ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮನ ರಂಜಿಸಿದ ವಿಶೇಷ ಮಕ್ಕಳು

‘ಏನಾಗಲಿ ಮುಂದೆ ಸಾಗು ನೀ’ ಎಂದು ಸೈ ಎನಿಸಿಕೊಂಡ ವಿದ್ಯಾರ್ಥಿಗಳು
Last Updated 15 ನವೆಂಬರ್ 2014, 5:26 IST
ಅಕ್ಷರ ಗಾತ್ರ

ಉಡುಪಿ: ಗಾಯನ, ಕುಣಿತ, ಅಭಿ­ನಯ, ನೃತ್ಯ ರೂಪಕಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ರಸ­ದೌತಣ ನೀಡಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮತ್ತು ಹಂಗಾರಕಟ್ಟೆ–ಸಾಸ್ತಾನದ ರೋಟರಿ ಕ್ಲಬ್‌ನ ಸಹಯೋಗದಲ್ಲಿ ವಿಶೇಷ ಮಕ್ಕಳಿಗಾಗಿ ಶುಕ್ರವಾರ ಏರ್ಪಡಿಸಿದ್ದ  ‘ಸಂಭ್ರಮ–2014’ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಅವರು, ಪ್ರತಿಭಾ ಪ್ರದರ್ಶನಕ್ಕೆ ಸಿಕ್ಕ ಅಪೂರ್ವ ಅವಕಾಶವನ್ನು ಬಳಸಿಕೊಂಡು ನೋಡು­ಗ­ರನ್ನು ಮನರಂಜನೆಯ ಕಡಲಲ್ಲಿ ತೇಲಿಸಿದರು. ಪ್ರತಿಭೆಯಲ್ಲಿ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡುವಂತಿತ್ತು ಅವರ ಶೈಲಿ.

ಒಂದೊಂದು ನೃತ್ಯಕ್ಕೂ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತ­ವಾ­ಯಿತು. ಭಾರೀ ಕರತಾಡನ, ಶಿಳ್ಳೆಯ ಮೂಲಕ ನೋಡುಗರು ಮಕ್ಕಳಿಗೆ ಪ್ರೋತ್ಸಾಹ ನೀಡಿ ಉತ್ಸಾಹ­ವನ್ನು ಇಮ್ಮಡಿಗೊಳಿಸಿದರು. ಉಡುಪಿ ಆಶಾ ನಿಲಯ ವಿಶೇಷ ಶಾಲೆಯ ಮಕ್ಕಳಂತೂ ಕರಾವಳಿಯ ಕಲೆ, ಸಂಸ್ಕೃತಿ, ಧಾರ್ಮಿಕ ಆಚರಣೆ, ಸಾಂಪ್ರದಾಯಿಕ ಕಲೆಗಳನ್ನು ಸುದೀರ್ಘ ನೃತ್ಯರೂಪಕದಲ್ಲಿ ಅನಾವರಣಗೊಳಿಸಿ ಹುಬ್ಬೇರಿಸುವಂತೆ ಮಾಡಿದರು.

ಉಡುಪಿಯ ವೈಭವದ ವಿಟ್ಲಪಿಂಡಿ ಮಹೋತ್ಸವ, ರಥೋತ್ಸವ, ಕರಾ­ವಳಿಯ ಕೋಲ, ಯಕ್ಷಗಾನ, ಹುಲಿ ವೇಷ, ಜನ ಜೀವನ ಎಲ್ಲವನ್ನೂ ಏಕ ಕಾಲಕ್ಕೆ ಅನಾವರಣ ಮಾಡಿದರು. ಅವರ ವೇಷಭೂಷಣಗಳು ನೃತ್ಯಕ್ಕೆ ಮಕ್ಕಳನ್ನು ತಯಾರುಗೊಳಿಸಿದ ಶಿಕ್ಷ­ಕರು ಮತ್ತು ಸಿಬ್ಬಂದಿಯ ಶ್ರದ್ಧೆಯನ್ನು ತೋರಿಸುತ್ತಿತ್ತು.

ಸ್ಪಂದನಾ ವಿಶೇಷ ಶಾಲೆಯ ಮಕ್ಕಳು ಧೂಮಪಾನದಿಂದ ಆಗುವ ದುಷ್ಪರಿ­ಣಾ­ಮಗಳನ್ನು ಅಭಿಯನದ ಮೂಲಕ ತೋರಿಸಿದರು. ಧೂಮಪಾನ ಮಾಡಿ ಬಿಡುವ ಹೊಗೆಯಿಂದ ಅಮಾಯಕರು (ಪ್ಯಾಸಿವ್‌ ಸ್ಮೋಕರ್‌) ಹೇಗೆ ಅನಾ­ರೋಗ್ಯ­ಕ್ಕೀಡಾಗುತ್ತಾರೆ ಎಂಬುದನ್ನೂ ವಿವರಿಸಿದರು. ಮೋಜಿಗಾಗಿ ಸಿಗರೇಟು ಸೇದಿ ಹೊಗೆ ಬಿಟ್ಟ ವ್ಯಕ್ತಿ ಕ್ಯಾನ್ಸರ್‌ನಿಂದ ದುರಂತ ಅಂತ್ಯಕಾಣುವುದನ್ನು ಅಭಿ­ನಯಿಸಿ ಜಾಗೃತಿ ಮೂಡಿಸಿದರು.

ಬೆಳ್ತಂಗಡಿಯ ವೇಣೂರಿನ ಕ್ರಿಸ್ತ­ರಾಜ ನವಚೇತನ ವಿಶೇಷ ಶಾಲೆಯ ಬಾಲಕಿಯರು ‘ಸೂರ್ಯಂಗೂ ನೋಡೋ ಆಸೆ ಮಯ್ಯನ್ನು ಮುಟ್ಟೋ ಆಸೆ ಎಲ್ಲೋದ್ರು ಅಲ್ಲೇ ಬರ್ತಾನೆ’ ಎಂಬಿತ್ಯಾದಿ ಹಾಡಿನ ಸಾಲುಗಳಿಗೆ ಕುಣಿದು ಕುಪ್ಪಳಿಸಿದರು. ‘ಏನಾಗಲಿ ಮುಂದೆ ಸಾಗು ನೀ’ ಎಂದು ಹಾಡಿದ ಹುಡುಗ ಸ್ಫೂರ್ತಿ ತುಂಬಿದರೆ, ‘ನೊಂದರು ಬೆಂದರು ಚಾರ್ಲಿ ಚಾಪ್ಲಿನು ಖುಷಿಯ ಹಂಚಿ ಹೋಗಲಿ­ಲ್ಲವೇ’ ಎಂದು ಗುನುಗಿದ ಬಾಲಕ ನಮಗೆ ನೋವಿದ್ದರೂ ಬೇರೆಯವರಿಗೆ ಖುಷಿ ನೀಡಬೇಕು ಎಂದು ಸಾರಿದ.

ಉಡುಪಿಯ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಶಿರೂರಿನ ದೀನಾ ಸ್ಪೆಷಲ್‌ ಸ್ಕೂಲ್‌, ಆಸರೆ ಸ್ಪೆಷಲ್‌ ಸ್ಕೂಲ್‌ ಮಣಿಪಾಲ, ಕುಂದಾ­ಪುರದ ಚೈತನ್ಯ ವಿಶೇಷ ಶಾಲೆ, ಸ್ಪಂದನಾ ವಿಶೇಷ ಶಾಲೆ, ಕಾರ್ಕಳದ ಚೇತನಾ ವಿಶೇಷ ಶಾಲೆ, ತಲ್ಲೂರಿನ ನಾರಾಯಣ ವಿಶೇಷ ಶಾಲೆ, ಅರು­ಣೋದಯ ಶಾಲೆ, ವಾಗ್ಜೋತಿ ಶಾಲೆ, ಮಂಗಳೂರಿನ ಸಾನಿಧ್ಯ ವಸತಿಯುತ ವಿಶೇಷ ಶಾಲೆ, ಆಳ್ವಾಸ್‌ ಸ್ಪೆಷಲ್‌ ಸ್ಕೂಲ್‌, ಸೇಂಟ್‌ ಆಗ್ನೆಸ್‌ ಸ್ಪೆಷಲ್‌ ಸ್ಕೂಲ್‌, ಸುರತ್ಕಲ್‌ನ ಲಯನ್ಸ್‌ ಸ್ಪೆಷಲ್‌ ಸ್ಕೂಲ್‌ ಮತ್ತು ಭಟ್ಕಳದ ಸ್ನೇಹಾ ವಿಶೇಷ ಶಾಲೆ ಮತ್ತು ತರಬೇತಿ ಕೇಂದ್ರದ ಮಕ್ಕಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT