ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ತಾ ಮೈದಾನ ಮತ್ತು ಕೇರಮ್ ಬಾಲ್

Last Updated 26 ನವೆಂಬರ್ 2015, 19:30 IST
ಅಕ್ಷರ ಗಾತ್ರ

ನಾಗಪುರ:  ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೂರು ಪಂದ್ಯಗಳ ನಾಲ್ಕು ಇನಿಂಗ್ಸ್‌ಗಳಲ್ಲಿ ಆರ್. ಅಶ್ವಿನ್ ಒಟ್ಟು 18 ವಿಕೆಟ್ ಗಳಿಸಿದ್ದಾರೆ. ಆದರೆ, ಅದರಲ್ಲಿ ಅವರ ಪ್ರಮುಖ ಅಸ್ತ್ರವಾದ ಕೇರಮ್ ಬಾಲ್ ಪ್ರಯೋಗಿಸಿದ್ದು ಒಂದೇ ಬಾರಿ. ಅದೂ ಗುರುವಾರ.

ಮೂರನೇ ಟೆಸ್ಟ್‌ನ ಎರಡನೇ ದಿನ ಬೆಳಿಗ್ಗೆ ಅವರ ಕೇರಮ್ ಬಾಲ್‌ಗೆ ಸೈಮನ್ ಹಾರ್ಮರ್ ಔಟಾಗಿ ಪೆವಿಲಿಯನ್ ಸೇರಿದರು. ನಾಗಪುರದಲ್ಲಿ 2009ರ ಪಂದ್ಯದಲ್ಲಿ ಅಶ್ವಿನ್ ಪ್ರಥಮ ಬಾರಿ ಕೇರಮ್ ಬಾಲ್ ಪ್ರಯೋಗ ಮಾಡಿ ಯಶಸ್ವಿಯಾಗಿದ್ದರಂತೆ.

ದಿನದಾಟದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಗುಟ್ಟು ಬಿಚ್ಚಿಟ್ಟರು. ‘ಈ ಸರಣಿಯಲ್ಲಿ ಕೇರಮ್ ಬಾಲ್ ಪ್ರಯೋಗಿಸಲು ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ನಾಗಪುರದ ಪಿಚ್‌ನಲ್ಲಿ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರಯೋಗಿಸಿದ್ದು ಫಲ ನೀಡಿತು’ ಎಂದರು.

ಪಂದ್ಯದ ಮೊದಲ ದಿನ 12 ಮತ್ತು ಎರಡನೇ ದಿನ 20 ವಿಕೆಟ್‌ಗಳು ಪತನಗೊಂಡ ಜಮ್ತಾ ಪಿಚ್‌ ಬಗ್ಗೆ ಕೇಳಿದ ಪ್ರಶ್ನೆಗೆ  ಅಶ್ವಿನ್ ತುಸು ಸಿಡಿಮಿಡಿಗೊಂಡರು. ‘ಮೈದಾನದ ಪಿಚ್ ಕ್ಯುರೇಟರ್ ಬಗ್ಗೆ ದೂರು ನೀಡುವ ಅಧಿಕಾರ ನನಗಿಲ್ಲ. ಅವರು ಪಿಚ್‌ನ ಎರಡು ಬದಿಯಲ್ಲಿ ಮೂರು–ಮೂರು ಸ್ಟಂಪ್‌ಗಳನ್ನು ನೆಟ್ಟ ಮೇಲೆ ನಾನು ಹೋಗಿ ಅಲ್ಲಿ ಆಡುವುದಷ್ಟೇ ಕೆಲಸ.

ಜೋಹಾನ್ಸ್‌ಬರ್ಗ್‌ನಲ್ಲಿ ಆಡಿದ್ದಾಗಲೂ ನಾನು ದೂರು ನೀಡಿರಲಿಲ್ಲ. ಟ್ರೆಂಟ್‌ಬ್ರಿಡ್ಜ್‌ನಲ್ಲಿ ಎರಡೇ ದಿನದಲ್ಲಿ ಪಂದ್ಯ ಮುಗಿದಿತ್ತು. ಆಗಲೂ ನಾನು ದೂರಿಲ್ಲ. ಪಿಚ್ ಸ್ಪಿನ್ ಅಥವಾ ಸ್ವಿಂಗ್ ಸ್ನೇಹಿ ಯಾವುದೇ ಆಗಿರಲಿ ಬ್ಯಾಟ್ಸ್‌ಮನ್ ಕೌಶಲ್ಯ ಮುಖ್ಯವಾಗಿರುತ್ತದೆ. ಆದರೆ, ಭಾರತದಲ್ಲಿ ಬ್ಯಾಟಿಂಗ್‌ಗೆ ಹೆಚ್ಚು ಪ್ರಾಧಾನ್ಯತೆ ಇದೆ. ನಮ್ಮ ಪೀಳಿಗೆಯ ಸ್ಪಿನ್ನರ್‌ಗಳು ಹೆಚ್ಚು ಸಾಧನೆ ಮಾಡಿದಾಗ ಯುವ ಆಟಗಾರರಿಗೆ ಪ್ರೇರಣೆ ಸಿಗುತ್ತದೆ. ಮತ್ತಷ್ಟು ಉತ್ತಮ ಸ್ಪಿನ್ನರ್‌ಗಳು ಸಿದ್ಧರಾಗುತ್ತಾರೆ’ ಎಂದು ಹೇಳಿದರು. 

ಟ್ವೀಟ್‌ಗಳು
ಜನರು ಬ್ಯಾಟ್ ಮತ್ತು ಚೆಂಡಿನ ನಡುವಿನ ಕದನವನ್ನು ನೋಡಲು ಇಷ್ಟ ಪಡುತ್ತಾರೆ. ಆದರೆ, ಈ ಪಿಚ್ (ನಾಗಪುರ) ಮಾತ್ರ ತಮಾಷೆಯಾಗಿದೆ. ಎರಡನೇ ದಿನವೇ ಈ ರೀತಿ ಇರುವುದು ವಿಚಿತ್ರ
ಅಲೆಕ್ಸ್ ಟುಡರ್ –ಇಂಗ್ಲೆಂಡ್‌ನ ಮಾಜಿ  ಕ್ರಿಕೆಟಿಗ

ಪರ್ಥ್ ಮೈದಾನಕ್ಕಿಂತಲೂ (ಇತ್ತೀಚೆಗೆ ಆಸ್ಟ್ರೇಲಿಯಾ–ನ್ಯೂಜಿಲೆಂಡ್ ನಡುವಣ ಟೆಸ್ಟ್ ಡ್ರಾ ಆಗಿತ್ತು. ರನ್‌ಗಳ ಹೊಳೆಯೇ ಹರಿದಿತ್ತು) ನಾಗಪುರವೇ ಉತ್ತಮ. ಯಾರು ಏನು ಬೇಕಾದರೂ ದೂರು ನೀಡಲಿ. ಇಲ್ಲಿಯ ಪಂದ್ಯ ಪರ್ಥ್‌ಗಿಂತಲೂ ಹೆಚ್ಚು ಮನರಂಜನೆ ನೀಡುತ್ತಿದೆ.
–ಜಿಮ್ಲಿ ನಿಶಾಮ್, ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್

ದೀರ್ಘ ಕಾಲದಲ್ಲಿ ಕೇವಲ ಪಂದ್ಯ ಗೆಲ್ಲುವ ಉದ್ದೇಶದಿಂದ ಇಂತಹ ಪಿಚ್‌ಗಳನ್ನು ಸಿದ್ಧ ಮಾಡುವುದು ಭಾರತದ ಕ್ರಿಕೆಟ್‌ಗೆ ಮಾರಕವಾಗಲಿದೆ. ಪ್ರವಾಸಿ ತಂಡವು ಇಂತಹ ಪಿಚ್‌ಗಳಲ್ಲಿಯೂ ಪರಿಸ್ಥಿತಿಗೆ ಹೊಂದಿಕೊಂಡು ಆಡಬೇಕು. ಉತ್ತಮ ಪ್ರದರ್ಶನ ನೀಡಬೇಕು ಎನ್ನುವುದೂ ಸತ್ಯ.
–ಹರ್ಷ ಬೋಗ್ಲೆ, ಕ್ರಿಕೆಟ್ ವೀಕ್ಷಕ ವಿವರಣೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT