ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ನೇಹಿ ಆಡಳಿತಕ್ಕೆ ಆನ್‌ಲೈನ್‌ ತಂತ್ರಾಂಶ

Last Updated 22 ಮಾರ್ಚ್ 2016, 5:46 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆ ಆಡಳಿತವನ್ನು  ಮತ್ತಷ್ಟು ಜನಸ್ನೇಹಿ ಯಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಕುಂದುಕೊರತೆ ನಿವಾರಣಾ ಆನ್‌ಲೈನ್‌ ತಂತ್ರಾಂಶವನ್ನು ಜಾರಿಗೊಳಿ ಸಲಾಗಿದ್ದು, ನಾಗರಿಕರು ಇದರ ಸದುಪ ಯೋಗಪಡಿಸಿಕೊಳ್ಳಬೇಕು ಎಂದು ಪಾಲಿಕೆ ಉಪ ಆಯುಕ್ತ ರವೀಂದ್ರ ಹೇಳಿದರು.

ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಸೋಮವಾರ ನೂತನವಾಗಿ ಅಭಿವೃದ್ಧಿಪಡಿಸಲಾದ ಸಾರ್ವಜನಿಕ ಕುಂದುಕೊರತೆ ನಿವಾರಣಾ ತಂತ್ರಾಂಶ ಉಪಯೋಗ ಕುರಿತು ಪಾಲಿಕೆ ಮೇಯರ್‌ ಎಚ್‌.ಬಿ.ಗೋಣೆಪ್ಪ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಪೌರಾಡಳಿತ ನಿರ್ದೇಶನಾಲಯವು ಸಾರ್ವಜನಿಕರು ದೂರುಗಳನ್ನು ದಾಖಲಿಸಲು ನೂತನ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದೆ. ಜತೆಗೆ, ರಾಜ್ಯ ಮಟ್ಟದಲ್ಲಿ ಸಹಾಯವಾಣಿಯನ್ನು ಆರಂಭಿಸಿದ್ದು, ನಾಗರಿಕರು 080– 23108108 ಸಂಖ್ಯೆಗೆ ಕರೆಮಾಡಿ ಬೆಳಿಗ್ಗೆ 6ರಿಂದ 8ರವರೆಗೆ ಮಾಹಿತಿ ಪಡೆಯಬಹುದು. ಸಾಮಾಜಿಕ ಜಾಲ ತಾಣವಾದ ವಾಟ್ಸ್‌ಆ್ಯಪ್‌(82777 77728), ಫೇಸ್‌ಬುಕ್‌, ಟ್ವಿಟರ್ ಮೂಲಕವೂ ಕುಂದುಕೊರತೆ ದಾಖಲಿ ಸಬಹುದು ಎಂದರು.

ಕಾರ್ಯನಿರ್ವಹಣೆ ಹೇಗೆ: ಆನ್‌ ಲೈನ್‌ನಲ್ಲಿ ಸಾರ್ವಜನಿಕರು ದಾಖಲಿಸುವ ದೂರುಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ರವಾನೆಯಾಗಲಿದೆ. ಅಧಿಕಾರಿಗಳು ನಿರ್ದಿಷ್ಟ ಅವಧಿಯಲ್ಲಿ ದೂರನ್ನು ಆಲಿಸಿ ಬಗೆಹರಿಸಲೇಬೇಕು. ಇಲ್ಲವಾದರೆ, ಕೆಳಹಂತದ ಅಧಿಕಾರಿ ಗಳಿಂದ ಮೇಲಧಿಕಾರಿಗಳಿಗೆ ದೂರು ಹೋಗಲಿದೆ.

ನೋಡೆಲ್‌ ಅಧಿಕಾರಿ ಪ್ರಶಾಂತ್‌ ಮಾತನಾಡಿ, ಈಗಾಗಲೇ ಪೌರಾಡಳಿತ ನಿರ್ದೇಶನಾಲಯವು ಸುಧಾರಣಾ ಕೋಶದ ಮೂಲಕ ನಿರ್ಮಾಣ, ವ್ಯಾಪಾರ, ಜಲನಿಧಿ, ಇ–ಆಸ್ತಿ ಹಾಗೂ ಜನಹಿತ ತಂತ್ರಾಂಶಗಳನ್ನು ಒದಗಿಸಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕಾದ ಜವಾಬ್ದಾರಿ ಅಧಿಕಾರಿ ಗಳ ಹಾಗೂ ಜನಪ್ರತಿನಿಧಿಗಳ ಮೇಲಿದೆ ಎಂದರು.

ಜನಹಿತ ತಂತ್ರಾಂಶ: ಪಾಲಿಕೆಯ ವೆಬ್‌ಸೈಟ್‌ನಲ್ಲಿರುವ ಸಿಟಿಜನ್‌ ಆನ್‌ಲೈನ್‌ ಸರ್ವೀಸ್‌ ವಿಭಾಗದಲ್ಲಿರುವ ‘ಜನಹಿತ’ ತಂತ್ರಾಂಶದ ಮೂಲಕ ಸಾರ್ವಜನಿಕರು ಆನ್‌ಲೈನ್‌ ಅಥವಾ ಮೊಬೈಲ್‌ ಮೂಲಕವೂ ಕುಂದು ಕೊರತೆಗಳನ್ನು ದಾಖಲಿಸಬಹುದು. ದೂರುಗಳು ವಿವಿಧ ಹಂತಗಳಲ್ಲಿ ಪರಿಶೀಲನೆಗೊಳಪಡಲಿವೆ. ದೂರಿನ ಸ್ಥಿತಿಗತಿಗಳ ಬಗ್ಗೆಯೂ ದೂರುದಾರರು ಸಂದೇಶ ಪಡೆಯಬಹುದು.

ನಿರ್ಮಾಣ ತಂತ್ರಾಂಶ: ನಗರ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಿಸಲು ನಾಗರಿಕರು ಪಾಲಿಕೆಗೆ ಅಲೆಯಬೇಕಿಲ್ಲ. ಆನ್‌ಲೈನ್‌ನಲ್ಲೇ ಕಟ್ಟಡ ನಿರ್ಮಾಣಕ್ಕೆ ಅರ್ಜಿ ಹಾಕಬಹುದು. ಅರ್ಜಿಯು ವಿವಿಧ ಹಂತಗಳಲ್ಲಿ ತಪಾಸಣೆಗೊಳಪಟ್ಟು ಅಂತಿಮವಾಗಿ ಪಾಲಿಕೆ ಆಯುಕ್ತರಿಂದ ಪರವಾನಗಿ ದೊರೆಯಲಿದೆ.

ವ್ಯಾಪಾರ ತಂತ್ರಾಂಶ: ನಗರದಲ್ಲಿ ಹೊಸ ಉದ್ದಿಮೆ ಸ್ಥಾಪಿಸಲು ಉದ್ದಿಮೆದಾರರಿಗೆ ವ್ಯಾಪಾರ ತಂತ್ರಾಂಶ ಹೆಚ್ಚು ಸಹಕಾರಿಯಾಗಲಿದೆ. ಉದ್ಯಮದ ಸ್ವರೂಪ, ಕಾಲಾವಧಿ ಹಾಗೂ ಅಗತ್ಯ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸ ಬೇಕು. ಅರ್ಜಿದಾರರು ಅಗತ್ಯ ದಾಖಲೆಗಳನ್ನು ಜೆಪಿಜೆ ಅಥವಾ ಪಿಡಿಎಫ್‌ ಮಾದರಿಯಲ್ಲಿ ಅಪ್‌ಲೋಡ್‌ ಮಾಡಬೇಕು. ಅರ್ಜಿದಾರರು ಹಬ್ಬ ಹರಿದಿನಗಳಂತಹ ಸಂದರ್ಭದಲ್ಲಿ ತಾತ್ಕಾಲಿಕ ಉದ್ದಿಮೆ ಪರವಾನಗಿಯನ್ನೂ ಪಡೆಯಬಹುದು.

ಆಸ್ತಿ ತೆರಿಗೆ ಕ್ಯಾಲ್ಕುಲೇಟರ್‌: ಆಸ್ತಿಗೆ ಕಟ್ಟಬೇಕಾದ ತೆರಿಗೆಗಳ ಬಗ್ಗೆಯೂ ಆನ್‌ಲೈನ್‌ನಲ್ಲಿ ನಿಖರ ಮಾಹಿತಿ ಪಡೆಯಬಹುದು. ನಗರದ ಬಹುತೇಕ ಆಸ್ತಿಗಳ ವಿವರಗಳು ತಂತ್ರಾಂಶದಲ್ಲಿ ಲಭ್ಯವಿದ್ದು, ನಾಗರಿಕರು ಪ್ರಾಪರ್ಟಿ ಕ್ಯಾಲ್ಕುಲೇಟರ್‌ ಮೂಲಕ ತೆರಿಗೆ ಪಾವತಿ ವಿವರ ಪಡೆದು ಹಣ ಪಾವತಿಸಬಹುದು.

ಜಲನಿಧಿ ತಂತ್ರಾಂಶ: ಹೊಸದಾಗಿ ನಲ್ಲಿ ಸಂಪರ್ಕ ಪಡೆಯುವವರು ಆನ್‌ಲೈನ್‌ ಮೂಲಕವೇ ಅರ್ಜಿ ಹಾಕಿ ನಿರ್ದಿಷ್ಟ ಹಣ ಪಾವತಿಸಿದರೆ, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೆಲವೇ ದಿನಗಳಲ್ಲಿ ನಲ್ಲಿ ಸಂಪರ್ಕ ನೀಡುತ್ತಾರೆ. ಜತೆಗೆ ಒಳ ಚರಂಡಿ ಸಂಪರ್ಕವನ್ನೂ ಪಡೆಯಬಹುದು.
ಇ–ಆಸ್ತಿ, ಜನನ–ಮರಣ ನೋಂದಣಿ ಸೌಲಭ್ಯವನ್ನೂ ಆನ್‌ಲೈನ್‌ ನಲ್ಲೇ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT