ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂತುಬಾಧೆ ಎಷ್ಟು ಗೊತ್ತು?

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಜಂತುಬಾಧೆ-ನಿವಾರಣೆಯ ಜೊತೆಗೆ ನಿರ್ಬಂಧವೂ ಲೇಸಲ್ಲವೇ?
6ನೇ ತರಗತಿಯ ಬಾಲಕಿಯನ್ನು ಅವರಮ್ಮ ಕರೆತಂದು ಡಾಕ್ಟ್ರೇ ಅಂಡನ್ನು ತುಂಬಾನೇ ಕೆರ್‌ಕೊತಾಳೆ. ಊಟಾನೂ ಸರಿಯಾಗಿ ಮಾಡುತ್ತಿಲ್ಲ ಒಳ್ಳೆ ಟಾನಿಕ್ ಬರೆದು ಕೊಡ್ತಿರಾ ಎಂದು ಕೇಳ್ತಾಳೆ. ಇನ್ನು ಕೆಲವರು ವರ್ಷ ವರ್ಷ ಜಂತು ಹುಳದ ಮಾತ್ರೆ ಕೊಡ್ತಾ ಇದ್ರೂ ಹುಳದ ಕಾಟ ನಮ್ಮ ಮಕ್ಕಳಿಗೆ ತಪ್ಪೋದೇ ಇಲ್ಲ, ತುಂಬಾ ಸ್ವೀಟ್ಸ್ ತಿಂತಾನೇ ಇರ್ತಾರೆ ಅದಕ್ಕೆ ಇರಬಹುದಲ್ಲವಾ  ಡಾಕ್ಟ್ರೇ ಎಂದು ಅಸಹಾಯಕತೆಯಿಂದ ಹಳುವುದು ಇಂದಿಗೂ ವೈದ್ಯಕೀಯ ಅನುಭವಗಳಲ್ಲಿ ಅಪರೂಪವೇನಲ್ಲ.

ಹೆಚ್ಚಿನ ಪೋಷಕರು ಅವರ ಮಕ್ಕಳು ತಿನ್ನುವ ಸಿಹಿ ತಿಂಡಿಗೂ ಹಾಗೂ ಜಂತುಹುಳಗಳ ತೊಂದರೆಗೂ ಹೋಲಿಸುತ್ತಾರೆ. ನಮ್ಮ ಭಾರತದಲ್ಲಂತೂ ಮಕ್ಕಳಲ್ಲಿ ಜಂತು ಹುಳಗಳ ಭಾದೆಯಿಂದ ಮಿಲಿಯನ್‌ಗಟ್ಟಲೇ ಮಕ್ಕಳು ಬಳಲುತ್ತಿದ್ದಾರೆ. ಹಳ್ಳಿಗಾಡಿನಲ್ಲಂತೂ 1ರಿಂದ 5 ವರ್ಷದಲ್ಲಿ 10ರಲ್ಲಿ 7 ಮಕ್ಕಳು ರಕ್ತಹೀನತೆ ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಟಿತಗೊಂಡು ದೀರ್ಘಾವಧಿ ಆರೋಗ್ಯಕ್ಕೆ ತೊಡಕಾಗುತ್ತದೆ ಹಾಗೂ ಇದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ, ಕಾರ್ಯಕ್ಷಮತೆ ಹಾಗೂ ಭವಿಷ್ಯದಲ್ಲಿನ ಉತ್ಪಾದನಾ ಸಾಮರ್ಥ್ಯವು ಕಡಿಮೆಯಾಗುತ್ತದೆ.

ಭಾರತದಲ್ಲಿಂತೂ 241 ಮಿಲಿಯನ್‌ಗೂ ಹೆಚ್ಚು ಮಕ್ಕಳು ಪರಾವಲಂಬಿ ಜಂತು ಹುಳಗಳ ಸೋಂಕಿನಿಂದ ಬಳಲುತ್ತಿರುವುದರಿಂದ, ಈ ಸೋಂಕಿನಿಂದಾಗುವ ನಷ್ಟಗಳನ್ನು ತಡೆಯಲು ಭಾರತದಲ್ಲಿ 2015ರಲ್ಲಿ ಫೆಬ್ರವರಿ 10ನ್ನು ರಾಷ್ಟ್ರೀಯ ಆರೋಗ್ಯ ನಿಯೋಗದ ವತಿಯಿಂದ  ಕರ್ನಾಟಕವೂ  ಸೇರಿದಂತೆ 12 ರಾಜ್ಯಗಳಲ್ಲಿ ಪ್ರಪ್ರಥಮವಾಗಿ ರಾಷ್ಟ್ರೀಯ ಜಂತುಹುಳು ದಿನವನ್ನು ಆಚರಿಸಲಾಯಿತು. ಈ ವರ್ಷವು ಕೂಡಾ ಭಾರತ ಸರ್ಕಾರದ ವತಿಯಿಂದ 1ರಿಂದ19 ವರ್ಷಗಳೊಗಿನ  ಎಲ್ಲ ಸರ್ಕಾರಿ ಶಾಲೆ, ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳಿಗೆ ಫೆಬ್ರವರಿ 10ರಂದು ಸಾಮೂಹಿಕ ಜಂತುಹುಳ ನಿರ್ಮೂಲನಕ್ಕಾಗಿ ಆಲ್‌ಬೆಂಡಜೋಲ್ 400ಮಿಲಿ ಗ್ರಾಂನ ಒಂದೇ ಒಂದು  ನುಂಗಿಸಲಾಗುತ್ತದೆ ಈ ಬಗ್ಗೆ ಶಿಕ್ಷಕರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಈ ಮಾತ್ರೆಯಿಂದ ಹಲವು ಸಾಮಾನ್ಯವಾಗಿ ಬಾಧಿಸುವ ಜಂತುಹುಳುಗಳು ಅಂದರೆ ಕೊಕ್ಕೆಹುಳು, ಲಾಡಿಹುಳು, ದಾರದಹುಳು, ಚಾಟಿಹುಳು, ದುಂಡುಹುಳು ಇತ್ಯಾದಿ.

ಈ ಪರಾವಾಲಂಬಿ ಜಂತುಹುಳಗಳು ನಮ್ಮ ಶರೀರವನ್ನು ಒಳಸೇರುವ ಮುಖ್ಯ ಕಾರಣಗಳೆಂದರೆ:- ಬಯಲು,ಕೆರೆ ನದಿ ತೀರಗಳಲ್ಲಿ ಮಲ ವಿರ್ಸಜನೆ, ಬರಿಗಾಲಲ್ಲಿ ನಡೆಯುವುದು, ಕಲುಷಿತ ನೀರಿನ ಸೇವನೆ ಹಾಗೂ ಅದನ್ನೆ  ಅಡುಗೆಗೆ ಬಳಸುವುದು, ಮನುಷ್ಯ ಮಲವನ್ನು ಹಾಗೂ ಚರಂಡಿ ನೀರನ್ನು  ಗೊಬ್ಬರವಾಗಿ ಬಳಸಿ ಸೊಪ್ಪು ತರಕಾರಿ ಬೆಳೆದು ಸೇವಿಸುವುದು ಇತ್ಯಾದಿಗಳಿಂದ.

ದುಂಡುಹುಳುಗಳು (ರೌಂಡ್ ವರ್‌ಮ್) ಈ ಹುಳಗಳು  ಮನುಷ್ಯ ಮಲವನ್ನು ಗೊಬ್ಬರವಾಗಿ ಬಳಸಿದಾಗ ಬೆಳೆದ ತರಕಾರಿ ಸೊಪ್ಪುಗಳಲ್ಲಿರುವ ಮೊಟ್ಟೆಗಳು ಕರುಳನ್ನು ಸೇರಿ ಸಣ್ಣ ಮರಿಯಾಗಿ ನಂತರ ರಕ್ತನಾಳದ ಮೂಲಕ ಶ್ವಾಸಕೋಶ- ಹಾಗೂ ಆ ಮೂಲಕ ಗಂಟಲಿಗೆ ಬಂದು ಮತ್ತೆ ಕರುಳನ್ನು ಸೇರಿ, ವಯಸ್ಕ ದುಂಡುಹುಳವಾಗಿ ಬೆಳೆಯುತ್ತದೆ ಸುಮಾರು 15-20ಸೆ.ಮೀ ಬೆಳೆಯುತ್ತದೆ ಹೆಣ್ಣು ಹುಳು ಲಕ್ಷಗಟ್ಟಲೆ ಮೊಟ್ಟೆಯನ್ನಿಡುತ್ತದೆ ಅದು ಮಲದ ಮೂಲಕ ಹೊರಗೆ ಹೋಗುತ್ತದೆ. ಮಕ್ಕಳು ಸೇವಿಸಿದ ಆಹಾರದಲ್ಲಿ ಪಾಲನ್ನು ಅನುಭವಿಸಿ ಅಪೌಷ್ಠಿಕತೆಯನ್ನುಂಟು ಮಾಡುತ್ತದೆ. ಹೊಟ್ಟೆನೋವು, ವಾಂತಿ, ಮಲಬದ್ದತೆಯನ್ನುಂಟು ಮಾಡುತ್ತದೆ. ಕೆಲವೊಮ್ಮೆ ಅಲರ್ಜಿ ಗಂದೆಗಳೂ ಉಂಟಾಗಬಹುದು ಮತ್ತು ಶ್ವಾಸಕೋಶಗಳ ತೊಂದರೆಯೂ(ನ್ಯೂಮೋನಿಯ) ಉಂಟಾಗಬಹುದು.

ಮಲದಲ್ಲಿ ಇದರ ಮೊಟ್ಟೆಗಳನ್ನು ಪತ್ತೆ ಹಚ್ಚುವುದರಿಂದ. ಈ ಸೋಂಕನ್ನು ಕಂಡು ಹಿಡಿದು ಚಿಕಿತ್ಸೆ ಮಾಡಬಹುದು.

ಕೊಕ್ಕೆಹುಳು(ಹುಕ್‌ವರ್ಮ್)
ಇದು ಕೊಕ್ಕೆಯಾಕಾರವಾಗಿದ್ದು ಕರುಳಿನಲ್ಲಿ ವಾಸಮಾಡಿ ಮೊಟ್ಟೆಗಳನ್ನಿಟ್ಟು ಮಲವಿಸರ್ಜನೆಯಲ್ಲಿ ಮಣ್ಣಲ್ಲಿ ಸೇರಿ ಅಲ್ಲಿ ಮರಿಗಳಾಗುತ್ತವೆ. ನಂತರ ಮರಿಗಳು ಬರಿಗಾಲಲ್ಲಿ ನಡೆಯುವವರ ಕಾಲಿನ ಚರ್ಮವನ್ನ ಸೀಳಿ ರಕ್ತ ಪ್ರವಾಹದಲ್ಲಿ ಸೇರಿ ಪ್ರೌಡಾವಸ್ಥೆಗೆ ತಲುಪಿ ಮತ್ತೆ ಹೆಣ್ಣು ಹುಳುಗಳು ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ಕರುಳಿನಲ್ಲಿ ಹುಣ್ಣುಗಳನ್ನುಂಟು ಮಾಡುತ್ತದೆ. ಮತ್ತು ಕರುಳಿನಿಂದ ರಕ್ತವನ್ನು ಹೀರುತ್ತದೆ. ಮಕ್ಕಳು ಹಾಗೂ ಮಹಿಳೆಯರಲ್ಲಿ ರಕ್ತಹೀನತೆಯನ್ನುಂಟು ಮಾಡುವ ಅತಿ ಮುಖ್ಯ ಜಂತುಹುಳು ಇದಾಗಿದೆ. ಮಲದಲ್ಲಿ ಇದರ ಮೊಟ್ಟೆಗಳನ್ನು ಗುರುತಿಸುವುದರಲ್ಲಿ ಪತ್ತೆಹಚ್ಚ ಬಹುದು.

ಲಾಡಿಹುಳುಗಳ ಸೋಂಕು
ಲಾಡಿಹುಳುಗಳಲ್ಲಿ 3 ಬಗೆಗಳು ಹಂದಿ, ಹಸು, ಮತ್ತು ನಾಯಿ ಲಾಡಿಹುಳುಗಳು.

ಹಂದಿ ಮತ್ತ ಹಸು ಲಾಡಿಹುಳುಗಳು
ಹಂದಿ ಮತ್ತು ಹಸು/ದನ ಲಾಡಿ ಹುಳುಗಳು ಮಾಂಸವನ್ನು  ಸರಿಯಾಗಿ ಬೇಯಿಸದೆ ತಿನ್ನುವುದರಿಂದ ಉಂಟಾಗುತ್ತದೆ.. ದನದ ಲಾಡಿ ಹುಳುಗಳು 10ವರ್ಷಗಳ ಕಾಲ ಬದುಕುತ್ತವೆ. ಹಂದಿ ಲಾಡಿಹುಳುಗಳ ಆಯಸ್ಸು 25ವರ್ಷ. ಅವುಗಳಿಗೆ 4 ಹೀರು ಬಾಯಿಗಳಿರುತ್ತದೆ. ಈ ಸಂದರ್ಭದಲ್ಲಿ ಲಿಯಾಂಡರ್ ಪೇಸ್ ಟೆನ್ನಿಸ್ ಆಟಗಾರನಿಗೆ ಹಂದಿ ಲಾಡಿಹುಳುಗಳಿಂದ ಮೆದುಳಿನ ಸೋಂಕಾಗಿರುವುದನ್ನ ನೆನಪಿಸಬಹುದು.

ನಾಯಿ ಲಾಡಿಹುಳು(ಹೈಡಾಟಿಡ್ ಹುಳು)
ಇದು ನಾಯಿಗಳನ್ನ ಮುದ್ದಿಸುವುದರಿಂದ ಅಡುಗೆ ಮನೆಯೊಳಗೆ ಬಿಟ್ಟುಕೊಳ್ಳುವುದರಿಂದ ಅವುಗಳನ್ನು ಮುಟ್ಟಿ ಕೈ ತೊಳೆಯದೆ ಆಹಾರ ಸೇವಿಸುವುದರಿಂದ, ನಾಯಿಮಲದಿಂದ ಮಲಿನವಾದ ನೀರು, ತರಕಾರಿ, ಹಣ್ಣುಗಳ ಸೇವನೆಯಿಂದಲೂ, ಮಲದಲ್ಲಿರುವ ಮೊಟ್ಟೆಗಳು ಶರೀರವನ್ನ ಸೇರಿ ಕರುಳಿನಲ್ಲಿ ಮರಿಗಳಾಗಿ ರಕ್ತದ ಮೂಲಕ ಶ್ವಾಸಕೋಶ, ಲಿವರ್, ಮೆದುಳುಗಳಲ್ಲಿ ನೆಲೆಯೂರಿ ಸಿಸ್ಟಗಳನ್ನುಂಟು ಮಾಡಿ ಮುಂದೆ ಅದು ಒಡೆದರೆ ಗಂಭಿರವಾದ ಅಲರ್ಜಿಯನ್ನುಂಟು ಮಾಡಿ ಪ್ರಾಣಾಪಾಯವೇ ಆಗಬಹುದು.

ಚಾಟಿಹುಳು, ಚಪ್ಪಟೆಹುಳುಗಳು ಇನ್ನೂ ಹಲವು ರೀತಿಯ ಪರಾವಲಂಬಿ ಜಂತುಹುಳುಗಳು ನಮ್ಮ ಶರೀರವನ್ನು ಆಕ್ರಮಿಸಿ ಅಪೌಷ್ಠಿಕತೆ, ರಕ್ತಹೀನತೆಯಲ್ಲದೆ ಹಲವುರೀತಿಯ ಶಾರೀರಿಕ ತೊಂದರೆಗಳನ್ನುಂಟು ಮಾಡಬಹುದು.

ಇದರಿಂದ ಶಾಲೆಯಲ್ಲಿ ಮಕ್ಕಳ ಹಾಜರಾತಿಯೂ ಕಡಿಮೆಆಗಬಹುದು. ಒಟ್ಟಿನಲ್ಲಿ ಪರಾವಲಂಬಿ ಜೀವಿಗಳು  ಜೀವಹಿಂಡುವ ಮೊದಲೇ ಇವುಗಳ ಭಾದೆ ತಟ್ಟದಹಾಗೆ ತೆಗೆದು ಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳು ಯಾವುದೆಂದರೆ:-

* ಮಲಮೂತ್ರ ವಿಸರ್ಜನೆಗಳನ್ನು ಶೌಚಾಲಯದಲ್ಲೇ ಮಾಡಬೇಕು ಹಾಗೂ ಬಯಲು,ಕೆರೆ ನದಿ ತೀರಗಳಲ್ಲಿ  ಮಲವಿಸರ್ಜನೆ ತಪ್ಪಬೇಕು.
* ಮಲವಿಸರ್ಜನೆಯ ನಂತರ ಹಾಗೂ ಊಟಕ್ಕೆ ಮೊದಲು ಮತ್ತು ಅಡುಗೆ ಮಾಡುವ ಮುನ್ನ  ಸ್ವಚ್ಛವಾದ ನೀರಿನಲ್ಲಿ ಸೋಪು ಹಚ್ಚಿ ಕೈ ಕಾಲುಗಳನ್ನು ತೊಳೆಯಬೇಕು.
* ಮನುಷ್ಯ ತ್ಯಾಜ್ಯವನ್ನು, ಚರಂಡಿ ನೀರನ್ನು ಸೊಪ್ಪು ತರಕಾರಿ ಬೆಳೆಯಲು ಉಪಯೋಗಿಸಬಾರದು. ಆದರೆ ಇತ್ತಿಚೀಗೆ ಅದು ಸಾಮಾನ್ಯವಾಗಿರುವುದರಿಂದ ಸೊಪ್ಪು ತರಕಾರಿಗಳನ್ನು ೧ ಗಂಟೆ ಉಪ್ಪುನೀರಿನಲ್ಲಿ ನೆನೆಸಿಟ್ಟು ನಂತರ ಚೆನ್ನಾಗಿ ತೊಳೆದು ಸೇವಿಸಬೇಕು.
* ಅಡುಗೆಗೆ ಬಳಸುವ ನೀರು ಹಾಗೂ ಕುಡಿಯುವ ನೀರು ಶುದ್ದವಾಗಿರಬೇಕು(ಫಿಲ್ಟರ್ ಅಥವಾ ಕುದಿಸುವುದರಿಂದ).
* ಉಗುರುಗಳನ್ನು ನಿಯಮಿತವಾಗಿ ಕತ್ತರಿಸಿಕೊಳ್ಳಬೇಕು.
* ಬರಿಗಾಲಲ್ಲಿ ನಡೆಯಬಾರದು.
* ಒಳ ಉಡುಪುಗಳನ್ನ ಬಿಸಿಲಿನಲ್ಲಿ ಒಣಗಿಸಬೇಕು.
* ಮಾಂಸಹಾರಿಗಳಾಗಿದ್ದಲ್ಲಿ ಮಾಂಸಗಳನ್ನ ತುಂಡು ತುಂಡಾಗಿ ಕತ್ತರಿಸಿ ಚೆನ್ನಾಗಿ ಬೇಯಿಸಿ ತಿನ್ನಬೇಕು.
* ಸಾಕು ಪ್ರಾಣಿಗಳಿಗೂ(ನಾಯಿ) ನಿಯಮಿತವಾಗಿ ಜಂತುಹುಳುಗಳ ಮಾತ್ರೆ ಕೊಡಬೇಕು.
* ಜಂತುಹುಳುಗಳ ಸೋಂಕಿದ್ದಾಗ ಮನೆಯವರೆಲ್ಲರು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.

ಆಲ್‌ಬೆಂಡಾಜೋಲ್ ಎನ್ನುವುದು ವಿಶಾಲ ಶ್ರೇಣಿ ಪರಿಣಾಮವುಳ್ಳ(ಬ್ರಾಡ್ ಸ್ಟೆಕ್ಟ್ರಮ್)ಹುಳು ನಾಶಕ ಮಾತ್ರೆ. 400 ಎಮ್.ಜಿಯ ಒಂದೇ ಮಾತ್ರೆಯನ್ನು ಒಂದೇ ಬಾರಿಗೆ ಕೊಟ್ಟಾಗ ಹೆಚ್ಚಿನ ಪರಾವಲಂಬಿ ಜಂತು ಹುಳುಗಳ ಬಾಧೆಯಿಂದ ಮುಕ್ತಿ ಹೊಂದಬಹುದು. ಕೆಲವೊಮ್ಮೆ ಅತಿಯಾದ ಸೋಂಕಿದ್ದಾಗ 2-3 ದಿನ ಮಾತ್ರೆ ಕೊಡಬೇಕಾಗಬಹುದು. ಪಿನ್‌ವರ್ಮ್ ಸೋಂಕಿನಲ್ಲಿ 2 ವಾರದ ನಂತರ ಮತ್ತೆ ಕೊಡಬೇಕಾಗುತ್ತದೆ. ಐವರ್‌ಮೆಕ್ಟಿನ್, ಮೆಬೆಂಡ್‌ಜೋಲ್ ಮುಂತಾದ ವಿಶಾಲಶ್ರೇಣಿ ಮಾತ್ರೆಗಳೂ ಉಪಯುಕ್ತವಾದರೂ ಸಾಮೂಹಿಕವಾಗಿ ಆಲ್‌ಬೆಂಡಾಜೋಲ್ ಮಾತ್ರೆಯನ್ನು ಉಪಯೋಗಿಸಲಾಗುತ್ತದೆ.

ಈ ಮಾತ್ರೆಯಿಂದ ಹೆಚ್ಚಿನ ಪಾರ್ಶ್ವದುಷ್ಪರಿಣಾಮಗಳೇನೂ ಇಲ್ಲ. ಕೆಲವೊಮ್ಮೆ ಹೊಟ್ಟೆನೋವು, ಭೇಧಿ, ವಾಂತಿ, ತಲೆಸುತ್ತು, ಅಪರೂಪದ ಸಂದರ್ಭಗಳಲ್ಲಿ ಮಾತ್ರೆ ಕೊಟ್ಟ ನಂತರ  ಹೊಟ್ಟೆಹುಳು ಸತ್ತ ಮೇಲೆ ವಿಷ ವಸ್ತುಗಳ ಬಿಡುಗಡೆಯಿಂದ ಮೈಮೇಲೆ ಗಂಧೆಗಳು ಎದ್ದು ಮೈಕಡಿತ ಉಂಟಾಗಬಹುದಷ್ಟೇ.
ಒಟ್ಟಿನಲ್ಲಿ ಜಂತುಹುಳಗಳ ಬಾಧೆಯಿಂದ ನುಗ್ಗಿ ಹೋಗುವುದಕ್ಕಿಂತ ವರ್ಷಕ್ಕೊಮ್ಮೆ ಮಾತ ್ರೆನುಂಗಿ ಮುಂದೆ ಸೋಂಕು ಬರದಂತೆ ಮೇಲೆ ತಿಳಿಸಿದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಮಕ್ಕಳಲ್ಲಿ ಆಗುವ ಅನಾರೋಗ್ಯ ತಪ್ಪಿಸಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT