ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮುಖಿ ಆಶಯಗಳ ‘ಮರಣದಂಡನೆ’

Last Updated 16 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ನನ್ನದು ವ್ಯಾಪಾರಿ ಅಥವಾ ಕಲಾತ್ಮಕ ಚಿತ್ರ ಅಲ್ಲ. ಜನಮುಖಿ ಆಶಯ ಇರುವ, ಜನರನ್ನು ತಲುಪುವ ಸಿನಿಮಾ’ ಎಂದು ಹೇಳಿದ್ದು ಹಿರಿಯ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ.

ಧಾರಾವಾಹಿಯಾಗಿ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ತಮ್ಮದೇ ‘ಮರಣದಂಡನೆ’ ಕಿರು ಕಾದಂಬರಿಯನ್ನು ಈಗ ಅವರು ಸಿನಿಮಾ ರೂಪಕ್ಕೆ ತಂದಿದ್ದಾರೆ. ಇದು ಹಲವು ಆಯಾಮಗಳ ಚಿತ್ರ ಎಂಬುದು ಬರಗೂರರ ವಿಶ್ಲೇಷಣೆ.

ಸಿನಿಮಾಕ್ಕೆ ಈ ಕಥೆಯನ್ನು ಆಯ್ದುಕೊಳ್ಳಲು ಬರಗೂರು ಮೂರು ಕಾರಣಗಳನ್ನು ಕೊಡುತ್ತಾರೆ. ದಲಿತರು–ಅಸ್ಪೃಶ್ಯರು ಅನುಭವಿಸುವ ಅನಾಥಪ್ರಜ್ಞೆ ಕುರಿತು ಡಾ. ಅಂಬೇಡ್ಕರ್ ಅವರು ಗಾಂಧೀಜಿಗೆ ಬರೆದ ಪತ್ರ; ಪುತ್ರ ಸಂಜಯ ದತ್ ಬಂಧನಕ್ಕೀಡಾದಾಗ ಸುನೀಲ್ ದತ್ ವ್ಯಕ್ತಪಡಿಸಿದ ಅಭಿಪ್ರಾಯ ಹಾಗೂ ಭಯೋತ್ಪಾದನೆ ಹೆಸರಿನಲ್ಲಿ ಮುಸ್ಲಿಮರನ್ನು ಬಂಧಿಸಿ, ಬಳಿಕ ಆ ಆರೋಪ ಸಾಬೀತಾಗದೇ ಹೊರಬಂದಾಗ ಅನುಭವಿಸುವ ಪರಕೀಯತೆ– ಇವು ‘ಮರಣದಂಡನೆ’ ಸಿನಿಮಾ ನಿರ್ಮಾಣದ ಹಿಂದಿರುವ ಪ್ರೇರಣೆಗಳು.

ಶ್ರೀಕಾಂತ್ (ಶ್ರೀಕಿ) ಈ ಚಿತ್ರದ ನಾಯಕ. ಶ್ರೀಕಿಗೆ ಅವರ ತಂದೆ ‘ಬರಗೂರು ಮೇಷ್ಟ್ರ ಸಿನಿಮಾದಲ್ಲಿ ಅಭಿನಯಿಸು. ಆದರೆ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯಬೇಡ’ ಎಂದು ತಾಕೀತು ಮಾಡಿದ್ದರಂತೆ! ಇದನ್ನು ಮೆಲುಕು ಹಾಕಿದ ಬರಗೂರು, ಇಂಥದೇ ಇನ್ನೊಂದು ಘಟನೆಯನ್ನು ತೆರೆದಿಟ್ಟರು. ಈ ಹಿಂದಿನ ಸಿನಿಮಾವೊಂದಕ್ಕೆ ಸಂಗೀತ ನಿರ್ದೇಶನ ಮಾಡಲು ಹಂಸಲೇಖ ಅವರನ್ನು ಸಂಪರ್ಕಿಸಿದ ಬರಗೂರು, ‘ಸಂಭಾವನೆ ಎಷ್ಟು ಕೊಡಬೇಕು’ ಎಂದು ಪ್ರಶ್ನಿಸಿದರಂತೆ. ಅದಕ್ಕೆ ಹಂಸಲೇಖ ‘ಸಂಭಾವನೆಗಿಂತ ಭಾವನೆ ಮುಖ್ಯ’ ಎಂದು ಹೇಳಿ ಒಂದು ರೂಪಾಯಿ ಸಂಭಾವನೆ ಪಡೆದಿದ್ದರಂತೆ!

ಜೈಲಿನಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸುವ ಕೆಲಸ ಮಾಡುವ ಮುಸ್ಲಿಮ್ ಯುವಕನ ಕಥೆಯು ‘ಮರಣದಂಡನೆ’ಯಲ್ಲಿದೆ. ಗಲ್ಲಿಗೆ ಹಾಕುವವನೇ ಗಲ್ಲಿಗೇರುವ ಸ್ಥಿತಿ ಎದುರಾದಾಗ ಆತ ಅನುಭವಿಸುವ ತಳಮಳ ಏನು ಎಂಬುದು ಚಿತ್ರಕಥೆ. ‘ಹೀಗಾಗಿಯೇ ಕೊಲೆಯನ್ನು ಕಲೆಯಾಗಿ ಹೇಳುವ ಮಾರ್ಗ ಸಿನಿಮಾ’ ಎಂದು ಹಂಸಲೇಖ ವ್ಯಾಖ್ಯಾನಿಸಿದರು.

ಸಿನಿಮಾದ ಪ್ರಥಮ ಪ್ರದರ್ಶನಕ್ಕೆ ವಾರ್ತಾ ಸಚಿವ ರೋಷನ್ ಬೇಗ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶ್ರೀಕಿ, ರಜನಿ, ಸುಂದರ್‌ರಾಜ್‌, ಸದಾಶಿವ ಬ್ರಹ್ಮಾವರ, ಛಾಯಾಗ್ರಾಹಕ ನಾಗರಾಜ ಆದವಾನಿ ಸೇರಿದಂತೆ ಚಿತ್ರದ ಎಲ್ಲ ತಂತ್ರಜ್ಞರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT