದ ಆ ನಗು ಆ ಉಲ್ಲಾಸ ಮಾತ್ರ ನನಗೆಂದೂ ಮರೆತು ಹೋಗುವಂಥದಲ್ಲ. ಅದು ನನಗೆ ಯಾವತ್ತೂ ಸ್ಫೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT