ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲ ರೂಢಿಸಿಕೊಳ್ಳಿ

ಅಕ್ಷರ ಗಾತ್ರ

ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಆರು ಮಂದಿ ವಿದ್ಯಾರ್ಥಿಗಳು  ಆತ್ಮಹತ್ಯೆಗೆ ಶರಣಾದ ಸುದ್ದಿ ನೋವು ತಂದಿದೆ. ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ಪರೀಕ್ಷೆಯಲ್ಲಿ ಫೇಲಾದವರೆಲ್ಲ ದಡ್ಡರಲ್ಲ. ಪಾಸಾದವರೆಲ್ಲ ಬುದ್ಧಿವಂತರಲ್ಲ. ಮಕ್ಕಳಿಗೆ ಈ ಅಂಶವನ್ನು ಮನವರಿಕೆ ಮಾಡಿಕೊಡಬೇಕು.

ಮಾರ್ಟಿನ್ ಲೂಥರ್ ಕಿಂಗ್ ಹೇಳುತ್ತಾರೆ:  ‘ಹಾರಲು ಆಗ ದಿದ್ದರೆ ಓಡು.  ಓಡಲು ಆಗದಿದ್ದರೆ ನಡೆ.  ನಡೆಯಲೂ ಆಗದಿದ್ದರೆ ತೆವಳು.  ಆದರೆ ಮುಂದಕ್ಕೆ ಹೆಜ್ಜೆ ಹಾಕುವುದನ್ನು ಬಿಡಬೇಡ’.  ಆತ್ಮಹತ್ಯೆಗೆ ಶರಣಾಗಿ ಹಿಂದಕ್ಕೆ ಬಾರದಷ್ಟು ಮುಂದೆ ಹೋಗು ಎಂದು ಯಾರೊಬ್ಬರೂ ಹೇಳಿಲ್ಲ. 

ಥಾಮಸ್ ಅಲ್ವ ಎಡಿಸನ್ ಅವರಿಗೆ ವಿದ್ಯೆ ಬರುವುದಿಲ್ಲ ಎಂದು ಹೇಳಿ  ಮುಖ್ಯೋಪಾಧ್ಯಾಯರು ಅವರನ್ನು ಶಾಲೆಯಿಂದ ಮನೆಗೆ ಅಟ್ಟಿದರು.  ತನ್ನನ್ನು ಶಾಲೆಯಿಂದ ಏಕೆ ಓಡಿಸಿದರು ಎಂಬುದು ಎಡಿಸನ್ ಅವರಿಗೇ ಗೊತ್ತಿರಲಿಲ್ಲ.

ಎಡಿಸನ್‌ರ ತಾಯಿಯನ್ನು ಶಾಲೆಗೆ ಕರೆಸಿ ಮುಖ್ಯೋಪಾಧ್ಯಾಯರು ‘ನಿಮ್ಮ ಮಗನಿಗೆ ವಿದ್ಯೆ ಹತ್ತುವುದಿಲ್ಲ.  ಆತ ಶತ ದಡ್ಡ. ಅವನನ್ನು ಶಾಲೆಗೆ ಕಳುಹಿಸುವುದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಒಂದು ಚೀಟಿಯಲ್ಲಿ ಬರೆದು ಕೊಟ್ಟರು. 

ಮನೆಗೆ ಕರೆದುಕೊಂಡು ಬಂದ ತಾಯಿಯನ್ನು ತನ್ನನ್ನು ಶಾಲೆ ಬಿಡಿಸಿ ಕರೆದುಕೊಂಡು ಬಂದದ್ದು ಏಕೆ ಎಂದು ಕೇಳಿದ್ದಕ್ಕೆ ಆತನ ತಾಯಿ ‘ನೀನು ತುಂಬಾ ಬುದ್ಧಿವಂತ, ನಿನಗೆ ಶಾಲೆಯ ಅಗತ್ಯವಿಲ್ಲ. 

ನಿನ್ನ ಬುದ್ಧಿವಂತಿಕೆಗೆ ಶಾಲೆಯಲ್ಲಿ ಪಾಠ ಹೇಳಿಕೊಡುವ ಶಿಕ್ಷಕರೇ ಇಲ್ಲ ಎಂದು ಮುಖ್ಯೋಪಾಧ್ಯಾಯರು ಹೇಳಿದರು’ ಎಂದು ದುಃಖ ಮರೆಮಾಚಿ ಮಗನನ್ನು ಹುರಿದುಂಬಿಸಿದರು.

‘ನಿನಗೆ ನಾನೇ ಪಾಠ ಹೇಳಿಕೊಡುತ್ತೇನೆ’ ಎಂದು ಹೇಳಿ ಸಮಾಧಾನ ಮಾಡಿದರು.  ಎಡಿಸನ್ ಮುಂದೇನಾದರು ಎಂಬುದು ಎಲ್ಲರಿಗೂ ಗೊತ್ತು. ದೊಡ್ಡ ವಿಜ್ಞಾನಿಯಾಗಿ ವಿಶ್ವಕ್ಕೇ ದಾರಿದೀಪವಾದರು.

ಮಕ್ಕಳು ವೈಫಲ್ಯಕ್ಕೆ ಎದೆಗುಂದಬಾರದು.  ಪರೀಕ್ಷೆಯಲ್ಲಿ ಜೀವನವಿಲ್ಲ.  ಜೀವನದಲ್ಲಿ ಪರೀಕ್ಷೆಯಿದೆ.  ಜೀವನದ ಪರೀಕ್ಷೆಯಲ್ಲಿ ಗೆಲ್ಲುವ ಛಲವನ್ನು ರೂಢಿಸಿಕೊಳ್ಳಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT