ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಂತಿ ನೃತ್ಯ ನುಡಿ

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಭಾರತೀಯ ನೃತ್ಯ ಪರಂಪರೆಯಲ್ಲಿ ಭರತನಾಟ್ಯ, ಕಥಕ್‌ ಎರಡೂ ಅನಾದಿ ಕಾಲದಿಂದಲೂ ಇದ್ದ, ಈಗಲೂ ಜನಪ್ರಿಯವಾಗಿರುವ ನೃತ್ಯಪ್ರಕಾರಗಳು. ಈ ಎರಡೂ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿ ವಿಶ್ವವೇದಿಕೆಯಲ್ಲಿ ಮಿಂಚುತ್ತಿರುವ ಅಪರೂಪದ ಕಲಾವಿದೆ ವಿದುಷಿ ಜಯಂತಿ ಈಶ್ವರಪುಟಿ. ಮೂಲತಃ ಬೆಂಗಳೂರಿನ ಮುತ್ಯಾಲ ನಗರದವರಾದ ಈ ಕಲಾವಿದೆ ನೃತ್ಯ ಬದುಕಿನ ಬಹುಕಾಲವನ್ನು ಕಳೆದದ್ದು ದೆಹಲಿ ಮತ್ತು ವಿದೇಶಗಳಲ್ಲೇ.

ನಗರದಲ್ಲಿ ಶುಕ್ರವಾರ ಸಂಜೆ ಈ ಕಲಾವಿದೆಯ ತಂಡದಿಂದ ನೃತ್ಯ ಪ್ರದರ್ಶನವಿದೆ. ಈ ಹಿನ್ನೆಲೆಯಲ್ಲಿ ಮೆಟ್ರೊ ಜತೆ ಜಯಂತಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

*ನಿಮ್ಮ ನೃತ್ಯ ಬದುಕಿನ ಅಪೂರ್ವ ಅನುಭವಗಳನ್ನು ತಿಳಿಸಿ.
-ಒಬ್ಬ ನೃತ್ಯಪಟುವಾಗಿ ವೇದಿಕೆ ಮೇಲೆ ಸಿಗುವ ಅನುಭವಗಳು ನಿಜಕ್ಕೂ ಅನನ್ಯವಾದದ್ದು. ನನ್ನ ಪ್ರತಿಯೊಂದು ನೃತ್ಯ ಕಛೇರಿಯೂ ವಿಭಿನ್ನ ಅನುಭವ ನೀಡುತ್ತದೆ. ಪ್ರೇಕ್ಷಕರು ಕೊಡುವ ಶಹಬ್ಬಾಸ್‌ಗಿರಿ, ಆನಂದ, ಪ್ರೀತಿಪೂರ್ವಕ ಪ್ರತಿಕ್ರಿಯೆ ಎಲ್ಲ ಕಡೆಗಳಲ್ಲೂ ಸಿಗುತ್ತಿದೆ. ಇದೇ ಅನುಭವ ನನ್ನ ನೃತ್ಯ ಬದುಕಿಗೆ ಮೆಟ್ಟಿಲುಗಳು. ಅನೇಕ ಕಡೆಗಳಲ್ಲಿ ನೋಡುಗರು ಕಛೇರಿ ಮುಗಿದ ಮೇಲೆ ಬಂದು ಕೈಕುಲುಕಿ ‘ಯು ರಿಯಲೀ ಟಚ್ಡ್‌ ಮೈ ಸೋಲ್‌; ಐ ನೆವರ್‌ ಫಾರ್ಗೆಟ್‌ ದಿಸ್‌ ಕನ್ಸರ್ಟ್‌..’ ಎಂದಾಗ ನನ್ನ ನೃತ್ಯ ಬದುಕು ಸಾರ್ಥಕ ಎನಿಸಿದ್ದಂತೂ ನಿಜ.

*ವಿದೇಶಗಳಲ್ಲಿ- ಅದರಲ್ಲೂ ಭರತನಾಟ್ಯ ಮತ್ತು ಕಥಕ್‌ ಎರಡೂ ಪ್ರಕಾರಗಳಲ್ಲಿ ಸಾಗರದಾಚೆ ಸಿಗುವ ಅವಕಾಶಗಳ ಬಗ್ಗೆ, ಅಲ್ಲಿಯವರಿಗೆ ನಮ್ಮ ಸಾಂಪ್ರದಾಯಿಕ ನೃತ್ಯದ ಅಭಿರುಚಿ ಬಗ್ಗೆ ವಿವರಿಸುವಿರಾ?
ವಿದೇಶಗಳಲ್ಲಿ ನಮ್ಮ ಸಾಂಪ್ರದಾಯಿಕ ನೃತ್ಯಗಳ ಬಗ್ಗೆ ಬಹಳ ಗೌರವ, ಅಭಿಮಾನ-, ಆದರವಿದೆ. ಪ್ರೇಕ್ಷಕರ ಸ್ಪಂದನ ಅದ್ಭುತವಾಗಿದೆ. ಅಲ್ಲಿ ನೃತ್ಯ ಪ್ರದರ್ಶನಕ್ಕೆ ಯಾವತ್ತೂ ಸಭಾಂಗಣ ಭರ್ತಿ ಇರುತ್ತದೆ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ನೃತ್ಯ ನೋಡಿ ಆಸ್ವಾದಿಸಲು ಬರುವವರ ಸಂಖ್ಯೆ ಕೊಂಚ ಕಡಿಮೆ ಎನಿಸುತ್ತದೆ.

*ನಿಮ್ಮ ನೃತ್ಯ ಬದುಕಿನ ಸಂಕ್ಷಿಪ್ತ ವಿವರ ಕೊಡಿ.
ನಾನು ‘ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಶನ್ಸ್‌’ನ ಕಲಾವಿದೆ. ಭರತನಾಟ್ಯ, ಕಥಕ್‌ ಎರಡರಲ್ಲೂ ಸಾಕಷ್ಟು ಪ್ರಯೋಗ ಮಾಡಿದ್ದೇನೆ. ಆರಂಭದ ಭರತನಾಟ್ಯ ಅಭ್ಯಾಸವನ್ನು ನೃತ್ಯಪಟು ದಿ. ಜನಾರ್ದನ ಶರ್ಮ ಅವರ ಬಳಿ ಮತ್ತು ಖ್ಯಾತ ಕಲಾವಿದೆ ಉಷಾ ದಾತಾರ್‌ ಅವರ ಬಳಿ ಮಾಡಿದೆ. ಬಳಿಕ ಭರತನಾಟ್ಯದ ಪಂದನಲ್ಲೂರು ಶೈಲಿಯ ನೃತ್ಯವನ್ನು ಗುರು ನರ್ಮದಾ ಮತ್ತು ಕಲಾಕ್ಷೇತ್ರ ಶೈಲಿಯನ್ನು ಲೀಲಾ ಸ್ಯಾಮ್ಸನ್‌ ಅವರ ಬಳಿ ಪಡೆದೆ. ಗುರು ಕಲಾನಿಧಿ ನಾರಾಯಣನ್‌ ಅವರ ಬಳಿ ಉನ್ನತ ಅಭ್ಯಾಸ ಮಾಡಿದ್ದೇನೆ.

ಕಥಕ್‌ ಅಭ್ಯಾಸವನ್ನು ಗುರು ಡಾ. ಮಾಯಾರಾವ್‌ ಅವರ ಬಳಿ ಮಾಡಿದ ಬಳಿಕ ನೃತ್ಯಗ್ರಾಮದಲ್ಲಿ ಗುರು ಕುಮುದಿನಿ ಲಾಖಿಯ ಅವರ ಬಳಿ ಗುರುಕುಲ ಪದ್ಧತಿಯಲ್ಲೂ ಕಲಿತೆ. ಅದಾಗಿ ನೃತ್ಯದಲ್ಲಿ ಉನ್ನತ ಸಾಧನೆ ಮಾಡಬೇಕು ಎಂಬ ಛಲದಿಂದ ದೆಹಲಿಗೆ ತೆರಳಿ ಪಂ. ಬಿರ್ಜು ಮಹಾರಾಜ್‌ ಅವರ ಬಳಿ ನೃತ್ಯದ ಹಲವು ಪ್ರಯೋಗಾತ್ಮಕ ಮತ್ತು ತಾಂತ್ರಿಕ ಅಂಶಗಳನ್ನು ಕಲಿತು ನೃತ್ಯದಲ್ಲಿ ಗಟ್ಟಿಯಾಗಿ ನೆಲೆ ನಿಂತೆ.

*ವಿಶ್ವ ವೇದಿಕೆಗಳಲ್ಲಿ ನಿಮ್ಮ ನೃತ್ಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ.
ನಾನು ಕಥಕ್‌-, ಭರತನಾಟ್ಯ ಎರಡೂ ಪದ್ಧತಿಗಳ ನೃತ್ಯದಲ್ಲಿ ಭಾರತವನ್ನು ಹಲವು ಬಾರಿ ಪ್ರತಿನಿಧಿಸಿದ್ದೇನೆ. ಅಮೆರಿಕ, ಇಂಗ್ಲೆಂಡ್, ನಾರ್ವೆ, ಡೆನ್ಮಾರ್ಕ್‌, ದಕ್ಷಿಣ ಕೊರಿಯಾ ಮತ್ತು ಚೀನಾಗಳಲ್ಲಿ ಅನೇಕ ಭರತನಾಟ್ಯ, -ಕಥಕ್‌ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ ನೃತ್ಯದ ಪ್ರಾತ್ಯಕ್ಷಿಕೆ, ತರಬೇತಿಗಳನ್ನೂ ನಡೆಸಿಕೊಟ್ಟಿದ್ದೇನೆ.

ಓಸ್ಲೋದ ಬ್ಲ್ಯಾಕ್‌ ಥಿಯೇಟರ್‌ ಡ್ಯಾನ್ಸ್ ಕಂಪೆನಿ 2010ರಲ್ಲಿ ನಡೆಸಿದ ನೃತ್ಯ ಕಾರ್ಯಾಗಾರದಲ್ಲಿ ಇಂಡಿಯನ್‌ ರಿದಮ್ಸ್‌ ಅಂಡ್‌ ಮೂವ್‌ಮೆಂಟ್‌ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದ್ದೇನೆ. ಚೀನಾದಲ್ಲಿ ಏಷ್ಯಾ ಆರ್ಟ್ಸ್‌ ಫೆಸ್ಟಿವಲ್‌ನಲ್ಲಿ ನಡೆಸಿಕೊಟ್ಟ ನೃತ್ಯಪ್ರದರ್ಶನ ವಿಶ್ವಮಟ್ಟದಲ್ಲಿ ನೃತ್ಯಪ್ರಿಯರ ಗಮನ ಸೆಳೆದಿದೆ. ಬೆಂಗಳೂರಿನಲ್ಲಿ ಸುಮಾರು ಎಂಟು ವರ್ಷಗಳ ಹಿಂದೆ ನಡೆದ ಸಂಗೀತ ನೃತ್ಯ ಗಂಗಾ ಮಹೋತ್ಸವದಲ್ಲಿ ಭರತನಾಟ್ಯ ಹಾಗೂ ದಕ್ಷಿಣ ಕೊರಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಉತ್ಸವದಲ್ಲಿ ಇವರ ನೃತ್ಯ ಪ್ರದರ್ಶನ ದಾಖಲೆಯ ಭಾಷ್ಯ ಬರೆದಿದೆ.

*ಸಾಂಪ್ರದಾಯಿಕ ನೃತ್ಯ ಶೈಲಿಗಳತ್ತ ಇಂದಿನ ಆಧುನಿಕ ಮನೋಭಾವದ ಮಕ್ಕಳ ಒಲವು ಹೇಗಿದೆ?
-ಭರತನಾಟ್ಯ, ಕಥಕ್‌ ನೃತ್ಯಗಳತ್ತ ಇಂದಿನ ಮಕ್ಕಳ ಆಸಕ್ತಿ, ಒಲವು ನೋಡಿದರೆ ನಿಜಕ್ಕೂ ಖುಷಿಯಾಗುತ್ತದೆ.

*ನೃತ್ಯ ಕಲಿಯುವ ಮಕ್ಕಳಿಗೆ ನೀವು ನೀಡುವ ಉತ್ತೇಜನಾತ್ಮಕ ಮಾತುಗಳು..?
ಭಾರತೀಯ ಶಾಸ್ತ್ರೀಯ ನೃತ್ಯಕ್ಕೆ ಅದರದ್ದೇ ಆದ ಸ್ಥಾನವಿದೆ. ಉತ್ತಮ ಪರಂಪರೆಯಿದೆ, ಭದ್ರ ತಳಹದಿ ಇದೆ. ಇವೆಲ್ಲವೂ ನೃತ್ಯದ ಆಧುನಿಕ ಪ್ರಕಾರಗಳಲ್ಲಾಗಲಿ, ಸಮಕಾಲೀನ ನೃತ್ಯದಲ್ಲಾಗಲಿ ಕಾಣುವುದು ಕಡಿಮೆ ಎಂದೇ ಹೇಳಬೇಕು. ಶಾಸ್ತ್ರೀಯ ನೃತ್ಯ ನಿಜಕ್ಕೂ ಸುಂದರ. ಹೆಜ್ಜೆಗಳ ಸ್ಪಷ್ಟತೆ, ಅಡವುಗಳು, ಗೆಜ್ಜೆಗಳ ರಿಂಗಣ ಎಲ್ಲವೂ ಅದ್ಭುತ. ಭಾರತೀಯ ನೃತ್ಯದ ಖ್ಯಾತನಾಮರು ಈ ಪರಂಪರೆಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ದಾರಿದೀಪ ಹಾಕಿಕೊಟ್ಟಿದ್ದಾರೆ. ಅದನ್ನು ಮುಂದುವರಿಸುವುದು ಇಂದಿನ ಯುವ ನೃತ್ಯಕಲಾವಿದರ ಜವಾಬ್ದಾರಿಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT