ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಾಬಂದಿಗೆ ಜಾಗವಿಲ್ಲವೇ?

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಪಂಚಾಯಿತಿ ಜಮಾಬಂದಿ ನಿರ್ವಹಣೆ. ತಳಹಂತದ ಸರ್ಕಾರವಾದ ಗ್ರಾಮ ಪಂಚಾಯಿತಿಗಳ ಉತ್ತರದಾಯಿತ್ವಕ್ಕೆ ಕೈಗನ್ನಡಿಯಂತೆ. ಜವಾಬ್ದಾರಿಗಳ ನಿರ್ವಹಣೆ, ಪಾರದರ್ಶಕ ಆಡಳಿತ ಮತ್ತು ಅದರಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವ ಜಮಾಬಂದಿಗೆ ಈಗ ಪಂಚಾಯಿತಿ ಅಂಗಳದಲ್ಲಿ ಜಾಗದ ಕೊರತೆ. ಜಾಗವೆಂದರೆ ಭೌತಿಕ ಜಾಗವಲ್ಲ. ಜಮಾಬಂದಿ ಮಾಡುವ ಸಮಯಾವಕಾಶದ ಕೊರತೆ. ಅಧಿಕಾರಿ ವಲಯದಲ್ಲಿ ಬದ್ಧತೆಯ ಕೊರತೆ.

ಯಾರಿಗೇ ಆದರೂ, ಯಾವುದಕ್ಕೇ ಆದರೂ ಸಮಯ ಕೊಟ್ಟರೆ ನಿನ್ನನ್ನೇ ಕೊಟ್ಟಂತೆ ಎಂಬ ಮಾತಿದೆ. ಆದರೆ ಹಾಗೆ ಜಮಾಬಂದಿಗೆ ಕೊಡುವ ವಿಚಾರದಲ್ಲಿ ಗ್ರಾಮ ಪಂಚಾಯಿತಿಗಳು ಮತ್ತು ತಾಲ್ಲೂಕು ಪಂಚಾಯಿತಿಗಳು ಚೌಕಾಸಿ ಮಾಡುತ್ತಿರುವುದು ವಿಪರ್ಯಾಸ.
2005ರಲ್ಲಿ ಪಂಚಾಯಿತಿ ಜಮಾಬಂದಿ ನಿರ್ವಹಣೆ ವ್ಯವಸ್ಥೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜಾರಿಗೆ ಬಂತು.  ಕರ್ನಾಟಕ ಪಂಚಾಯಿತಿ ರಾಜ್‌ (ಪಂಚಾಯಿತಿ ಜಮಾಬಂದಿ ನಿರ್ವಹಣೆ) ನಿಯಮಗಳು 2004 ಹೆಸರಿನಲ್ಲಿ ಈ ಅಧಿನಿಯಮ ಮಸೂದೆಯಾಗಿ ಜಾರಿಗೆ ಬಂದಿದೆ.

ತಾಲ್ಲೂಕು ಪಂಚಾಯಿತಿಯ ಒಬ್ಬ ಅಧಿಕಾರಿಯ ನೇತೃತ್ವದಲ್ಲಿ, ವರ್ಷಕ್ಕೊಂದು ಬಾರಿ ಆಗಸ್ಟ್ 16ರಿಂದ ಸೆಪ್ಟೆಂಬರ್‌ 15ರವರೆಗೆ ಜನರ ಸಮಕ್ಷಮದಲ್ಲಿ ನಡೆಯಬೇಕು. ಗ್ರಾಮ ಪಂಚಾಯಿತಿಯು ನಿರ್ವಹಿಸಿದ ಲೆಕ್ಕಗಳು, ರಿಜಿಸ್ಟರ್‌ಗಳು ಮತ್ತು ಪೂರ್ಣಗೊಳಿಸಿದ ಕಾಮಗಾರಿಗಳ ವಾರ್ಷಿಕ ತನಿಖೆಯನ್ನೇ ಜಮಾಬಂದಿ ಎನ್ನಲಾಗುತ್ತದೆ. ಆಡಳಿತದಲ್ಲಿ ಪಾರದರ್ಶಕತೆ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ವಿಳಂಬವಿಲ್ಲದ ನ್ಯಾಯ ಸಮ್ಮತ ಆಡಳಿತಕ್ಕೆ ಈ ವಾರ್ಷಿಕ ತನಿಖೆಯ ಕೆಲಸ ಪಂಚಾಯಿತಿಗಳಲ್ಲಿ ನಿಯಮಿತವಾಗಿ ನಡೆಯುತ್ತಿಲ್ಲ.

ಕೋಲಾರ ಜಿಲ್ಲೆಯ ಐದು ತಾಲ್ಲೂಕು ಪಂಚಾಯಿತಿಗಳ ವ್ಯಾಪ್ತಿಯಲ್ಲಿ 156 ಗ್ರಾಮ ಪಂಚಾಯಿತಿಗಳಿವೆ. ಆದರೆ ಇದುವರೆಗೆ ಕೇವಲ ಬೆರಳೆಣಿಕೆಯಷ್ಟು ಪಂಚಾಯಿತಿಗಳಲ್ಲಿ ಮಾತ್ರ ಜಮಾಬಂದಿ ನಡೆದಿದೆ. ಬಹುತೇಕ ಪಂಚಾಯಿತಿಗಳಲ್ಲಿ ಇನ್ನೂ ಶುರುವಾಗಬೇಕಿದೆ.
‘ಏನು ಮಾಡೋದು? ನರೇಗ, ನಿರ್ಮಲ ಭಾರತ ಅಭಿಯಾನದ ಗುರಿ ಸಾಧಿಸಲು ನಮ್ಮ ಪಿಡಿಓಗಳಿಗೆ ಸಮಯವೇ ಇಲ್ಲದಂತಾಗಿದೆ. ಇನ್ನು ಜಮಾಬಂದಿಗೆ ಸಮಯ ಎಲ್ಲಿ ಬಂತು?’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿಯೊಂದರ ಕಾರ್ಯನಿರ್ವಹಣಾಧಿಕಾರಿಯೊಬ್ಬರು.

ಸಮಯಾಭಾವದ ಕಾರಣದಿಂದಲೇ ಗ್ರಾಮ ಪಂಚಾಯಿತಿಗಳಲ್ಲಿ ಇನ್ನೂ ಜಮಾಬಂದಿ ನಿರ್ವಹಣೆಯ ತಂಡಗಳೇ ರಚನೆಯಾಗಿಲ್ಲ. ಇನ್ನು ಆಗಸ್ಟ್ 16ರಿಂದ ಸೆಪ್ಟೆಂಬರ್‌ 15ರ ಒಳಗಿನ ಅವಧಿಯಲ್ಲಿ ಜಮಾಬಂದಿ ಮುಕ್ತಾಯವಾಗುವ ರೀತಿಯಲ್ಲಿ ವೇಳಾಪಟ್ಟಿ ರಚನೆಯಾಗ­ಬೇಕು. ಆದರೆ ಸೆಪ್ಟೆಂಬರ್‌ 15 ಆದರೂ, ವೇಳಾಪಟ್ಟಿಯೇ ಸಿದ್ಧಗೊಂಡಿಲ್ಲ. ಜಮಾಬಂದಿ ವೇಳಾಪಟ್ಟಿಯನ್ನು ಎಲ್ಲ ಗ್ರಾಮ ಪಂಚಾಯಿತಿಗಳಿಗೆ 30 ದಿನ ಮುಂಚಿತವಾಗಿ ಕಳುಹಿಸಬೇಕು ಎಂಬ ಸಾಮಾನ್ಯ ನಿಯಮವಿದೆ. ಆ ನಿಯಮದ ಪ್ರಕಾರವೇ ನಡೆದರೂ, ಕೋಲಾರ ಜಿಲ್ಲೆಯಲ್ಲಿ ಜಮಾಬಂದಿ ಎಲ್ಲೆಡೆ ಶುರುವಾಗಲು ಇನ್ನೂ ಒಂದು ತಿಂಗಳಾದರೂ ಬೇಕಾಗುತ್ತದೆ.

ಜಮಾಬಂದಿ ಎಂದರೆ ಗ್ರಾಮ ಪಂಚಾಯಿತಿಯ ಎಲ್ಲ ಲೆಕ್ಕ ಮತ್ತು ರಿಜಿಸ್ಟರ್‌ಗಳ ತನಿಖೆಯಷ್ಟೇ ಅಲ್ಲ. ಜಮಾಬಂದಿ ಅಧಿಕಾರಿ ಮತ್ತು ತಂಡ ಆಯ್ದ ಕಾಮಗಾರಿಗಳ ತನಿಖೆಯನ್ನೂ ಮಾಡುತ್ತದೆ. ಆದರೆ ಇಷ್ಟೊಂದು ಗಂಭೀರ­ವಾಗಿ ಜಮಾಬಂದಿಗಳು ನಡೆಯುವುದಿಲ್ಲ ಎಂಬ ದೂರುಗಳೂ ಸಾಮಾನ್ಯವಾಗಿ ಕೇಳಿಬರುತ್ತವೆ. ಉದಾಹರಣೆಗೆ, ನಿರ್ಮಲ ಭಾರತ ಅಭಿಯಾನದ ಅಡಿಯಲ್ಲಿ ವೈಯಕ್ತಿಕ ಶೌಚಾಲಯದ ಪ್ರಗತಿ ಸಾಧಿಸುವ ಸಲುವಾಗಿ ಪಂಚಾಯಿತಿ ಕೇಂದ್ರದಲ್ಲಿಯೇ ಕಾರ್ಯಾದೇಶವನ್ನು ನೀಡುವ ಅಭಿಯಾನ ರಾಜ್ಯದೆಲ್ಲೆಡೆ ಈಗ ಶುರುವಾಗಿದೆ.  ಆದರೆ ಈ ಅಭಿಯಾನಕ್ಕೂ ಮುನ್ನ ಹಲವು ವರ್ಷಗಳ ಹಿಂದೆ ನಿರ್ಮಿಸಿದ ಶೌಚಾಲಯಗಳಿಗೆ ಹಣವನ್ನೇ ನೀಡಿಲ್ಲ ಎಂಬ ದೂರುಗಳೂ ಇವೆ.

ಜಮಾಬಂದಿ ನಡೆಸುವವರ ಪ್ರಮುಖ ಜವಾಬ್ದಾರಿಗಳಲ್ಲಿ, ಫಲಾನುಭವಿ ಆಧಾ­ರಿತ ಯೋಜನೆಗಳಲ್ಲಿ ಫಲಾನುಭವಿ­ಗಳು ಪೂರ್ಣ ಮೊತ್ತವನ್ನು ಸ್ವೀಕರಿಸಿ­ದ್ದಾರೆಯೇ ಎಂಬುದನ್ನು ಖಚಿತಪಡಿಸಿ­ಕೊಳ್ಳುವುದೂ ಒಂದು. ಆದರೆ ಹಾಗೆ ಖಚಿತಪಡಿಸಿ­ಕೊಳ್ಳುವ ಪ್ರಯತ್ನಗಳು ಮಾತ್ರ ಸಮರ್ಪಕವಾಗಿ ನಡೆಯುವುದೇ ಇಲ್ಲ. 

ಕೋಲಾರ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಗ್ರಾಮ ಪಂಚಾ­ಯಿತಿ ಸದಸ್ಯರಿಗೆ ಕೆಲವು ತಿಂಗಳ ಹಿಂದೆ ಏರ್ಪಡಿಸಿದ್ದ ಶೌಚಾಲಯ ಜಾಗೃತಿ ಕಾರ್ಯಾಗಾರದಲ್ಲಿ, ನಿರ್ಮಲ ಭಾರತ ಅಭಿಯಾನದ ಜಿಲ್ಲಾ ಸಂಯೋಜಕರನ್ನು ಸದಸ್ಯರೆಲ್ಲರೂ ಒಟ್ಟಾಗಿ ತರಾಟೆಗೆ ತೆಗೆದುಕೊಂಡಿದ್ದರು. ಹಿಂದಿನ ವರ್ಷದ ಅನುದಾನವನ್ನೇ ಜನರಿಗೆ ನೀಡದಿದ್ದರೆ ಮತ್ತೆ ಅವರಲ್ಲಿ ಜಾಗೃತಿಯ ಮಾತನಾಡು­ವುದು ಹೇಗೆ ಎಂಬುದು ಸದಸ್ಯರ ಪ್ರಶ್ನೆಯಾಗಿತ್ತು.  ಜಮಾಬಂದಿ ಸರಿಯಾಗಿ ನಡೆದಿದ್ದರೆ ಈ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ.

ಸರ್ಕಾರದ ಅನುದಾನಗಳ ಬಳಕೆ, ಮಾಸಿಕ ಲೆಕ್ಕಪತ್ರ, ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಅನುದಾನದ ಬಳಕೆ, ಪಂಚಾಯಿತಿಯ ಇತರೆ ಸಮಿತಿಗಳ ಕಾರ್ಯನಿರ್ವಹಣೆಯನ್ನೂ ಜಮಾಬಂದಿ ಸಂದರ್ಭದಲ್ಲಿ ಪರಿಶೀಲಿಸಬೇಕಾಗುತ್ತದೆ. ಆದರೆ ಅದಕ್ಕೆಲ್ಲ ಸಮಯ ಎಲ್ಲಿದೆ? ಕೋಲಾರ ತಾಲ್ಲೂಕಿನ ಮಾರ್ಜೇನಹಳ್ಳಿ ಪಂಚಾಯಿತಿಯಲ್ಲಿ 2004ರಿಂದ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಯಬೇಕು ಎಂದು ಗ್ರಾಮಸ್ಥರು ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗಷ್ಟೇ ಆಗ್ರಹಿಸಿದ್ದರು.

ಹಲವು ಬಾರಿ ದೂರು ನೀಡಿದರೂ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾಧಿಕಾರಿ ಸೇರಿದಂತೆ ಯಾರೂ ಕ್ರಮ ಕೈಗೊಂಡಿಲ್ಲ ಎಂಬುದು ಅವರ ದೂರು ಆಗಿತ್ತು. ಜಮಾಬಂದಿ ಸಮಯದಲ್ಲಿ ಇವೆಲ್ಲವೂ ಚರ್ಚೆಗೆ ಬರುವಂತೆ ನೋಡಿಕೊಳ್ಳಲಿಲ್ಲವೇ? ಎಂದು ಕೇಳಿದರೆ, ಜಮಾಬಂದಿ ನಡೆದರೆ ತಾನೇ? ಎಂಬ ಪ್ರತ್ಯುತ್ತರ ಬಂತು! ಇದೇ ವೇಳೆ, ಸುದ್ದಿಗೋಷ್ಠಿ ಬಳಿಕ ಹೊರ ಬಂದ ಮುಖಂಡರೊಬ್ಬರು ಜಮಾಬಂದಿ ಎಂದರೆ ಏನು? ಎಂಬ ಮುಗ್ದ ಪ್ರಶ್ನೆ ಕೇಳಿದರು.

ಆಸ್ತಿ ತೆರಿಗೆ, ತೆರಿಗೆ ಪಾವತಿ ಮಾಡದವರ ವಿವರಗಳು, ದಿನವಹಿ ಪುಸ್ತಕ ಮತ್ತು ನಗದು ಪುಸ್ತಕದ–ದಾಖಲೆಯ ಹೊಂದಾಣಿಕೆ, ಪರವಾನಗಿ ಶುಲ್ಕ ಉಪಕರ, ಆಸ್ತಿ ದಾಖಲೆಗಳು, ಹಣಕಾಸಿನ ಆಯೋಗದ ಹಣದ ಲಭ್ಯತೆ, ಅನುದಾನ ದೊರಕಿದ ಸಮಯ, ಕ್ರಿಯಾಯೋಜನೆ, ಪಂಚಾಯಿತಿ ದಾಖಲೆಗಳು, ಆಸ್ತಿ ದಾಖಲೆ ಪುಸ್ತಕ, ಬಿಪಿಎಲ್‌ ಪಟ್ಟಿ, ಮನೆ ನಿವೇಶನ ಇಲ್ಲದವರ ಪಟ್ಟಿ, ಕಾಮಗಾರಿಗಳು, ಸಿಬ್ಬಂದಿ, ನೀರು ಸರಬರಾಜು, ಆಯವ್ಯಯ, ಲೆಕ್ಕ ಪರಿಶೋಧನೆ, ಗ್ರಾಮ ಪಂಚಾಯಿತಿಯ ಸಭೆಗಳು, ಸಭೆಯ ನಡಾವಳಿಗಳ ನಿರ್ವಹಣೆ....ಜಮಾಬಂದಿ ಸಮಯದಲ್ಲಿ ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು.

ಈ ಪಟ್ಟಿಯನ್ನು ಗಮನಿಸಿದರೆ, ಒಮ್ಮೆ ಒಂದು ಪಂಚಾಯಿತಿಯಲ್ಲಿ ಜಮಾಬಂದಿ ನಡೆದಿದೆ ಎಂದಾದರೆ, ಆ ಪಂಚಾಯಿತಿಯ ಕಾರ್ಯನಿರ್ವಹಣೆಯ ಎಲ್ಲ ಲೋಪ–ದೋಷ, ಸಾಧಕ–ಬಾಧಕಗಳು ಪಂಚಾಯಿತಿ ವ್ಯಾಪ್ತಿಯ ಎಲ್ಲರಿಗೂ ಸ್ಪಷ್ಟಗೊಳ್ಳುತ್ತವೆ. ಮುಂದಿನ ವರ್ಷದ ಕಾರ್ಯನಿರ್ವಹಣೆಗೊಂದು ಹೊಸ ದಾರಿಯೂ ತೆರೆದುಕೊಳ್ಳುತ್ತದೆ. ಇದು ಪಾರದರ್ಶಕ ಆಡಳಿತಕ್ಕೆ ಇರುವ ಅತ್ಯುತ್ತಮ ಮಾದರಿ.

ಜಮಾಬಂದಿ ಗ್ರಾಮ ಪಂಚಾಯಿತಿ ಆಡಳಿತದ ಖಾಸಗಿ ವಿಷಯವಲ್ಲ. ಅದು ಸಾಮಾಜಿಕ ಪರಿಶೋಧನೆಯ ಜವಾಬ್ದಾರಿ. ಬಹಿರಂಗವಾಗಿ ನಡೆಯುವ ಪರಿಶೋಧನೆ, ತಪಾಸಣೆ. ಆದರೆ ಈ ಪ್ರಕ್ರಿಯೆ ಬಗ್ಗೆ ಹಳ್ಳಿಗಳಲ್ಲಿ ಬಹುಮಂದಿಗೆ ಅರಿವಿನ ಕೊರತೆ ಇದೆ. ಅದಕ್ಕೆ ಮೂಲ ಕಾರಣ, ಜಮಾ­ಬಂದಿಯ ಕುರಿತ ಪ್ರಚಾರದ ಕೊರತೆ. ಪಂಚಾಯಿತಿಯಲ್ಲಿ ಜಮಾಬಂದಿ ಎಂಬು­ದೊಂದು ವಾರ್ಷಿಕ ಚಟುವಟಿಕೆ ನಡೆಯು­ತ್ತದೆ, ನಡೆಯಬೇಕು ಎಂಬುದೇ ಬಹುತೇಕ ಹಳ್ಳಿ ಜನರಿಗೆ ತಿಳಿಯದ ಸನ್ನಿವೇಶವೂ ಇದೆ. ಜಮಾಬಂದಿ ಸಂದರ್ಭದಲ್ಲಿ ಜನರಿಂದ ದೂರುಗಳ ಸ್ವೀಕಾರದ ಮಾತಂತೂ ದೂರವೇ ಉಳಿದಿದೆ.

ಜಮಾಬಂದಿ ಕಚೇರಿ ವ್ಯವಹಾರವಾಗಿಯಷ್ಟೇ ಉಳಿದಿರುವ ಪರಿಣಾಮ ಇದು. ಜಮಾಬಂದಿ ನಡೆಸುವ ಕಾರ್ಯನಿರ್ವ­ಹಣಾಧಿಕಾರಿಯು, ಜಮಾಬಂದಿಯ ವರದಿ­ಯನ್ನು ತಾಲ್ಲೂಕು ಪಂಚಾಯಿತಿಯ ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ಅಧಿನಿಯಮ ಹೇಳುತ್ತದೆ. ಆದರೆ ಅಂಥ ಮಂಡನೆಗಳಿಗೂ ಸಮಯಾವಕಾಶ­ವಿರುವುದಿಲ್ಲ. ಅಥವಾ ‘ಇಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಜಮಾಬಂದಿ ನಡೆದಿದೆ...’ ಎಂಬ ಒಂದು ಸಾಲಿನ ಮಂಡನೆ ನಡೆಯುತ್ತದೆ.

ಜಮಾಬಂದಿಯ ವರದಿಗಳ ಬಗ್ಗೆಯೂ ಗಂಭೀರ ಚರ್ಚೆಗಳು ನಡೆಯುವುದಿಲ್ಲ­ವಾ­ದ್ದ­­ರಿಂದ, ಜಮಾಬಂದಿ ನಡೆಸುವ ಬಗೆಗೆ ಪಂಚಾ­­­ಯಿತಿಗಳು ತಾಳಬೇಕಾದ ಗಂಭೀರ ನಿಲುವಿಗೇ ಪೆಟ್ಟು ಬೀಳುತ್ತಿದೆ ಎಂಬುದನ್ನೂ ಗಮನಿಸಬೇಕಾಗಿದೆ. ಜಮಾಬಂದಿಗೆ ಸಾರ್ವಜನಿಕ ವಲಯ­ದಲ್ಲಿ, ಪಂಚಾಯಿತಿ ಸದಸ್ಯರ ವಲಯದಲ್ಲಿ ಹೆಚ್ಚು ಪ್ರಚಾರ ಕೊಡದೇ ಹೋದರೆ ಇದೊಂದು ಅಧಿಕಾರಿಗಳ ಪ್ರೋಟೋಕಾಲ್‌ ಕಾರ್ಯಕ್ರಮವಾಗಿಯಷ್ಟೇ ನಡೆದು, ಹಾಳೆಗಳ ಮೇಲಷ್ಟೇ ಇರುತ್ತದೆ. ಪಂಚಾ­ಯಿ­ತಿಗಳು ಮಾತ್ರ ಅಭಿವೃದ್ಧಿ ಕಾಣದ ರೋಗ­ಗ್ರಸ್ತ ಸ್ಥಿತಿಯಲ್ಲೇ ಉಳಿಯುವಂ­ತಾ­ಗು­ತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT