ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾರ್ದನ ರೆಡ್ಡಿಗೆ ಹೈಕೋರ್ಟ್‌ ಜಾಮೀನು

ವಿಶೇಷ ಸಿಬಿಐ ನ್ಯಾಯಾಧೀಶರಿಗೆ ಲಂಚ ನೀಡಿದ ಪ್ರಕರಣ
Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಜಾಮೀನು ಪಡೆಯಲು ಲಂಚ ನೀಡಿದ ಪ್ರಕರಣ­ದಲ್ಲಿ ಪ್ರಮುಖ ಆರೋಪಿಯಾಗಿರುವ ಕರ್ನಾ­ಟ­ಕದ ಮಾಜಿ ಸಚಿವ ಗಾಲಿ ಜನಾ­ರ್ದನ ರೆಡ್ಡಿ ಅವರಿಗೆ ಇಲ್ಲಿನ ಹೈಕೋರ್ಟ್‌ ಗುರು­ವಾರ ಜಾಮೀನು ಮಂಜೂರು ಮಾಡಿದೆ.

ಆದರೆ ತಮ್ಮ ಓಬಳಾಪುರಂ ಗಣಿ ಕಂಪೆನಿ ಭಾಗಿಯಾದ ಆರೋಪವಿರುವ ಅಕ್ರಮ ಗಣಿ­ಗಾರಿಕೆ ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಇರುವುದರಿಂದ, ಪ್ರಸ್ತುತ ಬೆಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದ­ಲ್ಲಿ­ರುವ ರೆಡ್ಡಿ ಸೆರೆ­ವಾಸ ಇನ್ನೂ ಮುಂದುವರಿಯಲಿದೆ.

ಜಾಮೀನಿಗಾಗಿ ಲಂಚ ಪಡೆದ ಆರೋ­ಪ­ದಲ್ಲಿ ಅಮಾನತು­ಗೊಂಡ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾ­ಧೀಶ ಟಿ. ಪಟ್ಟಾಭಿರಾಮ ರಾವ್‌ ಅವ­ರಿಗೆ ಲಂಚ ನೀಡಿದ ಪ್ರಕರಣದಲ್ಲಿ ರೆಡ್ಡಿ ವಿರುದ್ಧ ಭ್ರಷ್ಟಾಚಾರ ವಿರೋಧಿ ದಳವು (ಎಸಿಬಿ) ಮೊಕದ್ದಮೆ ದಾಖಲಿಸಿತ್ತು.

ರಾವ್‌ ಅವ­ರಿಗೆ ಲಂಚ ನೀಡಲು ಯತ್ನಿ­ಸಿದ ಇನ್ನೊಂದು ಪ್ರಕರಣದಲ್ಲೂ ರೆಡ್ಡಿ ವಿರುದ್ಧ ಎರಡನೇ ಮೊಕದ್ದಮೆ ದಾಖಲಾಗಿದ್ದು, ಇದಕ್ಕೆ 2012ರ ಅಕ್ಟೋ­ಬ­ರ್‌ನಲ್ಲೇ ಹೈಕೋರ್ಟ್‌ ಜಾಮೀನು ನೀಡಿರುವುದನ್ನು ಸ್ಮರಿಸಬಹುದು.

ಎಸಿಬಿ ನ್ಯಾಯಾಲಯವು ಎರಡನೇ ಪ್ರಕ­ರ­ಣದಲ್ಲಿ ರೆಡ್ಡಿ ಜಾಮೀನು ಅರ್ಜಿ­ಯನ್ನು ವಜಾಗೊಳಿಸಿದ ನಂತರ ಕಳೆದ ತಿಂಗಳು ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಸಿಬಿಐ ವಿಶೇಷ ನ್ಯಾಯಾ­­ಧೀಶರಾಗಿ ರಾವ್‌ ಅವರು ಓಎಂಸಿ ಪ್ರಕರಣ­ದಲ್ಲಿ ರೆಡ್ಡಿ­ಯವರಿಗೆ ಮಾತ್ರ ಜಾಮೀನು ನೀಡಿ, ಅದೇ ಪ್ರಕರಣದ ಸಹ­ಆರೋಪಿ­ಯಾಗಿದ್ದ ಐಎಎಸ್‌ ಅಧಿಕಾರಿ ವೈ. ಶ್ರೀಲಕ್ಷ್ಮಿ ಅವ­ರಿಗೆ ಜಾಮೀನು ನೀಡಿರ­ಲಿಲ್ಲ. ಇದರಿಂದ ಅನುಮಾನಗೊಂಡ ಸಿಬಿಐಯು ತನಿಖೆಯನ್ನು ಆರಂಭಿಸಿ, ಲಂಚ ಪ್ರಕರಣವನ್ನು ಬಯ­ಲಿಗೆಳೆದಿತ್ತು.

ಇದಾದ ನಂತರ ಹೈಕೋರ್ಟ್‌, ರಾವ್‌ ಅವರನ್ನು ಸೇವೆಯಿಂದ ಅಮಾನತು­ಗೊಳಿಸಿ, ಅವರು ರೆಡ್ಡಿ ಅವ­­ರಿಗೆ ನೀಡಿದ್ದ ಜಾಮೀ­ನನ್ನು ರದ್ದು­ಗೊಳಿಸಿತ್ತು. ನಂತರ ಎಸಿಬಿಯು ಪ್ರಕ­ರಣ­ದಲ್ಲಿ ರಾವ್‌ ಸೇರಿ­ದಂತೆ­ ಸೇವೆ­ಯಲ್ಲಿದ್ದ ಮೂವರು ನ್ಯಾಯಾ­­ಧೀಶರು ಮತ್ತು ಇತರ ಎಂಟು ಆರೋಪಿಗಳನ್ನು ಬಂಧಿಸಿತ್ತು. ಈಗ ರೆಡ್ಡಿ ಹೊರತುಪಡಿಸಿ ಉಳಿದೆಲ್ಲ ಆರೋಪಿ­ಗಳು ಜಾಮೀನಿನ ಮೇಲೆ ಜೈಲಿ­ನಿಂದ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT