ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲವಾದಿ ಮಹಾಸಭಾದಲ್ಲಿ ಬಿರುಕು

ಕುಮಾರ್ ವಿರುದ್ಧ ಘೋಷಣೆ, ರಾಜೀನಾಮೆಗೆ ಪಟ್ಟು
Last Updated 29 ಮೇ 2016, 19:46 IST
ಅಕ್ಷರ ಗಾತ್ರ

ಹಾಸನ: ರಾಜ್ಯ ಛಲವಾದಿ ಮಹಾಸಭಾದ ಅಧ್ಯಕ್ಷರಾಗಿರುವ ಕುಮಾರ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಛಲವಾದಿ ಮಹಾಸಭಾದ ಒಂದು ಬಣವು ಒತ್ತಾಯಿಸಿದ ಹಾಸನದಲ್ಲಿ ಭಾನುವಾರ ನಡೆದ ಛಲವಾದಿ ಮಹಾಸಭಾದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಗೊಂದಲ ಉಂಟಾಯಿತು.

ಮಹಾಸಭಾದ ಸಂಸ್ಥಾಪಕ ಕೆ.ಶಿವರಾಮ್ ಅವರ ಪರ ಗುಂಪೊಂದು ಸಭೆ ನಡೆಸಲು ಅವಕಾಶ ನೀಡಲಿಲ್ಲ. ಹಾಲಿ ಅಧ್ಯಕ್ಷ ಕುಮಾರ್ ರಾಜೀನಾಮೆ ನೀಡಬೇಕು ಮತ್ತು ಕೆ. ಶಿವರಾಮ್ ಸಭಾದ ಮುಂದಿನ ಅಧ್ಯಕ್ಷರಾಗಿ ನೇಮಕವಾಗಬೇಕು ಎಂದು ಪಟ್ಟು ಹಿಡಿದರು.

ಇದರಿಂದ ಎರಡೂ ಗುಂಪುಗಳ ನಡುವೆ ಪರಸ್ಪರ ವಾಗ್ವಾದ ಶುರುವಾಯಿತು. 100ಕ್ಕೂ ಅಧಿಕ ಕೆಎಸ್‌ಆರ್‌ಪಿ ಸಿಬ್ಬಂದಿ, ಡಿವೈಎಸ್‌ಪಿ, ಎಸ್‌್ಐ ಸ್ಥಳಕ್ಕೆ ಬಂದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಸದಸ್ಯರು ಶಾಂತರಾಗಿ ಇರುವಂತೆ ಶಿವರಾಮ್ ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಕುಮಾರ್ ವಿರುದ್ಧ ಘೋಷಣೆ ಕೂಗುತ್ತಿದ್ದ ಸದಸ್ಯರ ಧ್ವನಿ ಹೆಚ್ಚಾಗುತ್ತಿದ್ದಂತೆ ಮತ್ತೊಂದು ಗುಂಪು ಕುಮಾರ್ ಪರ ಜೈಕಾರ ಕೂಗಿದರು.

ಈ ನಡುವೆ ಎರಡು ಗುಂಪಿನ ನಡುವೆ ವಾಕ್ಸಮರ ಏರ್ಪಟ್ಟು, ಕೈ ಕೈ ಮಿಲಾಯಿಸುವ ಹಂತ ತಲುಪಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಶಿವರಾಮ್ ಆರೋಪ:  ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಕುಮಾರ್ ಎರಡು ವರ್ಷಗಳಿಂದ ಸಮುದಾಯ ಕ್ಕಾಗಿ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಆರೋಪಿಸಿದರು.

‘ನನ್ನ ಸಹಿಯನ್ನು ನಕಲು ಮಾಡಿ ಅಧ್ಯಕ್ಷರಾಗಿ ತಮ್ಮನ್ನು ಘೋಷಿಸಿಕೊಂಡರು. ಆದರೆ, ಸಮುದಾಯದ ಒಳಜಗಳ ಹೊರಗಿನ ಸಮಾಜಕ್ಕೆ ತಿಳಿಯುವುದು ಬೇಡ ಎಂದು ಸುಮ್ಮನಿರಬೇಕಾಯಿತು. ಆದರೆ, ಇವರು ಸಮುದಾಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿದರು. ಇದಕ್ಕಾಗಿ ಚುನಾವಣೆ ನಡೆಸುವಂತೆ ಜಿಲ್ಲಾ ನೋಂದಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ರಾಜ್ಯದಾದ್ಯಂತ 2,800 ಸದಸ್ಯರ ನೋಂದಣಿಯಾಗಿದ್ದು, ಯಾರೊಂದಿಗೂ ಕುಮಾರ್ ಉತ್ತಮ ಬಾಂಧವ್ಯ ಇಟ್ಟುಕೊಂಡಿಲ್ಲ. ಮುಂದಿನ 90 ದಿನಗಳಲ್ಲಿ ಚುನಾವಣೆ ನಡೆಸಬೇಕು ಎಂದು ನೋಂದಣಾಧಿಕಾರಿ ಸೂಚನೆ ನೀಡಿದ್ದಾರೆ.

ಇನ್ನೊಂದು ಬಾರಿ ಮನವಿ ಸಲ್ಲಿಸಿ ಚುನಾವಣೆಯನ್ನು ಶೀಘ್ರವಾಗಿ ನಡೆಸುವಂತೆ ಕೇಳಿಕೊಳ್ಳುತ್ತೇನೆ’ ಎಂದರು. ‘ವಾರ್ಷಿಕ ಸಭೆ ನಡೆಸುವಾಗ ರಾಜ್ಯದ ಎಲ್ಲ ಸದಸ್ಯರಿಗೆ ಮಾಹಿತಿ ನೀಡಬೇಕು. ಆದರೆ, ತಮಗೆ ಬೇಕಾದವರಿಗೆ ಮಾತ್ರ ನೋಟಿಸ್ ಕಳುಹಿಸಿಕೊಟ್ಟಿದ್ದಾರೆ. ತಮ್ಮ ಅವ್ಯಹಾರ ಬೆಳಕಿಗೆ ಬರಬಾರದು ಎಂದು ಹಾಸನದಲ್ಲಿ ಸಭೆ ನಡೆಸುತ್ತಿ ದ್ದಾರೆ. ಆದರೆ, ಇಲ್ಲಿ ನನಗೆ ಅಪಾರ ಬೆಂಬಲವಿದೆ ಎಂದು ಹೇಳಿದರು.

ಛಲವಾದಿ ಮಹಾಸಭಾ ಭವನ ನಿರ್ಮಾಣಕ್ಕಾಗಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ 2 ಎಕರೆ ಜಮೀನು ಹಾಗೂ ₹ 5 ಕೋಟಿ ನೀಡಿದ್ದರು. ಆದರೆ, ಆ ಹಣವನ್ನು ಕುಮಾರ್ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT