ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ವಿಜ್ಞಾನ ಹಬ್ಬ

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯು ಕೆಎಲ್ಇ ಸಂಸ್ಥೆಯ ಎಸ್. ನಿಜಲಿಂಗಪ್ಪ ಕಾಲೇಜಿನ ಸಹಯೋಗದೊಂದಿಗೆ ಜುಲೈ ೨೫ರಿಂದ ೨೭ರವರೆಗೆ ಮೂರು ದಿನಗಳ ರಾಜ್ಯ ಮಟ್ಟದ ‘ಜನರ ವಿಜ್ಞಾನ ಹಬ್ಬ’ವನ್ನು ಸಂಘಟಿಸಿದೆ. ಪ್ರಾಚೀನ ಭಾರತದ ಮಹಾನ್ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞರಾದ, ಬಿಜಾಪುರದ ಭಾಸ್ಕರಾಚಾರ್ಯರ ೯೦೦ನೇ ಜನ್ಮ ದಿನದ ಸಂದರ್ಭದಲ್ಲಿ ಈ ಹಬ್ಬವನ್ನು ಏರ್ಪಡಿಸಲಾಗಿದೆ.

ಪದ್ಮ ಭೂಷಣ ಪ್ರೊ.ಯು.ಆರ್.ರಾವ್ (ಹೆಸರಾಂತ ಖಗೋಳ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷರು) ಈ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ನಾಗರಿಕರವರೆಗೆ ಎಲ್ಲ ವಯೋಮಾನದ ಜನರೂ ಸಂತೋಷದಿಂದ ಈ  ವಿಜ್ಞಾನ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮಾಡುವ, ತನ್ಮೂಲಕ ವೈಜ್ಞಾನಿಕ ದೃಷ್ಟಿಕೋನವನ್ನು ಸಮಾಜದಲ್ಲಿ ರೂಢಿಸುವ ಉದ್ದೇಶವನ್ನು ಈ ಹಬ್ಬವು ಹೊಂದಿದೆ.

ಹಬ್ಬದಲ್ಲಿ ಏನೇನಿದೆ?
* ಸುಲಭವಾಗಿ ದೊರೆಯುವ ವಸ್ತುಗಳಿಂದ ವಿಜ್ಞಾನ ಮಾದರಿಗಳು, ಪೇಪರ್ ಮಾದರಿಗಳು (ಕಿರಿಗಾಮಿ)
* ಪ್ರತಿಷ್ಠಿತ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಾದ ಇಸ್ರೋ, ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಥಿಯರಿಟಿಕಲ್ ಸೈನ್ಸಸ್, ಕರ್ನಾಟಕ ರಿನ್ಯೂಯಬಲ್ ಎನರ್ಜಿ ಡೆವೆಲಪ್‌ಮೆಂಟ್ ಲಿಮಿಟೆಡ್, ಭಾರತೀಯ ವಾಯುಮಾನ ಸಂಸ್ಥೆ, ಭಾರತೀಯ ಖಭೌತವಿಜ್ಞಾನ ಸಂಸ್ಥೆ ಮತ್ತು ಪ್ಲಾನೆಟೇರಿಯಂಗಳಿಂದ ವಿಜ್ಞಾನ ಮಾದರಿಗಳು ಮತ್ತು ಪ್ರದರ್ಶನಗಳು
* ಸಂಚಾರಿ ತಾರಾಲಯ ಮತ್ತು ಸಾಮಾನ್ಯ ಆರೋಗ್ಯ ತಿಳಿವಳಿಕೆ ಶಿಬಿರ
* ಪ್ರಮುಖವಾದ, ಸಾಮಾಜಿಕವಾಗಿ ಪ್ರಸ್ತುತವಾದ ವಿಷಯಗಳಾದ ಜೈವಿಕವಾಗಿ ಮಾರ್ಪಡಿಸಿದ ಆಹಾರ, ಶಕ್ತಿ ಬಿಕ್ಕಟ್ಟು, ಆಹಾರ ಕಲಬೆರಕೆ, ವಿಜ್ಞಾನವನ್ನು ಕಲಿಸುವ ಬಗೆ ಇತ್ಯಾದಿ ೧೫ಕ್ಕೂ ಹೆಚ್ಚು ವಿಷಯಗಳನ್ನು ಕುರಿತು ವಿಚಾರಗೋಷ್ಠಿಗಳು ಮತ್ತು ತಜ್ಞರಿಂದ ಉಪನ್ಯಾಸಗಳು
* ಐನ್‌ಸ್ಟೇನ್, ಡಾರ್ವಿನ್, ಮೇರಿ ಕ್ಯೂರಿ, ಭಾಸ್ಕರಾಚಾರ್ಯ ಇತ್ಯಾದಿ ಮಹಾನ್ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಕುರಿತು ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ

ಪ್ರೌಢಶಾಲಾ ಆಡಳಿತ ಮಂಡಳಿಗಳು ವಿಜ್ಞಾನ ಮಾದರಿ ಪ್ರದರ್ಶನವನ್ನು ವೀಕ್ಷಿಸಿ, ಪ್ರಯೋಜನ ಪಡೆಯಲು ವಿದ್ಯಾರ್ಥಿಗಳನ್ನು ಕಳುಹಿಸಿಕೊಡಬಹುದು. ಹಾಗೆಯೇ, ವಿವಿಧ ಪ್ರೌಢಶಾಲೆ, ಪದವಿಪೂರ್ವ, ಪದವಿ ಶಿಕ್ಷಕರು,  ಪದವಿ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ವಿಚಾರಗೋಷ್ಠಿಗಳ ಪ್ರಯೋಜನ ಪಡೆಯಬಹುದು.

ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯು ವಿಜ್ಞಾನ, ಸಂಸ್ಕೃತಿ ಮತ್ತು ವೈಜ್ಞಾನಿಕ ದೃಷ್ಟಿಕೋನಕ್ಕೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತ ಬಂದಿದೆ. ವಿಜ್ಞಾನ ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ, ಪ್ರಾಧ್ಯಾಪಕರಿಗೆ ಇದರಿಂದ ಅನುಕೂಲವಾಗಲಿದೆ.

ಬೆಂಗಳೂರು, ಗುಲ್ಬರ್ಗ, ಧಾರವಾಡ, ರಾಯಚೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ೧೨ ಜಿಲ್ಲೆಗಳಲ್ಲಿ ಕಾರ್ಯನಿರತವಾಗಿರುವ ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯು ವಿಜ್ಞಾನ ಶಿಬಿರಗಳು, ಕಾರ್ಯಾಗಾರಗಳು, ವಿಚಾರ ಗೋಷ್ಠಿಗಳು, ವಿಜ್ಞಾನ ನಾಟಕಗಳು, ವಿಜ್ಞಾನ ವಸ್ತು ಪ್ರದರ್ಶನಗಳು, ಪವಾಡ ಬಯಲು ಮತ್ತು ಆಹಾರ ಕಲಬೆರಕೆ ಪತ್ತೆ ಕಾರ್ಯಕ್ರಮಗಳು, ಆಕಾಶ ವೀಕ್ಷಣೆ ಮತ್ತು ಪರಿಸರ ಸಂರಕ್ಷಣೆ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ. ಜನರ ವಿಜ್ಞಾನ ಹಬ್ಬವೂ ಇಂತಹ ಪ್ರಯತ್ನಗಳಲ್ಲಿ ಒಂದು.

ವೆಬ್‌ಸೈಟ್‌: http://psf.breakthrough-india.org.
ಮೊಬೈಲ್:  94820 85869

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT