ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಸಂಸ್ಕೃತಿಯ ಪ್ರತೀಕ

ಕಂಬಳ ಕ್ರೀಡೆಯೋ? ಹಿಂಸೆಯೋ?
Last Updated 5 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕರಾವಳಿ ಕರ್ನಾಟಕದ ಜನಪದ ಕ್ರೀಡೆ ಕಂಬಳ. ಉತ್ತರದ ಬಾರ್ಕೂರಿನಿಂದ ದಕ್ಷಿಣದ ಕಾಸರಗೋಡಿನವರೆಗೆ ರೈತರು ತಮ್ಮ ಎರಡನೇ ಬೆಳೆ ಸುಗ್ಗಿ ಸಾಗುವಳಿಯ ಕೊನೆಯಲ್ಲಿ ಉಳುಮೆಯ ಕೋಣಗಳನ್ನು ಓಡಿಸುವುದು ಪುರಾತನ ಕಾಲದಿಂದ ನಡೆದು­ಬಂದ ಸಂಪ್ರದಾಯ. ಗಂಪ-+ಕಳ= ಕಂಬಳ (ಗಂಪ ಎಂದರೆ ತುಳು ಭಾಷೆಯಲ್ಲಿ ಕೆಸರು ಎಂದರ್ಥ. ಕಳ ಎಂದರೆ ಕಣ) ಹೀಗಾಗಿ ಕೆಸರು ಮಣ್ಣಿನಿಂದ ಕೂಡಿದ ಗದ್ದೆಗೆ ಕಂಬಳ ಎಂದು ಹೆಸರು. ನೂರಾರು ಸಾಂಪ್ರದಾಯಿಕ ನಂಬಿಕೆ, ಆಚರಣೆ, ಆರಾಧನೆಗಳ ಮುಖ್ಯ ಆಧಾರವಾಗಿರುವ ಕಂಬಳಾಚರಣೆಗೆ ಇದೀಗ ಆತಂಕದ ಕಾರ್ಮೋಡ ಕವಿದಿದೆ.

ತಮಿಳುನಾಡಿನ ಜಲ್ಲಿಕಟ್ಟು ಎನ್ನುವ ಹೋರಿ ಪಳಗಿಸುವ ಸ್ಪರ್ಧೆ­ಯಲ್ಲಿ ಹಿಂಸೆ, ಸಾವು-ನೋವು ಸಂಭವಿಸಿದೆ. ಇದನ್ನು ನಿಷೇಧಿಸುವಂತೆ

ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಕಂಬಳಕ್ಕೂ ಅನ್ವಯಿಸಲಾಗಿದೆ. ಕೇಂದ್ರ ಸರ್ಕಾರದ ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿಯ ಮಧ್ಯಪ್ರವೇಶದಿಂದ ಕಂಬಳಾಚರಣೆ ಇನ್ನಷ್ಟು ಕಷ್ಟ ಅನುಭವಿಸು­ವಂತಾಗಿದೆ. ಅಹಿಂಸಾತ್ಮಕವಾಗಿ ಕಂಬಳ ಆಚರಿಸುವ ಸಂಘಟನಾತ್ಮಕ ಪ್ರಯತ್ನಗಳ ನಡುವೆಯೇ, ಪ್ರಾಣಿ ಕ್ರೌರ್ಯ ತಡೆ ನಿಯಮ 1960ರ ಅನ್ವಯ ಪಶುಸಂಗೋಪನಾ ಇಲಾಖೆ ಮೂಲಕ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಆಡಳಿತಗಳು ಕಂಬಳಕ್ಕೆ ತಡೆ ನೀಡಿವೆ.  ಹಿಂಸೆಯ ಹೆಸರಿನಲ್ಲಿ ಜಾರಿಗೆ ತಂದ ವಿವೇಚನಾರಹಿತವಾದ ಆಜ್ಞೆ ಇದು.  ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತಾರದೆ ದಿಢೀರನೆ ಕರಾವಳಿ ಜನರು ಮತ್ತು ಸಂಸ್ಕೃತಿಯ ಮೇಲೆ ನಡೆಸಿದ ಗದಾಪ್ರಹಾರ.

ಬಾಂಧವ್ಯದ ಇತಿಹಾಸ: ಕಂಬಳ ಯಾಕೆ ಉಳಿಯಬೇಕು ಎಂದು ಹೇಳುವಾಗ ಅದರ ನೂರಾರು ವರ್ಷಗಳ ಇತಿಹಾಸ, ಜನರ ಜೀವನ, ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ಬಾಂಧವ್ಯವನ್ನೂ ಗಮ­ನಿಸ­ಬೇಕಾಗುತ್ತದೆ. ಭತ್ತದ ಗದ್ದೆಯನ್ನು ಉಳುಮೆ ಮಾಡುವಾಗ, ಬಿತ್ತಿದ ಬೆಳೆ ನಿರ್ವಿಘ್ನವಾಗಿ ರೈತನ ಮನೆ ಸೇರಬೇಕಾದರೆ ದೈವ, ದೇವರ ಸಹಾಯ ಅತಿ ಅಗತ್ಯ ಎಂಬುದು ನಂಬಿಕೆ. ಇದಕ್ಕಾಗಿ ಭೂತಾರಾಧನೆ, ನಾಗಾರಾಧನೆ, ದೇವತಾ­ರಾಧನೆ, ಪನಿಕುಲ್ಲುನು ಅಂತಹ ಅನೇಕ ಆರಾಧನಾತ್ಮಕ ಮತ್ತು ಆಚರಣಾ­ತ್ಮಕ ವಿಧಿ ವಿಧಾನಗಳು ಜನರ ನಂಬಿಕೆ, ವಿಶ್ವಾಸಕ್ಕೆ ಪೂರಕವಾದವು.

ಸಮರ್ಥವಾದ ಕೋಣಗಳನ್ನು ಸಾಲಾಗಿ ನಿಲ್ಲಿಸಿ ಉಳುಮೆಯ ಕೊನೆಯಲ್ಲಿ ಪ್ರಾರಂಭಿಸಿದ ಕೋಣಗಳ ಓಟವೇ ಕಂಬಳ. ಈ ಓಟ ಮುಂದೆ

ಎರಡು ವಿಧ

1. ಸಾಂಪ್ರದಾಯಿಕ ಕಂಬಳ: ಧಾರ್ಮಿಕ ಮಹತ್ವ, ಸಾಮೂಹಿಕ ಪಾಲ್ಗೊಳ್ಳುವಿಕೆ, ಮನೆತನದ ಗೌರವ ಇವೆಲ್ಲವೂ ಸಾಂಪ್ರದಾಯಿಕ ಕಂಬಳಗಳಲ್ಲಿ ಎದ್ದು ಕಾಣುವ ಪ್ರಮುಖ ಅಂಶ­ಗಳು. ಉತ್ತರದ ವಂಡಾರಿನ ಕಂಬಳ ಮತ್ತು ದಕ್ಷಿಣದ ಕೊಕ್ಕಡ್‌­ಕೋರಿ ಕಂಬಳಗಳು ಸಾಂಪ್ರದಾಯಿಕ ಕಂಬಳಗಳಲ್ಲಿ ಅತ್ಯಂತ ಹೆಚ್ಚಿನ ಮಹತ್ವ ಪಡೆದಿವೆ. ಇವು ಆಯಾ ಪ್ರದೇಶಗಳ ಜಾತ್ರೆ ಕೂಡಾ. ಇಲ್ಲಿ ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಮಾರಾಟವೂ ಸಾಕಷ್ಟು ನಡೆಯುವುದು ವಿಶೇಷ.
ಈ ಕಂಬಳ ಗದ್ದೆಗಳಿಗೆ ಕೋಣಗಳನ್ನಷ್ಟೇ ಅಲ್ಲದೆ, ಎತ್ತು, ದನ, ಕರು, ಎಮ್ಮೆಯಂತಹ ಜಾನುವಾರುಗಳನ್ನೂ ಇಳಿಸಿ ಹರಕೆ ಸಲ್ಲಿಸಲಾಗುತ್ತದೆ. ಹಿಂದೆ ಮೂಲ್ಕಿ ಸೀಮೆಯ ಅರಸು ಕಂಬಳ ಮತ್ತು ವಂಡಾರಿನ ಕಂಬಳೋತ್ಸವಗಳು ಒಂದು ತಿಂಗಳ ಕಾಲ ವೈಭವದಿಂದ ನಡೆಯುತ್ತಿದ್ದವು.
2. ಆಧುನಿಕ ಕಂಬಳ: ಇವು ಚೆನ್ನಾಗಿ ಸಾಕಿದ ಕೋಣಗಳ ಓಟದ ಕೇಂದ್ರಗಳು. ಬಯಲು ಪ್ರದೇಶಗಳಲ್ಲಿ ಅಥವಾ ಭತ್ತ ಬೆಳೆಯುವ ವಿಶಾಲವಾದ ಗದ್ದೆಗಳಲ್ಲಿ ಕೃತಕವಾದ ಕರೆ (ಪಥ) ನಿರ್ಮಿಸಿ ಮರಳನ್ನು ಹಾಕಿ ಓಟಕ್ಕೆ ಸಿದ್ಧಗೊಳಿಸಲಾಗುತ್ತದೆ. ಸುಂದರವಾದ ಪೆವಿಲಿಯನ್, ಶುಚಿ-ರುಚಿ ಊಟೋಪಚಾರ, ಚಪ್ಪರದ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸಭಾ ಕಾರ್ಯಕ್ರಮ, ಪವನು (8 ಗ್ರಾಂ) ಚಿನ್ನದ ಬಹುಮಾನ ಆಧುನಿಕ ಕಂಬಳದ ಆಕರ್ಷಣೆ.

ಹೀಗಿರುತ್ತದೆ ಸ್ಪರ್ಧೆ

ಕಂಬಳದಲ್ಲಿ 4 ಪ್ರಮುಖ ವಿಭಾಗಗಳಿವೆ
1. ಕೆನೆಹಲಗೆ: ಇದನ್ನು ತುಳುವಿನಲ್ಲಿ ಮಂಡೆ ಪಲಾಯಿ ಎನ್ನು­ತ್ತಾರೆ. ಅಂದರೆ ಮನುಷ್ಯನ ತಲೆಯಷ್ಟು ದೊಡ್ಡದಾದ ಮತ್ತು ಅತಿ ಮುಖ್ಯವಾದ ಎಂದರ್ಥ. ಇಂತಹ ಹಲಗೆಯ ಮೇಲೆ ಎಡ­ಗಾಲನ್ನು ಇಟ್ಟು ಬಲಗಾಲನ್ನು ಮುನೆ (ಹಲಗೆ­ಯನ್ನು ನೊಗಕ್ಕೆ ಜೋಡಿಸುವ ಸಾಧನ) ಮೇಲಿಟ್ಟು ಅತ್ಯಂತ ವೇಗ­ವಾಗಿ ಓಡಿಸ­ಲಾಗುತ್ತದೆ. ಓಟದ ರಭಸಕ್ಕೆ ಚಿಮ್ಮಿದ ನೀರು ಮೇಲ್ಭಾಗ­ದಲ್ಲಿ ಅಡ್ಡಕ್ಕೆ ಕಟ್ಟಲಾದ ನಿಶಾನಿಗೆ (ಹದಿ­ನಾರೂ ಕಾಲು ಅಡಿ ಎತ್ತರ, ಹದಿನೆಂಟೂ ಮುಕ್ಕಾಲು ಅಡಿ ಎತ್ತರದಲ್ಲಿ ಬಟ್ಟೆ ಅಥವಾ ಮರದ ಹಲಗೆಯಿಂದ ಕಟ್ಟಿದ ಗುರುತು) ತಾಗುವ ಎತ್ತರ ಪರಿಗಣಿಸಿ ವಿಜೇತರನ್ನು ನಿರ್ಣಯಿಸಲಾಗುತ್ತದೆ.
ಈ ರೀತಿ ಓಟದ ಸಂದರ್ಭದಲ್ಲಿ ನೀರು ಏಳುವ ದೃಶ್ಯ ಅತ್ಯಂತ ಮೊನಚಾಗಿ ನಿಶಾನಿಗೆ ತಾಗುವುದರಿಂದ ಇದಕ್ಕೆ ಕೆನೆಹಲಗೆ ಎಂದರ್ಥ. ಇಲ್ಲಿ ನಿಶಾನಿಗೆ ನೀರು ಹಾಯಿಸುವ ಪ್ರತಿ ಜತೆ ಕೋಣಗಳಿಗೆ ನಿಗದಿತ ಬಹುಮಾನವಿದೆ.
2. ಹಗ್ಗ: ಹಗ್ಗವನ್ನು ಹಿಡಿದು ಓಡಿಸುವ ವಿಭಾಗ. ಈ ವಿಭಾಗ ಕಂಬಳದ ಅತ್ಯಂತ ವೇಗದ ಕೋಣಗಳ ವಿಭಾಗವಾಗಿದ್ದು, ಪ್ರೇಕ್ಷಕರಲ್ಲೂ ಭಾರಿ ಉತ್ಸಾಹ ಇರುತ್ತದೆ.
3. ಅಡ್ಡಹಲಗೆ: ಕೆಸರು ಮಣ್ಣನ್ನು ಸಮತಟ್ಟುಗೊಳಿಸಲು ಬಳಸುವ ಅಡ್ಡಹಲಗೆಯ ಮೇಲೆ ನಿಂತು ಓಡಿಸುವ ಸ್ಪರ್ಧೆ.
4. ನೇಗಿಲು: ಗದ್ದೆ ಉಳುಮೆಗೆ ಉಪಯೋಗಿಸುವ ನೇಗಿಲಿನ ಸಣ್ಣ ಮಾದರಿಯನ್ನು ಆಧರಿಸಿ ಓಡಿಸುವ ಸ್ಪರ್ಧೆ.
ಹಗ್ಗ ಮತ್ತು ನೇಗಿಲು ವಿಭಾಗದಲ್ಲಿ 6 ಹಲ್ಲಿಗಿಂತ ಕೆಳಗಿನ ಕಿರಿಯ ವಿಭಾಗ ಎಂಬ ವರ್ಗವಿದೆ.

ಆರೋಗ್ಯಕರ ಸ್ಪರ್ಧೆಗೆ ಕಾರಣವಾಯಿತು. ಗೌರವದ ದ್ಯೋತಕವೂ ಆಗಿ ಪ್ರತಿಷ್ಠೆಯ ಪಣ­ವಾಯಿತು. ಸಮರ್ಥ ಕೋಣಗಳಿಗೆ ಎಳನೀರಿನ ಗೊನೆ, ಎಲೆ ಅಡಿಕೆಗಳನ್ನು ಬಹುಮಾನದ ರೂಪದಲ್ಲಿ ಕೊಟ್ಟು ಗೌರವಿಸುವ ಪದ್ಧತಿ ರೂಢಿಗೆ ಬಂತು. ಉಚಿತ ಭೋಜನದ ವ್ಯವಸ್ಥೆ, ಎಳನೀರು, ಕಬ್ಬಿನಕೋಲು, ಕೊಂಬು ಕಹಳೆ, ಬ್ಯಾಂಡು, ವಾಲಗ, ಕೋಣಗಳನ್ನು ಅಲಂಕರಿಸುವ ವಿವಿಧ ರೂಪಗಳು ಕಂಬಳವನ್ನು ಮತ್ತಷ್ಟು ಆಕರ್ಷಕಗೊಳಿಸಿದವು.

ಸೂತಕಾದಿಗಳಿಂದ ಕೂಡಿದ ವ್ಯಕ್ತಿ­ಯಾಗಲಿ, ಆತನ ಕೋಣ­ವಾಗಲಿ ಪಾವಿತ್ರ್ಯದ ದೃಷ್ಟಿಯಿಂದ ಕಂಬಳ ಗದ್ದೆಗೆ ಇಳಿಯು­ವಂತಿಲ್ಲ, ಕಂಬಳದ ದಿನ ನಿಗದಿಯಾದಂದಿನಿಂದ ವ್ರತಾಚರಣೆ, ಕಂಬಳ­ಗದ್ದೆಯ ನೀರನ್ನು ಹಟ್ಟಿಗಳಿಗೆ ಪ್ರೋಕ್ಷಿಸುವುದು, ಕಂಬಳ ಗದ್ದೆಗೆ ಹರಕೆ ಒಪ್ಪಿಸುವುದು, ಸುತ್ತ ಬೆಳ್ಳಕ್ಕಿ ಹಾಕುವುದು, ಕಂಬಳ ಗದ್ದೆ ನಿರ್ಮಿಸಿ ದೇವಾಲಯಗಳಿಗೆ ದಾನಪತ್ರ ನೀಡುವುದು ಮೊದ­ಲಾದ ವಿಶಿಷ್ಟ ಸಂಪ್ರದಾಯಗಳು ಈ ಕ್ರೀಡೆಯ ಮಹತ್ವ ಹೆಚ್ಚಿಸಿವೆ.

ಮೂಲ್ಕಿ ಸೀಮೆಯ ಅರಸು ಕಂಬಳವು ಸಾಂಪ್ರದಾಯಿಕ ಕಂಬಳ­ವಾಗಿದ್ದು, ಆಧುನಿಕ ವ್ಯವಸ್ಥೆಗಳನ್ನು ಸೇರಿಸಿಕೊಂಡರೂ ಸಂಪ್ರ­ದಾಯ­ವನ್ನು ಉಳಿಸಿಕೊಂಡೇ ಬಂದಿದೆ. ಭಾಗವಹಿಸಿದ ಕೋಣಗಳಿಗೆ ಜೋಡು ಎಳನೀರು ಹಾಗೂ ವಿಜೇತ ಕೋಣಗಳಿಗೆ ಸೀಮೆಯ ಗೌರವ­ವಾಗಿ ಎಲೆ ಅಡಿಕೆ, ಜೋಡು ಲಿಂಬೆ ಹುಳಿ ನೀಡಲಾ­ಗುತ್ತದೆ. ಉಳಿದಂತೆ ಕಂಬಳ ಸಮಿತಿ ಚಿನ್ನದ ಪದಕ ನೀಡಿ ಗೌರವಿಸುತ್ತದೆ.

ಕಂಬಳಗದ್ದೆಯ ನಿರ್ಮಾಣದ ಕುರಿತು ತಾಳಿಪ್ಪಾಡಿ ಶಾಸನ, ಕಂಬಳಗದ್ದೆಯ ಉದ್ದಗಲ ಕುರಿತು ಕೊಲ್ಲೂರು ಶಾಸನ, ಕಂಬಳಾ­ಚರಣೆ ಬಗ್ಗೆ ಸುಬ್ರಹ್ಮಣ್ಯದ ಕಲ್ಲಮಾಣೆಯ ಶಾಸನ, ಕಂಬಳಗದ್ದೆ ನಿರ್ಮಿಸಿ ಶಿವಾಲಯಕ್ಕೆ ದತ್ತಿ ನೀಡಿದ ಸೊರಾಲಿನ ಶಾಸನ, ಬಾರಕೂರಿನ ಶಾಸನಗಳಲ್ಲಿ ಕ್ರಿ.ಶ. 1400ರಿಂದ 1676ರ ತನಕ ಉಲ್ಲೇಖಗಳಿರು­ವುದರಿಂದ ಕಂಬಳದ ಪ್ರಾಚೀನತೆ, ಮಹತ್ವವನ್ನು ಅರಿತುಕೊಳ್ಳಬಹುದು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರೇರಣೆಯೊಂದಿಗೆ 1969ರಲ್ಲಿ ಕಾರ್ಕಳ ತಾಲ್ಲೂಕಿನ ಬಜಗೋಳಿ­ಯಲ್ಲಿ ಎನ್‌.ಗುಣಪಾಲ ಜೈನ್‌, ಧರ್ಮರಾಜ ಜೈನ್‌ ಅವರ ನೇತೃ­ತ್ವದಲ್ಲಿ ಇಡೀ ಕಂಬಳ ಕ್ಷೇತ್ರಕ್ಕೆ ಹೊಸ ತಿರುವು ನೀಡಿದ ‘ಲವ–ಕುಶ’ ಜೋಡುಕರೆ ಕಂಬಳ ಒಂದು ಮೈಲಿಗಲ್ಲು. ಕಂಬಳ ಸ್ಪರ್ಧೆಯ ವಿಭಾಗಗಳಾದ ಕೆನೆಹಲಗೆ, ಹಗ್ಗ, ಅಡ್ಡಹಲಗೆ, ನೇಗಿಲು ಎನ್ನುವ ನಾಲ್ಕು ವಿಭಾಗಗಳ ಸ್ಪರ್ಧೆಗಳನ್ನು ಒಂದೆಡೆ ಆರಂಭಿಸಿ 30 ವರ್ಷ­ಗಳ ಕಾಲ ನಿರಂತರ ಯಶಸ್ವಿಯಾಗಿ ನಡೆಸಿದ ಕೀರ್ತಿ ಇಲ್ಲಿನದು.

ಹೊಸ ಆವಿಷ್ಕಾರ: ಉಡುಪಿ ಜಿಲ್ಲೆಯ ಅಡ್ವೆ ನಂದಿಕೂರಿನ ಕೋಟಿ ಚೆನ್ನಯ ಕಂಬಳದ ವ್ಯವಸ್ಥಾಪಕರಾದ ಪೊಳೆಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಅವರ ದೂರದರ್ಶಿತ್ವದಿಂದಾಗಿ ಈ ಕಂಬಳದಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಯಿತು.

ಕಂಬಳ ಸ್ಪರ್ಧೆ ಪಾರ­ದ­ರ್ಶಕವಾಗಿ ಮತ್ತು ವಿವಾದ ಇಲ್ಲದೆ ಜರುಗುವ ನೆಲೆಯಲ್ಲಿ ಮತ್ತೆ ಇದೇ ಕಂಬಳದಲ್ಲಿ ವಿಡಿಯೊ ಫಿನಿಶಿಂಗ್‌ ವ್ಯವಸ್ಥೆಗೊಳಿಸ­ಲಾಯಿತು. ಇವೆರಡೂ ಸೇರ್ಪಡೆಗಳು ಕಂಬಳವನ್ನು ಅತ್ಯಾಕರ್ಷಕವಾಗಿಯೂ, ಪಾರದರ್ಶಕವಾಗಿಯೂ ನೆರವೇರಿಸು­ವಲ್ಲಿ ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ವಹಿಸಿದವು.

ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯ ಪ್ರಯತ್ನದೊಂದಿಗೆ ಕಂಬಳ ಕ್ಷೇತ್ರ­ದಲ್ಲಿ ಏರಿಯಲ್‌ ಚಿತ್ರೀಕರಣ, ಕರೆಯ (ಪಥ) ಮಧ್ಯದಲ್ಲಿ ರೋಪ್‌ ವೇ ಚಿತ್ರೀ­ಕರಣ ಮೊದಲಾದ ಆವಿಷ್ಕಾರಗಳು ರೂಪುಗೊಂಡವು. ಇದೀಗ ಕಂಬಳ ತೀರ್ಪಿನ ಪಾರ­ದರ್ಶಕತೆಯ ನೆಲೆಯಲ್ಲಿ ಕಾರ್ಕಳದ ಸ್ಕೈ ವ್ಯೂ ಸಂಸ್ಥೆಯ ರತ್ನಾಕರ್‌ ಎನ್‌. ಅವರ ಸಂಶೋಧನೆಯಿಂದಾಗಿ ‘ಲೇಸರ್‌ ಸ್ಕ್ರೀನ್‌ ನೆಟ್‌ವರ್ಕ್‌ ಸಿಸ್ಟಂ’ ಎಂಬ ಅತ್ಯಾಧುನಿಕ ವ್ಯವಸ್ಥೆ­ಯನ್ನು ಪ್ರಾಯೋ­ಗಿಕವಾಗಿ ಕಂಬಳಗಳಲ್ಲಿ ಅಳವಡಿಸಲಾಗಿದೆ. ಮುಂದಿನ ಹೆಜ್ಜೆಯಾಗಿ ‘ಎಲೆಕ್ಟ್ರಾನಿಕ್‌ ಟೈಮ್‌ ಸಿಸ್ಟಮ್‌’ಗಾಗಿ ಪ್ರಯತ್ನ ನಡೆದಿದೆ.

ವಿಡಿಯೊ ಫಿನಿಶಿಂಗ್ ಪದ್ಧತಿಯಿಂದಾಗಿ ಹೆಚ್ಚಿನ ಎಲ್ಲ ಸಮಸ್ಯೆ­ಗಳಿಗೆ ಪರಿಹಾರ ದೊರೆತಿದೆ. ಆದರೂ ಪ್ರತಿ ಕಂಬಳದಲ್ಲಿ ನಾಲ್ಕಾರು ಸಂದರ್ಭಗಳಲ್ಲಿ ‘ಸಮ ಸಮ’ ಅಂಕ ಕೊಡುವುದು ಅನಿ­ವಾರ್ಯ. ಕೆಲವು ಸಂದರ್ಭಗಳಲ್ಲಿ ಮೂರು ಮೂರು ಸಲ ‘ಸಮ ಸಮ’ ಬಂದ ಪ್ರಸಂಗಗಳಿವೆ. ಈ ನಿಟ್ಟಿನಲ್ಲಿ ಲೇಸರ್‌ ಸ್ಕ್ರೀನ್‌ ನೆಟ್‌­ವರ್ಕ್‌ ಸಿಸ್ಟಮ್‌ನ ಆವಿಷ್ಕಾರ, ಸಮಸ್ಯೆಗಳಿಗೊಂದು ಉತ್ತಮ ಪರಿಹಾರ.

ಸಮಿತಿ ರಚನೆ: ಕಂಬಳವನ್ನು ಅತ್ಯಂತ ಶಿಸ್ತುಬದ್ಧವಾಗಿ, ವ್ಯವಸ್ಥಿತವಾಗಿ ಮತ್ತು ಅಹಿಂಸಾತ್ಮಕವಾಗಿ ಸಂಘಟಿಸುವ ನೆಲೆಯಲ್ಲಿ 1989ರಲ್ಲಿ ಜಿಲ್ಲಾ ಕಂಬಳ ಸಮಿತಿ ಸ್ಥಾಪನೆಗೊಂಡಿತು. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದೊಂದಿಗೆ ಕಂಬಳ ನಿಯಮಗಳನ್ನು ಒಳಗೊಂಡ ಮಾರ್ಗದರ್ಶಿ ಪುಸ್ತಕ ನನ್ನ ನೇತೃತ್ವದಲ್ಲಿ ಪ್ರಕಟ­ವಾಯಿತು. ಇದು ಕಂಬಳ ಕ್ಷೇತ್ರಕ್ಕೆ ಹೊಸ ತಿರುವು ನೀಡಿತು. ಕಂಬಳ­ಗಳ ವಾರ್ಷಿಕ ದಿನಾಂಕ, ನೀತಿ ನಿಯಮದ ವಿಚಾರದಲ್ಲಿ ಸಮಿತಿ ಬಹು ಮುಖ್ಯ ಪಾತ್ರ ವಹಿಸುತ್ತಿದೆ.

ಓಟಗಳು: ಕಂಬಳ ಓಟಗಾರರು 145 ಮೀಟರ್‌ ದೂರವನ್ನು 13.5 ಸೆಕೆಂಡ್‌ಗಳಲ್ಲಿ ಓಡುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ವ್ಯವಸ್ಥೆ ಆಗಬೇಕಿದೆ. ಈ ನಿಟ್ಟಿನಲ್ಲಿ ಯುವಕರ ಕೌಶಲ ಅಭಿವೃದ್ಧಿ ಮತ್ತು ತರಬೇತಿ ಹಿನ್ನೆಲೆ­ಯಲ್ಲಿ ಅಕಾಡೆಮಿಯು ಸಮಾನ ಮನಸ್ಕರಾದ 11 ಸದಸ್ಯರ ಸಹಕಾರ, ದಾನಿಗಳ ಕೊಡುಗೆಯೊಂದಿಗೆ ಕಳೆದ 4 ವರ್ಷಗಳಿಂದ ಶಿಬಿರಗಳನ್ನು ನಡೆಸಿ ಸುಮಾರು 110 ಯುವಕರಿಗೆ ವೈಜ್ಞಾನಿಕವಾಗಿ ತರಬೇತಿ ನೀಡಿದೆ.

ಕೋಣಗಳ ಸಾಕಣೆ ವೆಚ್ಚ ಮತ್ತು ಓಟಗಾರರ ಸಂಭಾವನೆ ಅತಿ­ಯಾ­ಗುತ್ತಿದ್ದು, ಕಂಬಳ ಸಂಘಟನೆ ಮತ್ತಷ್ಟು ದುಬಾರಿ­ಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ, ಸಹಕಾರ, ಪ್ರೋತ್ಸಾಹ ಅತಿ ಅಗತ್ಯ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಬ್ಬರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಜಾತಿ, ಮತ ಭೇದವಿಲ್ಲದೆ, ಶ್ರೀಮಂತರು, ಬಡವರು ಎಂಬ ತಾರ­ತಮ್ಯ ಇಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಕಂಬಳೋತ್ಸವಗಳಲ್ಲಿ ಕುಳಿತು ಆನಂದಿಸುವ ಕರಾವಳಿ ಕರ್ನಾಟಕದ ಏಕೈಕ ಜನಪದ ಕ್ರೀಡೆ ಕಂಬಳ ತನ್ನ ಮೂಲ ಸ್ವರೂಪದಲ್ಲಿ ಉಳಿಯಬೇಕು. ಅಹಿಂಸಾ­ತ್ಮಕವಾಗಿ ಸಂಘಟಿತವಾಗಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳು ನಡೆಯುತ್ತಿವೆ.

ಕಂಬಳ ಎಂದಾಕ್ಷಣ ಕೋಣಗಳ ಓಟದ ಸ್ಪರ್ಧೆ ಎಂಬ ತಪ್ಪು ಕಲ್ಪನೆ ಇದೆ. ಟಿ.ವಿ ಮಾಧ್ಯಮಗಳಲ್ಲಿ ತೋರಿಸುವ ಹೊಡೆಯುವ ದೃಶ್ಯಗಳು ಇಂದು, ನಿನ್ನೆಯವಲ್ಲ. ಕಂಬಳಗಳಲ್ಲಿ ಈಗ ಸಾಕಷ್ಟು ಸುಧಾ­ರಣೆಗಳಾಗಿವೆ. ಅಹಿಂಸಾತ್ಮಕವಾದ  ಆಚರಣೆಗಾಗಿ ಸಾಕಷ್ಟು ಮಾರ್ಗ­ದರ್ಶಿ ಸೂತ್ರಗಳೊಂದಿಗೆ ಪ್ರಾಣಿ ಕ್ರೌರ್ಯ ತಡೆ ನಿಯಮ 1960 ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಜಿಲ್ಲಾ ಕಂಬಳ ಸಮಿತಿ ಹಾಗೂ ಅಕಾಡೆ­ಮಿಯ ವತಿಯಿಂದ ಎರಡೆರಡು ಪ್ರಾಯೋಗಿಕ ಕಂಬಳಗಳನ್ನು ಹಮ್ಮಿ­ಕೊಂಡು, ಅಹಿಂಸಾತ್ಮಕವಾದ ಕಂಬಳ ಆಚರಣೆಗೆ ಶೇ 100ರಷ್ಟು ಒತ್ತು ನೀಡಲಾಗಿದೆ. ಕಂಬಳ ಸಮಿತಿಯು ಬೆತ್ತವಿ­ಲ್ಲದೆ ಕಂಬಳ ನಡೆಸುವ ನಿರ್ಧಾರದೊಂದಿಗೆ ಕಾರ್ಯ­ಪ್ರವೃತ್ತವಾಗಿದೆ.

ಕೋಣಗಳು ಓಡುವ ಪ್ರಾಣಿಗಳಲ್ಲ ಎನ್ನುವ ವಾದ ಪ್ರಾಣಿ ದಯಾ ಮಂಡಳಿಯದು. ಎಲ್ಲ ಕೋಣಗಳೂ ಓಟದ ಸ್ಪರ್ಧೆಯ ಕೋಣ­ಗಳಾಗಲು ಸಾಧ್ಯವಿಲ್ಲ ಎಂಬುದನ್ನು ನಾವು ಒಪ್ಪುತ್ತೇವೆ. 100 ಕೋಣಗಳಲ್ಲಿ ಒಂದೆರಡು ಕೋಣಗಳನ್ನು ಮಾತ್ರ ಅವುಗಳ ಶಾರೀರಿಕ ರಚನೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಗದ್ದೆ ಬೇಸಾಯದ ಸಮಯದಲ್ಲಿ, ಉಳುಮೆ ಮಾಡುವ ಸಂದರ್ಭ­ದಲ್ಲಿ ಉಳುಮೆಗಾಗಿ ಆಗೊಮ್ಮೆ, ಈಗೊಮ್ಮೆ ಹೊಡೆಯಲೇ­ಬೇಕಾಗುತ್ತದೆ. ಇದು ಕ್ರೌರ್ಯದ ಹೊಡೆತವಲ್ಲ. ಹಿಂಸೆಯ ಉದ್ದೇಶ ಇಲ್ಲಿಲ್ಲ. ಇದು ಶತ ಶತಮಾನಗಳ ಕತೆ. ಕೋಣಗಳಿಗೆ ಪೌಷ್ಟಿಕ ಆಹಾರ ನೀಡಿ ಮಕ್ಕಳಂತೆ ಪ್ರೀತಿಸುತ್ತಾರೆ. ಕೃಷಿ ಸಾವಯವ ಗೊಬ್ಬರ ರೈತನ ಬದುಕನ್ನು ಹಸನುಗೊಳಿಸುತ್ತದೆ. ಹೀಗೆ ನಮ್ಮ ಹಟ್ಟಿಯಲ್ಲಿ ಕುಟುಂಬದ ಸದಸ್ಯರಂತೆ ಸಾಕುವ ಪ್ರಾಣಿಗಳಿಗೆ ಉದ್ದೇಶಪೂರ್ವಕ ಹಿಂಸೆ ಸಾಧ್ಯವೇ?

ದಕ್ಷಿಣ ಕನ್ನಡ, ಉಡುಪಿ ಹಾಗೂ ತುಳು ಸಂಸ್ಕೃತಿಯನ್ನು ಒಳ­ಗೊಂಡ ಕಾಸರಗೋಡಿನಲ್ಲಿ 200ಕ್ಕೂ ಹೆಚ್ಚು ಆರಾಧನಾತ್ಮಕ, ಆಚರ­ಣಾತ್ಮಕ ವಿಧಿ ವಿಧಾನಗಳಿಂದ ಕೂಡಿದ ಸಾಂಪ್ರದಾಯಿಕ ಕಂಬಳ­ಗಳಿವೆ. ಕಂಬಳದ ಬಗ್ಗೆ ಪ್ರಾಥಮಿಕ ಅರಿವೂ ಇಲ್ಲದ ಕರಾಳ ಕಾನೂನು ಈ ನೆಲದ ಸಂಸ್ಕೃತಿಗೆ ಮಾರಕ. ಇದರಿಂದ ಕನಿಷ್ಠ 5 ಸಾವಿರಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗುತ್ತಾರೆ. ನೂರಾರು ಓಟಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದ ಕಂಬಳ ಉತ್ಸವವನ್ನು ಹೆದರಿ ಕದ್ದು ಮುಚ್ಚಿ ಆಚರಿಸುವ ಶೋಚನೀಯ ಸ್ಥಿತಿ ಬಂದೊದಗುವುದು  ಸರಿಯಲ್ಲ.

(ಲೇಖಕರು ವಿಶ್ರಾಂತ ಪ್ರಾಚಾರ್ಯರು, ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯ ಸಂಚಾಲಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT