ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗಿರಲಿ ನೀರು ನಿರ್ವಹಣೆ ಹಕ್ಕು

ಕೆರೆ ಒತ್ತುವರಿ
Last Updated 1 ಮೇ 2015, 19:30 IST
ಅಕ್ಷರ ಗಾತ್ರ

ನೀರು ಸದಾ ಅಧಿಕಾರದ ಮೂಲ ಮತ್ತು ಆ ಕಾರಣಕ್ಕಾಗಿಯೇ ತಾರತಮ್ಯದ ಮೂಲವೂ ಆಗಿದೆ. ಬದುಕಿನ ಆಸರೆಯಾಗಿ ನೀರಿನ

ಮಹತ್ವವನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ನಮ್ಮ ಪೂರ್ವಜರು, ವಿಶೇಷವಾಗಿ ದೇಶಿ ಪರಂಪರೆಗಳನ್ನು ಅನುಸರಿಸಿದವರು ಪ್ರಜಾಸತ್ತೆ ಮತ್ತು ಜನಮತಗಣನೆಯ ಚುನಾವಣೆಗಳ ಆರಂಭಕ್ಕೂ ಮೊದಲು, ಪ್ರಗತಿಪರವಾದ ನೀರಿನ ಜನತಂತ್ರದ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದರು.

ಭಾರತೀಯ ಉಪಖಂಡದಲ್ಲಿ ಸಾವಿರಾರು ವರ್ಷಗಳಿಂದ ಸಮುದಾಯಗಳು ನೀರಿನ ನಿರ್ವಹಣೆಗೆ ಮಹತ್ವ ನೀಡಿದ ದೂರಗಾಮಿ ಚಿಂತನೆಗಳು ಸಮೃದ್ಧವಾಗಿವೆ. ಎಲ್ಲರ ಹಿತಾಸಕ್ತಿಯ ಜೊತೆಗೆ ನೀರಿನ ಹಿತಾಸಕ್ತಿಯನ್ನೂ ರಕ್ಷಿಸುವುದಕ್ಕಾಗಿ ಸಮುದಾಯಗಳು ತಮ್ಮ ಬದುಕನ್ನು ಹೇಗೆ ರೂಪಿಸಿಕೊಂಡಿದ್ದವು ಎಂಬುದಕ್ಕೆ ಪುರಾಣಗಳಲ್ಲಿ ಹಲವು ಪುರಾವೆಗಳು ದಾಖಲಾಗಿವೆ. ಈ ದೃಷ್ಟಿಯಿಂದ ನೋಡಿದರೆ ನೀರನ್ನು ಸಜೀವ ಸಹಜೀವಿ ಎಂಬ ಅರ್ಥದಲ್ಲಿಯೇ ನೋಡಲಾಗಿದೆ ಎಂಬುದು ಸ್ಪಷ್ಟ.

ನೀರನ್ನು ಅವಿಭಾಜ್ಯ ಎಂದು ಪರಿಗಣಿಸಲಾಗುತ್ತಿತ್ತು. ಯಾರಿಗೆ ಸಾಧ್ಯ ಇದೆಯೋ ಅವರು ಇತರರ ಅನುಕೂಲಕ್ಕಾಗಿ ನೀರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸುತ್ತಿದ್ದರು. ಸಾರ್ವಜನಿಕರ ನೀರನ್ನು ಸಂರಕ್ಷಿಸುವುದು ಆಡಳಿತಗಾರನ ಜವಾಬ್ದಾರಿಯಾಗಿತ್ತು.

ನೀರನ್ನು ಸಜೀವ ಎಂದೇ ಪರಿಗಣಿಸಲಾಗುತ್ತಿದ್ದುದರಿಂದ ಹರಿಯುವ ನೀರಿನ ದಿಕ್ಕು ತಪ್ಪಿಸುವುದು ಅಥವಾ ಅಡ್ಡಿ ಉಂಟು ಮಾಡುವುದನ್ನು ತಡೆಯಲಾಗುತ್ತಿತ್ತು ಮತ್ತು ನೀರಿನ ಹರಿವಿನ ದಿಕ್ಕನ್ನು ಬದಲಾಯಿಸುವವರು ಅಥವಾ ಮಲಿನ ಮಾಡುವವರಿಗೆ ಅಥವಾ ಕದಿಯುವವರಿಗೆ ಶಿಕ್ಷೆ ವಿಧಿಸುವ ಕಾನೂನು ವ್ಯವಸ್ಥೆ ಜಾರಿಯಲ್ಲಿತ್ತು. ದಡ ಅಥವಾ ದಂಡೆ ಅತ್ಯಲ್ಪ ಪ್ರಮಾಣದಲ್ಲಿ ವಿರೂಪಗೊಳ್ಳುವುದಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ಕೂಡ ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತಿತ್ತು. ನೀರಿನ ಮೂಲಗಳನ್ನು ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಸಂಖ್ಯೆಯ ಗ್ರಾಮಗಳ ನಡುವಣ ಗಡಿಗಳಾಗಿ ಇರಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಹೆಚ್ಚು ಗ್ರಾಮಗಳಿಗೆ ನೀರು ಲಭ್ಯವಾಗಲಿ ಮತ್ತು ನೀರಿನ ಮೂಲಗಳ ರಕ್ಷಣೆಯ ಹೊಣೆಯನ್ನು ಎಲ್ಲರೂ ವಹಿಸಿಕೊಳ್ಳಲಿ ಎನ್ನುವುದು ಇದರ ಉದ್ದೇಶವಾಗಿತ್ತು.

ಕ್ರಮೇಣ, ವರ್ಗೀಕೃತ ಜಾತಿ ವ್ಯವಸ್ಥೆ ಆರಂಭಗೊಂಡಾಗ ನೀರು ಪ್ರಭಾವಿ ವ್ಯಕ್ತಿಗಳ ಕೈಯಲ್ಲಿ ಅಧಿಕಾರದ ಮೂಲವಾಗಿ ಪರಿವರ್ತನೆಗೊಂಡಿತು. ಕೆಳ ಜಾತಿಯವರೆಂದು ಪರಿಗಣಿಸಲಾದ ಸಮುದಾಯಗಳು ನೀರು ಪಡೆದುಕೊಳ್ಳುವುದಕ್ಕೆ ಈ ಪ್ರಭಾವಿ ಜನರು ನಿರ್ಬಂಧಗಳನ್ನು ಹೇರತೊಡಗಿದರು. ಇದು ಭಾರತದಲ್ಲಿ ಪ್ರಜಾಸತ್ತಾತ್ಮಕವಾದ ನೀರಿನ ಆಡಳಿತದ ಅಂತ್ಯದ ಆರಂಭ. ವಸಾಹತುಶಾಹಿ ಸರ್ಕಾರದ ಶಾಸನಾತ್ಮಕ ಸಮಿತಿಗೆ ನೀರಿನ ಕೇಂದ್ರೀಕೃತ ಅಧಿಕಾರವನ್ನು ನೀಡುವ ಮೂಲಕ ಬ್ರಿಟಿಷರು ಕೂಡ ಇದಕ್ಕೆ ಕೊಡುಗೆ ನೀಡಿದರು. ಇದು ಸ್ಥಳೀಯ ಸಮುದಾಯಗಳಿಗೆ ನೀರಿನ ಲಭ್ಯತೆಯನ್ನು ದೂರ ಮಾಡಿದ್ದು ಮಾತ್ರವಲ್ಲದೆ ಕೆರೆಗಳು, ನದಿಗಳು ಮತ್ತು ತೊರೆಗಳ ನಿರ್ವಹಣೆಯಲ್ಲಿ ಅವರು ಭಾಗವಹಿಸುವುದನ್ನು ಕಾನೂನುಬಾಹಿರಗೊಳಿಸಿತು.

ವಸಾಹತೋತ್ತರ ಜಗತ್ತಿನ ಮೊತ್ತ ಮೊದಲ ಸಂವಿಧಾನವಾಗಿ ಭಾರತದ ಸಂವಿಧಾನ ರೂಪುಗೊಳ್ಳುವುದರೊಂದಿಗೆ ನೀರನ್ನು ಸಾಮಾಜಿಕ ತಾರತಮ್ಯದ ಉಪಕರಣವಾಗಿ ಬಳಸಿಕೊಳ್ಳುವುದನ್ನು ತಡೆಯುವ ಪ್ರಯತ್ನ ನಡೆಯಿತು. ಆದರೆ ನೀರಿನ ನಿರ್ವಹಣೆಯನ್ನು ಪ್ರಜಾಸತ್ತಾತ್ಮಕಗೊಳಿಸುವ ವಿಧಾನಗಳನ್ನು ವಿವರಿಸಲು ಅದು ಯಶಸ್ವಿಯಾಗಲಿಲ್ಲ. ಅದರ ಪರಿಣಾಮ ನಮ್ಮ ಕಣ್ಣ ಮುಂದೆಯೇ ಇದೆ. ದ್ವೇಷ ಸಾಧನೆಯ ರೀತಿಯಲ್ಲಿ ದೇಶದಾದ್ಯಂತ ನಾವು ಕೆರೆಗಳಂತಹ ನೀರಿನ ಮೂಲಗಳನ್ನು ನಾಶ ಮಾಡುತ್ತಿದ್ದೇವೆ.

ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ  ಕೆರೆಗಳನ್ನು ಅತ್ಯಂತ ಭೀಕರವಾಗಿ ನಾಶಗೊಳಿಸುತ್ತಿದ್ದೇವೆ. ಕಟ್ಟಡ ನಿರ್ಮಾಣದ ಲಾಬಿ ಮಾತ್ರವಲ್ಲ, ಸರ್ಕಾರ ಕೂಡ ಕೆರೆಗಳನ್ನು ವಸತಿ ಪ್ರದೇಶಗಳಾಗಿ ಪರಿವರ್ತಿಸುವ ಮೂಲಕ ಕೆರೆಗಳ ಒತ್ತುವರಿಗೆ ಉತ್ತೇಜನ ನೀಡುತ್ತಿದೆ.

ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ಬಿಲ್ಡರ್‌ಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳ ಸ್ಥಳೀಯ ಮಟ್ಟದ ಮೈತ್ರಿ ನಿರ್ಭೀತಿಯಿಂದ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿದೆ ಮತ್ತು ನೂರಾರು ಕೆರೆಗಳನ್ನು ನಾಶ ಮಾಡುತ್ತಿದೆ. ಕೋಲಾರದಂತಹ ಸಮೃದ್ಧವಾದ ನೀರಿನ ಮೂಲಗಳನ್ನು ಹೊಂದಿದ್ದ ಜಿಲ್ಲೆಗಳು ಈಗ ಮರುಭೂಮಿಯಾಗುವ ಅಂಚಿನಲ್ಲಿವೆ. ನೀರಿನ ನಿರ್ವಹಣೆಯ ನಿಜವಾದ ವಿಷಯದಿಂದ ಜನರ ದಾರಿತಪ್ಪಿಸಿ, ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಸರ್ಕಾರವು ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತು. ಆದರೆ ಅದಕ್ಕೆ ಶಕ್ತಿ ತುಂಬುವುದಕ್ಕಾಗಿ ಯಾವುದೇ ಕಾನೂನನ್ನು ರಚಿಸಲಿಲ್ಲ. ಇದರಿಂದಾಗಿ, ಕೆರೆಗಳನ್ನು ಅಭಿವೃದ್ಧಿಪಡಿಸುವ ಹೊಣೆ ಇರುವ ಸರ್ಕಾರಿ ಇಲಾಖೆಯೊಂದು ಇದೆ ಎಂದು ತೋರುತ್ತದೆ. ಆದರೆ ಒತ್ತುವರಿ ಮತ್ತು ಕೆರೆ ನಾಶದ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಈ ಇಲಾಖೆಗೆ ಯಾವ ಅಧಿಕಾರವೂ ಇಲ್ಲ.

ವಿಶ್ಲೇಷಣಾತ್ಮಕವಾಗಿ ಹೇಳುವುದಾದರೆ ನಮ್ಮ ಸಮಸ್ಯೆಗೆ ಇಲ್ಲಿ ಎರಡು ಆಯಾಮಗಳಿವೆ. ಮೊದಲನೆಯದಾಗಿ, ನೀರಿನ ಮೂಲಗಳ ಕೇಂದ್ರೀಕೃತ ನಿಯಂತ್ರಣ ವಿಶ್ವಾಸಾರ್ಹವಲ್ಲದ ಮತ್ತು ಬೇಜವಾಬ್ದಾರಿಯುತ ಸರ್ಕಾರಿ ಇಲಾಖೆಯ ಕೈಯಲ್ಲಿ ಇದೆ. ಇದರಿಂದಾಗಿ, ಕೆರೆಗಳ ನಿರ್ವಹಣೆಯಿಂದ ಸ್ಥಳೀಯ ಸಮುದಾಯವನ್ನು ಉದ್ದೇಶಪೂರ್ವಕವಾಗಿ ದೂರ ಇರಿಸಲಾಗಿದೆ. ಪರಿಣಾಮವಾಗಿ, ಕೆರೆಗಳು ಸಮುದಾಯದ ಸಾಮಾನ್ಯ ಸೊತ್ತು ಎಂಬ ಸ್ವರೂಪವನ್ನೇ ಕಳೆದುಕೊಂಡವು ಮತ್ತು ನೀರಿನ ಮೂಲಗಳ ಮೇಲೆ ಸ್ವಾಮ್ಯವನ್ನು ಸಾಧಿಸುವ ನಾಗರಿಕ ಸಮಾಜದ ಎಲ್ಲ ಅವಕಾಶಗಳೂ ಮುಚ್ಚಿ ಹೋದವು.

ಇತ್ತೀಚಿನ ಸಾರಕ್ಕಿ ಕೆರೆ ಪ್ರಕರಣವನ್ನು ಗಮನಿಸಬಹುದು. ಭಾರಿ ಪ್ರಮಾಣದ ಒತ್ತುವರಿ ಮತ್ತು ಬಿಬಿಎಂಪಿ ಗುತ್ತಿಗೆದಾರರಿಂದ ತ್ಯಾಜ್ಯ ಸುರಿಯಲು ಕೆರೆಯ ಬಳಕೆಯತ್ತ ನೀರಿನ ಹಕ್ಕಿಗಾಗಿ ಜನರ ಹೋರಾಟ ಕೈತೋರುತ್ತದೆ. ನೀರಿನ ಹಕ್ಕಿನ ಹೋರಾಟಗಾರರು ಸಂಬಂಧಪಟ್ಟ ಪ್ರಾಧಿಕಾರಗಳ ನಿರ್ಲಕ್ಷ್ಯ ಮತ್ತು ಬೆದರಿಕೆಯನ್ನು ಎದುರಿಸಬೇಕಾಯಿತು.

ಕೆರೆಗಳ ಅಭಿವೃದ್ಧಿಯ ಹೊಣೆ ಹೊತ್ತಿರುವ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಪ್ರತಿಕ್ರಿಯೆಯನ್ನೇ ನೀಡದಿದ್ದಾಗ ಮತ್ತು ಕೆರೆಯು ಬಹುತೇಕ ನಾಶವಾಗುವ ಹಂತ ತಲುಪಿದಾಗ ಹೋರಾಟಗಾರರಿಗೆ ಹೈಕೋರ್ಟ್‌ನಲ್ಲಿ ದಾವೆ ಹೂಡುವುದಲ್ಲದೆ ಬೇರೆ ದಾರಿಯೇ ಇರಲಿಲ್ಲ. ನೀರು ತಲೆಮಾರುಗಳ ನಡುವೆ ಹಂಚಿಹೋಗಬೇಕಾದ ವಿಷಯ. ಸಾರ್ವಜನಿಕ ಸೊತ್ತಿನ ನಿರ್ವಾಹಕನಾಗಿ (ಟ್ರಸ್ಟಿ)  ಭವಿಷ್ಯದ ತಲೆಮಾರುಗಳಿಗೆ ಕೂಡ ನೀರನ್ನು ರಕ್ಷಿಸಿ ಇಡುವ ಕೆಲಸದಲ್ಲಿ ಸಮುದಾಯಗಳನ್ನು ಭಾಗಿಯಾಗಿಸುವುದು ಸರ್ಕಾರದ ಹೊಣೆಯಾಗಿದೆ.

ನ್ಯಾಯಾಲಯದ ಬಲವಂತದಿಂದಾಗಿ ಮಾತ್ರ ಸರ್ಕಾರ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗಿದೆ. ಕೆಲವು ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಂಡಿವೆ ಎಂಬುದು ಸತ್ಯ. ಈ ಮೊದಲೇ ಪ್ರಸ್ತಾಪಿಸಿದ ಅಪವಿತ್ರ ಮೈತ್ರಿಯ ಸಂತ್ರಸ್ತರು ಇವರು. ಈ ಅಪವಿತ್ರ ಮೈತ್ರಿಯನ್ನು ಪೋಷಿಸಿಕೊಂಡು ಬಂದ ತಪ್ಪಿಗೆ ಸರ್ಕಾರ ಈ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು. ರಾಜ್ಯದ ಇತರೆಡೆಗಳಲ್ಲಿ ಇರುವ ಹಾಗೆಯೇ ಸಾರಕ್ಕಿ ಕೆರೆಯಲ್ಲಿ ಕೂಡ ಮುಖ್ಯ ಒತ್ತುವರಿದಾರರಲ್ಲಿ ದೊಡ್ಡ ಬಿಲ್ಡರ್‌ಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ದೇವಾಲಯಗಳು ಸೇರಿವೆ. ಕಣ್ಣು ಮುಚ್ಚಿ ಕುಳಿತ ಸರ್ಕಾರದಿಂದಾಗಿ ವಂಚನೆಗೆ ಒಳಗಾದ ನಿಜವಾದ ಸಂತ್ರಸ್ತರು ತಮ್ಮ ಹಕ್ಕುಗಳಿಗಾಗಿ ಈಗ ತಮ್ಮದೇ ಆದ ಹೋರಾಟ ನಡೆಸಬೇಕಿದೆ. 

ನೀರಿನ ಅಂತರ-ತಲೆಮಾರು ಸ್ವರೂಪವನ್ನು ರಕ್ಷಿಸುವುದು ಮತ್ತು ಪ್ರಭಾವಿ ಒತ್ತುವರಿದಾರರ ಹಿತ ಕಾಯುವುದು ಈ ಎರಡರ ನಡುವೆ ಕಾನೂನು ಅತ್ಯಂತ ಸ್ಪಷ್ಟವಾಗಿ ಮೊದಲನೆಯದರ ಪರವಾಗಿದೆ. ಸಾರಕ್ಕಿ ಕೆರೆ ಒಂದು ಆರಂಭ ಮಾತ್ರ. ರಾಜ್ಯದಾದ್ಯಂತ ಇರುವ ಕೆರೆಗಳ ಒತ್ತುವರಿ ತೆರವುಗೊಳಿಸುವ ಕೆಲಸ ಇನ್ನು ಆರಂಭವಾಗಲಿದೆ. ಜಿಲ್ಲಾ ಮಟ್ಟದಲ್ಲಿ ಕೆರೆಗಳ ರಕ್ಷಣೆಗೆ ಸಮಿತಿಗಳನ್ನು ರಚಿಸುವ ಮತ್ತು ಕೆರೆಗಳ ಅಭಿವೃದ್ಧಿಗೆ ಸ್ಥಳೀಯ ಮಟ್ಟದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂಬುದನ್ನು ಕರ್ನಾಟಕದಲ್ಲಿ ನಡೆದ ಹಲವು ಅಭಿಯಾನಗಳು ಖಚಿತಪಡಿಸಿವೆ.

ನೀರಿನ ನಿರ್ವಹಣೆಯನ್ನು ಪ್ರಜಾಸತ್ತಾತ್ಮಕಗೊಳಿಸಿ ಚಾರಿತ್ರಿಕ ತಪ್ಪುಗಳನ್ನು ಸರಿಪಡಿಸುವುದು ಮತ್ತು ಆ ಮೂಲಕ ಸ್ಥಳೀಯ ಸಮುದಾಯಗಳು ನೀರಿನ ಮೂಲಗಳ ಸ್ವಾಮ್ಯವನ್ನು ಹೊಂದುವಂತೆ ಮಾಡುವುದು ಹೆಚ್ಚು ಮುಖ್ಯವಾಗಿದೆ. ಜೊತೆಗೆ ನೀರಿನ ಮೂಲಗಳನ್ನು ರಕ್ಷಿಸುವುದಕ್ಕೆ, ಪೋಷಿಸುವುದಕ್ಕೆ ಸ್ಥಳೀಯ ಸಮುದಾಯಗಳಿಗೆ ಶಾಸನಾತ್ಮಕ ಅಧಿಕಾರವನ್ನೂ ಒದಗಿಸಬೇಕಿದೆ. ಇದಲ್ಲದೆ ಬೇರೆ ಯಾವ ದಾರಿಯೂ ಇಲ್ಲ.

*
ರಾಜಧಾನಿಯಲ್ಲಿ 7 ಕೆರೆಗಳ ಒತ್ತುವರಿಗೆ ಸಂಬಂಧಿಸಿ ಬೆಂಗಳೂರು ಮಹಾನಗರ ಕಾರ್ಯಪಡೆಯಲ್ಲಿ (ಬಿಎಂಟಿಎಫ್‌) 9 ಎಫ್‌.ಐ.ಆರ್‌  ದಾಖಲಾಗಿವೆ.  ಜಿಲ್ಲಾಡಳಿತ ದೂರಿತ್ತರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡುವುದಿಲ್ಲ.
-ಸುನೀಲ್‌ ಕುಮಾರ್‌, ಎಡಿಜಿಪಿ, ಬಿಎಂಟಿಎಫ್‌

ಇಷ್ಟಿವೆ ನಮ್ಮ ಕೆರೆಗಳು 
25 ಸಾವಿರ ರಾಜ್ಯದಲ್ಲಿನ ಒಟ್ಟು ಕೆರೆಗಳು,
2789 ಬಿಬಿಎಂಪಿ ವ್ಯಾಪ್ತಿಯ ಕೆರೆಗಳು,
596 ಬಿಡಿಎ ವ್ಯಾಪ್ತಿಯ ಕೆರೆಗಳು,
100 ಕೆರೆಗಳು ಪೂರ್ಣ ಕಣ್ಮರೆ 
ಆಧಾರ: ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ, ಇಎಸ್‌ಜಿ

(ಲೇಖಕ ನೀರಿನ ಬಗೆಗಿನ ಸಂಶೋಧಕ ಮತ್ತು ರಾಜಕೀಯ ಹೋರಾಟಗಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT