ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಪರಿವಾರ: ಹೊರಬಿದ್ದ ಎಸ್‌ಪಿ

ಪಕ್ಷ ಸಂಪರ್ಕಿಸದೆ ಸೀಟು ಹಂಚಿಕೆ: ಬಿಹಾರದಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧಾರ
Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಬಿಹಾರ ವಿಧಾನಸಭಾ ಚುನಾವಣೆಗೆ ನಡೆದ ಸೀಟು ಹಂಚಿಕೆ ಸಂಬಂಧ ತೀವ್ರ ಅಸಮಾಧಾನಗೊಂಡಿದ್ದ ಸಮಾಜವಾದಿ ಪಕ್ಷ ಕೊನೆಗೂ  ಜನತಾ ಪರಿವಾರದಿಂದ ಹೊರಬಂದಿದ್ದು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಗುರುವಾರ ಪ್ರಕಟಿಸಿದೆ.

ಎಲ್ಲಾ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಹೆಜ್ಜೆ ಇರಿಸಿದ್ದ ಜನತಾ ಪರಿವಾರವನ್ನೊಳಗೊಂಡ ‘ಮಹಾ ಮೈತ್ರಿಕೂಟ’ಕ್ಕೆ ಎಸ್‌ಪಿಯ ಈ ನಿಲುವು ಭಾರಿ ಆಘಾತವನ್ನುಂಟು ಮಾಡಿದೆ. ತಮ್ಮ ಪಕ್ಷವನ್ನು ಸಂಪರ್ಕಿಸದೆಯೇ ಸೀಟು ಹಂಚಿಕೆ ಮಾಡಿರುವುದು ಪಕ್ಷಕ್ಕೆ ತೋರಿದ ಅಗೌರವ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಆರೋಪಿಸಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಗೋಪಾಲ್‌ ಯಾದವ್‌, ಇದು ‘ಮೈತ್ರಿ ಧರ್ಮವಲ್ಲ’ ಎಂದರು.

ಎಸ್‌ಪಿಯ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್‌ ಯಾದವ್‌ ಅವರ ನೇತೃತ್ವದಲ್ಲಿ ಇಲ್ಲಿ ನಡೆದ ಪಕ್ಷದ ಸಂಸದೀಯ ಮಂಡಳಿಯ ಸಭೆಯಲ್ಲಿ ಬಿಹಾರ ವಿಧಾನಸಭೆ ಚುನಾವಣೆ ಕುರಿತ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಸೀಟು ಹಂಚಿಕೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಸ್‌ಪಿಯನ್ನು ಸಂಪರ್ಕಿಸುವುದು ಪ್ರಮುಖ ಪಕ್ಷಗಳ ಕರ್ತವ್ಯವಾಗಿತ್ತು ಎಂದು ಯಾದವ್‌ ಪ್ರತಿಪಾದಿಸಿದರು.‌

‘ಸೀಟು ಹಂಚಿಕೆ ಸಂಗತಿ ನಮಗೆ ಮಾಧ್ಯಮದ ಮೂಲಕ ಗೊತ್ತಾಯಿತು.  ಇದು ‘ಮೈತ್ರಿ ಧರ್ಮ’ವಲ್ಲ. 243 ಕ್ಷೇತ್ರಗಳ ಪೈಕಿ ಎರಡರಿಂದ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮಾತ್ರ ಪಕ್ಷಕ್ಕೆ ಅವಕಾಶ ನೀಡುವ ಆಹ್ವಾನ ಸ್ವೀಕಾರಾರ್ಹವಲ್ಲ’ ಎಂದರು. ಮೈತ್ರಿಕೂಟವು ನೀಡಿರುವ ಸೀಟುಗಳಿಗಿಂತ ಹೆಚ್ಚು ಕ್ಷೇತ್ರಗಳನ್ನು ನಾವೇ ಪ್ರತ್ಯೇಕವಾಗಿ ಸ್ಪರ್ಧಿಸಿ ಗೆಲ್ಲುತ್ತೇವೆ. ಗೌರವಯುತವಾಗಿ ಕಣಕ್ಕೆ ಇಳಿಯುತ್ತೇವೆ’ ಎಂದರು.

ಇದೇ ವೇಳೆ ಜನತಾ ಪರಿವಾರದ ಭವಿಷ್ಯದ ಕುರಿತು ಕೇಳಲಾದ ಪ್ರಶ್ನೆಗೆ ಅವರು, ‘ಮೈತ್ರಿಯ ಸಂದರ್ಭದಲ್ಲಿಯೇ ನಾನು ಪಕ್ಷದ ‘ಮರಣ ಶಾಸನ’ಕ್ಕೆ ಸಹಿ ಹಾಕುವುದಿಲ್ಲ ಎಂದಿದ್ದೆ’ ಎಂದು ರಾಮ್‌ಗೋಪಾಲ್‌ ತಿಳಿಸಿದರು. ‘ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಿ ಎಸ್‌ಪಿ ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ತಿಳಿಸಿದರು.

*
ಮುಖ್ಯಾಂಶಗಳು
*ಸೀಟು ಹಂಚಿಕೆಯಿಂದ ಭುಗಿಲೆದ್ದಿದ್ದ ಅಸಮಾಧಾನ
* ಮನಸ್ತಾಪ ಬಗೆಹರಿಸಲು ಜೆಡಿ (ಯು) ಯತ್ನ
*ಆರ್‌ಜೆಡಿ ತೊರೆದ ಹಿರಿಯ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT