ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂದೋಲನವೊಂದೇ ದಾರಿ

Last Updated 24 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕನ್ನಡವನ್ನು ಶಿಕ್ಷಣದ ಮಾಧ್ಯಮವನ್ನಾಗಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ  ಹಾಕಿದ್ದ ಪರಿಹಾರಾತ್ಮಕ ಅರ್ಜಿಯನ್ನು  ಸುಪ್ರೀಂಕೋರ್ಟ್‌‌ವಜಾ ಮಾಡಿದೆ. ಇದರಿಂದ, ರಾಜ್ಯಕ್ಕೆ ಈ ವಿಷಯದಲ್ಲಿ ಇನ್ನೊಮ್ಮೆ ಸೋಲುಂಟಾಗಿದೆ.
ಮಗುವಿನ ಮಾತೃಭಾಷೆ ಯಾವುದು ಎನ್ನುವುದು ಪೋಷಕರು ಆಯ್ಕೆ ಮಾಡಿಕೊಳ್ಳುವ ವಿಚಾರವಲ್ಲ; ಮಗು ಮನೆಯಲ್ಲಿ ಮೊದಲು ಕಲಿತ ಭಾಷೆಯೇ ಮಾತೃಭಾಷೆ. ಮನೆಯಲ್ಲಿ ಉರ್ದು, ಕನ್ನಡ ಅಥವಾ ಇನ್ಯಾವುದೇ ಭಾಷೆಯನ್ನು ಮಾತನಾಡುತ್ತಾ ಬೆಳೆದ ಮಗುವಿನ ಮಾತೃಭಾಷೆ, ಶಾಲೆಗೆ ಹೋಗುವ ಹೊತ್ತಿಗೆ ಪೋಷಕರ ಇಚ್ಛೆಯ ಅನುಸಾರ ಇದ್ದಕ್ಕಿದ್ದಂತೆ ಬದಲಾಗುವುದಿಲ್ಲ. ಅಲ್ಲದೆ ಇಂಗ್ಲಿಷ್ ಮಾತೃಭಾಷೆಯಾಗುವುದಂತೂ ಸಾಧ್ಯವೇ ಇಲ್ಲ. ಆದರೂ, ತಮ್ಮ ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕು ಎಂದು ನಿರ್ಧರಿಸುವ ಹಕ್ಕು ಪೋಷಕರಿಗೆ ಇದೆ ಎನ್ನುವ ಮಾತು ಒಪ್ಪಬೇಕಾದದ್ದೇ. ಮೂಲಭೂತ ಹಕ್ಕುಗಳ ಅಡಿಯಲ್ಲಿ ಇದನ್ನು ಒಪ್ಪದೇ ಇರುವುದು ಕಷ್ಟ.

ಸರ್ಕಾರದ ಅಡ್ವೊಕೇಟ್ ಜನರಲ್ ಸ್ವಾಗತಿಸಿರುವಂತೆ, ಕೆಲವು ಸಂಘಟನೆಗಳೂ ‘ಮಾತೃಭಾಷೆಯಲ್ಲಿ ಶಿಕ್ಷಣ’ ಇರಬೇಕು ಎಂದು ಹೇಳಿವೆ. ಆದರೆ ಇಂತಹ ಹೇಳಿಕೆಗಳಿಂದ ಯಾವುದೂ ಬದಲಾಗುವುದಿಲ್ಲ. ಶಿಕ್ಷಣ ಮಾತೃಭಾಷೆಯಲ್ಲಿ ಅಲ್ಲ, (ರಾಜ್ಯದ ಭಾಷೆ) ಕನ್ನಡದಲ್ಲಿ ಎಂಬುದನ್ನು ಮರೆಯಬಾರದು. ರಾಜ್ಯದ ಭಾಷೆಯಲ್ಲೇ  ಪ್ರಾಥಮಿಕ ಶಿಕ್ಷಣ ದೊರೆತರೆ ಅದು ಮಗುವಿನ ಭಾಷಿಕ, ಮಾನಸಿಕ, ಸಾಂಸ್ಕೃತಿಕ, ಶೈಕ್ಷಣಿಕ, ಭಾವನಾತ್ಮಕ ಸೇರಿದಂತೆ ಪರಿಪೂರ್ಣ ವ್ಯಕ್ತಿತ್ವದ ವಿಕಾಸಕ್ಕೆ ಶ್ರೇಷ್ಠ ಎಂದು ಮನೋವಿಜ್ಞಾನಿಗಳು, ಭಾಷಾ ವಿಜ್ಞಾನಿಗಳು, ಶಿಕ್ಷಣ ತಜ್ಞರು ಎಲ್ಲರೂ ಒಪ್ಪುತ್ತಾರೆ. ಆದರೆ, ಮಕ್ಕಳ ಪೋಷಕರು ಈ ಮಾತನ್ನು ಒಪ್ಪುವುದಿಲ್ಲವೇಕೆ? ಅವರೆಲ್ಲರೂ, ಯಾವುದೇ ಮಾತೃಭಾಷೆಯಾಗಿರಲಿ, ನಮ್ಮ ಮಕ್ಕಳು ಇಂಗ್ಲಿಷ್‌ನಲ್ಲಿ ಓದಿದರಷ್ಟೇ ಉದ್ಧಾರವಾಗುತ್ತಾರೆ ಎಂದೇಕೆ ಬಲವಾಗಿ ನಂಬುತ್ತಾರೆ? ಈ ಸವಾಲನ್ನು ಮರೆಮಾಚಿ, ಕನ್ನಡ ಕುರಿತು ಅತಾರ್ಕಿಕ ಅಭಿಮಾನದ ಮಾತನಾಡುವುದರಿಂದ ಕಿಂಚಿತ್‌ ಪ್ರಯೋಜನವೂ ಇಲ್ಲ.

ಬದಲಿಗೆ, ರಾಜ್ಯದ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರೆ ಹೇಗೆ ಒಳ್ಳೆಯದು; ಇಂಗ್ಲಿಷ್‌ನ್ನು ಒಂದು ಭಾಷೆಯನ್ನಾಗಿ ಕಲಿಯುವ ಮೂಲಕ ಹೇಗೆ ಆ ಭಾಷೆಯ ಅನುಕೂಲವನ್ನೂ ಅನುಭವಿಸಬಹುದು ಎಂಬುದನ್ನು ಪೋಷಕರಿಗೆ ಮನವರಿಕೆ ಮಾಡಿಸುವುದೊಂದೇ ಈಗ ಉಳಿದಿರುವ ದಾರಿ. ಇದಕ್ಕೆ ವಿರುದ್ಧವಾಗಿ ಕೆಲಸ ಮಾಡುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ವ್ಯಾಪಾರಿ ಲಾಬಿ ಮತ್ತು ‘ಅಲ್ಪಸಂಖ್ಯಾತ’ ಎಂಬ ಹಣೆಪಟ್ಟಿಯನ್ನು ಗಿಟ್ಟಿಸಿಕೊಂಡು, ಇಂಗ್ಲಿಷ್‌ನಲ್ಲಿ ಓದಿದರೇ ಭವಿಷ್ಯವಿದೆ ಎಂಬ ಭ್ರಮೆಯನ್ನು ಹುಟ್ಟುಹಾಕುತ್ತಿರುವ ಪಟ್ಟಭದ್ರ ಶಕ್ತಿಗಳನ್ನು ಬಯಲಿಗೆ ತರಬೇಕಾಗಿದೆ.

ಇದನ್ನು ಕನ್ನಡಾಭಿಮಾನದ ಬೀದಿ ಚಳವಳಿಯಿಂದ ಮಾಡಲು ಸಾಧ್ಯವಿಲ್ಲ. ಬೀದಿ ಚಳವಳಿಗಳು ಭಾಷಾ ಅಲ್ಪಸಂಖ್ಯಾತರಲ್ಲಿ ಇನ್ನಷ್ಟು ಅನುಮಾನ, ಆತಂಕಗಳನ್ನು ಹುಟ್ಟಿಸುತ್ತವೆ. ಇಂಗ್ಲಿಷ್ ಮಾಧ್ಯಮ ಶಾಲೆಗಳು ಮತ್ತಷ್ಟು  ಶಕ್ತಿಶಾಲಿಯಾಗುತ್ತವೆ; ಅವರಿಗೆ ಪೋಷಕರ ಬೆಂಬಲ, ಪೋಷಕರಿಗೆ ಆಯ್ಕೆಯ ಹಕ್ಕನ್ನು ತಮಗೆ ನೀಡಿದ ಸುಪ್ರೀಂಕೋರ್ಟ್‌ನ ಬೆಂಬಲ ಇರುತ್ತದೆ.

ಇದರ ಬದಲಿಗೆ, ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣದ ಅನುಕೂಲಗಳ ಬಗ್ಗೆ ಅತ್ಯಂತ ವಸ್ತುನಿಷ್ಠ ಅರಿವು ಮೂಡಿಸುವಂಥ ರಾಜ್ಯವ್ಯಾಪಿ ಜನಾಂದೋಲನ ಆಗಬೇಕು. ಇದು ಕೇವಲ ಘೋಷಣೆಗಳ ಕೂಗಾಟ, ಕನ್ನಡಾಂಬೆಯ ಮೆರವಣಿಗೆಗಳಲ್ಲಿ ಮುಗಿಯಬಾರದು. ಬದಲಿಗೆ, ಮಗುವಿನ ಪ್ರಥಮ(ಮಾತೃಭಾಷೆ) ಭಾಷೆ ಯಾವುದೇ ಆಗಿದ್ದರೂ, ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ಮಾಡಿದರೆ ಏನು ಅನುಕೂಲ ಎನ್ನುವ ಕುರಿತು ಅಂಕಿಅಂಶಗಳು, ವೈಜ್ಞಾನಿಕ/ ಶೈಕ್ಷಣಿಕ ಸಿದ್ಧಾಂತಗಳು, ಯಶೋಗಾಥೆಗಳು, ಅಭಿಪ್ರಾಯಗಳು, ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲೇ ಒಳ್ಳೆಯ ಅನುಕೂಲ, ತರಬೇತಿ ಹೊಂದಿದ ಶಿಕ್ಷಕರು, ಆಟದ ಮೈದಾನಗಳು, ಉತ್ತಮ ಪಠ್ಯಪುಸ್ತಕಗಳು/ ಬೋಧನೆ ಇರುವುದು ಎಂಬುದರ ಬಗ್ಗೆ ಅಂಕಿಅಂಶ ಸಹಿತವಾದ ಮಾಹಿತಿಯನ್ನು ಅವರಿಗೆ ನೀಡಬೇಕು.

ವಿದೇಶೀಯ ಹೆಸರುಗಳನ್ನು ಇಟ್ಟುಕೊಂಡು, ಇಂಗ್ಲಿಷ್‌ನಲ್ಲಿ ಕಲಿಸುತ್ತೇವೆ ಎಂದು ಹೇಳಿಕೊಳ್ಳುವ ಹೆಚ್ಚಿನ ಶಾಲೆಗಳಲ್ಲಿ ಸೂಕ್ತ ಅರ್ಹತೆ ಮತ್ತು ತರಬೇತಿ ಇಲ್ಲದ ಶಿಕ್ಷಕರು ಇರುವಂತಹ ವಾಸ್ತವ ಸಂಗತಿಯನ್ನು  ತಿಳಿಸಬೇಕು. ಇದಕ್ಕೆಲ್ಲ ಪೂರಕವಾಗುವಂತಹ ಮಾಹಿತಿಯನ್ನು ಒಳಗೊಂಡ ತರಬೇತಿ ಸಾಮಗ್ರಿಗಳು,  ಪಿ.ಪಿ.ಟಿ.ಗಳು, ವಿಡಿಯೊ ದೃಶ್ಯಾವಳಿಗಳನ್ನು ಸರಳ ಭಾಷೆಯಲ್ಲಿ ಸಿದ್ಧಪಡಿಸಿಕೊಳ್ಳಬೇಕು. ಇದನ್ನು ಬಳಸಿಕೊಂಡು ಕಾರ್ಯ ಶಿಬಿರಗಳನ್ನು ನಡೆಸುವ ಸಾಮರ್ಥ್ಯವುಳ್ಳ ದೊಡ್ಡ ಕಾರ್ಯಪಡೆಯನ್ನು ಸಜ್ಜುಗೊಳಿಸಬೇಕು. ಇವರು ವೈಜ್ಞಾನಿಕ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ರಾಜ್ಯದಾದ್ಯಂತ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಪೋಷಕರೊಂದಿಗೆ ಮುಕ್ತ ವಿಚಾರ ವಿನಿಮಯ, ಚರ್ಚೆಗಳನ್ನು ನಡೆಸಬೇಕು. ಪೋಷಕರ  ಮನಸ್ಸಿನಲ್ಲಿರುವ ಎಲ್ಲ ಪ್ರಶ್ನೆಗಳು ಮತ್ತು ಆತಂಕಗಳಿಗೆ ವಾಸ್ತವವಾಗಿ ಉತ್ತರ ಸಿಗುವಂತೆ ಇರಬೇಕು; ಯಾವುದೇ ಒತ್ತಾಯದ ಛಾಯೆಯೂ ಇಲ್ಲಿ ಕಾಣಬಾರದು.

ಅಲ್ಪ ಸಂಖ್ಯಾತ ಭಾಷೆಗಳು ಎಂದರೆ ಉರ್ದು ಮಾತ್ರವಲ್ಲ, ಅದರಲ್ಲಿ ಬಂಜಾರ, ಮಾರ್ವಾಡಿ,ಕೊಂಕಣಿಗಳೂ ಸೇರುತ್ತವೆ. ಮಾತೃ ಭಾಷೆ ಎಂದು ಹೇಳಿ ಗೊಂದಲ ಹುಟ್ಟಿಸಿದರೆ ಅಲ್ಪ ಸಂಖ್ಯಾತ ಭಾಷಿಗರು ಇದನ್ನು ಅವರವರ ಭಾಷೆಗೆ ಅನ್ವಯಿಸಿಕೊಂಡು ಅವುಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದು ಎಂದು ತಪ್ಪಾಗಿ ಅರ್ಥಮಾಡಿಕೊಂಡು, ಕೊನೆಗೂ ಅವಕಾಶಗಳಿಂದ ವಂಚಿತರಾಗುತ್ತಾರೆ. ಎಲ್ಲರೂ ಕ್ರಮಬದ್ಧ ಕನ್ನಡ ಮಾಧ್ಯಮ ಆಂದೋಲನಕ್ಕಾಗಿಯೇ ದುಡಿಯುವುದೊಂದೇ ಉಳಿದಿರುವ ದಾರಿ. ಜನರ ಸಹಭಾಗಿತ್ವ ದೊರೆತು ಈ ಆಂದೋಲನ ಯಶಸ್ವಿ ಆಗಬೇಕಾದರೆ ಆಯಾ ಭಾಷಾ ಸಮುದಾಯದ ಪೋಷಕರ ಸಭೆ ಸೇರಿಸಿ, ಮುಕ್ತವಾಗಿ ಮಾತನಾಡಬೇಕು. ಕನ್ನಡ ಕಲಿಯುವುದರಿಂದ ಅವರ ಮಕ್ಕಳು ಮುಖ್ಯವಾಹಿನಿಗೆ ಬರುತ್ತಾರೆ, ಮುಂದೆ ಅವರಿಗೆ ಶೈಕ್ಷಣಿವಾಗಿ, ಆರ್ಥಿಕವಾಗಿ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ತಿಳಿದವರು ಬಿಡಿಸಿ ಹೇಳಬೇಕು. ಕನ್ನಡೇತರ ಭಾಷಾ–ಸಾಂಸ್ಕೃತಿಕ–ಧಾರ್ಮಿಕ ಸಮುದಾಯಗಳ ಪೋಷಕರ ಸಮಾವೇಶ ಮಾಡಿ ಅವರಿಗೆ ಇರುವ ಆತಂಕಗಳನ್ನು  ದೂರ ಮಾಡಬೇಕಿದೆ. ಅವರಿಗೆ ಭಾಷಾ ಮಾಧ್ಯಮದ ವಿಚಾರದಲ್ಲಿ ಬೇಕಿರುವುದು ಈಗ ಆಪ್ತ ಸಮಾಲೋಚನೆ. ಸರ್ಕಾರ ಗುಣಮಟ್ಟದ ಇಂಗ್ಲಿಷ್‌ ಕಲಿಕಾ ತರಗತಿಗಳನ್ನು ತಜ್ಞರ ಸಹಕಾರದಿಂದ ತಾನೇ ಆರಂಭಿಸಬೇಕು.

ಆಗ ತಡವಾಗಿಯಾದರೂ ಸುಸ್ಥಿರ ಪರಿಣಾಮ ಕಂಡುಬರಬಹುದು. ಈ ಜನಾಂದೋಲನದಲ್ಲಿ ಲೇಖಕರು, ಸಾಹಿತಿಗಳು, ಶಿಕ್ಷಕರು, ಕನ್ನಡ ಮಾಧ್ಯಮದಲ್ಲಿ ಓದಿ ಯಶಸ್ವಿಯಾದ ಉದ್ಯಮಿಗಳು,  ಇಲಾಖೆಗಳು, ಪ್ರಾಧಿಕಾರಗಳು, ಶಾಸಕರು ಎಲ್ಲರೂ ಭಾಗವಹಿಸಬೇಕು. ಆಂದೋಲನದ ಕ್ರಮ ವೈಜ್ಞಾನಿಕವಾಗಿರಬೇಕು.

ಲೇಖಕರು ಭಾಷೆ ಮತ್ತು ಸಂವಹನ ತಜ್ಞರು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT