ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪ್ತಿಯಾದ ಕಾರುಗಳಿಗೆ ಮಾಲೀಕರಿಲ್ಲ!

ದೂಳು ತಿನ್ನುತ್ತಿವೆ ಸಾರಿಗೆ ಇಲಾಖೆ ವಶದಲ್ಲಿರುವ ವಾಹನಗಳು
Last Updated 31 ಆಗಸ್ಟ್ 2015, 20:01 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಇಲಾಖೆ ಅಧಿಕಾರಿಗಳು ರಾಜಧಾನಿಯಲ್ಲಿ ತೆರಿಗೆ ವಂಚನೆಯಡಿ ಕಳೆದ ಆರು ತಿಂಗಳಲ್ಲಿ ಜಪ್ತಿ ಮಾಡಿರುವ ಸುಮಾರು 50 ಐಷಾರಾಮಿ ಕಾರುಗಳಿಗೆ ಮಾಲೀಕರೇ ಇಲ್ಲ!

ಈ ಪೈಕಿ ಪ್ರತಿಷ್ಠಿತ ಕಂಪೆನಿಗಳ ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯೂ, ಫೋಕ್ಸ್‌ ವ್ಯಾಗನ್, ಆಡಿ, ಇನ್ನೋವಾ  ಕಾರುಗಳೂ ಸೇರಿವೆ.

ಪುದುಚೇರಿ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನೋಂದಣಿಯಾಗಿರುವ ಈ ಕಾರುಗಳು  ವಾಹನಗಳಿಗೆ ವಿಧಿಸುವ ಜೀವಿತಾವಧಿ ತೆರಿಗೆ (ಲೈಫ್ ಟೈಮ್ ಟ್ಯಾಕ್ಸ್‌) ಕಟ್ಟದೆ ರಾಜ್ಯದಲ್ಲಿ ಸಂಚರಿಸುತ್ತಿದ್ದವು. ಈ ಸಂಬಂಧ ನಗರದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಅಧಿಕಾರಿಗಳು ಅಂತಹ ಕಾರುಗಳನ್ನು ಜಪ್ತಿ ಮಾಡಿದ್ದರು.

‘ಕಾರ್ಯಾಚರಣೆ ವೇಳೆ ಅಧಿಕಾರಿಗಳನ್ನು ಕಂಡ ಕೂಡಲೇ ಕೆಲ ಕಾರಿನ ಮಾಲೀಕರು ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದರು. ಇನ್ನುಳಿದವರು ನಕಲಿ ವಿಳಾಸ ನೀಡಿದ್ದಾರೆ’ ಎಂದು ಇಲಾಖೆಯ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಈ ಕಾರುಗಳ ಪೈಕಿ ಕೆಲವು ನಕಲಿ ನಂಬರ್ ಪ್ಲೇಟ್‌ ಹೊಂದಿದ್ದು, ಮೂಲ ಮಾಲೀಕರು ಯಾರು? ವಿಳಾಸ ಏನು? ಎಂಬುದು ಕಗ್ಗಂಟಾಗಿದೆ’ ಎಂದರು.

‘ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿರುವ ಈ ಐಷಾರಾಮಿ ಕಾರುಗಳನ್ನು ಇದುವರೆಗೆ ಯಾರೂ ಬಿಡಿಸಿಕೊಳ್ಳಲು ಬಂದಿಲ್ಲ. ಇಷ್ಟು ದೊಡ್ಡ ಮೊತ್ತ ಕೊಟ್ಟು ಕಾರುಗಳನ್ನು ಖರೀದಿಸುವ ಮಾಲೀಕರು ರಾಜ್ಯದಲ್ಲಿ ಜೀವಿತಾವಧಿ ತೆರಿಗೆ ಪಾವತಿಸಲು ಮಾತ್ರ ಹಿಂದೇಟು ಹಾಕುತ್ತಾರೆ’ ಎಂದರು.

ನಿಲುಗಡೆ ಶುಲ್ಕ ಕಟ್ಟಬೇಕು: ‘ಜಪ್ತಿ ಮಾಡಿರುವ ವಾಹನಗಳನ್ನು ನಿಲ್ಲಿಸಲು ಇಲಾಖೆಗೆ ನಿಗದಿತ ಸ್ಥಳಾವಕಾಶವಿಲ್ಲ. ಹಾಗಾಗಿ ನಗರದ ಮೆಜೆಸ್ಟಿಕ್, ಹೆಬ್ಬಾಳ, ಕೆಂಗೇರಿ ಸೇರಿ ಕೆಲ ಬಿಎಂಟಿಸಿ ಡಿಪೊಗಳಲ್ಲಿ ಈ ವಾಹನಗಳನ್ನು ನಿಲ್ಲಿಸಲಾಗುವುದು. ಇದಕ್ಕಾಗಿ ಬಿಎಂಟಿಸಿಗೆ ನಾವು ನಿಲುಗಡೆ ಶುಲ್ಕ ಪಾವತಿಸುತ್ತೇವೆ. ಈ ಸಂಬಂಧ ಬಿಎಂಟಿಸಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ತಿಂಗಳಿಗೊಮ್ಮೆ ಶುಲ್ಕ ಪಾವತಿಸಲಾಗುವುದು’ ಎಂದು ಅಧಿಕಾರಿಗಳು ಹೇಳಿದರು.

ಕಳವು ಮಾಡಿದ್ದ ಕಾರುಗಳೇ...?: ‘ಜಪ್ತಿ ಮಾಡಿರುವ ಕಾರುಗಳ ಮಾಲೀಕರು ಇನ್ನೂ ಬಿಡಿಸಿಕೊಳ್ಳಲು ಬಂದಿಲ್ಲ ಎಂದರೆ, ಬಹುಶಃ ಸಮಾಜ ವಿರೋಧಿ ಕೃತ್ಯಗಳಿಗಾಗಿ ಬೇರೆ ಕಡೆಯಿಂದ ಈ ಕಾರುಗಳನ್ನು ಕಳವು ಮಾಡಿಕೊಂಡು ಬಂದಿರಬಹುದು’ ಎಂದು ಹೋಳ್ಕರ್ ಅನುಮಾನ ವ್ಯಕ್ತಪಡಿಸಿದರು. ‘ಪೊಲೀಸರ ನೆರವಿನಿಂದ ಕಾರುಗಳ ಮಾಲೀಕರ ಪತ್ತೆಗೆ ಯತ್ನಿಸಲಾಗುವುದು. ಆಗಲೂ ಮಾಲೀಕರು ಪತ್ತೆಯಾಗದಿದ್ದರೆ, ಕಾನೂನು ಸಲಹೆ ಪಡೆದು ವಾಹನಗಳನ್ನು ಹರಾಜು ಹಾಕಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT