ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮೆಚ್ಚಿದ ‘ಮೈತ್ರಿ’

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

‘ನನ್ನ ಸಿನಿಮಾಗಳನ್ನು ಮಾಸ್ ಪ್ರೇಕ್ಷಕರೇ ಹೆಚ್ಚು ನೋಡುತ್ತಿದ್ದರು. ಹೀಗಾಗಿ ಮೈತ್ರಿ ಬಗ್ಗೆ ಒಂದಷ್ಟು ಅಳುಕು ನನ್ನಲ್ಲಿತ್ತು. ಆದರೆ ಅದೀಗ ಸಂಪೂರ್ಣ ನಿವಾರಣೆಯಾಗಿದೆ’ ಎಂದು ಖುಷಿಯಿಂದ ಹೇಳಿಕೊಂಡರು ಪುನೀತ್ ರಾಜ್‌ಕುಮಾರ್. 

‘ಮೈತ್ರಿ’ಗೆ ಸಿಕ್ಕಿರುವ ಪ್ರಶಂಸೆಯಿಂದ ಅವರೊಬ್ಬರೇ ಅಲ್ಲ; ಚಿತ್ರತಂಡದ ಎಲ್ಲರೂ ಸಂತಸದಲ್ಲಿ ಮುಳುಗಿದ್ದಾರೆ! ಎಲ್ಲ ವರ್ಗದ ಪ್ರೇಕ್ಷಕರು, ಚಿತ್ರರಂಗದ ಹಿರಿಯರು ಹಾಗೂ ಮಾಧ್ಯಮಗಳು ಚಿತ್ರದ ಬಗ್ಗೆ ಒಳ್ಳೆಯ ಮಾತಾಡುತ್ತಿರುವುದು ನಿರ್ದೇಶಕ ಬಿ.ಎಂ. ಗಿರಿರಾಜ್ ಹಾಗೂ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಅದನ್ನು ಹಂಚಿಕೊಳ್ಳಲು ಸುದ್ದಿಮಿತ್ರರನ್ನು ಆಹ್ವಾನಿಸಲಾಗಿತ್ತು.

‘ಇದು ಪುನೀತ್ ಚಿತ್ರ ಅಲ್ಲ. ನಿರ್ದೇಶಕರ ಚಿತ್ರ’ ಎಂದು ಮಾತು ಆರಂಭಿಸಿದರು ಪುನೀತ್. ಈ ಮೊದಲು ಗಿರಿರಾಜ್ ಅವರ ನಿರ್ದೇಶನದ ‘ನವಿಲಾದವರು’

ಚಿತ್ರವನ್ನು ಪುನೀತ್‌ ನೋಡಿ, ತುಂಬ ಇಷ್ಟಪಟ್ಟಿದ್ದರಂತೆ. ‘ಮೈತ್ರಿ ಚಿತ್ರಕಥೆ ಚೆನ್ನಾಗಿದೆ. ನಿರ್ದೇಶಕರಲ್ಲಿ ಬದ್ಧತೆಯಿದೆ. ಹೀಗಾಗಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದ ಅವರಿಗೆ, ಚಿತ್ರದ ಕ್ಲೈಮ್ಯಾಕ್ಸ್‌ ತುಂಬಾ ಹಿಡಿಸಿದೆ.

‘ಸಿನಿಮಾ ಮಾಡುವುದಷ್ಟೇ ನಮ್ಮ ಕೆಲಸ. ಸ್ವೀಕರಿಸುವುದು ಅಥವಾ ಬಿಡುವುದು ಪ್ರೇಕ್ಷಕರ ಕೆಲಸ’ ಎಂದರು ನಿರ್ದೇಶಕ ಗಿರಿರಾಜ್. ‘ಮೈತ್ರಿ’ ನೋಡಿದ ಪ್ರೇಕ್ಷಕರು ‘ಪುನೀತ್‌ರಲ್ಲಿ ಅಣ್ಣಾವ್ರನ್ನು ನೋಡ್ತಿದೀವಿ’ ಎಂದು ಹೇಳಿದ್ದಾರಂತೆ. ‘ಸಮಯದ ಅಭಾವದಿಂದಾಗಿ ಚಿತ್ರದಲ್ಲಿ ಕೆಲವು ಸಣ್ಣಪುಟ್ಟ ದೋಷಗಳು ಉಳಿದುಕೊಂಡಿವೆ. ಅದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಗಿರಿರಾಜ್ ನುಡಿದರು.

‘ಆ ದಿನಗಳು’ ಬಳಿಕ ಒಳ್ಳೆಯ ಪಾತ್ರ ಸಿಕ್ಕಿದ ಸಂತಸ ಅರ್ಚನಾ ಅವರದಾಗಿತ್ತು. ಸಿನಿಮಾಕ್ಕೆ ಮಾಧ್ಯಮಗಳಲ್ಲಿ ಸಿಕ್ಕ ಪ್ರಶಂಸೆ ಅವರಲ್ಲಿ ಬೆರಗು ಮೂಡಿಸಿದೆ. ಮೂವರು ಖ್ಯಾತ ನಟರ ಜತೆ ಅಭಿನಯಿಸಿರುವ ಖುಷಿಯನ್ನು ಬಾಲ ಕಲಾವಿದರಾದ ಜಗದೀಶ್ ಹಾಗೂ ಸಮರ್ಥ ಹಂಚಿಕೊಂಡರು.

ನೃತ್ಯ ನಿರ್ದೇಶನ ಮಾಡಿದ ಹರಿಣಿ ‘ತೆರೆಗೆ ಬರುವವರೆಗೆ ಅದು ನಮ್ಮ ಮೈತ್ರಿಯಾಗಿತ್ತು. ಈಗ ಜನರ ಮೈತ್ರಿ’ ಎಂದರು. ವಿತರಕ ಕಿಶೋರ್ ಉಪಸ್ಥಿತರಿದ್ದರು. ಮಲಯಾಳಂಗೆ ಮೈತ್ರಿ ಡಬ್‌ ಆಗಲಿದೆ. ಮಾರ್ಚ್ ಮೊದಲ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಚಿತ್ರತಂಡದಿಂದ ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT