ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಪುಟ್ಟ ರಾಜಧಾನಿ ಥಿಂಪು

Last Updated 15 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಟ್ರಾಫಿಕ್ ಸಿಗ್ನಲ್ ಇಲ್ಲದ ದೇಶ ಎಂದೇ ಖ್ಯಾತವಾದ ಭೂತಾನ್‌ನ ರಾಜಧಾನಿ ಥಿಂಪು ಅತ್ಯಂತ ಸುಂದರವಾದ ಪುಟ್ಟ ನಗರ. ನಮ್ಮ ಕೆಲವು ತಾಲ್ಲೂಕು ಕೇಂದ್ರದಷ್ಟು ವಿಸ್ತೀರ್ಣವುಳ್ಳ ಥಿಂಪು ಜಗತ್ತಿನ ಅತಿ ಚಿಕ್ಕ ರಾಜಧಾನಿಯಾಗಿದೆ. ದೇಶದ ರಾಜಧಾನಿಯಾದರೂ ಕೂಡಾ ಕಾಲ್ನಡಿಗೆಯಲ್ಲಿ ಸುತ್ತಬಹುದು.

ಥಿಂಪು ಭೂತಾನ್‌ನ ರಾಜಧಾನಿಯಾಗಿದ್ದು 1961ರಲ್ಲಿ. ಥಿಂಪು ನಗರವೂ ಸೇರಿದಂತೆ ಆ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಜನರಿದ್ದಾರೆ. ಭೂತಾನ್‌ನ ಥಿಂಪು ಜಿಲ್ಲೆಯ ಕಣಿವೆಯಲ್ಲಿ ವಾಂಗ್ ಚು ನದಿ ಇದೆ. ಥಿಂಪು ರಾಜಧಾನಿಯಾಗಿದ್ದರೂ ಅಲ್ಲಿ ವಿಮಾನ ನಿಲ್ದಾಣವಿಲ್ಲ. ಥಿಂಪುವಿನಿಂದ 54 ಕಿ.ಮೀ ದೂರದ ಪಾರೋ ಎಂಬಲ್ಲಿ ಏಕೈಕ ಅಂತರರಾಷ್ಟ್ರೀಯ ವಿಮಾನನಿಲ್ದಾಣವಿದೆ. ಪುಟ್ಟ ಸ್ಥಳವಾದರೂ ಇಲ್ಲಿ ಪ್ರವಾಸಿಗರು ನೋಡಲೇ ಬೇಕಾದ ಹಲವು ಸ್ಥಳಗಳಿವೆ ಎನ್ನುವುದು ಥಿಂಪುವಿನ ಅಗ್ಗಳಿಕೆ.

ಕ್ಲಾಕ್ ಟವರ್ ಸ್ಕ್ವೇರ್
ನಾಲ್ಕೂ ದಿಕ್ಕಿನಲ್ಲಿ ಗಡಿಯಾರವಿರುವ ಅಲ್ಲಿನ ಕ್ಲಾಕ್ ಟವರ್ ಥಿಂಪುವಿನ ಹೆಗ್ಗುರುತಿನಂತಿದೆ. ಭೂತಾನ್‌ನ ಸಾಂಪ್ರದಾಯಿಕ ಶೈಲಿಯಲ್ಲಿ ಕ್ಲಾಕ್ ಟವರ್ ನಿರ್ಮಿಸಲಾಗಿದೆ. ಡ್ರಾಗನ್ ಮತ್ತು ಅಲಂಕಾರಿಕ ಚಿತ್ರಗಳು, ಸುಂದರ ಕೆತ್ತನೆಗಳು, ಹೂ ಬಳ್ಳಿಗಳು ಅದನ್ನು ಅತ್ಯಂತ ಸುಂದರವಾಗಿಸಿವೆ. ಕ್ಲಾಕ್ ಟವರ್ ಸುತ್ತ ವಿಶಾಲ ಸ್ಥಳವಿದೆ. ನೀರಿನ ಕಾರಂಜಿ, ಪ್ರಾರ್ಥನಾ ಚಕ್ರಗಳು, ಹೋಟೆಲ್ ಮತ್ತು ಅಂಗಡಿಗಳು ಸುತ್ತಲಿವೆ. ವಿವಿಧ ಸಭೆ ಸಮಾರಂಭಗಳನ್ನು ಇಲ್ಲಿ ನಡೆಸಲಾಗುತ್ತದೆ. ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಲು ಮೆಟ್ಟಿಲುಗಳಿವೆ. ‘ನೆಸ್ಲೆ ಗ್ರೂಪ್‌’ನ ಭಾಗಶಃ ಒಡೆತನವನ್ನು ಹೊಂದಿರುವ ಸ್ವಿಝ್ ಕುಟುಂಬದ ಸದಸ್ಯರು 1987ರಲ್ಲಿ ಈ ಕ್ಲಾಕ್ ಟವರನ್ನು ನಿರ್ಮಿಸಿ ಭೂತಾನ್‌ನ ಮೂರನೇ ದೊರೆ ಜಿಗ್ಮೆ ದೋರ್ಜಿ ವಾಂಗ್‌ಚುಕ್ ಅವರಿಗೆ ಸಮರ್ಪಿಸಿದ್ದಾರೆ.

ನ್ಯಾಷನಲ್ ಮೆಮೊರಿಯಲ್ ಚೋರ್ಟನ್
ಭೂತಾನ್‌ನ ಮೂರನೇ ರಾಜ ಜಿಗ್ಮೆ ದೋರ್ಜಿ ವಾಂಗ್‌ಚುಕ್ (1928–1972) ಅವರ ನೆನಪಿಗೆ ಕಟ್ಟಿಸಿರುವ ಸ್ತೂಪ, ‘ನ್ಯಾಷನಲ್ ಮೆಮೊರಿಯಲ್ ಚೋರ್ಟನ್’. ಈ ಸ್ತೂಪದ ಸುತ್ತ ಜನ ಪ್ರದಕ್ಷಿಣೆ ಮಾಡುತ್ತಲೇ ಇರುತ್ತಾರೆ. ಕೆಲ ವೃದ್ಧರು ನಮಸ್ಕರಿಸುತ್ತಾ ಇದ್ದರೆ, ಇನ್ನು ಕೆಲವರು ಒಂದು ಕೈಯಲ್ಲಿ ಜಪಮಾಲೆ, ಮತ್ತೊಂದು ಕೈಲಿ ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತಾ ಬಾಯಲ್ಲಿ ಮಂತ್ರವನ್ನು ಹೇಳುತ್ತಾ ಕುಳಿತಿರುತ್ತಾರೆ. ಸ್ತೂಪದ ಪ್ರವೇಶ ದ್ವಾರದ ಎಡಭಾಗದಲ್ಲಿರುವ ದೊಡ್ಡ ಗಾತ್ರದ ನಾಲ್ಕಾರು ಪ್ರಾರ್ಥನಾ ಚಕ್ರಗಳ ಬಳಿ ತೀರಾ ಬಳಲಿರುವ ವೃದ್ಧರು ಕುಳಿತು ಅದನ್ನು ತಿರುಗಿಸುತ್ತಾ ಮಂತ್ರವನ್ನು ಜಪಿಸುತ್ತಿರುವುದನ್ನು ಕಾಣಬಹುದು.

ಟಿಬೇಟಿಯನ್ ಶೈಲಿಯಲ್ಲಿ ನಿರ್ಮಿಸಿರುವ ‘ನ್ಯಾಷನಲ್ ಮೆಮೊರಿಯಲ್ ಚೋರ್ಟೆನ್’ ಕೆಲ ಭೂತಾನಿಗರಿಗೆ ಪ್ರತಿದಿನದ ಪ್ರಾರ್ಥನಾ ಸ್ಥಳ. 1974ರಲ್ಲಿ ಅದನ್ನು ನಿರ್ಮಿಸಲಾಯಿತು. ಬಿಳಿಯ ಬಣ್ಣದ ಸ್ತೂಪದ ಸುತ್ತಲೂ ಸಾಂಪ್ರದಾಯಿಕ ರೀತಿಯ ಕಂಬಗಳು, ಬಾಗಿಲುಗಳು, ಚಿತ್ತಾರಗಳು, ಬಂಗಾರದ ಬಣ್ಣದ ಕಲಶ, ಸುತ್ತಲಿನ ಹುಲ್ಲುಗಾವಲು, ಅತ್ಯಂತ ಆಕರ್ಷಕವಾಗಿವೆ.

ಚಂಗಂಖಾ ಲಾಖಾಂಗ್
ಥಿಂಪುವಿನ ಅತ್ಯಂತ ಹಳೆಯ ದೇವಾಲಯ ಚಂಗಂಖಾ ಲಾಖಾಂಗ್‌. ಹನ್ನೆರಡನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ಒಂದು ಸಣ್ಣ ಗುಡ್ಡದ ಮೇಲಿದೆ. ಅಲ್ಲಿನವರು ಮಕ್ಕಳಿಗೆ ಹೆಸರಿಡಲು ಹಾಗೂ ತಮ್‌ದ್ರಿನ್ ಎಂಬ ಅಲ್ಲಿನ ದೇವರಿಂದ ಆಶೀರ್ವಾದ ಪಡೆಯಲು ಪುಟ್ಟ ಮಕ್ಕಳನ್ನು ಕರೆತರುತ್ತಾರೆ. ಬೆನ್ನಿಗೆ ಎಳೆ ಮಕ್ಕಳನ್ನು ಬಟ್ಟೆಯಿಂದ ಕಟ್ಟಿಕೊಂಡು ಸರಾಗವಾಗಿ ಮೆಟ್ಟಿಲು ಹತ್ತಿ ಹೋಗುವ ಹಲವಾರು ತಾಯಂದಿರು ಅಲ್ಲಿ ಕಂಡುಬರುತ್ತಾರೆ.

ಟಾಕಿನ್
ಭೂತಾನ್ ರಾಷ್ಟ್ರೀಯ ಪ್ರಾಣಿ ಟಾಕಿನ್ ಅನ್ನು ಟಾಕಿನ್ ನ್ಯಾಷನಲ್ ಪಾರ್ಕ್‌ನಲ್ಲಿ ನೋಡಬಹುದು. ಟಾಕಿನ್ ಅಪರೂಪದ ಪ್ರಾಣಿ. ಮೇಲ್ನೋಟಕ್ಕೆ ಆಡಿನಂತೆ ಕಾಣುತ್ತದೆ. ಆದರೆ ಆಕಾರ ದೊಡ್ಡದು. ಮುನ್ನೂರೈವತ್ತು ಕಿಲೋ ತನಕವೂ ಇದು ಭಾರವಿರುತ್ತದೆ. ಶರೀರದ ಮೇಲ್ಭಾಗದಲ್ಲಿ ಮಾತ್ರ ಉಣ್ಣೆ ಇರುತ್ತದೆ. ‘ದೋಂಗ್ ಗೈಮ್ ತ್ಸೆ’(ಟಾಕಿನ್) ಎಂದು ಇದನ್ನು ಕರೆಯುತ್ತಾರೆ. ಟಾಕಿನ್ ಭೂತಾನ್‌ನಲ್ಲಿ ಪೂಜನೀಯ ಪ್ರಾಣಿ. ಇದರ ವಿಶೇಷ ಆಕೃತಿ ಮತ್ತು ಧಾರ್ಮಿಕ ಇತಿಹಾಸದಿಂದ ಈ ಪ್ರಾಣಿಯನ್ನು ಭೂತಾನ್‌ನ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿದ್ದಾರೆ.

ನೆಮ್ಮದಿಯ ನನ್ನರಿ
ಸಾಕಷ್ಟು ಮಂದಿ ವೃದ್ಧ ಭೂತಾನ್ ಮಹಿಳೆಯರು ಒಂದು ಕೈಲಿ ಜಪ ಮಾಲೆ ಮತ್ತೊಂದು ಕೈಲಿ ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತಾ ಡುಪ್‌ಥಾಪ್ ನನ್ನರಿಯಲ್ಲಿ ದೇವಾಲಯದ ಸುತ್ತ ಕುಳಿತಿರುತ್ತಾರೆ. ಅದೊಂದು ರೀತಿಯಲ್ಲಿ ವೃದ್ಧಾಶ್ರಮದಂತೆ. ಭೂತಾನ್‌ನಲ್ಲಿ ಭಿಕ್ಷುಕರಿಲ್ಲ, ಇರುವುದು ಕೇವಲ ಭಿಕ್ಕುಗಳು ಮಾತ್ರ. ವಯಸ್ಸಾದವರನ್ನು ಅಲ್ಲಿನ ಸರ್ಕಾರ ಈ ರೀತಿ ಪೋಷಿಸುತ್ತಿದೆ. ಸದಾ ಧ್ಯಾನ ಮಗ್ನರಾಗಿ ಮಂತ್ರೋಚ್ಛಾರಣೆ ಮಾಡುತ್ತಾ ಇರುವ ಅವರ ಮುಖದಲ್ಲಿ ವಯೋಸಹಜ ಸುಕ್ಕುಗಳ ನಡುವೆಯೂ ಒಂದು ರೀತಿಯ ಕಾಂತಿ, ನೆಮ್ಮದಿ, ಹಸನ್ಮುಖತೆ ಮನೆಮಾಡಿರುತ್ತದೆ. ಕೋಪ, ದ್ವೇಷ, ಜೀವನದ ಬಗ್ಗೆ ಯಾವುದೇ ದೂರು ಅಥವಾ ತಕರಾರಿಲ್ಲದೆ ಎಳೆಬಿಸಿಲಿಗೆ ಹೊಂಬಣ್ಣ ಸೂಸುವ ಹಣ್ಣೆಲೆಗಳಂತೆ ಕಂಡುಬರುತ್ತಾರೆ.

ವಿಶಿಷ್ಟ ಮ್ಯೂಸಿಯಂ
ಭೂತಾನೀಯರ ಸಾಂಪ್ರದಾಯಿಕ ಉಡುಗೆಗಳನ್ನು ಪ್ರದರ್ಶನಕ್ಕಿಟ್ಟಿರುವುದಲ್ಲದೆ, ಕಸೂತಿ ಕೈಮಗ್ಗಗಳಿಂದ ತಯಾರಾಗುವ ವಸ್ತ್ರಗಳನ್ನು ಟೆಕ್ಸ್‌ಟೈಲ್ ಮ್ಯೂಸಿಯಂಗೆ ಭೇಟಿ ನೀಡುವ ಪ್ರವಾಸಿಗರಿಗೆ ತೋರಿಸಿ ವಿವರಿಸುತ್ತಾರೆ. ಹದಿಮೂರು ಕರಕುಶಲ ಕಲೆಗಳಾದ ಚಿತ್ರಕಲೆ, ಹಸ್ತಾಕ್ಷರ ಕಲೆ, ಮರಗೆಲಸ, ಕಸೂತಿ, ಎರಕ, ತೊಗಲು, ಬಿದಿರು, ಕಮ್ಮಾರಿಕೆ, ಕಲ್ಲುಕೆಲಸ, ಶಿಲ್ಪಕಲೆ, ಮಡಿಕೆ, ಅಕ್ಕಸಾಲಿಗ ಮತ್ತು ನೇಯ್ಗೆ ವಿದ್ಯೆಯನ್ನು ಕಲಿಸುವ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಜೊರಿಗ್ ಚುಸುಮ್’ ಕೂಡ ನೋಡಲೇಬೇಕಾದ ಸ್ಥಳ.

ಹತ್ತನೆಯ ತರಗತಿಯವರೆಗೆ ಸಾಮಾನ್ಯ ಶಿಕ್ಷಣ ಕಲಿತು ಮುಂದೆ ವಿಶಿಷ್ಟ ಕಲೆಯೊಂದಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವವರಿಗೆ ಸರ್ಕಾರ ವಸತಿ ಹಾಗೂ ವೇತನ ಸೌಲಭ್ಯಗಳೊಂದಿಗೆ ಅಲ್ಲಿ ವೃತ್ತಿ ಶಿಕ್ಷಣಕ್ಕೆ ಸಂಪೂರ್ಣ ವ್ಯವಸ್ಥೆ ಕಲ್ಪಿಸಿದೆ. ಅಲ್ಲಿ 4 ವರ್ಷ ಹಾಗೂ 6 ವರ್ಷದ ಶಿಕ್ಷಣ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಂತ ಉದ್ಯೋಗ ಮಾಡಲು ಸಮರ್ಥನಿರುತ್ತಾನೆ.   

ಥಿಂಪುವಿನಲ್ಲಿ ಸಾಂಪ್ರದಾಯಿಕ ವೈದ್ಯ ಶಿಕ್ಷಣ ಕಲಿಸುವ ಕಾಲೇಜ್ ಇದೆ. ಫೋಕ್ ಹೆರಿಟೇಜ್ ಮ್ಯೂಸಿಯಂ ಕೂಡ ಇದೆ. ಭೂತಾನ್ ಜಾನಪದ ವಸ್ತು ಸಂಗ್ರಹಾಲಯವಾದ ಅಲ್ಲಿ ಹಿಂದೆ ಅವರು ಬಳಸುತ್ತಿದ್ದ ಸಕಲ ವಸ್ತುಗಳನ್ನೂ ಮೂರು ಅಂತಸ್ತಿನ ಮರದ ಕಟ್ಟಡದಲ್ಲಿ ಜೋಡಿಸಿಟ್ಟಿದ್ದಾರೆ. ಶಾವಿಗೆ ತಯಾರಿಸುವ ಮರದ ಒತ್ತುಗಳು, ಚಿರತೆ ಚರ್ಮದ ಚೀಲ, ಯಾಕ್ ಕೂದಲ ಟೊಪ್ಪಿ, ನೂರು ವರ್ಷಕ್ಕೂ ಹಿಂದಿನ ಕೃಷಿ, ಅಡುಗೆ ಪರಿಕರಗಳನ್ನು ಇಲ್ಲಿ ಕಾಣಬಹುದು.

ಬೃಹತ್ ಹೊತ್ತಗೆ
ಪ್ರಪಂಚದಲ್ಲೇ ಅತಿ ದೊಡ್ಡ ಪುಸ್ತಕ ಇಲ್ಲಿನ ನ್ಯಾಷನಲ್ ಲೈಬ್ರರಿಯಲ್ಲಿದೆ. ನ್ಯಾಷನಲ್ ಲೈಬ್ರರಿ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಿರುವ ಆಕರ್ಷಕ ಕಟ್ಟಡ. ಸುತ್ತ ವೈವಿಧ್ಯಮಯ ಹೂಗಿಡಗಳು, ಹಸಿರು ಹುಲ್ಲುಗಾವಲು, ಗುಲಾಬಿ ತೋಟ ಅದರ ಅಂದವನ್ನು ಹೆಚ್ಚಿಸಿದೆ. ‘ಭೂತಾನ್ – ಎ ವಿಶುವಲ್ ಒಡಿಸ್ಸಿ ಅಕ್ರಾಸ್ ದ ಹಿಮಾಲಯನ್ ಕಿಂಗ್ಡಮ್’ ಎಂಬ 114 ಪುಟಗಳ, 130 ಪೌಂಡ್ ತೂಕದ ಈ ಪುಸ್ತಕ ತೆರೆದಿರುವಾಗ 5ಅಡಿ ಉದ್ದ 7 ಅಡಿ ಅಗಲವಿದೆ. 2003ರಲ್ಲಿ ಈ ಪುಸ್ತಕದ 500 ಪ್ರತಿಗಳನ್ನು ಮುದ್ರಿಸಿದ್ದಾರೆ.

ಭೂತಾನ್ ಕರಕುಶಲ ಮಳಿಗೆ
ಬಿದಿರಿನಲ್ಲಿ ನಿರ್ಮಿಸಿರುವ ಸುಮಾರು ನೂರು ಅಂಗಡಿಗಳ ಸಾಲು ಒಂದಿಡೀ ರಸ್ತೆಯನ್ನು ಆಕ್ರಮಿಸಿದೆ. ಥಂಕಾ ಚಿತ್ರಕಲೆ, ಬಿದಿರು ಕಲಾಕೃತಿಗಳು, ರೇಷ್ಮೆ ಮೇಲಿನ ಚಿತ್ರಗಳು, ಕಸೂತಿ, ನೆಲಹಾಸು, ಮರದ ಮಣ್ಣಿನ ವೈವಿಧ್ಯಮಯ ವಸ್ತುಗಳು, ಮ್ಯಾಗ್ನೆಟ್, ಕೀಬಂಚ್, ಸರ... ನೋಡಿದಷ್ಟೂ ಮುಗಿಯದಂತಹ ಕರಕುಶಲ ಕಲೆಗಳ ವಸ್ತುಗಳು. ಭೂತಾನ್‌ನಲ್ಲಿ ಡ್ಯಾಫ್ನೆ ಮರದ ತೊಗಟೆಯಿಂದ ಪೇಪರ್ ತಯಾರಿಸುತ್ತಾರೆ. ಹತ್ತಿಯಂತೆ ಹಗುರವಾದ ಈ ಪೇಪರ್‌ನ ಪುಸ್ತಕಗಳು, ಕವರುಗಳು, ಗ್ರೀಟಿಂಗ್ ಕಾರ್ಡುಗಳು ಸಹ ಅಲ್ಲಿ ಮಾರಾಟಕ್ಕಿವೆ. ಭೂತಾನ್‌ ಸರ್ಕಾರ ಅಲ್ಲಿನವರ ಕುಶಲತೆ ಹಾಗೂ ಪರಿಶ್ರಮವನ್ನು ಉತ್ತೇಜಿಸಲು ಈ ಅಂಗಡಿಗಳ ಸಾಲನ್ನು ನಿರ್ಮಿಸಿದೆ.

ಇವಲ್ಲದೆ ಆಡಳಿತ ಕೇಂದ್ರ ಸ್ಥಳ ಝೋಂಗ್‌, ಪೇಪರ್‌ ತಯಾರಿಸುವ ಘಟಕ, ಮಾರುಕಟ್ಟೆ, ಬೊಟಾನಿಕಲ್‌ ಗಾರ್ಡನ್ ಮುಂತಾದ ಸ್ಥಳಗಳಿದ್ದು, ಜಗತ್ತಿನ ಪುಟ್ಟ ರಾಜಧಾನಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಬೆಟ್ಟದ ಮೇಲೆ ಬುದ್ಧ!
‘ಬುದ್ಧ ದೋರ್ದೆನ್ಮಾ’ ಎಂದು ಕರೆಯುವ, ಧ್ಯಾನದಲ್ಲಿ ಕುಳಿತ ಬುದ್ಧನ ಮೂರ್ತಿಯನ್ನು ಎತ್ತರದ ಬೆಟ್ಟದ ಮೇಲೆ ಸ್ಥಾಪಿಸಲಾಗಿದೆ. ಐವತ್ತೆರಡು ಮೀಟರ್ ಎತ್ತರದ ಈ ಬುದ್ಧ ಪ್ರತಿಮೆ ಪ್ರಪಂಚದ ಅತಿದೊಡ್ಡ ಕುಳಿತಿರುವ ಭಂಗಿಯ ಬುದ್ಧನ ಮೂರ್ತಿ ಎಂದು ಖ್ಯಾತವಾಗಿದೆ. ಅಲ್ಲಿಂದ ಥಿಂಪು ಕಣಿವೆಯು ಬಲು ಸೊಗಸಾಗಿ ಕಾಣುತ್ತದೆ. ಪ್ರಶಾಂತ ಮುಖಭಾವದ ಬುದ್ಧ ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುತ್ತಾನೆ.

ಬುದ್ಧ ಮೂರ್ತಿಯ ಕೆಳಭಾಗದಲ್ಲಿ ದೊಡ್ಡ ಧ್ಯಾನದ ಕೋಣೆ ಇದೆ. ಪಕ್ಕದಲ್ಲೇ ದೀಪಗಳನ್ನು ಹಚ್ಚಿಟ್ಟಿರುವ ಕೋಣೆಯೂ ಒಂದಿದೆ. 2009ರಲ್ಲಿ ಪ್ರಾರಂಭವಾದ ಈ ಕಾಮಗಾರಿಗೆ  ಒಟ್ಟು 100 ಮಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತಿದ್ದಾರೆ. ಇದರ ಸುತ್ತ 1000 ಎಕರೆಗಳಷ್ಟು ಕಾಡಿದ್ದು, ಅದನ್ನು ‘ಕುನ್ಸೆಲ್‌ಪೋಡ್ರಾಂಗ್ ನೇಚರ್ ಪಾರ್ಕ್’ ಎಂದು ಕರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT