ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ಘರ್ಷಣೆಯ ಆಂತರ್ಯದಲ್ಲಿ...

ಗಾಜಾಪಟ್ಟಿಯಲ್ಲಿರುವ  ಪ್ಯಾಲೆಸ್ಟೀನಿಯರೆಲ್ಲಾ ಉಗ್ರರಲ್ಲ. ಇದು ಇಸ್ರೇಲಿನಲ್ಲಿರುವ ನನ್ನ ಮಿತ್ರರ ಅಭಿಪ್ರಾಯಕ್ಕೆ ಭಿನ್ನವಾಗಿರಬಹುದು. ಆದರೆ, ನನ್ನ ಪ್ರಾಣ ಉಳಿಸಿದ ಪುಣ್ಯಾತ್ಮ ಒಬ್ಬ ಪ್ಯಾಲೆಸ್ಟೀನಿ.

ಆಗಾಗ ಅವನ ಬಗ್ಗೆ ಚಿಂತಿಸುತ್ತಿರುತ್ತೇನೆ. ಪ್ಯಾಲೆಸ್ಟೀನ್‌ ಮತ್ತು ಇಸ್ರೇಲ್‌ ಮಧ್ಯೆ ಕದನ ತೀವ್ರವಾದಾಗಲೆಲ್ಲಾ ಅವನ ಕುರಿತ ಯೋಚನೆ ಹೆಚ್ಚಾಗುತ್ತದೆ. ಗಾಜಾಪಟ್ಟಿಯಲ್ಲಿರುವ ಆತನ ಮನೆ ಏನಾಗಿರಬಹುದೆಂದು ವ್ಯಾಕುಲಗೊಳ್ಳುತ್ತೇನೆ. ಘರ್ಷಣೆ ಹೊತ್ತಿನಲ್ಲಿ ಆತ ಏನು ಮಾಡುತ್ತಿರಬಹುದೆಂಬ ಚಿಂತೆ ಬಹಳವಾಗಿ ಕಾಡುತ್ತದೆ. ಬಹುಶಃ ಆತ ಕೂಡ ನನ್ನ ಬಗ್ಗೆ ಚಿಂತಿಸುತ್ತಿರಬಹುದೇ ಎಂಬ ಆಲೋಚನೆಯೂ ಮೂಡುತ್ತದೆ. ಆ ಪುಣ್ಯಾತ್ಮ ನನ್ನನ್ನು ಬದುಕಿಸದಿದ್ದರೂ ನನಗೆ ಒಳಿತನ್ನೇ ಹಾರೈಸುತ್ತಿದ್ದ...

ಈ ದುರಂತ ನಡೆದದ್ದು1996ರ ಸಮಯದಲ್ಲಿ. ನಾನಾಗ 13 ವರ್ಷದ ಬಾಲಕ. ಆಗತಾನೆ ನನಗೆ ಮಿಟ್ಸ್‌ವಾ (ಯೆಹೂದಿಯರ ಧಾರ್ಮಿಕ ಉಪದೇಶ) ನಡೆದಿತ್ತು. ನನ್ನ ಪೋಷಕರು ರಮತ್‌ ಗಾನ್‌ನಲ್ಲಿದ್ದ ಮನೆ ನವೀಕರಣ ಕಾರ್ಯ ಕೈಗೊಂಡಿದ್ದರು. ಈ ಕಾಮಗಾರಿ ವಹಿಸಿಕೊಂಡಿದ್ದ ಗುತ್ತಿಗೆದಾರ ಗಾಜಾದಿಂದ ಪ್ಯಾಲೆಸ್ಟೀನಿ ಕೆಲಸಗಾರರನ್ನು ಕರೆತಂದಿದ್ದ.

ಬಚ್ಚಲು ಮನೆಯಲ್ಲಿ ಹೊಸದಾಗಿ ಅಳವಡಿಸಿದ್ದ ಕಿಟಕಿ ತೆರೆಯಲು ಪ್ರಯತ್ನಿಸುತ್ತಿದ್ದೆ, ಆಗಲಿಲ್ಲ. ಸ್ವಲ್ಪ ಜೋರಾಗಿ ತಳ್ಳಿದೆ. ಗಾಜನ್ನು ಸೀಳಿಕೊಂಡು ಕೈ ಆಚೆ ಹೋಯಿತು. ಬಲಗೈ ತೋಳನ್ನು ಗಾಜು ಸೀಳಿತು.

ರಕ್ತದ ಮಡುವಿನಲ್ಲಿದ್ದ ನನ್ನತ್ತ ಮನೆ ನವೀಕರಣ ಮಾಡುತ್ತಿದ್ದ ಕೆಲಸಗಾರ ಫೌಜಿ (ನನ್ನ ಪ್ರಾಣ ಉಳಿಸಿದ ಪ್ಯಾಲೆಸ್ಟೀನಿ ಪುಣ್ಯಾತ್ಮ) ಓಡೋಡಿ ಬಂದ. ರಕ್ತ ಸೋರುತ್ತಿದ್ದ ನಾಳವನ್ನು ಬಿಗಿಯಾಗಿ ಅದುಮಿ ಹಿಡಿದ. ‘ಹುಡುಗ ಗಾಯ ಮಾಡಿಕೊಂಡಿದ್ದಾನೆ ಬೇಗ ಬನ್ನಿ ಎಂದು ಚೀರಿದ’.

ಆದರೆ, ಮನೆಯ ಇನ್ನೊಂದು ಬದಿಗೆ ಇದ್ದ ನನ್ನ ಮಲತಂದೆ ಸಿಲ್ವನ್‌ ಶಲೊಮ್‌ (ಇಸ್ರೇಲ್‌ ಸಂಪುಟದ ಕಾಯಂ ಸದಸ್ಯ) ಇತ್ತ ಕಣ್ಣು ಹಾಯಿಸದೆ, ‘ಸ್ವಲ್ಪ ಇರು ಡ್ರೆಸ್‌ ಮಾಡಿಕೊಂಡು ಬರುತ್ತೇನೆ’ ಎಂದು ಅಲ್ಲಿಂದಲೇ ಹೇಳಿದರು. ಇದನ್ನು ಕೇಳಿದ ಫೌಜಿ ಮಲತಂದೆಯತ್ತ ಅಬ್ಬರಿಸಿ, ‘ಕೂಡಲೇ ಬನ್ನಿ’ ಎಂದು ಕೂಗಿ ಕೂಗಿ ಕರೆಯುತ್ತಿದ್ದ. ಆದರೂ ಇತ್ತ ಲಕ್ಷ್ಯ ನೀಡಿದ ಇಸ್ರೇಲಿ ಸರ್ಕಾರದ ಹಿರಿಯ ಸಚಿವ ಅಲಂಕಾರ ಮಾಡಿಕೊಳ್ಳುತ್ತಿದ್ದರು. ರಕ್ತನಾಳದ ಮೇಲಿನ ಬಿಗಿಹಿಡಿತವನ್ನು ಸ್ವಲ್ಪವೂ ಕಡಿಮೆ ಮಾಡದೆ, ನನ್ನನ್ನು ಅನಾಮತ್‌ ಎತ್ತಿಕೊಂಡು ಆಸ್ಪತ್ರೆಯತ್ತ ಓಡಿದ ಫೌಜಿ. ಈ ಚಿತ್ರಣ ಇನ್ನೂ  ಕಣ್ಣಮುಂದೆಯೇ ಇದೆ.

ವೈದ್ಯರು ಸತತ ಏಳು ತಾಸು ಶಸ್ತ್ರ ಚಿಕಿತ್ಸೆ ನಡೆಸಿದರು. ‘ಫೌಜಿ ಇಲ್ಲದಿದ್ದರೆ ನೀನು ಬದುಕುಳಿಯುತ್ತಿರಲಿಲ್ಲ’ ಎಂದು ವೈದ್ಯರು ಹೇಳಿದ್ದು ಈಗಲೂ ನನ್ನ ಕಿವಿಯಲ್ಲಿ ಮೊರೆಯುತ್ತಿದೆ.

ಒಂದು ತಿಂಗಳು ಆಸ್ಪತ್ರೆಯಲ್ಲೇ ಇದ್ದೆ. ಫಿಸಿಯೋಥೆರಪಿ, ವಿದ್ಯುತ್‌ ಶಾಕ್‌, ಲೇಸರ್‌ ಚಿಕಿತ್ಸೆ ಪಡೆದ ಮೇಲೂ ನನ್ನ ಬಲಗೈ ಅಷ್ಟೇನು ಸ್ವಾಧೀನದಲ್ಲಿಲ್ಲ. ನನ್ನ ಜೀವ ಉಳಿಸಿದ ಫೌಜಿಗೆ ನನ್ನ ಪೋಷಕರು ಹೃದಯಪೂರ್ವಕ ಧನ್ಯವಾದ ಹೇಳಿದರಂತೆ. ಅವನಿಗೆ ಬೇಕಾದ ಸಹಾಯ ನೀಡುವುದಾಗಿಯೂ ತಿಳಿಸಿದರಂತೆ. ಆದರೆ, ಆ ಪುಣ್ಯಾತ್ಮ ಇದ್ಯಾವುದನ್ನು ಅಪೇಕ್ಷಿಸದೆ ಬಂದಹಾಗೇ ಹೊರಟು ಹೋದ ಎಂದು ನಂತರ ತಿಳಿಯಿತು.

ಇದು ಘಟಿಸಿ ಹತ್ತಿರ ಹತ್ತಿರ ಎರಡು ದಶಕಗಳಾಗುತ್ತಿವೆ. ರಾಜಕೀಯ ಚಿತ್ರಣ ಬದಲಾಗಿರುವುದು ಮಾತ್ರವಲ್ಲ, ಕುಲಗೆಟ್ಟು ಹೋಗಿದೆ. ಗಾಜಾ ಈಗ ಸ್ವಾಯತ್ತ ನಾಡು, ಅಲ್ಲಿ ಹಮಾಸ್‌ಗಳ ಆಡಳಿತ ಇದೆ. ಇತ್ತೀಚೆಗೆ ಮೂವರು ಇಸ್ರೇಲಿ ಹುಡುಗರನ್ನು ಅಪಹರಿಸಿ, ಹತ್ಯೆ ಮಾಡಲಾಯಿತು. ಇದಕ್ಕೆ ಸಂತೋಷ ಪಟ್ಟ ಬಹುಶಃ ವಿಶ್ವದ ಏಕೈಕ ಆಡಳಿತ ಹಮಾಸ್‌ಗಳದ್ದು!

ಫೌಜಿಗೆ ಈಗ ಇಸ್ರೇಲ್‌ನಲ್ಲಿ ಕೆಲಸ ಮಾಡಲು ಅನುಮತಿ ಮಾತ್ರವಲ್ಲ, ಇಸ್ರೇಲ್‌ ಪ್ರವೇಶಕ್ಕೂ ಅನುಮತಿ ಇರುವಂತೆ ಕಾಣೆ. ಬಹುಶಃ ಈಗ ಅವನು ಹಮಾಸ್‌ಗಳ ಪರವಾಗಿ ಕೆಲಸ ಮಾಡುತ್ತಿರಬೇಕು. ಟೆಲ್‌ ಅವೀವ್‌, ಜೆರುಸಲೇಂ, ಹೈಫಾಗಳತ್ತ ರಾಕೆಟ್‌ಗಳನ್ನು ಹಾರಿಸುತ್ತಿರಬಹುದು. ಹಿಂದೊಮ್ಮೆ ಈತ ಯಹೂದಿ ಬಾಲಕನೊಬ್ಬನ ಜೀವ ಉಳಿಸಿದ ಎಂದು ಆತನ ಸ್ನೇಹಿತರಿಗೆ ತಿಳಿದರೆ, ಆ ರಾಕೆಟ್‌ಗಳನ್ನು ಫೌಜಿಯತ್ತಲೇ ತಿರುಗಿಸಬಹುದೆನೋ?

ಜನಾಂಗೀಯ ಘರ್ಷಣೆಯಲ್ಲಿ ತೊಡಗಿರುವ ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ಗಳ ಸಾಮಾನ್ಯ ಜನರ ಮಧ್ಯೆ ಸಂವಹನದ ಎಲ್ಲಾ ಮಾರ್ಗಗಳು ಈಗ ಬಂದ್‌ ಆಗಿವೆ. ಪ್ಯಾಲೆಸ್ಟೀನ್‌ ವ್ಯಕ್ತಿಯೊಬ್ಬ ನನ್ನ ಜೀವ ಉಳಿಸಿದ ಎಂದು ನನ್ನ ಕಿರಿಯ ಸೋದರ – ಸೋದರಿಯರಿಗೆ ಹೇಳಿದರೆ ಅವರು ನನ್ನನ್ನು ಗುಮಾನಿಯಿಂದಲೇ ನೋಡುತ್ತಾರೆ.

ಹಿಂದೆ ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯರು ಒಂದೇ ಕಡೆ ಶಾಂತಿಯುತವಾಗಿ ಬದುಕಿದ್ದರು ಎಂಬುದನ್ನು ಅವರು ಕಲ್ಪಿಸಿಕೊಳ್ಳಲು ಈಗ ಸಾಧ್ಯವಿಲ್ಲ.

ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯರು ಈಗ ತಮ್ಮ ತಮ್ಮ ಮುಖಂಡರ ಕಾರ್ಯಸೂಚಿಯ ದಾಳಗಳಾಗಿದ್ದಾರೆ. ಈ ಜನಾಂಗೀಯ ಘರ್ಷಣೆ ನೋಡಿದರೆ ಮನುಷ್ಯತ್ವ ಕಳೆದುಕೊಂಡು ಹಗೆತನ ಸಾಧಿಸುವ ಹಟಕ್ಕೆ ಬಿದ್ದಿರುವಂತೆ ಕಾಣುತ್ತದೆ. ಕೆಲವು ವರ್ಷಗಳ ಹಿಂದೆ ಒಟ್ಟಿಗೆ ವಾಸಿಸುತ್ತಿದ್ದೆವು ಎಂಬುದನ್ನು ನೆನಪು ಮಾಡಿಕೊಳ್ಳುವುದಕ್ಕಿಂತ ಪರಸ್ಪರ ಕೊಲ್ಲುವುದೇ ಸುಲಭ ಎಂಬಂತಹ ಸನ್ನಿವೇಶ ಇದೆ.
ಬಲ ರಟ್ಟೆಯ ಸ್ವಾಧೀನ ಕಳೆದುಕೊಂಡ ಮೇಲೆ ನಾನು ಅಕ್ಷರಶಃ ಎಡಚನಾದೆ. ಈ ಕಾರಣದಿಂದ ಸೇನೆಗೆ ಸೇರಲು ಶತಪ್ರಯತ್ನ ಮಾಡಬೇಕಾಯಿತು. ಸೇನೆ ಸೇರಿದ ಮೇಲೂ ನಾನು ನನ್ನ ರಾಷ್ಟ್ರವನ್ನು ಸಮರ್ಥಿಸಿಕೊಳ್ಳಲು ಹೆಣಗಾಡಿದೆ. ಸೇನೆಯಲ್ಲಿ ನನ್ನ ಕೆಲಸ ಪ್ಯಾಲೆಸ್ಟೀನಿಯರ ಶಾಲಾ ಪಠ್ಯಕ್ರಮ­ದಲ್ಲಿರುವ ಯಹೂದಿ ವಿರೋಧಿ ಅಂಶಗಳನ್ನು ಬಯಲಿಗೆ ತರುವುದಾಗಿತ್ತು. ಈ ಯಹೂದಿ ವಿರೋಧಿ ಧೋರಣೆಗೆ ನಾನು ಕೊಲೆಗಡುಕತನ ಮತ್ತು ನರಮೇಧದ ಹಣೆಪಟ್ಟಿ ಹಚ್ಚಬೇಕಿತ್ತು.

ಸೇನಾ ನೌಕರಿ ತೊರೆದ ನಂತರ ಗಾಜಾ ಗಡಿಗೆ ಇರುವ ಇಸ್ರೇಲಿ ಪಟ್ಟಣಗಳಲ್ಲಿ ಓಡಾಡುತ್ತಿದ್ದೆ. ಸೈರನ್ (ಎಚ್ಚರಿಕೆ ಗಂಟೆ) ಮೊಳಗಿದರೆ ಸುರಕ್ಷಿತ ಆಶ್ರಯಕ್ಕಾಗಿ ಓಡಬೇಕಿತ್ತು. ಹೀಗೆ ಓಡಿ ಆಶ್ರಯ ಪಡೆದಿದ್ದರಿಂದಲೇ ಈಗ ಇಸ್ರೇಲ್‌ ಹೃದಯಭಾಗಕ್ಕೆ ಬರಲು ಸಾಧ್ಯವಾಯಿತು. ಈಗಲೂ ಸೈರನ್‌ಗಳು ಮೊಳಗುತ್ತಿವೆ. ಆಲಾಪ ಇದೆ. ಆದರೆ, ವಾಸ್ತವ ಎದುರಿಸಲಾಗದೆ ಎಲ್ಲಿಗೆ ತಾನೆ ಓಡಿ ಹೋಗಲು ಸಾಧ್ಯ? ಇರುವೆಡೆಯಲ್ಲೇ ಅಡಗಿಕೊಳ್ಳಬೇಕು. ಇದು ನನ್ನಂಥವನಿಗೂ ಮತ್ತು ಪ್ಯಾಲೆಸ್ಟೀನಿಯರಿಗೂ ಇರುವ ಸಂದರ್ಭದ ಒತ್ತಡ.
ಗಾಜಾದಲ್ಲಿರುವ ಬಹುತೇಕ ಪ್ಯಾಲೆಸ್ಟೀನಿಯರು ರಷ್ಯಾದ ವೈಮಾನಿಕ ನೆರವಿನ ಮೇಲೆ ಬದುಕು ದೂಡುತ್ತಿದ್ದಾರೆ ಎಂಬುದನ್ನು ನಂಬುವುದು ಕಷ್ಟವಾದರೂ ಅದೇ ವಾಸ್ತವ. ಬಹುತೇಕ ಪ್ರಜಾತಂತ್ರ ಮಾರ್ಗದಲ್ಲೇ ಆಯ್ಕೆ ಆಗಿರುವ ಹಮಾಸ್‌ಗಳ ಗುರಿ ಇಸ್ರೇಲ್‌ನ ನಾಮಾವಶೇಷ.

ಇತ್ತ ಇಸ್ರೇಲ್‌ ಎಡಪಂಥೀಯರು ಗಾಜಾ ಮೇಲೆ ದಾಳಿ ನಡೆಸುವುದನ್ನು ಖಂಡಿಸುತ್ತಾರೆ. ಆದರೆ, ಇಂತಹದೊಂದು ಸಣ್ಣ ದನಿ ಕೂಡ ಗಾಜಾ ಕಡೆಯಿಂದ ವ್ಯಕ್ತವಾಗುತ್ತಿಲ್ಲ. ಕದನವಿರಾಮ ಉಲ್ಲಂಘನೆ, ನಾಗರಿಕರ ಮೇಲೆ ರಾಕೆಟ್‌ ದಾಳಿ ಮುಂದುವರೆದೇ ಇದೆ. ಹೀಗಿರುವಾಗ ಗಾಜಾ ಮೇಲಿನ ದಾಳಿಯನ್ನು ಯಾವ ರೀತಿ ವಿರೋಧಿಸುವುದು?

ಕುಳಿತಲ್ಲೇ ಸನ್ನಿವೇಶವನ್ನು ವಿಶ್ಲೇಷಿಸುವುದು ಸುಲಭ. ಆದರೆ, ಅನೇಕ ವರ್ಷಗಳಿಂದ ಯಾವ ದೇಶದವನೆಂದು ಹೇಳಿಕೊಳ್ಳಲಾಗದ ನಿರ್ಗತಿಕ ಸ್ಥಿತಿ ಅನುಭವಿಸಿದವರ ನೋವನ್ನು ಚಿತ್ರಿಸಲು ಸಾಧ್ಯವೇ? ಬಹುಶಃ ಇಂತಹ ಸ್ಥಿತಿಯಲ್ಲಿ ನಾನಿದ್ದಿದ್ದರೆ ಹತಾಶನಾಗಿ ಎಂದೋ ಕಳೆದುಹೋಗುತ್ತಿದ್ದೆ. ಆದರೂ, ಸ್ವಾತಂತ್ರ್ಯದ ನ್ಯಾಯೋಚಿತ ಹೋರಾಟದ ಮಾರ್ಗ ಹಿಂಸಾಚಾರ ಅಲ್ಲ, ಮುಗ್ಧರನ್ನು ಕೊಲ್ಲುವುದಲ್ಲ.
ಇಸ್ರೇಲಿಗಳಿಗೆ ತಮ್ಮನ್ನು ಮತ್ತು ತಮ್ಮ ದೇಶವನ್ನು ರಕ್ಷಿಸಿಕೊಳ್ಳುವ ಎಲ್ಲಾ ಹಕ್ಕು ಇದ್ದೇ ಇದೆ. ಹಾಗಂತ ‘ಅರಬರನ್ನು ಸಿಕ್ಕಲ್ಲಿ ಕೊಚ್ಚಿ ಹಾಕಿ’ ಎಂದು ಢಾಣಾಡಂಗುರ ಸಾರುವುದು ಸಾಧುವೇ?

ಈಗಲು ಎರಡೂ ಕಡೆ ಮನುಷ್ಯತ್ವ ಇರುವವರು ಇದ್ದಾರೆ. ಅವರ ಸಂಖ್ಯೆ ಕಡಿಮೆ ಎಂಬುದು ಮುಖ್ಯವಲ್ಲ. ಅಂಥವರು ಇದ್ದಾರೆಂಬುದೇ ಸಮಾಧಾನದ ಸಂಗತಿ. ಒಮ್ಮೆ ಅಬ್ರಹಾಂ ದೇವರಲ್ಲಿ ಕೇಳಿದ: ‘ಸೋಡಮ್‌ ಮತ್ತು ಗೊಮೊರಾಗಳಲ್ಲಿ (ದುಷ್ಟರು ಇರುವ ಪಟ್ಟಣ) ಕನಿಷ್ಠ ಹತ್ತು ಮಂದಿ ನ್ಯಾಯೋಚಿತವಾಗಿರುವವರನ್ನು ಬದುಕಲು ಬಿಡು’.

ದ್ವೇಷಾಸೂಯೆಗಳಿಲ್ಲದೆ ಬದುಕಲು ಸಾಧ್ಯವಿದೆ. ಜನರು ಎಷ್ಟು ಪ್ರಬಲರಾಗಿರುತ್ತಾರೋ ಸರ್ಕಾರ ಕೂಡ ಅಷ್ಟೇ ಪ್ರಬಲವಾಗಿರುತ್ತದೆ. ಆದ್ದರಿಂದ ಮನುಷ್ಯತ್ವದ ಬಗ್ಗೆ ಮಿಡಿಯುವವರಿಗೆ ಬೆಂಬಲ ಹೆಚ್ಚಾಗಬೇಕು. ಆಗ ಮಾತ್ರ ಸಂಘರ್ಷ ಕೊನೆಗಾಣಲು ಸಾಧ್ಯ. ಸಂಘರ್ಷ ನಿಂತರೆ ಜನರ ಸಂಪರ್ಕ, ಹೃದಯಗಳ ಸಂಪರ್ಕ ಹೆಚ್ಚುತ್ತದೆ. ಮಾತುಕತೆಗೆ ಅವಕಾಶ ಆಗುತ್ತದೆ. ನಾಯಕರಿಗಿಂತ ಜನರೇ ಇಂತಹ ಮಾತನ್ನು ಹೃದಯಪೂರ್ವಕವಾಗಿ ಆಡುತ್ತಾರೆ.

ಎಲ್ಲಾ ಪ್ಯಾಲೆಸ್ಟೀನಿಯರು ಉಗ್ರರಲ್ಲ ಎನ್ನುವುದನ್ನು ಇಸ್ರೇಲಿಗಳು ಅರ್ಥ ಮಾಡಿಕೊಳ್ಳಬೇಕು. ಇಸ್ರೇಲ್‌ನ ಹೋರಾಟ ಉಗ್ರರ ವಿರುದ್ಧವೇ ಹೊರತು, ಪ್ಯಾಲೆಸ್ಟೀನಿಯರ ವಿರುದ್ಧ ಅಲ್ಲ. ರಾಕೆಟ್‌ ಮೂಲಕ ಸಿಡಿಸುತ್ತಿರುವ ಜನಾಂಗೀಯ ದ್ವೇಷಕ್ಕೆ ಮೊದಲು ಕಡಿವಾಣ ಬೀಳಬೇಕು.
ಹಾಗೆಯೇ ಪ್ಯಾಲೆಸ್ಟೀನಿಯರು ತಮ್ಮ ದೇಶಕ್ಕಾಗಿ ಹೋರಾಡಬೇಕು. ಆದರೆ, ಇದು ಸ್ವಸಂಕಲ್ಪದ ಹೋರಾಟವಾಗಬೇಕೇ ಹೊರತು ಇಸ್ರೇಲ್‌ ಅನ್ನು ನಿರ್ನಾಮ ಮಾಡುವ ದುರುದ್ದೇಶದ ಹೋರಾಟವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT