ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ: ಬದಲಾಗುತ್ತಿರುವ ಚಿತ್ರ

ಧಾರ್ಮಿಕ ಸಮುದಾಯಗಳ ನಡುವಣ ಫಲವಂತಿಕೆಯಲ್ಲಿನ ವ್ಯತ್ಯಾಸ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದೆ
Last Updated 2 ಸೆಪ್ಟೆಂಬರ್ 2015, 19:46 IST
ಅಕ್ಷರ ಗಾತ್ರ

ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ  ಧರ್ಮಾಧಾರಿತ ಜನಸಂಖ್ಯೆಯ ಮಾಹಿತಿಯ ಬಿಡುಗಡೆ ಬೇರೆ ಯಾವುದೇ ಮಾಹಿತಿಗಿಂತ ವಿವಿಧ ವಲಯಗಳ ಗಮನವನ್ನು ಹೆಚ್ಚು ಸೆಳೆದುಕೊಳ್ಳುತ್ತದೆ. ಕಳೆದ  ಎರಡು ಅಥವಾ ಮೂರು ದಶಕಗಳಲ್ಲಿ ಜಾತಿ ಹಾಗೂ ಧಾರ್ಮಿಕ  ಅಸ್ಮಿತೆಗಳ ಧ್ರುವೀಕರಣ ಹಾಗೂ ಪುನರ್ ಪ್ರತಿಪಾದನೆಯ ನಂತರ ಇದು ವಿಶೇಷವಾಗಿ ಎದ್ದು ಕಾಣಿಸುವ ಅಂಶ. 2011ರ ಜನಗಣತಿಯ ಧರ್ಮಾಧಾರಿತ ಮಾಹಿತಿಯನ್ನು ಕಳೆದ ವಾರ ಬಹಿರಂಗಪಡಿಸಿದ ಕೂಡಲೇ ಮಾಧ್ಯಮಗಳಲ್ಲಿ ಪ್ರಕಟವಾದ ವಿವಿಧ ಶೀರ್ಷಿಕೆಗಳು ಇಂತಹ ಮಾಹಿತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ತಿಳಿದುಕೊಳ್ಳುವುದರ ಬದಲಿಗೆ ತಮಗೆ ಬೇಕಾದಂತೆ  ವ್ಯಾಖ್ಯಾನಿಸಿಕೊಳ್ಳಲು  ಹಾಗೂ ನಿಲುವುಗಳನ್ನು ತಳೆಯುವುದಕ್ಕೆ  ಹೇಗೆ  ಬಳಕೆಯಾಗಿವೆ ಅಥವಾ ದುರ್ಬಳಕೆಯಾಗಿವೆ ಎಂಬುದಕ್ಕೆ ಸಾಕ್ಷಿಗಳಂತೆ ಕಂಡುಬಂದಿವೆ.

ಈ ವಿಚಾರದ ಸೂಕ್ಷ್ಮತೆಯನ್ನು ಪರಿಗಣಿಸಿದಲ್ಲಿ 2011ರ  ಜನಗಣತಿಯ  ಧಾರ್ಮಿಕ ಅಂಕಿ ಅಂಶಗಳನ್ನು ಜಾಗರೂಕತೆಯಿಂದ ಅಧ್ಯಯನ ನಡೆಸಬೇಕಾಗುತ್ತದೆ ಮತ್ತು ವಿಶ್ಲೇಷಿಸಬೇಕಾಗುತ್ತದೆ. ಈ ಮೂಲಕ ಸಮಾಜದಲ್ಲಿ ಸುಳ್ಳು ಮಾಹಿತಿ ಹಬ್ಬಿ, ಸೌಹಾರ್ದತೆಗೆ ಧಕ್ಕೆಯಾಗುವುದಕ್ಕೆ ಈ ಜನಗಣತಿ ವಿಚಾರ ಬಳಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಜನಗಣತಿಯ ಮಾಹಿತಿ ಪ್ರಕಾರ, 2001ರಿಂದ 2011ರ ನಡುವೆ ಹಿಂದೂಗಳ ಜನಸಂಖ್ಯೆ 13.9 ಕೋಟಿಯಷ್ಟು ಹೆಚ್ಚಳವಾಗಿದೆ.

ಅಂದರೆ 82.8 ಕೋಟಿಯಿಂದ 96.6 ಕೋಟಿಯಷ್ಟಾಗಿದೆ. ಮುಸ್ಲಿಮರ ಜನಸಂಖ್ಯಾ ಪ್ರಮಾಣ ಇದೇ ಅವಧಿಯಲ್ಲಿ 3.4 ಕೋಟಿಯಷ್ಟು ಹೆಚ್ಚಿದೆ. ಅಂದರೆ ಮುಸ್ಲಿಮರ ಜನಸಂಖ್ಯೆ 13.8 ಕೋಟಿಯಿಂದ 17.2 ಕೋಟಿಗೆ ಹೆಚ್ಚಳವಾಗಿದೆ. ಇತರ ಧಾರ್ಮಿಕ ಗುಂಪುಗಳ ಒಟ್ಟು ಜನಸಂಖ್ಯೆ ಹೆಚ್ಚಳ ಒಂದು ಕೋಟಿಗಿಂತ ಕಡಿಮೆ. ಇದೆಲ್ಲ ನೋಡಿದಾಗ ಭಾರತದಲ್ಲಿ ಎರಡು ಪ್ರಮುಖ ಧಾರ್ಮಿಕ ಗುಂಪುಗಳಷ್ಟೇ ಬಹುದೊಡ್ಡದಾಗಿ ಗಮನ ಸೆಳೆಯುತ್ತವೆ. ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಯಲ್ಲಿನ ವ್ಯತ್ಯಾಸ ತೋರಿಸುವ ಹೆಚ್ಚಳ ಧಾರ್ಮಿಕ ವಿಚಾರದೊಂದಿಗೆ ಸೇರಿಕೊಂಡು ವಿಶೇಷ ಗಮನ ಸೆಳೆಯುತ್ತದೆ.

ಜನಗಣತಿಯ ಮಾಹಿತಿಯಂತೆ 2001–11ರ ದಶಕದಲ್ಲಿ ಹಿಂದೂ ಜನಸಂಖ್ಯೆಯಲ್ಲಿ ಶೇ 16.8ರಷ್ಟು ಹೆಚ್ಚಳವಾಗಿದ್ದರೆ, ಮುಸ್ಲಿಂ ಜನಸಂಖ್ಯೆಯ ಪ್ರಮಾಣ ಶೇ 24.7ರಷ್ಟು ಹೆಚ್ಚಳವಾಗಿದೆ. ಜನಗಣತಿ ಮಾಹಿತಿ ಬಿಡುಗಡೆಯಾದ ತಕ್ಷಣ ಈ ಅಂಶವೇ ಮಾಧ್ಯಮಗಳಲ್ಲಿ ಹೆಚ್ಚು ಬಿಂಬಿತವಾಯಿತು. ಒಂದು ದಶಕದಲ್ಲಿನ ಜನಸಂಖ್ಯೆ ಹೆಚ್ಚಳ ಪ್ರಮಾಣವನ್ನಷ್ಟೇ ಗಮನಿಸಿದಾಗ ಈ ಸಂಖ್ಯೆಯ ಹಿಂದಿರುವ ಸತ್ಯ ಮರೆಮಾಚಿ ಹೋಗುತ್ತದೆ. 1991–2001ರ ದಶಕದಲ್ಲಿ ಹಿಂದೂ ಮತ್ತು ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರ ಕ್ರಮವಾಗಿ ಶೇ 19.9 ಮತ್ತು ಶೇ 29.5ರಷ್ಟಾಗಿತ್ತು.

ಅಂದರೆ 1991–2001 ಮತ್ತು 2001–2011ರ ನಡುವೆ ಹಿಂದೂಗಳ ಜನಸಂಖ್ಯೆ ಬೆಳವಣಿಗೆ ದರ ಶೇ 3ರಷ್ಟು ಕುಸಿತ ಕಂಡಿದ್ದರೆ, ಇದೇ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಬೆಳವಣಿಗೆ ದರ ಶೇ 5ರಷ್ಟು ಕುಸಿತ ಕಂಡಿದೆ. ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ದರ ಹಿಂದೂ ಜನಸಂಖ್ಯೆಯ ಬೆಳವಣಿಗೆ ದರಕ್ಕಿಂತ ವೇಗವಾಗಿ ಕುಸಿಯುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಇದನ್ನೇ ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, ಕೆಲವು ವರ್ಷಗಳಿಂದೀಚೆಗೆ ಎರಡೂ ಸಮುದಾಯಗಳ ಬೆಳವಣಿಗೆ ದರದಲ್ಲಿ ಒಂದು ರೀತಿಯ ಸಮಾನ ಲಕ್ಷಣ ಕಂಡುಬಂದಿದೆ.

ದೇಶದಲ್ಲಿ ವ್ಯತ್ಯಾಸದ ಜನನ ಪ್ರಮಾಣವೇ ಜನಸಂಖ್ಯಾ ಬೆಳವಣಿಗೆ ದರಕ್ಕೆ ಮುಖ್ಯ ಕಾರಣ. ಆದರೆ ಜನನ ಪ್ರಮಾಣದ ಕುಸಿತಕ್ಕೂ, ಜನಸಂಖ್ಯೆಯಲ್ಲಿನ ಬೆಳವಣಿಗೆ ದರದ ಬದಲಾವಣೆಗೂ ವ್ಯತ್ಯಾಸ ಇರುವುದನ್ನು ಗಮನಿಸಬೇಕು. ಯಾವುದೇ ಎರಡು ಗುಂಪುಗಳ ನಡುವೆ ಜನಸಂಖ್ಯಾ ಬೆಳವಣಿಗೆ ದರದಲ್ಲಿ ವ್ಯತ್ಯಾಸ ಇದೆ ಎಂದಾದರೆ ಒಂದೋ, ಎರಡೋ ದಶಕದಷ್ಟು ಸಣ್ಣ ಅವಧಿಯಲ್ಲಿ ಅದನ್ನು ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ಬೆಳವಣಿಗೆಯಲ್ಲಿನ ವ್ಯತ್ಯಾಸ ಹಿರಿದಾಗುತ್ತಿದೆಯೇ, ಕಿರಿದಾಗುತ್ತಿದೆಯೇ ಎಂಬುದನ್ನು ಕಂಡುಕೊಳ್ಳುವುದೇ ಮುಖ್ಯವಾಗುತ್ತದೆ.

ಭಾರತದಲ್ಲಿ ಹಿಂದೂ–ಮುಸ್ಲಿಂ ಜನಸಂಖ್ಯಾ ಬೆಳವಣಿಗೆ ದರ ವ್ಯತ್ಯಾಸ ಕಿರಿದಾಗುತ್ತಿದೆ ಎಂಬುದು ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ. ಅಂದರೆ ಎರಡೂ ಸಮುದಾಯಗಳಲ್ಲಿ ಫಲವಂತಿಕೆಯ ಬದಲಾವಣೆ ಪ್ರಕ್ರಿಯೆ ಪ್ರಬಲವಾಗಿಯೇ ನಡೆಯುತ್ತಿರುವುದು ಗೊತ್ತಾಗುತ್ತದೆ. ಧರ್ಮಾಧಾರಿತ ಜನಸಂಖ್ಯೆಯ ಫಲವಂತಿಕೆ ಕುರಿತ ಅಂಕಿ ಅಂಶ ಸ್ವಲ್ಪ ಅಪ್ರಸ್ತುತವಾಗಿದ್ದರೂ ಎಲ್ಲಾ ಧರ್ಮಾಧಾರಿತ ಸಮುದಾಯಗಳಲ್ಲಿ ಫಲವಂತಿಕೆ ಪ್ರಮಾಣ ತ್ವರಿತವಾಗಿ ಕುಸಿಯುತ್ತಿರುವುದನ್ನು ಈ ಅಂಕಿಅಂಶಗಳು ಸ್ಪಷ್ಟವಾಗಿ ಸೂಚಿಸುತ್ತವೆ.

ಉದಾಹರಣೆಗಾಗಿ ನೋಡುವುದಾದರೆ, ಹಿಂದೂಗಳಲ್ಲಿ ಫಲವಂತಿಕೆ ಪ್ರಮಾಣ 1992–93ರಿಂದ 2005–06ರ ನಡುವೆ 0.7ರಷ್ಟು (3.3ರಿಂದ 2.6) ಕುಸಿತ ಕಂಡಿದ್ದರೆ, ಇದೇ ಅವಧಿಯಲ್ಲಿ ಮುಸ್ಲಿಮರಲ್ಲಿ ಫಲವಂತಿಕೆ ಪ್ರಮಾಣ 1ರಷ್ಟು (4.4ರಿಂದ 3.4) ಇಳಿಕೆ ಆಗಿದೆ. ಈ ಅಂಕಿ ಅಂಶಗಳಿಂದ ಭಾರತದಲ್ಲಿನ ವಿವಿಧ ಗುಂಪುಗಳ ನಡುವಿನ ಜನಸಂಖ್ಯಾ ಪ್ರಮಾಣದಲ್ಲಿನ ವ್ಯತ್ಯಾಸ ಕಿರಿದಾಗುತ್ತಿದೆ ಎಂಬುದು ಸಾಬೀತಾಗುತ್ತದೆ. ವಿವಿಧ ಧಾರ್ಮಿಕ ಸಮುದಾಯಗಳಲ್ಲಿನ ಫಲವಂತಿಕೆಯಲ್ಲಿನ ವ್ಯತ್ಯಾಸ ವಿವಿಧ ರಾಜ್ಯಗಳಲ್ಲಿ ಭಿನ್ನವಾಗಿರುವುದು ಕೆಲವು ಕುತೂಹಲಕಾರಿ ಅಂಶಗಳನ್ನು ಬಯಲುಗೊಳಿಸುತ್ತದೆ.

ಧಾರ್ಮಿಕ ಸಮುದಾಯಗಳಲ್ಲಿನ ಫಲವಂತಿಕೆಯ ವ್ಯತ್ಯಾಸಗಳನ್ನು ಗಮನಿಸಿದಾಗ ಈ ಹಿಂದೆ ಕೆಲವರು ವಾದಗಳನ್ನು ಮಂಡಿಸಿದಂತೆ  ‘ಮುಸ್ಲಿಂ  ಫಲವಂತಿಕೆ’ ( ಅಧಿಕ)  ಎಂಬುದೇನೂ ಇಲ್ಲ. ಉದಾಹರಣೆಗೆ, ಕೇರಳದಲ್ಲಿನ ಮುಸ್ಲಿಮರ ಫಲವಂತಿಕೆ ಪ್ರಮಾಣ ಉತ್ತರ ಭಾರತದ ರಾಜ್ಯಗಳಲ್ಲಿನ ಹಿಂದೂಗಳ ಫಲವಂತಿಕೆ ಪ್ರಮಾಣಕ್ಕಿಂತ ತುಂಬ ಕಡಿಮೆ ಇದೆ. ಕೇರಳದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ನಾಲ್ಕನೇ ಒಂದರಷ್ಟು ಇದೆ. ದಶಕದ ಹಿಂದೆ ಕೇರಳದ ಮುಸ್ಲಿಮರಲ್ಲಿ ಫಲವಂತಿಕೆ ಪ್ರಮಾಣ 2.5 ಮಕ್ಕಳಷ್ಟು ಇತ್ತು. ಅದೇ ಸಮಯದಲ್ಲಿ ದೇಶದಲ್ಲಿನ ಒಟ್ಟಾರೆ ಫಲವಂತಿಕೆ ಪ್ರಮಾಣ 2.6ರಷ್ಟಿತ್ತು.

ಆಗ ಉತ್ತರ ಪ್ರದೇಶದಲ್ಲಿ ಹಿಂದೂಗಳ ಫಲವಂತಿಕೆ ಪ್ರಮಾಣ 3.7ರಷ್ಟಿತ್ತು. ಇದರ ಜತೆಗೆ ಇನ್ನಷ್ಟು ಆಸಕ್ತಿದಾಯಕ ವಿಚಾರಗಳೂ ಧಾರ್ಮಿಕ ಗುಂಪುಗಳ ಜನಸಂಖ್ಯಾ ಪ್ರಮಾಣದ ವಿಚಾರದೊಂದಿಗೆ ಸೇರಿಕೊಳ್ಳುತ್ತವೆ. ಮೊದಲನೆಯದಾಗಿ ಯಾವ ಪ್ರದೇಶದಲ್ಲಿ, ದೇಶದ ಯಾವ ಭಾಗದಲ್ಲಿ ಜನ ನೆಲೆಸಿದ್ದಾರೆ ಎಂಬ ವಿಚಾರ.  ಜನನ ಪ್ರಮಾಣವನ್ನು ಇಳಿಸುವಲ್ಲಿ ಸಾಮಾಜಿಕ–ಆರ್ಥಿಕ ಬದಲಾವಣೆಗಳೂ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಪ್ರಮುಖವಾಗಿ ಮಹಿಳಾ ಶಿಕ್ಷಣ ಜನನ ಪ್ರಮಾಣ ಕಡಿಮೆಗೊಳಿಸುವಲ್ಲಿ ಭಾರಿ ದೊಡ್ಡ ಕೊಡುಗೆ ನೀಡುತ್ತಿದೆ.

ಮುಸ್ಲಿಂ ಮಹಿಳೆಯರಲ್ಲಿ ಶಿಕ್ಷಣದ ಕೊರತೆ ಇರುವುದು ಈಗಾಗಲೇ ತಿಳಿದ ವಿಚಾರವಾಗಿದ್ದು, ಇದೊಂದು ಗಂಭೀರ ನೀತಿ ನಿರೂಪಣಾ ವಿಚಾರವೂ ಹೌದು. ಯಾವುದೇ ಧಾರ್ಮಿಕ ಗುಂಪು ಅಥವಾ ಜಾತಿಗಳಲ್ಲಿ ಇಂತಹ ಕೊರತೆ ಇರುವಷ್ಟು ಸಮಯವೂ ಜನನ ಪ್ರಮಾಣ ಅಧಿಕವಾಗಿಯೇ ಇರುತ್ತದೆ. ಯಾವುದೇ ಬದಲಾವಣೆಯನ್ನು ವಿಶ್ಲೇಷಿಸುವ ಮೊದಲು ಐತಿಹಾಸಿಕ ಮತ್ತು ಸಾಂಸ್ಕೃತಿಕ ಸನ್ನಿವೇಶಗಳನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಕೆಲವು ಗುಂಪುಗಳು ಏಕೆ ಅಧಿಕ ಅಥವಾ ಕಡಿಮೆ ಜನಸಂಖ್ಯಾ ಬೆಳವಣಿಗೆ ಹೊಂದಿರುತ್ತವೆ, ಅವುಗಳಲ್ಲಿ ಏಕೆ ಅಧಿಕ ಅಥವಾ ಕಡಿಮೆ ಫಲವಂತಿಕೆ ಪ್ರಮಾಣ ಇರುತ್ತದೆ ಎಂಬುದಕ್ಕೆ ಜನಗಣತಿ ಅಥವಾ ಸಮೀಕ್ಷೆಗಳಲ್ಲಿ ಸ್ಪಷ್ಟ ಉತ್ತರ ಸಿಗುವುದಿಲ್ಲ.

ಈ ಆಯಾಮಗಳನ್ನೂ ಗಣನೆಗೆ ತೆಗೆದುಕೊಳ್ಳದ ಹೊರತು ಕೆಲವು ಸಮುದಾಯಗಳ ವರ್ತನೆಗಳ ಬಗ್ಗೆ ಬಲವಾದ ತೀರ್ಮಾನಕ್ಕೆ ಬರುವುದು ಅಪಾಯಕಾರಿಯಾಗುತ್ತದೆ ಮತ್ತು ಅದೊಂದು ಹಾದಿ ತಪ್ಪಿಸುವಂತಹ ಕ್ರಮವೂ ಆಗಿಬಿಡುತ್ತದೆ. ಹೀಗಾಗಿ ವಿವಿಧ ಏಜೆನ್ಸಿಗಳು ಸಂಗ್ರಹಿಸಿದ ಅಂಕಿ ಅಂಶಗಳ ಬಗ್ಗೆ ಬದಲಾವಣೆಯ ಹಾದಿಗಳನ್ನು ವಿವಿಧ ಕೋನಗಳಿಂದ ಪರಿಶೀಲನೆ ನಡೆಸಬೇಕೇ ಹೊರತು ಪ್ರಸ್ತುತ ವಸ್ತುಸ್ಥಿತಿಯ ಮಟ್ಟವನ್ನಷ್ಟೇ ನೋಡಿಕೊಂಡು ತೀರ್ಮಾನಿಸುವುದಲ್ಲ.

ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಣ ಜನಸಂಖ್ಯಾ ಬೆಳವಣಿಗೆಯ ವ್ಯತ್ಯಾಸ ಗಮನಿಸುವುದಾದರೆ, 2001–11ರ ಅವಧಿಯಲ್ಲಿ ಆಗಿರುವ ವ್ಯತ್ಯಾಸ  ಅತ್ಯಲ್ಪ.  2001-11ರ ಅವಧಿಯಲ್ಲಿ ಹಿಂದೂಗಳ ಜನಸಂಖ್ಯಾ ಬೆಳವಣಿಗೆ ದರ ಶೇ 0.7ರಷ್ಟು ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರ ಶೇ 0.8ರಷ್ಟು ಏರಿಕೆಯಾಗಿದೆ. ವಿವಿಧ ಜನಸಮುದಾಯಗಳ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಈ ಬಗೆಯ ಸಣ್ಣಪುಟ್ಟ ವ್ಯತ್ಯಾಸಗಳು ಮುಂದೆಯೂ ಆಗುವ ಸಾಧ್ಯತೆಗಳಿವೆ.

ವಿವಿಧ ಗುಂಪುಗಳ ನಡುವೆ ಜನಸಂಖ್ಯೆಯ ಪಾಲಿನ ವಿಚಾರದಲ್ಲಿ ಭವಿಷ್ಯದಲ್ಲೂ ಇಂತಹ ಸಣ್ಣಪುಟ್ಟ ಬದಲಾವಣೆಗಳು ನಡೆಯಲಿವೆ. ಧಾರ್ಮಿಕ ಪಂಗಡಗಳು ಮಾತ್ರವಲ್ಲ, ಜಾತಿ ಗುಂಪುಗಳು, ಪ್ರಾದೇಶಿಕ, ರಾಜ್ಯ ಮಟ್ಟದಲ್ಲೂ ಇಂತಹ ವ್ಯತ್ಯಾಸಗಳು ಗೋಚರಿಸಬಹುದು. ಮುಸ್ಲಿಮರ ಜನಸಂಖ್ಯೆ ತೀವ್ರ ಸ್ವರೂಪದಲ್ಲಿ ಹೆಚ್ಚಿ ದೇಶದಲ್ಲಿ ಮುಂದೆ ಮುಸ್ಲಿಮರೇ ಬಹುಸಂಖ್ಯಾತರಾಗುತ್ತಾರೆ ಎಂದು ಆತಂಕ ಸೃಷ್ಟಿಸುವುದೇನಿದ್ದರೂ ಆಧಾರರಹಿತ ಉತ್ಪ್ರೇಕ್ಷೆ ಎನ್ನಲೇಬೇಕು. ಮುಂಬರುವ ದಶಕಗಳಲ್ಲೂ ಈ ನಿಟ್ಟಿನಲ್ಲಿ ತೀವ್ರ ಸ್ವರೂಪದ ಬದಲಾವಣೆ ಆಗುವ ಸಾಧ್ಯತೆ ಇಲ್ಲ.

ಜನಸಂಖ್ಯಾ ಬೆಳವಣಿಗೆ ದರ ವಿಚಾರದಲ್ಲಿ ದೇಶದಲ್ಲಿ ಎಲ್ಲ  ಭಾಗದಲ್ಲೂ ಒಂದೇ ರೀತಿಯ ಚಿತ್ರಣ ಇಲ್ಲ. ದೇಶದ ಕೇಂದ್ರ ಮತ್ತು ಉತ್ತರ ಭಾಗದಲ್ಲಿ ಜನಸಂಖ್ಯಾ ಪ್ರಮಾಣ ಅಧಿಕ ಇದ್ದರೆ, ದಕ್ಷಿಣದ ರಾಜ್ಯಗಳಲ್ಲಿ ಇತರೆಡೆಗೆ ಹೋಲಿಸಿದರೆ ಕಡಿಮೆ ಜನಸಂಖ್ಯಾ ಬೆಳವಣಿಗೆ ದರ ಕಾಣಿಸಿದೆ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಕೆಲವು ಧಾರ್ಮಿಕ ಸಮುದಾಯಗಳು ಹೆಚ್ಚಿನ ಪ್ರಮಾಣದಲ್ಲಿ ನೆಲೆಸಿರುವುದು ಸಹ  ಜನಸಂಖ್ಯಾ ಬೆಳವಣಿಗೆಯಲ್ಲಿ  ವ್ಯತ್ಯಾಸ ಕಾಣಲು ಕಾರಣವಾಗಿರುತ್ತದೆ. ಉದಾಹರಣೆಗೆ, ದೇಶದ ಒಟ್ಟು ಮುಸ್ಲಿಂ ಜನಸಂಖ್ಯೆಯ ಶೇ 25ರಷ್ಟು ಮಂದಿ ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ಜೀವಿಸುತ್ತಿದ್ದಾರೆ. ಶೇ 10ರಷ್ಟು ಮಂದಿ ಬಿಹಾರದಲ್ಲಿ ನೆಲೆಸಿದ್ದಾರೆ.

ಈ ಎರಡು ರಾಜ್ಯಗಳು ದೇಶದಲ್ಲೇ ಅತ್ಯಧಿಕ ಜನಸಂಖ್ಯಾ ಬೆಳವಣಿಗೆ ದರವನ್ನು ಹೊಂದಿವೆ. ಇಲ್ಲಿ ಮುಸ್ಲಿಮರ ಜನಸಂಖ್ಯೆಯಷ್ಟೇ ಅಲ್ಲ, ಹಿಂದೂಗಳ ಜನಸಂಖ್ಯಾ ಬೆಳವಣಿಗೆ ಪ್ರಮಾಣವೂ ಅಧಿಕವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಭಾರತವು ಈಚಿನ ದಿನಗಳಲ್ಲಿ ಜನಸಂಖ್ಯಾ ಬೆಳವಣಿಗೆ ಪ್ರಮಾಣಗಳಲ್ಲಿ ತ್ವರಿತ ಬದಲಾವಣೆಯನ್ನು ಕಾಣುತ್ತಿದೆ. ದೇಶದ ಸದ್ಯದ ಜನನ ಪ್ರಮಾಣ ದರ 2.3ರಷ್ಟಿದ್ದು, ಇದು ಉದ್ದೇಶಿತ ಗುರಿಯಾದ ಒಂದು ಮಹಿಳೆಗೆ ಎರಡು ಮಗು ಗುರಿಗೆ ಸಮೀಪದಲ್ಲೇ ಇದೆ.

ದೇಶದಲ್ಲಿ ಫಲವಂತಿಕೆ ಬದಲಾವಣೆ ಪ್ರಮಾಣ ಕೆಲವು ಸಮುದಾಯಗಳಿಗೆ ಸೀಮಿತವಾಗಿ, ಕೆಲವು ಸಮುದಾಯಗಳು ಇದರಿಂದ ಹೊರಗುಳಿಯುವುದು ಕಳವಳದ ಸಂಗತಿಯೇನೋ ನಿಜ. ಆದರೆ ಜನಗಣತಿಯ ಅಂಕಿ ಅಂಶ  ಮತ್ತು ಇತರ ಫಲವಂತಿಕೆಯ ಅಂದಾಜುಗಳನ್ನು ಮಾಡಿದಾಗ, ಧರ್ಮ, ಜಾತಿ ಅಥವಾ ಪ್ರಾದೇಶಿಕವಾಗಿ ಗಮನಿಸಿದರೂ ದೇಶದಲ್ಲಿ ಫಲವಂತಿಕೆ ಪ್ರಮಾಣ ಎಲ್ಲ ಸಮುದಾಯಗಳಲ್ಲೂ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ.

ಹೀಗಾಗಿ ದೇಶದಲ್ಲಿನ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಬದಲಾವಣೆ ಕಾಣಿಸಿದ್ದು, ಮುಂದಿನ ದಿನಗಳಲ್ಲಿ ಬೆಳವಣಿಗೆ ದರ ಒಂದೇ ರೀತಿಯಲ್ಲಿ  ದಾಖಲಾಗುವಂತಾಗಿದೆ. ಜನಸಂಖ್ಯೆ ಬೆಳವಣಿಗೆ ದರದಲ್ಲಿ ಭವಿಷ್ಯದ ಸವಾಲು ಎಂದರೆ ಹೆಚ್ಚುತ್ತಿರುವ ಯುವಜನರ ಸಂಖ್ಯೆ. ಈ ಬೆಳವಣಿಗೆಯನ್ನು ಧರ್ಮ, ಜಾತಿಯ ಸಂಕುಚಿತ ಗಡಿಗಳನ್ನು ಮೀರಿ ಅನುಕೂಲಕ್ಕೆ ಬಳಸಿಕೊಳ್ಳುವುದು ಮುಖ್ಯ. ಜನಸಂಖ್ಯಾ ಹೆಚ್ಚಳವನ್ನು ಧಾರ್ಮಿಕ ದೃಷ್ಟಿಯಿಂದ ನೋಡಿ ತಪ್ಪಾಗಿ ವಿಶ್ಲೇಷಿಸಿ ದ್ವೇಷಕ್ಕೆ ದಾರಿ ಮಾಡಿಕೊಡುವುದರ ಬದಲಿಗೆ, ವಾಸ್ತವದ ನೆಲೆಗಟ್ಟಿನಿಂದ ನೋಡಿ, ಅದನ್ನು ದೇಶದ ಕಲ್ಯಾಣಕ್ಕಾಗಿ ಹಾಗೂ ಸೌಹಾರ್ದ ಏರ್ಪಡಿಸುವುದಕ್ಕೆ ಬಳಸಿಕೊಳ್ಳುವುದು ಮುಖ್ಯ. 

ಲೇಖಕ, ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್‌ನ ಜನಸಂಖ್ಯೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ

editpagefeedback@prajavani.co.in

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT