ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾರ್ದನ ಕೆರೆಯ ದುರ್ನಾತಕ್ಕೆ ಕಂಗೆಟ್ಟ ಜನ

Last Updated 29 ಜೂನ್ 2016, 19:55 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಕಿಲೋ ಮೀಟರ್‌ವರೆಗೂ ವ್ಯಾಪಿಸುವ ದುರ್ನಾತ, ಕೊಳಚೆ ನೀರಿನೊಟ್ಟಿಗೆ ಕಸ, ಕಟ್ಟಡದ ಅವಶೇಷಗಳ ಸಮಾಗಮ, ಹಾವುಗಳ ಹಾವಳಿ, ನಾಯಿಗಳ ಹಿಂಡಿಗೆ ಆಹಾರ ಒದಗಿಸುವ ತಾಣವಾದ ಕೆರೆ.

ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್‌ ಬಳಿ ಇರುವ ವಸಂತಪುರ ಗ್ರಾಮದ ಜನಾರ್ದನ ಕೆರೆಯ ದುಸ್ಥಿತಿ ಇದು. ಕೆರೆ 7 ಎಕರೆ 10 ಗುಂಟೆ ವಿಸ್ತೀರ್ಣ ಹೊಂದಿದೆ.  ಆದರೆ, ಇದನ್ನು ಕೆರೆ ಎನ್ನಲು ಸಾಧ್ಯವಾಗದಂತಹ ದುಸ್ಥಿತಿಗೆ ತಲುಪಿದೆ.

ಏಳು ಎಕರೆ ಪ್ರದೇಶದ ಕೆರೆಯ ಮುಕ್ಕಾಲು ಭಾಗದಲ್ಲಿ ಮಣ್ಣು ಹಾಕಿ ಮುಚ್ಚಲಾಗಿದೆ. ದಿನೇದಿನೇ ಇದರ ಗಾತ್ರ ಕುಗ್ಗುತ್ತಿದೆ. ಕೊಳಚೆ ನೀರು ಕೆರೆಯ ಒಡಲು ಸೇರುತ್ತಿದೆ. ಜತೆಗೆ ಕಸವನ್ನು ಸುರಿಯಲಾಗುತ್ತಿದೆ. ಇದರಿಂದ ನೀರು ಕಲುಷಿತಗೊಂಡು ದುರ್ವಾಸನೆ ಬೀರಲಾರಂಭಿಸಿದೆ.

‘ಪೌಲ್ಟ್ರಿಫಾರಂನವರು ಕೋಳಿಗಳನ್ನು ಸಾಗಿಸುವ ಲಾರಿಗಳನ್ನು ಕೆರೆಯ ಪಾತ್ರದಲ್ಲಿ ನಿಲ್ಲಿಸುತ್ತಾರೆ. ಸತ್ತ ಕೋಳಿಗಳನ್ನು ತಂದು ಕೆರೆಗೆ ಸುರಿಯುತ್ತಾರೆ. ಇವುಗಳನ್ನು ತಿನ್ನಲು ನಾಯಿಗಳ ಹಿಂಡು ಸೇರುತ್ತದೆ.  ನಾಯಿಗಳು ವಾಹನಗಳಿಗೆ ಅಡ್ಡ ಬರುವುದರಿಂದ ಅಪಘಾತಗಳು ಸಂಭವಿಸಿದ್ದ ಉದಾಹರಣೆಗಳು ಸಾಕಷ್ಟಿವೆ. ಸತ್ತ ಕೋಳಿಗಳು ಕೊಳೆತು ದುರ್ನಾತ ಬೀರುವುದರಿಂದ ಸುತ್ತಮುತ್ತಲಿನ ಜನರು ವಾಸ ಮಾಡುವುದು ಕಷ್ಟವಾಗಿದೆ’ ಎಂದು ಸ್ಥಳೀಯ ನಿವಾಸಿ ಬಾಬು ಅಳಲು ತೋಡಿಕೊಂಡರು.

‘ಕೊಳಚೆ ಹೆಚ್ಚಾಗಿ ಡೆಂಗಿ, ಚಿಕೂನ್‌ ಗುನ್ಯ, ಮಲೇರಿಯದಂತಹ ಸಾಂಕ್ರಾಮಿಕ ರೋಗಗಳು ಬರುತ್ತಿವೆ. ಬಡ, ಮಧ್ಯಮ ವರ್ಗದವರಿಗೆ ಆಸ್ಪತ್ರೆಯ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಜಲಾನಯನ ಪ್ರದೇಶದಲ್ಲಿರುವ ಮನೆಗಳಿಂದ ಕೊಳಚೆ ನೀರು ಕೆರೆಗೆ ಸೇರುತ್ತಿಲ್ಲ. ಬಡಾವಣೆಯಲ್ಲಿರುವ ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ರಾಜಕಾಲುವೆಗೆ ಸೇರಿ ಕೆರೆಗೆ ಬರುತ್ತಿದೆ. ಕೊಳಚೆ ನೀರನ್ನು ತಡೆಗಟ್ಟಿ, ಕೆರೆಯ ಹೂಳು ಎತ್ತಬೇಕೆಂದು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಹೋದರು. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ಡಾ.ಎಂ.ಅನಿಲ್‌ ಮಾತನಾಡಿ, ‘ಕೆರೆಯ ಸುತ್ತಮುತ್ತ ಅಹ್ಲಾದಕರ ವಾತಾವರಣ ಇರುತ್ತದೆ ಎಂದು ನಿವೇಶನ ಕೊಂಡು ಸಾಲ ಮಾಡಿ ಮನೆ ಕಟ್ಟಿಸಿದೆ. ಗೃಹ ಪ್ರವೇಶದ ದಿನ ಕೆರೆಯ ಕಡೆಯಿಂದ ದುರ್ವಾಸನೆ ಬೀರಲಾರಂಭಿಸಿತು. ಎರಡು ವರ್ಷಗಳ ಹಿಂದೆ ಆರಂಭವಾದ ಕೆಟ್ಟ ವಾಸನೆ ಇಂದಿಗೂ ನಿಂತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಮನೆಗೆ ಮಾಡಿದ್ದ ಸಾಲದ ಕಂತನ್ನು ಪ್ರತಿ ತಿಂಗಳು ಪಾವತಿಸುವಾಗ ಮನಸ್ಸಿಗೆ ನೋವಾಗುತ್ತದೆ. ಕಷ್ಟಪಟ್ಟು ಮನೆ ಕಟ್ಟಿಸಿದ್ದಕ್ಕೂ ನೆಮ್ಮದಿ ಇಲ್ಲದಂತಾಗಿದೆ.  ಕೊಳಚೆ ಪ್ರದೇಶದಲ್ಲಿ ವಾಸ ಮಾಡುವ ಅನುಭವವಾಗುತ್ತದೆ’ ಎಂದು ನೋವು ತೋಡಿಕೊಂಡರು.

ಆರ್‌.ಶ್ರೀನಿವಾಸ ನಾಯ್ಡು, ‘ನಮ್ಮ ಮನೆಯ ಅಕ್ಕಪಕ್ಕದಲ್ಲಿ ಎತ್ತರದ ಎರಡು ಮನೆಗಳಿವೆ. ಗಾಳಿಯು ನೇರವಾಗಿ ನಮ್ಮ ಮನೆಯ ಕಡೆ ಬೀಸುವ ಜತೆಗೆ ದುರ್ವಾಸನೆಯನ್ನೂ ಹೊತ್ತು ತರುತ್ತದೆ. ಇದರಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ.  ನೈರ್ಮಲ್ಯದಿಂದ ಕೂಡಿರುವ ಬಡಾವಣೆಯಲ್ಲಿ ನೆಲೆಸಿದರೆ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಸ್ವಂತ ಮನೆ ಕಟ್ಟಿಸಿ ಬೇರೆಡೆ ಹೋಗಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಕಲುಷಿತ ನೀರಿನಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸೊಳ್ಳೆಗಳನ್ನು ಹೇಗಾದರೂ ತಡೆಗಟ್ಟಬಹುದು. ಆದರೆ, ದುರ್ವಾಸನೆಯನ್ನು ಹೇಗೆ ತಡೆಗಟ್ಟುವುದು? ರಾತ್ರಿ ವೇಳೆ ನಿದ್ದೆ ಬರುವುದಿಲ್ಲ. ನಿದ್ದೆ ಕೆಟ್ಟರೆ ನಮ್ಮಂತಹ ಹಿರಿಯ ನಾಗರಿಕರ ಆರೋಗ್ಯದ ಗತಿ ಏನಾಗಬಹುದು?’ ಎಂದರು.

ಬಿಬಿಎಂಪಿ ಉದ್ಯಾನ ವಿಭಾಗದ  ನಿವೃತ್ತ ಸೂಪರಿಂಟೆಂಡೆಂಟ್‌ ಎಂ.ಟಿ. ಮುನಿಯಪ್ಪ, ‘ಕೆರೆಯನ್ನು ಅಭಿವೃದ್ಧಿ ಪಡಿಸಿ ವಾಯು ವಿಹಾರಕ್ಕೆ ಅನುಕೂಲ ಮಾಡಿಕೊಡಬೇಕು. ಕೆರೆಯ ಮುಕ್ಕಾಲು ಭಾಗದಷ್ಟು ಮಣ್ಣು ತುಂಬಿಕೊಂಡಿದೆ. ಇದನ್ನು ತೆರವುಗೊಳಿಸಿ, ಕೆರೆಯ ಸುತ್ತಲೂ ವಾಯುವಿಹಾರಿಗಳು ಸಂಚರಿಸಲು ಪಾದಚಾರಿ ಮಾರ್ಗ ನಿರ್ಮಿಸಬೇಕು. ಮಕ್ಕಳು ಆಡವಾಡಲು ಕಿರು ಉದ್ಯಾನ ನಿರ್ಮಿಸುವುದರಿಂದ ಪ್ರವಾಸಿ ತಾಣವಾಗಿಯೂ ಮಾರ್ಪಡುತ್ತದೆ’ ಎಂದು ಸಲಹೆ ನೀಡಿದರು.

ಕೆರೆ ಮಾಹಿತಿ ಲಭ್ಯವಿಲ್ಲ: ಅರಣ್ಯ ಇಲಾಖೆಯ ಬನಶಂಕರಿ ಘಟಕಕ್ಕೆ ಸೇರಿದ ಕೆರೆ ಎಂದು 2000ರಲ್ಲಿ ನೆಟ್ಟ ಒಂದು ಫಲಕ ಹೊರತು ಪಡಿಸಿ ಈ ಕೆರೆಯು ಯಾವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ, ನಗರದ ಐದು ಕೆರೆಗಳು ಮಾತ್ರ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅವುಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಉತ್ತರ ನೀಡುತ್ತಾರೆ.

ಪಾಲಿಕೆ ಸದಸ್ಯರಿಗೆ ಪತ್ರ: ಕೊಳಚೆ ನೀರು, ತ್ಯಾಜ್ಯ ಸೇರಿ ಕೆರೆ ಕಲುಷಿತಗೊಂಡಿದೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ಜನರು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು ಎಂದು  ಸತ್ಯಮ್ಮನ ಕುಂಟೆ, ಅಶ್ವತ್ಥ ಬಡಾವಣೆ, ವಲ್ಲಭ ನಗರ, ವಸಂತ ವಲ್ಲಭ ನಗರ, ದೇಸಾಯಿ ಗಾರ್ಡನ್‌, ಶಾರದಾ ನಗರ, ಗೋಕುಲ ನಗರದ ನಿವಾಸಿಗಳು 2015ರ ಅಕ್ಟೋಬರ್‌ನಲ್ಲಿ ಪಾಲಿಕೆ ಸದಸ್ಯರಿಗೆ ಪತ್ರ ಬರೆದಿದ್ದರು.

ಕೆರೆ ಪಾತ್ರದಲ್ಲಿ ವಾಸಿಸುವ ಜನರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಪತ್ರದಲ್ಲಿ ವಿವರಿಸಿದ್ದಲ್ಲದೆ, ಅದಕ್ಕೆ 120 ಮಂದಿ ಸಹಿ ಮಾಡಿದ್ದರು.
ಅಲ್ಲದೆ, ಕಸ ಸುರಿಯುತ್ತಿರುವ ಬಗ್ಗೆ  ಆನಂದ ಎಂಬುವರು ಐ ಚೇಂಜ್‌ ಮೈ ಸಿಟಿ ವೆಬ್‌ಸೈಟ್‌ನಲ್ಲೂ  ಎರಡು ವರ್ಷಗಳ ಹಿಂದೆಯೇ ಗಮನ ಸೆಳೆದಿದ್ದರು. ಆದರೆ, ಸಮಸ್ಯೆ ಮಾತ್ರ ಇನ್ನೂ ಜೀವಂತವಾಗಿದೆ.

ಹಾವು ಕಚ್ಚಿ ಯುವಕ ಸಾವು
ಕೆರೆಯ ಪಾತ್ರದಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯ ನಿವಾಸಿಗಳ ಆತಂಕವನ್ನು ಹೆಚ್ಚಿಸಿದೆ. ‘ಎಂಟು ತಿಂಗಳ ಹಿಂದೆ 22 ವರ್ಷದ ಯುವಕನೊಬ್ಬನಿಗೆ ಹಾವು ಕಚ್ಚಿತ್ತು. ಆತನನ್ನು ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಣ ಖರ್ಚು ಮಾಡಿದ್ದರೂ ಯುವಕ ಬದುಕಲಿಲ್ಲ’ ಎಂದು ಬಾಬು ತಿಳಿಸಿದರು.

‘ಹಾವುಗಳು ಮನೆಗೆ ನುಗ್ಗುತ್ತವೆ. ಮೊನ್ನೆ ಇಲಿಯನ್ನು ಅಟ್ಟಿಸಿಕೊಂಡು ನಾಗರಹಾವು ನಮ್ಮ ಮನೆಯ ಕೊಠಡಿಗೆ ನುಗ್ಗಿತ್ತು. ಪಕ್ಕದ ಮನೆಯ ರೇಣುಕಾ ಅವರು ಬಂದು ಹಾವನ್ನು ಹಿಡಿದು ಹೊರಗೆ ಬಿಟ್ಟರು’ ಎಂದು ಹಾವು ಹಿಡಿದ ಬಗೆಯನ್ನು ಕಮಲಮ್ಮ ಅವರು ವಿವರಿಸಿದರು.

ರೇಣುಕಾ ಮಾತನಾಡಿ, ‘ಮಳೆಗಾಲದಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ನಮ್ಮ ಮನೆಯ ಆವರಣದಲ್ಲಿ 15 ಹಾವಿನ ಮರಿಗಳು ಕಂಡುಬಂದಿದ್ದವು. ಮಳೆ ಬಂದರೆ ಕೆರೆಯ ನೀರು ರಸ್ತೆವರೆಗೂ ಬರುತ್ತದೆ. ಇದರಿಂದ ಹಾವುಗಳು ಮನೆಗಳಿಗೆ ನುಗ್ಗುತ್ತವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT