ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗದ ಕವಿ ಇಲ್ಲಿಲ್ಲ; ಸೋತರೆ ಬೆಲೆಯಿಲ್ಲ!

‘ರಾಷ್ಟ್ರಕವಿ’ ಆಯ್ಕೆ ಗೊಂದಲ ಯಾಕೆ?
Last Updated 16 ಜನವರಿ 2015, 19:30 IST
ಅಕ್ಷರ ಗಾತ್ರ

ಜಿ.ಎಸ್‌.ಶಿವರುದ್ರಪ್ಪ ಅವರ ನಿಧನದಿಂದ ತೆರವಾಗಿರುವ ‘ರಾಷ್ಟ್ರಕವಿ’ ಸ್ಥಾನಕ್ಕೆ ಹೆಸರು ಸೂಚಿಸಲು ಸಾಹಿತಿ ಕೋ.ಚೆನ್ನಬಸಪ್ಪ ಅವರ ಅಧ್ಯಕ್ಷತೆಯ ಸಮಿತಿ ಜನರಿಂದ ಅಭಿಪ್ರಾಯ ಆಹ್ವಾನಿಸಿದೆ. ಪ್ರಭುತ್ವದ ಪಳೆಯುಳಿಕೆಯಂತಿರುವ ‘ರಾಷ್ಟ್ರಕವಿ’ ಪರಿಕಲ್ಪನೆಯೇ ಈಗಿನ ಕಾಲಮಾನಕ್ಕೆ ಅಪ್ರಸ್ತುತ ಎಂಬುದು ಕೆಲವರ ವಾದವಾದರೆ, ವಿಶ್ವ ಮಾನವ ಸಂದೇಶ ಸಾರುವ ಮೇರು ವ್ಯಕ್ತಿತ್ವದವರಿಗೆ ಅಂತಹ ಸ್ಥಾನ ನೀಡುವುದರಲ್ಲಿ ತಪ್ಪೇನು ಎಂಬುದು ಇನ್ನೊಂದು ವಾದ. ಈ ಬಗೆಯ ಜಿಜ್ಞಾಸೆ ಇಲ್ಲಿದೆ...

ಮೊತ್ತಮೊದಲನೆಯ ರಾಷ್ಟ್ರಕವಿ ಪ್ರಶಸ್ತಿ­ಯನ್ನು ಗೋವಿಂದ ಪೈ ಅವರಿಗೆ 1949ರಲ್ಲಿ ನೀಡಿದ್ದು ಮದರಾಸು ಸರ್ಕಾರ. ಎರಡನೆಯ ರಾಷ್ಟ್ರಕವಿ ಪ್ರಶಸ್ತಿಯನ್ನು ಕುವೆಂಪು ಅವರಿಗೆ 1965ರ ಜನವರಿ 27ರಂದು ನೀಡಿದ್ದು ನಿಜಲಿಂಗಪ್ಪನವರು ಮುಖ್ಯಮಂತ್ರಿ ಆಗಿದ್ದ ಕರ್ನಾಟಕ ಸರ್ಕಾರ. ಇದಕ್ಕೊಂದು ಆಯ್ಕೆ ಸಮಿತಿ ರಚಿತವಾಗಿರಲಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕರ್ನಾಟಕ ಏಕೀಕರಣ ಸುವರ್ಣ ಮಹೋತ್ಸವದ ಸಂದರ್ಭ ಒದಗಿ ಬಂತು. ರಾಷ್ಟ್ರಕವಿ ಪ್ರಶಸ್ತಿ ನೀಡಲು ಹಿರಿಯ ಸಾಹಿತಿ ದೇಜಗೌ ಅಧ್ಯಕ್ಷತೆಯಲ್ಲಿ ರಚಿತವಾದ ಆಯ್ಕೆ ಸಮಿತಿ ಜಿ.ಎಸ್.ಶಿವರುದ್ರಪ್ಪನವರ ಹೆಸರನ್ನು ಶಿಫಾರಸು ಮಾಡಿತು. ಸರ್ಕಾರ ರಾಷ್ಟ್ರಕವಿ ಪ್ರಶಸ್ತಿ ಪ್ರದಾನಿಸಿತು.

ಶಿವರುದ್ರಪ್ಪನವರು ನಿಧನರಾದ ಮೇಲೆ ರಾಷ್ಟ್ರಕವಿ ಪುರಸ್ಕಾರಕ್ಕೆ ಅರ್ಹರನ್ನು ಶಿಫಾರಸು ಮಾಡಲು ಹಿರಿಯರಾದ ಕೋ.ಚೆನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚಿಸಿತು. ದೇಜಗೌ ಅಧ್ಯಕ್ಷತೆಯ ಸಮಿತಿ ಮಾಡಿದಂತೆ ಈ ಸಮಿತಿಯೂ ತಮ್ಮ ತಮ್ಮಲ್ಲಿ ಚರ್ಚಿಸಿ ಅಂತಿಮವಾಗಿ ಒಂದು ಹೆಸರನ್ನು ಶಿಫಾರಸು ಮಾಡಿದ್ದರೆ ಅದನ್ನು ಸರ್ಕಾರ ಅಂಗೀಕರಿಸುತ್ತಿತ್ತು. ಹಾಗೆ ಮಾಡದೆ ಅರ್ಹರಾದವರನ್ನು ಗುರುತಿಸಲು ಕೆಲವು ಮಾನದಂಡಗಳನ್ನು ರೂಪಿಸಿತು. ತನ್ನ ಹೊಣೆ ಎಷ್ಟು ಗುರುತರವಾದದ್ದು ಎಂದರಿತು ಪಾರದರ್ಶಕತೆ­ಯತ್ತ ಸಮಿತಿ ಕಾರ್ಯಪ್ರವೃತ್ತವಾದದ್ದು ಶ್ಲಾಘ್ಯವೆ. ತಾನು ರೂಪಿಸಿರುವ ಮಾನದಂಡವನ್ನು ತಿಳಿಸಿ, ಪ್ರಶಸ್ತಿಗೆ ಅರ್ಹರೆನಿಸುವ ಹೆಸರನ್ನು ಸೂಚಿಸಬೇಕೆಂದು ವಿನಂತಿ ಪತ್ರವನ್ನು ಪ್ರಮುಖ ಲೇಖಕರಿಗೆ ಕಳಿಸಿತು. ಇದು ಸರಿಯಾದ, ಅನುಸರಿಸಬೇಕಾದ ಕ್ರಮ.

ಪತ್ರದ ಒಕ್ಕಣೆ ಮಾಧ್ಯಮಗಳಲ್ಲಿ ಪ್ರಕಟವಾದ ಮೇಲೆ ಅನಿರೀಕ್ಷಿತ ಟೀಕೆ, ವಿಡಂಬನೆಗಳು ಬರತೊಡಗಿದವು. ಆರೋಗ್ಯಕರ ಚರ್ಚೆ ಆಗಲಿಲ್ಲ. ಇಂದು ಯಾವ ಪ್ರಶಸ್ತಿ ಪುರಸ್ಕಾರಗಳೂ ಪ್ರಶ್ನಾತೀತವಾಗಿ ಉಳಿದಿಲ್ಲ. ನೊಬೆಲ್ ಪಾರಿತೋಷಕ, ಭಾರತರತ್ನ ಪ್ರಶಸ್ತಿಗಳ ವಿಚಾರದಲ್ಲಿ ಕೂಡ ಸಂಶಯ­ಗಳೆದ್ದಿವೆ. ಈಗ ರಾಷ್ಟ್ರಕವಿ ಪ್ರಶಸ್ತಿಯ ಪರಿಕಲ್ಪನೆ ಎಷ್ಟರ ಮಟ್ಟಿಗೆ ಸರಿ ಎಂಬ ಸಂದೇಹ ಉಂಟಾಗಿದೆ. ಈಗಿನ ಆಯ್ಕೆ ಸಮಿತಿ ಸೂಚಿಸಿರುವ ಸಪ್ತ ಸೂತ್ರಗಳ ಎತ್ತರಕ್ಕೆ ಬರುವ ಸಾಹಿತಿ ಸಿಗುವುದು ದುರ್ಲಭವಾಗಿರುವುದು ಈ ಭಾವನೆಯನ್ನು ಮೂಡಿಸುತ್ತದೆ.

ನಮ್ಮ‘ರಾಷ್ಟ್ರಕವಿ’ಗಳಿವರು
* ಎಂ.ಗೋವಿಂದ ಪೈ
(ಮದ್ರಾಸ್‌ ಸರ್ಕಾರದಿಂದ ಆಯ್ಕೆಯಾಗಿದ್ದವರು)
* ಕುವೆಂಪು
* ಜಿ.ಎಸ್‌.ಶಿವರುದ್ರಪ್ಪ
(ರಾಜ್ಯ ಏಕೀಕರಣದ ನಂತರ ಆಯ್ಕೆಯಾದವರು)

ಇದು ಆಯ್ಕೆ ಸಮಿತಿ
‘ರಾಷ್ಟ್ರಕವಿ’ ಆಯ್ಕೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತಿ  ಕೋ.ಚೆನ್ನಬಸಪ್ಪ ಅವರ ಅಧ್ಯಕ್ಷತೆ­ಯಲ್ಲಿ ರಚಿಸಿರುವ ತಜ್ಞರ ಸಮಿತಿ 13 ಸದಸ್ಯರನ್ನು ಒಳಗೊಂಡಿದೆ. ಇಲಾಖೆಯ ನಿರ್ದೇಶಕ ದಯಾನಂದ ಅವರು ಸದಸ್ಯ ಕಾರ್ಯದರ್ಶಿ.

ಸದಸ್ಯರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ,  ಎಚ್‌.ಎಲ್‌.ಪುಷ್ಪ,  ಎಸ್‌.ಜಿ.ಸಿದ್ಧರಾಮಯ್ಯ,  ವಿಷ್ಣು ನಾಯ್ಕ, ರೂಪ ಹಾಸನ, ಪ್ರಭು ಖಾನಾಪುರೆ, ಕಾಳೇಗೌಡ ನಾಗವಾರ,  ಕೆ.ಷರೀಫಾ, ಗಿರಡ್ಡಿ ಗೋವಿಂದರಾಜ.
ಪದನಿಮಿತ್ತ ಸದಸ್ಯರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಎಲ್‌.ಹನುಮಂತಯ್ಯ, ಕನ್ನಡ ಪುಸ್ತಕ ಪ್ರಾಧಿ­ಕಾರದ ಅಧ್ಯಕ್ಷ  ಬಂಜಗೆರೆ ಜಯಪ್ರಕಾಶ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ.

ರವೀಂದ್ರನಾಥ ಟ್ಯಾಗೋರ್, ಮಹಮದ್ ಇಕ್ಬಾಲ್, ಸುಬ್ರಹ್ಮಣ್ಯ ಭಾರತಿ, ಶ್ರೀ ಶ್ರೀ- ಇಂಥವರ ಮಾದರಿಗೆ ಸೇರಿದವರು ಆಗಿರಬೇಕಂತೆ. ವಂಗನಾಡಿನಲ್ಲಿ, ತಮಿಳು­ನಾಡಲ್ಲಿ ಹಾಗೂ ಆಂಧ್ರ ಪ್ರದೇಶದಲ್ಲಿ ಇವರು ಹೈಮಾಚಲೋನ್ನತರು. ಈ ಮಾದರಿಯ ಲೇಖಕರು ಇಂದು ಕರ್ನಾಟಕದಲ್ಲಿ ಕಾಣಿಸುತ್ತಿಲ್ಲ. ಗುಣಗಾತ್ರದಲ್ಲಿ ಸತ್ವಶಾಲಿ ಗದ್ಯ– ಪದ್ಯ ಕೃತಿಗಳ ಸಾಹಿತ್ಯ ಸೃಷ್ಟಿ ಮಾಡಿರುವ ಲೇಖಕರಾಗಿರಬೇಕಂತೆ. ಅಂಥ ಲೇಖಕರು ಈಗಲೂ ಇದ್ದಾರೆ. ಆದರೆ ಅವರು ನಾಡಿನ ಉದ್ದಗಲಗಳಲ್ಲಿ ಜನಪ್ರಿಯತೆ ಗಳಿಸಿರ­ಬೇಕೆಂಬ ನಿಯಮಕ್ಕೆ ಮಿಡಿಯು­ವವರು ಆಗಿದ್ದಾ­ರೆಯೊ ಎಂಬು­ದಕ್ಕೆ ತೃಪ್ತಿಕರ ಉತ್ತರ ಕಷ್ಟ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ, ಆ ಸಂಗ್ರಾಮಕ್ಕೆ ಸ್ಪಂದಿಸಿ ಸಾಹಿತ್ಯ ರಚಿಸಿದ ಸಾಹಿತಿಗಳಾಗಿರ­ಬೇಕೆಂಬುದು ಸರಿಯೆ. ಸಂಗ್ರಾಮದಲ್ಲಿ ಭಾಗವಹಿಸಿದವರು ಕೆಲವರು ಇದ್ದರೂ ಅವರು ಸಾಹಿತ್ಯ ರಚಿಸಿದವ­ರಲ್ಲ. ಕರ್ನಾಟಕ ಏಕೀಕರಣ, ನಾಡುನುಡಿ ಹಿತಕ್ಕೂ, ಮುನ್ನ­ಡೆಗೂ ದುಡಿದವರು ಉಂಟು. ಆದರೆ ಅವರು ಗುಣ-ಗಾತ್ರದ ಸತ್ವಶಾಲಿ ಸಾಹಿತ್ಯ ಸೃಷ್ಟಿಸಿಲ್ಲ.

ಎಲ್ಲೆಲ್ಲೂ ಸಲ್ಲುವಂತೆ ಬಾಳಿ ಇಡೀ ಜನತೆ ತನ್ನ ಮಾತನ್ನು ಕೇಳುವಂತಹ ದಾರ್ಶನಿಕ ಗುರುವೆನಿಸಿದ ಮೇರು ವ್ಯಕ್ತಿತ್ವದ ಲೇಖಕರು ಈಗಿಲ್ಲ. ಸಜ್ಜನ, ಸರಳ, ಸೌಮ್ಯ, ಮೃದುಭಾಷಿ ಕವಿ -ಎಂಬಿತ್ಯಾದಿ ಗುಣಗಳಿದ್ದ ಮಾತ್ರಕ್ಕೆ ಮೇರುಸದೃಶ ವ್ಯಕ್ತಿತ್ವ ಆಗುವುದಿಲ್ಲ. ಇಡೀ ಜನಾಂಗ ಆಲಿಸುವಂತಹ, ನಾಡಿನ ಗುರು ಎಂದು ಒಪ್ಪಬಲ್ಲ ದಾರ್ಶನಿಕ ಕವಿ ಕರ್ನಾಟಕದಲ್ಲಿ ಈಗ ಇಲ್ಲ. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ನಾಲಗೆ ಹೇಳಿದರೂ ‘ಸ್ವಂತ ಕುಲಂ ಒಂದೆ ವಲಂ’- ಎಂದು ಬಾಳುತ್ತಿರುವುದು ಹೆಚ್ಚಾಗಿ ಕಾಣುತ್ತಿದೆ.
ವಿಶ್ವಮಾನವ ದೃಷ್ಟಿಯಲ್ಲಿ ನಂಬಿಕೆ ಇರ­ಬೇಕೆಂದು ವೇದಿಕೆಯಿಂದ ಹೇಳುವವರಿದ್ದಾರೆ. ದೂರದ ಬೆಟ್ಟ ನುಣ್ಣಗೆ!

ಸಮನ್ವಯ, ಸರ್ವೋದಯ, ಸಮಾನತೆಯ ಹರಿಕಾರ­ರಾಗಿದ್ದು ಗೌರವ ವ್ಯಕ್ತಿತ್ವ ಗಳಿಸಿರುವ ಕವಿಯನ್ನು ಕರ್ನಾಟಕದಲ್ಲಿ ಈಗ ದುರ್ಬೀನು ಹಾಕಿ ಹುಡುಕಬೇಕಾಗಿದೆ. ದೇವರೇ ಬಂದರೂ ದೋಷ ಕಾಣುವವರು ಇರುವಾಗ ಎಂದೂ ಯಾವ ಆಪಾದನೆಗೂ ಗುರಿಯಾಗದ ಅಜಾತಶತ್ರು ಯಾರಿದ್ದಾರೆ? ಹೀಗಾಗಿ ಈ ಮಾನದಂಡವೇ ಸರಿಯಲ್ಲ.

‘ಬಹುಮತ ಇತ್ಯಾದಿ ಚುನಾವಣಾ ಪ್ರಕ್ರಿಯೆಯಿಂದ ಆಯ್ಕೆ ಆಗಬಾರದು’ ಎಂಬ ಮಾನದಂಡವೂ ವಿರೋಧಾ­ಭಾಸದಿಂದ ಕೂಡಿದೆ. ಈಗ ಸಮಿತಿಯು ಪ್ರಶಸ್ತಿಗೆ ಅರ್ಹ­ರಾದವರನ್ನು ಸೂಚಿಸಲು ಅನೇಕರನ್ನು ಕೇಳಿರು­ವುದರಿಂದ ಹತ್ತಾರು ಹೆಸರುಗಳು ಸೂಚಿತವಾಗುತ್ತವೆ. ಯಾರ ಹೆಸರನ್ನು ಹೆಚ್ಚು ಜನರು ಸೂಚಿಸಿರುತ್ತಾರೆಯೊ ಅಂಥವರ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡುವುದು ಅನಿ­ವಾ­ರ್ಯ­ವಾ­ಗುತ್ತದೆ. ಅಂದರೆ ಹೆಚ್ಚು ಮತ ಬಿದ್ದವರು ಗೆದ್ದ­ರೆಂಬುದು ಚುನಾ­ವಣೆಯೇ ಆಯಿತು. ಆಯ್ಕೆ ಆಗದ ಉಳಿದವರು ಸೋತ ಹುದ್ದರಿ­ಗಳೇ, ಅರಾಷ್ಟ್ರೀಯ ಕವಿಗಳೇ ಎಂಬ ಮುಜುಗರಕ್ಕೆ ಕಾರಣವಾಗುತ್ತದೆ.

ಒಟ್ಟಾರೆ ಸಮಿತಿ ಸೂಚಿಸಿರುವ ಮಾನದಂಡಕ್ಕೆ ಸರಿದೂಗುವ ‘ಜಗದ ಕವಿ, ಯುಗದ ಕವಿ’ ಹಾಲಿ ಕರ್ನಾಟಕದಲ್ಲಿ ನನಗೆ ಕಾಣುತ್ತಿಲ್ಲ. ಈ ಮಾನದಂಡಗಳು ಉತ್ತಮವಾಗಿದ್ದರೂ ಕೆಲವನ್ನು ಕೈಬಿಡಬೇಕು ಮತ್ತು ಪ್ರಾಯೋಗಿಕವಾಗಿರದ ಕೆಲವನ್ನು ಬದಲಾಯಿಸಬೇಕು, ಸರಳಗೊಳಿಸಬೇಕು.ಆದರ್ಶ, ವಾಸ್ತವ­ಗಳು ವಿರುದ್ಧ ­ಧ್ರುವಗಳು. ಪಂಪ,  ಕುಮಾರವ್ಯಾಸ, ಕುವೆಂಪು ಮಟ್ಟದವರೇ ಆಗಿರಬೇಕೆಂದು ನಿರೀಕ್ಷಿಸದೆ ವರ್ತಮಾನದ ಸಾಹಿತ್ಯ ಸಂದರ್ಭವನ್ನೂ ನೋಡಬೇಕು. ಜ್ಞಾನಪೀಠ, ಸರಸ್ವತಿ ಸಮ್ಮಾನ್ ಮುಂತಾದ ರಾಷ್ಟ್ರೀಯ ಮಹತ್ವದ ಪ್ರಶಸ್ತಿಗಳನ್ನು ಪಡೆದವರನ್ನು ರಾಷ್ಟ್ರಕವಿ ಪ್ರಶಸ್ತಿಗೆ ಪರಿಗಣಿಸಬೇಕೆ ಎಂಬುದೂ ನಿಚ್ಚಳವಾಗಬೇಕು.

ರಾಷ್ಟ್ರಕವಿ ಎಂಬುದು ಚಿನ್ನದ ಮೊಟ್ಟೆ ಇಡುವ ಪ್ರಶಸ್ತಿ. ಹತ್ತು ಲಕ್ಷ ರೂಪಾಯಿ ನಗದು, ಉಚಿತ ವೈದ್ಯಕೀಯ ಸೇವೆ, ಪ್ರತಿ ತಿಂಗಳೂ ಎಲ್ಲಿಂದೆಲ್ಲಿಗೆ ಹೋಗಿಬರಲು ಸಂಪೂರ್ಣ ವಾಹನ ವೆಚ್ಚ ಸಂದಾಯ, ಬರೆದಿರುವ ಎಲ್ಲ ಪುಸ್ತಕಗಳ ಮರುಮುದ್ರಣ, ಅದರ ಸಂಭಾವನೆ, ಸಗಟು ಖರೀದಿ -ಹೀಗೆ ಹಣ, ಅನುಕೂಲ ವರಸೆಯಾಗಿ ಹರಿದುಬರುತ್ತದೆ. ಪಂಪಕವಿ ಹೇಳುವ ಪೂಜೆ, ಕೀರ್ತಿ, ಲಾಭ ಎಂಬುವೆಲ್ಲ ಪ್ರಾಪ್ತ­ವಾಗು­ತ್ತವೆ. ಈ ಕಾರಣಕ್ಕಾಗಿಯೂ ಪ್ರಶಸ್ತಿಗಾಗಿ ಲಾಬಿ ನಡೆದಿದೆ.

ಜಾತಿ, ಮತದ ಕಾರಣ ಕೊಟ್ಟು, ಪ್ರಾದೇಶಿಕ ಪ್ರಾತಿನಿಧ್ಯ­ವನ್ನು ಮುಂದಿಟ್ಟು, ವಯೋವೃದ್ಧರೆಂಬ ನೆಪ ಹೇಳಿ, ವಶೀಲಿ ಬಾಜಿ ರಾಜಾರೋಷವಾಗಿ ನಡೆಯುತ್ತಿರು­ವುದು ಆರೋಗ್ಯ­ಕರ ಬೆಳವಣಿಗೆಯಲ್ಲ. ಸಾಹಿತ್ಯ ಸಮ್ಮೇ­ಳನದ ಅಧ್ಯಕ್ಷತೆಯನ್ನು ಸ್ವೀಕರಿಸಿ ಎಂದು ಮನೆ ಬಾಗಿಲಿಗೆ ಹೋಗಿ ದುಂಬಾಲು ಬಿದ್ದರೂ ಒಲ್ಲೆಯೆಂಬ ಸ್ಥಿತಪ್ರಜ್ಞತ್ವ ಅಪ­ರೂಪ. ಅರ್ಹತೆ ಇರುವವರು ಪ್ರಶಸ್ತಿಗಳು ತಮಗೆ ಬರ­ಬೇ­ಕೆಂದು ಅಪೇಕ್ಷಿಸುವುದು ತಪ್ಪಲ್ಲ. ತಮಗಿಂತ ಕಡಿಮೆ ಅರ್ಹತೆ­ಯವರು ಪ್ರಶಸ್ತಿ ಗಿಟ್ಟಿಸಲು ರಾಜಕೀಯ ಮಾಡು­ವಾಗ ಹೆಚ್ಚು ಅರ್ಹರಿಗೆ ದುಃಖವಾಗುವುದೂ ಸಹಜ.

ಈ ಎಲ್ಲ ಹಿನ್ನೆಲೆಯಲ್ಲಿ ನನ್ನ ಪ್ರಕಾರ ರಾಷ್ಟ್ರಕವಿ ಪ್ರಶಸ್ತಿಗೆ ಅರ್ಹರು ಇಂದು ಯಾರೂ ಕಾಣುತ್ತಿಲ್ಲ. ಆಯ್ಕೆ ಸಮಿತಿಯು ತನ್ನ ಆಯ್ಕೆ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಇನ್ನು ಮುಂದೆಯೂ ಈಗಿನ ಸಮಿತಿ ರೂಪಿಸಿರುವ ಮಾನದಂಡ ಇರಬೇಕು. ಆದರೆ ಅದರಲ್ಲಿ ಸೂಕ್ತ ಬದಲಾವಣೆ ಆಗಬೇಕು. ರಾಷ್ಟ್ರಕವಿ ಪರಿಕಲ್ಪನೆಯನ್ನೇ ಕೈಬಿಡುವುದಾದರೆ ಅದು ಮತ್ತೂ ಒಳ್ಳೆಯ ನಿರ್ಧಾರ. ಇದು ನನ್ನ ಅಭಿಪ್ರಾಯ. ಈ ಅಭಿಪ್ರಾಯವನ್ನು ತಳೆಯುವ ಮೊದಲು ಓರಗೆಯ ಹಿರಿಯ ಬರಹಗಾರ­ರೊಡನೆ ಚರ್ಚಿಸಿದ್ದೇನೆ. ಸಮಕಾಲೀನ ಸಾಹಿತಿ­ಗಳು ಈ ಅಭಿಪ್ರಾಯ ಸಮಂಜಸವಾಗಿದೆಯೆಂದು ತಮ್ಮ ಸಹಮತ ವ್ಯಕ್ತಪಡಿಸಿದರು. ಇದರಿಂದ ನಾನು ಸರಿಯಾದ ಅಭಿಪ್ರಾಯ ತಳೆದಿದ್ದೇನೆಂದು ಖಚಿತವಾಗಿ ನಂಬಿದ್ದೇನೆ. 

ಒಬ್ಬರ ಹೆಸರಷ್ಟೇ ಶಿಫಾರಸು
ಜನರಿಂದ ಅಭಿಪ್ರಾಯ ಆಹ್ವಾನಿ­ಸಿದ ಮಾತ್ರಕ್ಕೆ, ಬಹುಮತದ ಆಧಾರ­ದಲ್ಲಿ ರಾಷ್ಟ್ರಕವಿ ಗೌರವಕ್ಕೆ ಕವಿ­ಯನ್ನು ಆಯ್ಕೆ ಮಾಡುವುದಿಲ್ಲ. ಜನರ ಅಭಿಪ್ರಾಯ ಮತ್ತು ಸಮಿ­ತಿಯ ಅಭಿಪ್ರಾಯವನ್ನು ತಾಳೆ ಮಾಡಿ, ಸರ್ಕಾರಕ್ಕೆ ಒಬ್ಬರ ಹೆಸರು ಸೂಚಿಸಲಾಗುವುದು. ಅದನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಯಾರೂ ಅರ್ಹರಲ್ಲ ಎಂದೆನಿಸಿದರೆ, ಯಾವುದೇ ಹೆಸರು ಸೂಚಿಸದಿರುವ ಅಧಿಕಾರ ಸಮಿತಿಗೆ ಇದೆ.  
–ಕೋ.ಚೆನ್ನಬಸಪ್ಪ ಅಧ್ಯಕ್ಷರು, ‘ರಾಷ್ಟ್ರಕವಿ’ ಆಯ್ಕೆ ಸಮಿತಿ
 

‘ನಾಡಕವಿ’ ಆಯ್ಕೆ ಮಾಡಿ
ಇಡೀ ಕರ್ನಾಟಕದ ಜನಮಾನಸ­ದಲ್ಲಿ ಸ್ಥಾನ ಪಡೆದಿರುವಂತಹ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ‘ರಾಷ್ಟ್ರಕವಿ’ ಆಯ್ಕೆಗೆ ಪರಿಗಣಿಸಬೇಕು. ಇಷ್ಟು ದಿನ ನಡೆಸಿಕೊಂಡು ಬಂದಿರುವ ಸಂಪ್ರದಾಯದ ಆಧಾರದ ಮೇಲೆ ಈ ಆಯ್ಕೆ ನಡೆಯಬೇಕು; ಆದರೆ ಯಾವುದೇ ಕಾರಣಕ್ಕೂ ‘ಇದೊಂದು ಖಾಲಿ ಇರುವ ಹುದ್ದೆ, ಹೀಗಾಗಿ ಭರ್ತಿ ಮಾಡಬೇಕಾಗಿದೆ’ ಎಂಬ ಧೋರಣೆ ಸರಿಯಲ್ಲ. ‘ರಾಷ್ಟ್ರಕವಿ’ ಬದಲಿಗೆ ‘ನಾಡಕವಿ’ ಎಂದು ಆಯ್ಕೆ ಮಾಡುವುದು ಹೆಚ್ಚು ಸೂಕ್ತ ಎನಿಸುತ್ತದೆ. ಅವರು ಕರ್ನಾಟಕದ ಎಲ್ಲ ಭಾಗದವರಿಗೂ ಗೊತ್ತಿರಬೇಕು.
–ಕೆ.ಆರ್‌.ಸಂಧ್ಯಾರೆಡ್ಡಿ, ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT