ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಪಾತ್ರ ಮುಖ್ಯ

ತಂಬಾಕು ವಿವಾದ
Last Updated 8 ಮೇ 2015, 19:30 IST
ಅಕ್ಷರ ಗಾತ್ರ

ಪ್ರಾಣಕ್ಕೆ ಎರವಾಗುವ ತಂಬಾಕು ಉತ್ಪನ್ನಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಇಲ್ಲಿ ವಿವರಿಸಿದ್ದಾರೆ.

* ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ ಅನುಷ್ಠಾನ ರಾಜ್ಯದಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ?
ಕಾಯ್ದೆ ಜಾರಿಗೆ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಿದೆ.  ಇದಕ್ಕೆ ಪೊಲೀಸರ ನೆರವನ್ನೂ ಪಡೆಯಲಾಗುತ್ತಿದೆ. ಕೆಲವು ಸ್ವಯಂ ಸೇವಾ ಸಂಸ್ಥೆಗಳು ಇಲಾಖೆಗೆ ಸಹಕಾರ ನೀಡುತ್ತಿವೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಗಳನ್ನು  ಕೈಗೊಳ್ಳಲಾಗುತ್ತಿದೆ. ಇದು ಕೇವಲ ಸರ್ಕಾರದಿಂದ ಮಾತ್ರ ಆಗುವ ಕೆಲಸವಲ್ಲ. ಸಾರ್ವಜನಿಕರ ಭಾಗವಹಿಸುವಿಕೆಯೂ ಮುಖ್ಯ.

*ರಾಜ್ಯದಲ್ಲಿ ಗುಟ್ಕಾ ನಿಷೇಧಿಸಿದ್ದರೂ ಕಂಪೆನಿಗಳು ಅಡಿಕೆ ಪ್ಯಾಕ್‌ ಜೊತೆ  ತಂಬಾಕನ್ನು ಪ್ರತ್ಯೇಕವಾಗಿ ನೀಡುತ್ತಿವೆ. ಏನು ಕ್ರಮ ಕೈಗೊಂಡಿದ್ದೀರಿ?
ಕಾನೂನು ಅಡಿ ಇರುವ ಅವಕಾಶವನ್ನು ಬಳಸಿಕೊಂಡು ನಮ್ಮ ಮಿತಿಯಲ್ಲಿ ಕ್ರಮ ಕೈಗೊಂಡಿದ್ದೇವೆ. ಸದ್ಯ, ಈ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಕೋರ್ಟ್‌ ನೀಡುವ ತೀರ್ಪಿನಂತೆಯೇ ಕ್ರಮ ಕೈಗೊಳ್ಳುತ್ತೇವೆ.

*ಶಾಲಾ ಕಾಲೇಜು ಸುತ್ತಲಿನ 100 ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂಬ ನಿಯಮಇದ್ದರೂ ರಾಜಾರೋಷವಾಗಿ ಮಾರಾಟ ನಡೆಯುತ್ತಿದೆಯಲ್ಲ?
ಇಂತಹ ಪ್ರಕರಣಗಳು ಗಮನಕ್ಕೆ ಬಂದಾಗ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ದಿನದ 24 ಗಂಟೆಯೂ  ಇವುಗಳ ಮೇಲೆ ನಿಗಾ ಇಡುವುದು ಕಷ್ಟವಾಗುತ್ತವೆ. ಶಾಲೆಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಿಸುವಲ್ಲಿ ಶಿಕ್ಷಕರು, ಮಕ್ಕಳ ಪೋಷಕರು, ಸಾರ್ವಜನಿಕರು ಪ್ರಮುಖ ಪಾತ್ರ ವಹಿಸಬೇಕು. ಮಾರಾಟ ಮಾಡುವುದು ಗಮನಕ್ಕೆ ಬಂದರೆ ಅವರು ಇಲಾಖೆಗೆ ಅಥವಾ ಪೊಲೀಸರಿಗೆ  ಮಾಹಿತಿ ನೀಡಲಿ. ತಕ್ಷಣ ನಾವು ಕ್ರಮ ಕ್ರಮ ಕೈಗೊಳ್ಳುತ್ತೇವೆ.

*ಕಾರ್ಪೊರೇಟ್‌ ಕಂಪೆನಿಗಳಲ್ಲಿ, ವಾಣಿಜ್ಯ, ವಸತಿ ಸಂಕೀರ್ಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕ ಧೂಮಪಾನ ವಲಯ ಇರಬೇಕು ಎಂಬ ನಿಯಮ ಎಷ್ಟರ ಮಟ್ಟಿಗೆ ಜಾರಿಯಲ್ಲಿದೆ?
ವಿಮಾನ ನಿಲ್ದಾಣದಂತಹ ಸ್ಥಳಗಳಲ್ಲಿ ಪ್ರತ್ಯೇಕ ಧೂಮಪಾನ ವಲಯಗಳಿವೆ.  ಖಾಸಗಿ ವಲಯದಲ್ಲಿ ಆಯಾ ಸಂಸ್ಥೆಗಳೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಧೂಮಪಾನ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿರುವಾಗ ಪ್ರತ್ಯೇಕ ವಲಯ ಮಾಡಿ, ಧೂಮಪಾನಕ್ಕೆ ಅವಕಾಶ ಕೊಡುವುದು ಎಷ್ಟು ಸರಿ ಎಂಬುದು ನನ್ನ ಪ್ರಶ್ನೆ.

*ಬೀಡಿಗೆ ತೆರಿಗೆಯಿಂದ  ವಿನಾಯ್ತಿ ನೀಡಲು ಕಾರಣ ಏನು?
ಬೀಡಿಯನ್ನು  ‌‌ಬಡವರೇ ಹೆಚ್ಚಾಗಿ ಸೇದುವುದರಿಂದ, ಅವರಿಗೆ ಹೊರೆಯಾಗದಿರಲಿ ಎಂಬ ಉದ್ದೇಶಕ್ಕೆ ತೆರಿಗೆ ಹಾಕುತ್ತಿಲ್ಲ. ಈಗ ಏಕಾಏಕಿ ತೆರಿಗೆ ವಿಧಿಸುವುದು ಕಷ್ಟ. ಹಂತಹಂತವಾಗಿ ತೆರಿಗೆ ಹಾಕುವ ಬಗ್ಗೆ ಯೋಚನೆ ಮಾಡಬೇಕಿದೆ. ಈ ವಿಚಾರದ ಬಗ್ಗೆ ಇಲಾಖೆ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು  ನಡೆದಿವೆ.

*ತಂಬಾಕು ಉತ್ಪನ್ನಗಳ ಮೇಲಿನ ನಿಯಂತ್ರಣದಿಂದ ರಾಜ್ಯದ ಬೀಡಿ ಉದ್ಯಮ ಹಾಗೂ ಅದನ್ನೇ ನಂಬಿರುವ ಲಕ್ಷಾಂತರ ಜನರಿಗೆ ತೊಂದರೆಯಾಗುವುದಿಲ್ಲವೇ?
ಒಂದು ಕಡೆ ಸಿಗರೇಟ್‌ ಮೇಲೆ ನಿಯಂತ್ರಣ ಹೇರಿ, ಮತ್ತೊಂದು ಕಡೆ ಬೀಡಿಗೆ ಪ್ರೋತ್ಸಾಹ ನೀಡಲು ಸಾಧ್ಯವಿಲ್ಲ.  ಪ್ರತಿಯೊಂದಕ್ಕೂ ಪರ್ಯಾಯ ವ್ಯವಸ್ಥೆ ಇರುತ್ತದೆ. ಬೀಡಿ ಉದ್ಯಮವನ್ನು ಅವಲಂಬಿಸಿರುವವರು ಬೇರೆ ದಾರಿಯನ್ನು ಹುಡುಕಿಕೊಳ್ಳುವುದು ಅನಿವಾರ್ಯ.  ಗಾರ್ಮೆಂಟ್ಸ್‌ ಮತ್ತಿತರ ಉದ್ಯಮದತ್ತ ಅವರು ಹೊರಳಬಹುದು. 

ಉತ್ತಮ ಗಳಿಕೆ ಇರುವ ಯಾವ ಕೆಲಸವನ್ನೂ  ಮಾಡಲು ಜನರು ಸಿದ್ಧರಿದ್ದಾರೆ. ಬೀಡಿ ಉದ್ಯಮದಲ್ಲಿ ಹೆಚ್ಚು ಪ್ರಯೋಜನಗಳಿವೆ ಎಂಬ ಕಾರಣಕ್ಕೆ ಅದನ್ನು ನೆಚ್ಚಿಕೊಂಡಿದ್ದಾರೆ. ಬೀಡಿ ಕಟ್ಟುವುದರಿಂದ ಬರುವ ಲಾಭದ ಪ್ರಮಾಣ ಕಡಿಮೆಯಾದರೆ, ಅವರು ತನ್ನಿಂತಾನೆ ಬೇರೊಂದು ಉದ್ಯಮದತ್ತ ಮುಖ ಮಾಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT