ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಂತ್ರ ಮರೆತ ಸಚಿವಾಕಾಂಕ್ಷಿಗಳು

Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ರಾಜಕೀಯ ಪಕ್ಷವೊಂದರ ಆಂತರಿಕ ಸಮಸ್ಯೆ, ಪಕ್ಷದ ವೇದಿಕೆ ದಾಟಿ, ಜನರ ಹಿತಾಸಕ್ತಿಗೆ ಮಾರಕವಾಗುವ ಸ್ಥಿತಿ ಮುಟ್ಟಿದರೆ ಅದು ಸಾಮಾಜಿಕ ಬಿಕ್ಕಟ್ಟಿನ ಸ್ವರೂಪ ಪಡೆಯುತ್ತದೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟವನ್ನು ಪುನರ್ ರಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ವ್ಯವಸ್ಥೆಯಂತೆ ಸಂಪುಟ ಪುನರ್ ರಚನೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಂಡಿದ್ದರು ಎಂಬುದು ಮಾಧ್ಯಮ ವರದಿಗಳಿಂದ ತಿಳಿದುಬರುವ ಅಂಶ. ಈ ಪ್ರಕ್ರಿಯೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡ ಕೆಲವರ ಬೆಂಬಲಿಗರು ರಸ್ತೆ ತಡೆ ನಡೆಸಿದರು. ಸರ್ಕಾರದ ಆಸ್ತಿ ಪಾಸ್ತಿ ನಾಶ ಮಾಡುವಂಥ  ಕೃತ್ಯಗಳಲ್ಲಿ ತೊಡಗಿಕೊಂಡರು. ಇದನ್ನು ಕಂಡು ಮನನೊಂದ ನಾಡಿನ ಅಸಂಖ್ಯ ಜನರಲ್ಲಿ ನಾನೂ ಒಬ್ಬ. ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ.

ಸಮಾಜದ ಕುರಿತು ಇರುವ ಕಾಳಜಿಯ ಮೂಲಕ ಮಾತ್ರವೇ ನನ್ನ ಅಭಿಪ್ರಾಯಗಳನ್ನು ತಿಳಿಸಬಯಸುತ್ತೇನೆ. ಪ್ರಕೃತಿಯಲ್ಲಿ ಪ್ರತಿಯೊಂದೂ ನಿರ್ದಿಷ್ಟ ನಿಯಮಗಳಿಗನುಸಾರವಾಗಿಯೇ ಗತಿಶೀಲವಾಗಿರುತ್ತದೆ. ಹೀಗೆ ನಿರ್ದಿಷ್ಟ ನಿಯಮದಲ್ಲಿ ಚಲಿಸುವ ವಸ್ತುವಾಗಲೀ, ಸಂಘಟನೆಯಾಗಲೀ ತಮ್ಮನ್ನು ನಡೆಸುವ ಆ ನಿಯಮಗಳಿಂದ ದೂರವಾಗುವುದು ಅದರ ನಾಶದ ಆರಂಭಿಕ ಹಂತ. ಒಂದು ಕುಟುಂಬದ ಹಂತದಿಂದ ದೇಶದವರೆಗೂ, ಒಂದು ಪಕ್ಷದ ಸಾಮಾನ್ಯ ಸದಸ್ಯನಿಂದ ನಾಯಕತ್ವದ ವರೆಗೂ, ಪಂಚಾಯಿತಿಯಿಂದ  ರಾಷ್ಟ್ರಮಟ್ಟದ ಕಾರ್ಯಕಾರಿ ಸಮಿತಿವರೆಗೂ ಪ್ರತಿಯೊಂದು ಹಂತವೂ ತನ್ನದೇ ನಿಯಮಕ್ಕೆ ಬದ್ಧವಾಗಿರುತ್ತದೆ.

ರಾಜಕೀಯ ಪಕ್ಷವಿರಲಿ, ಸಂಘಟನೆ ರೂಪ ಪಡೆದುಕೊಂಡ ಮತ್ತಿನ್ನೇನೇ ಇರಲಿ, ಎಲ್ಲವೂ ಒಂದು ನಿಯಮಕ್ಕೆ ಬದ್ಧವಾಗಿರುತ್ತವೆ. ಸದ್ಯ ಕಾಂಗ್ರೆಸ್‌ನ ಒಳಗೆ ಭುಗಿಲೆದ್ದಿರುವ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಈ ದೃಷ್ಟಿಯಲ್ಲೇ ನೋಡಬೇಕಿದೆ.  ಈಗ ಕಾಂಗ್ರೆಸ್‌ನಲ್ಲಿ ಉಂಟಾಗಿರುವುದು ಪಕ್ಷದ ಆಂತರಿಕ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಲಾದೀತೇ? ಖಂಡಿತಾ ಇಲ್ಲ. ಅಧಿಕಾರದಲ್ಲಿ ಇರುವ ಅಥವಾ ಇಲ್ಲದೇ ಇರುವ ರಾಜಕೀಯ ಪಕ್ಷವೊಂದರ ಒಳಗಿನ ಭಿನ್ನಾಭಿಪ್ರಾಯಗಳು, ಅತೃಪ್ತಿಗಳು ಅದೇ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗುತ್ತಿರುವ ತನಕವೂ ಅದು ಪಕ್ಷದ ಆಂತರಿಕ ಸಮಸ್ಯೆ.

ಈ ಸಮಸ್ಯೆ ಪಕ್ಷದ ವೇದಿಕೆಗಳನ್ನು ದಾಟಿ ಸಾರ್ವಜನಿಕ ವಲಯಕ್ಕೆ ಬಂದು ಜನರ ಹಿತಾಸಕ್ತಿಗೆ ಮಾರಕವಾಗುವ ಸ್ಥಿತಿ ಯಾವಾಗ ಬಂದೊದಗುತ್ತದೆಯೋ ಆಗ ಅದು ಸಾಮಾಜಿಕ ಬಿಕ್ಕಟ್ಟಿನ ಸ್ವರೂಪ ಪಡೆಯುತ್ತದೆ. ಈಗ ಸಂಭವಿಸಿರುವುದು ಅದುವೇ. ಕೆಲವರು ಸಚಿವ ಸ್ಥಾನ ಕಳೆದುಕೊಂಡಿರುವುದು ಸಾರ್ವಜನಿಕ ಆಸ್ತಿಪಾಸ್ತಿಯ ನಷ್ಟಕ್ಕೆ ಕಾರಣವಾಗುವ ಪ್ರತಿಭಟನೆಗೆ ಕಾರಣವಾಗಿದೆ. ಅಧಿಕಾರ ಕಳೆದುಕೊಂಡಿರುವವರು ಪ್ರತಿಪಾದಿಸುತ್ತಿರುವಂತೆ ಇದು ಕೆಲವು ಜಾತಿಗಳು ಕೋಪಿಸಿಕೊಳ್ಳುವ ಮಟ್ಟಕ್ಕೂ ಹೋಗಿದೆ.

ಅಕಸ್ಮಾತ್, ಒಂದು ಪಕ್ಷದ ನಾಯಕತ್ವ ತನ್ನ ಸೈದ್ಧಾಂತಿಕ ಚೌಕಟ್ಟನ್ನು ಉಲ್ಲಂಘಿಸಿ ಆ ಮೂಲಕ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದರೆ ಆ ನಾಯಕತ್ವದ ವಿರುದ್ಧ ಕಾರ್ಯಕರ್ತರು ಹೋರಾಟ ನಡೆಸಿದರೆ ಅದನ್ನು ಯಾರೂ ಕಡೆಗಣಿಸಬೇಕಿಲ್ಲ. ಸಾರ್ವಜನಿಕರೂ  ಈ ಕಾರ್ಯಕರ್ತರ ನ್ಯಾಯನಿಷ್ಠೆಯನ್ನು ಬೆಂಬಲಿಸಬೇಕಾಗುತ್ತದೆ. ಈಗ ಕರ್ನಾಟಕದ ಕಾಂಗ್ರೆಸ್‌ ಒಳಗೆ ಇಂಥದ್ದೊಂದು ಸಮಸ್ಯೆ ಉದ್ಭವಿಸಿರುವಂತೆ ಕಾಣಿಸುತ್ತಿಲ್ಲ.  ನಿರ್ದಿಷ್ಟ ವ್ಯಕ್ತಿಗಳು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಇನ್ನೊಂದಷ್ಟು ಮಂದಿ ಸಚಿವ ಸ್ಥಾನ ಪಡೆದಿದ್ದಾರೆ.

ಮುಖ್ಯಮಂತ್ರಿ ಕೆಲವರನ್ನು ಸಂಪುಟದಿಂದ ಕೈಬಿಟ್ಟು ಮತ್ತೊಂದಿಷ್ಟು ಜನರನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಜನರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವ ಯಾವುದೂ ಇಲ್ಲ. ಇದು ಆಡಳಿತಾರೂಢ ಪಕ್ಷವೊಂದು ಆಡಳಿತ ನಿರ್ವಹಣೆಗಾಗಿ ಮಾಡಿಕೊಂಡಿರುವ ಬದಲಾವಣೆಗಳಷ್ಟೇ. ಆದ್ದರಿಂದ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಬೀದಿಗೆ ಇಳಿದಿರುವವರ ಮುಂದೆ ಕೆಲವು ಸರಳ ಪ್ರಶ್ನೆಗಳನ್ನು ಇಡಬಯಸುತ್ತೇನೆ.

* 2013ರಲ್ಲಿ ಸಿದ್ದರಾಮಯ್ಯ ಅವರು ಸಂಪುಟಕ್ಕೆ  ಸಚಿವರನ್ನು ನೇಮಿಸಿದ ಸಂದರ್ಭದಲ್ಲಿ ಅಂದೂ ಒಂದಷ್ಟು ಮಂದಿ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ದಕ್ಕಿರಲಿಲ್ಲ. ಅಂಥವರು, ಈಗ ಸಚಿವ ಸ್ಥಾನ ಕಳೆದುಕೊಂಡ ಕೆಲವರಂತೆ  ತಮ್ಮ ಬೆಂಬಲಿಗರನ್ನು ಮುಂದಿಟ್ಟು ನಡೆಸಿದಂತೆ ಹೋರಾಟ, ಚೀರಾಟ ನಡೆಸಿದ್ದಿದ್ದರೆ ತನಗೆ ದೊರೆತ ಜನಾದೇಶ ರಕ್ಷಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಿತ್ತೇ?

* ಒಂದು ವೇಳೆ ಅವರೆಲ್ಲಾ, ಈಗ ಸಂಪುಟದಿಂದ ಹೊರಬಿದ್ದ ಕೆಲವರು ಮಾಡುತ್ತಿರುವ ರೀತಿಯಲ್ಲೇ ಬೀದಿಗಿಳಿದು ಹೋರಾಟ ನಡೆಸಿದ್ದರೆ ಆಗ ಸಂಪುಟಕ್ಕೆ ಸೇರಿದವರ ಮತ್ತು ಅವರ ಬೆಂಬಲಿಗರ ಪ್ರತಿಕ್ರಿಯೆ ಏನಿರುತ್ತಿತ್ತು?

* 2013ರಲ್ಲಿ ಸಚಿವ ಸ್ಥಾನ ಸಿಗದಿದ್ದವರು ಹೋರಾಟ ಮಾಡಿದ್ದರೆ ಅವರೆಲ್ಲಾ ‘ಪಕ್ಷ ವಿರೋಧಿಗಳು, ಜನರ ಆದೇಶವನ್ನು ಒಪ್ಪದ ಪ್ರಜಾತಂತ್ರ ವಿರೋಧಿಗಳೆಂದು ಆಗ ಗೂಟದ ಕಾರು ಪಡೆದ ಇವರೇ ಆರೋಪಿಸುತ್ತಿದ್ದರೋ ಇಲ್ಲವೋ? 

ಪಕ್ಷಾಧಾರಿತ ವ್ಯವಸ್ಥೆಯಲ್ಲಿ ಜನರು ಕೇವಲ ವ್ಯಕ್ತಿಯನ್ನು ಆರಿಸುತ್ತಿರುವುದಿಲ್ಲ. ಅವರು ಮತ ಚಲಾಯಿಸುವುದು ನಿರ್ದಿಷ್ಟ ಪಕ್ಷದ ಅಭ್ಯರ್ಥಿಗೆ. ಇದು ವಿವಿಧ ಪಕ್ಷಗಳಿಂದ ಗೆದ್ದು ಬಂದಿರುವ ಪ್ರತಿಯೊಬ್ಬ ಶಾಸಕರೂ ಅರಿತಿರಬೇಕಾದ ಪ್ರಥಮ ಪಾಠ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆರಿಸಿ ಬಂದವರು ಪಕ್ಷ ನಾಯಕತ್ವದ ತೀರ್ಮಾನವನ್ನು ಒಪ್ಪಿಕೊಳ್ಳಬೇಕು ಮತ್ತು  ಐದು ವರ್ಷಗಳ ಅವಧಿ ಮುಗಿಯುವವರೆಗೂ ಆ ಪಕ್ಷದಲ್ಲೇ ಇದ್ದು ಜನಾದೇಶವನ್ನು ಪಾಲಿಸಬೇಕು. ಪಕ್ಷಕ್ಕಿಂತ ವ್ಯಕ್ತಿಯೇ ಮೇಲು ಎಂಬ ಭಾವನೆ ಇಟ್ಟುಕೊಳ್ಳುವುದು ಸರಿಯಾದ ಮಾರ್ಗವಲ್ಲ. ಒಂದು ವೇಳೆ ಪಕ್ಷದ ಜೊತೆಗೆ ಆ ಮಟ್ಟದ ಅಸಮಾಧಾನವಿದ್ದರೆ ಪಕ್ಷಕ್ಕೂ ಆರಿಸಿಬಂದ ಸ್ಥಾನಕ್ಕೂ ರಾಜೀನಾಮೆ ನೀಡಿ ಮುಂದಿನದ್ದನ್ನು ಮಾಡಬೇಕು.

ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ಅಸಮಾಧಾನವಿದ್ದರೆ ಅಥವಾ ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಅವುಗಳನ್ನು ಪ್ರಜಾತಾಂತ್ರಿಕ ರೀತಿಯಲ್ಲಿ ಚರ್ಚಿಸಬಹುದು. ಈ ವಿಧಾನವನ್ನು ಹೊರತುಪಡಿಸಿದ ಪ್ರತಿಕ್ರಿಯೆಗಳು ಕೇವಲ ಒಂದು ಪಕ್ಷವನ್ನು ದುರ್ಬಲಗೊಳಿಸುವುದಕ್ಕಷ್ಟೆ ಸೀಮಿತವಾಗಿರುವುದಿಲ್ಲ. ಅವು ಇಡೀ ಪ್ರಜಾತಂತ್ರವನ್ನು ವ್ಯಕ್ತಿ ಕೇಂದ್ರಿತವನ್ನಾಗಿ ಮಾಡಿಬಿಡುತ್ತವೆ. ಏಕೆಂದರೆ ಸಾವಿರಾರು ಜಾತಿಗಳಾಗಿ ಒಡೆದು ಹೋಗಿರುವ ಈ ವ್ಯವಸ್ಥೆಯನ್ನು ಬಂಡವಾಳವಾಗಿಟ್ಟುಕೊಂಡು ತಳಸಮುದಾಯಗಳ ಮೇಲೆ ದಾಳಿ ಮಾಡುವ ಶಕ್ತಿಗಳು ಬೆಳೆಯುತ್ತಿವೆ.

ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿರುವ ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ಜನತಂತ್ರದ ಬೇರುಗಳನ್ನು ಗಟ್ಟಿಗೊಳಿಸುವುದರ ಪರವಾಗಿ ನಿಲ್ಲಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಆಂತರಿಕ ಸಮಸ್ಯೆಗಳನ್ನು ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಕೈಗೊಂಡು ಪ್ರಜಾತಂತ್ರವನ್ನು ಬಲಗೊಳಿಸಬೇಕು. ಚಾರಿತ್ರಿಕ ಸಂದರ್ಭ ನೀಡಿರುವ ಅವಕಾಶವನ್ನು ಅರ್ಥಮಾಡಿಕೊಂಡು ಇವರು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಸಮಾಜ ನಿರೀಕ್ಷಿಸುತ್ತದೆ. ಹಾಗೆಯೇ ಬೀದಿಗಿಳಿದು ರಂಪಾಟ ಮಾಡುವ ಮೂಲಕ  ಅಧಿಕಾರ ಪಡೆಯಬೇಕೆನ್ನುವವರ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT