ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಓಟ ಮುಂದುವರಿಸಿದ ಟೈಟಾನ್ಸ್‌

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ಸುಖೇಶ್ ಹೆಗಡೆ ಮತ್ತು ಪ್ರಶಾಂತ್ ರೈ ಅವರ ಚುರುಕಿನ ಆಟದ ಫಲವಾಗಿ ತೆಲುಗು ಟೈಟಾನ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಐದನೇ ಜಯ ಸಾಧಿಸಿತು. ಪಾಟಲೀಪುತ್ರ ಕ್ರೀಡಾ ಸಂಕೀರ್ಣ ದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟೈಟಾನ್ಸ್‌ ತಂಡವು 34–22ರಿಂದ ಆತಿಥೇಯ ಪಟ್ನಾ ಪೈರೆಟ್ಸ್ ವಿರುದ್ಧ ಗೆದ್ದಿತು.

ಟೂರ್ನಿಯಲ್ಲಿ ಒಟ್ಟು 26 ಅಂಕ ಗಳನ್ನು ಗಳಿಸಿರುವ ಟೈಟಾನ್ಸ್‌ ತಂಡವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ,  ಪಟ್ನಾ ತಂಡವು ಕೊನೆಯ ಸ್ಥಾನದಲ್ಲಿದೆ. ಪಂದ್ಯದ ಆರಂಭದಲ್ಲಿ ಎರಡೂ ತಂಡಗಳು ಸಮಬಲದ ಆಟವಾಡಿದವು.    ಮೊದಲಾರ್ಧದ ಅಂತ್ಯಕ್ಕೆ ಟೈಟಾನ್ಸ್‌ ತಂಡವು 13–12ರಿಂದ ಮುಂದಿತ್ತು. ಉಭಯ ತಂಡಗಳ ನಡುವೆ ಕೇವಲ ಒಂದು ಅಂಕದ ಅಂತರ ಮಾತ್ರ ಇತ್ತು. ಪಟ್ನಾ ತಂಡಕ್ಕೆ ರಾಕೇಶ್ ಉತ್ತಮ ಆರಂಭ ನೀಡಿದ್ದರು. ಅವರಿಗೆ ಯುವ ಆಟಗಾರ ಸಂದೀಪ್ ನರ್ವಾಲ್ ಉತ್ತಮ ಬೆಂಬಲ ನೀಡಿದರು.  ಅವರು ರೈಡಿಂಗ್‌ ನಲ್ಲಿ ಎರಡು ಪಾಯಿಂಟ್ ಗಳಿಸಿದರು.

ಆದರೆ ವಿರಾಮದ ನಂತರ ಚುರುಕಿನ ರೈಡಿಂಗ್ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರಿದ ಸುಖೇಶ್ ಮತ್ತು ಪ್ರಶಾಂತ್  ತಮ್ಮ ತಂಡಕ್ಕೆ ಜಯದ ಕಾಣಿಕೆ ನೀಡಿದರು. ಒತ್ತಡದಲ್ಲಿ ಸಿಲುಕಿದ ಪಟ್ನಾ ತಂಡಕ್ಕೆ ಮತ್ತಷ್ಟು ಸಂಕಷ್ಟ ಒಡ್ಡಿದ ಟೈಟಾನ್‌ ತಂಡದ ಲೆಫ್ಟ್‌ ಕಾರ್ನರ್ ಆಟಗಾರ ಸಂದೀಪ್ ಎದುರಾಳಿ ತಂಡದ ರೈಡರ್‌ ಗಳನ್ನು  ತಮ್ಮ ಬಲಿಷ್ಠ ಬಾಹುಗಳಲ್ಲಿ ಬಂಧಿಸಿದರು.  
 
ಪ್ರೊ ಲೀಗ್ ಕಬಡ್ಡಿಯ ಎರಡನೇ ಆವೃತ್ತಿಯಲ್ಲಿ ಅತಿ ಹೆಚ್ಚು ಪಾಯಿಂಟ್ ಗಳಿಸಿರುವ ರೈಡರ್ ರಾಹುಲ್ ಚೌಧರಿ ಮತ್ತು ದೀಪಕ್ ನಿವಾಸ ಹುಡ್ಡಾ ಆಲ್‌ರೌಂಡ್ ಆಟವಾಡಿದರು. ಆದರೆ, ತಂಡಕ್ಕೆ 12–9ರ  ಮಹತ್ವದ ಮುನ್ನಡೆ ನೀಡಿದ ಸುಖೇಶ್ ಹೆಗಡೆ ಮಿಂಚಿನ ದಾಳಿಗೆ ಪಟ್ನಾ ತಂಡದ ರಕ್ಷಣಾ ಕೋಟೆ ನುಚ್ಚುನೂರಾಯಿತು.  ತದನಂತರ ಪಟ್ನಾ ತಂಡವು ಹಿಂದಿರುಗಿ ನೋಡಲಿಲ್ಲ. ತಮ್ಮ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ.  ಬದಲೀ ಆಟಗಾರ ಗಿರೀಶ್ ಎರ್ನಾಕ್ ಮತ್ತು ರಾಕೇಶ್ ಕುಮಾರ್ ಅವರು ಉತ್ತಮ ಟ್ಯಾಕ್ಲಿಂಗ್‌ ಮಾಡುವ ಮೂಲಕ ತಂಡಕ್ಕೆ 16–15ರ ಮುನ್ನಡೆ ನೀಡಿದರು.   ನಂತರ ಮತ್ತೆ ಮಿಂಚಿದ ಸುಖೇಶ್ ಹೆಗಡೆ ಮತ್ತು ಪ್ರಶಾಂತ್ ರೈ ಅವರ ರೈಡಿಂಗ್‌ ಫಲವಾಗಿ 37ನೇ ನಿಮಿಷಗಳವರೆಗೆ ತಂಡವು 33–19ರ ಮುನ್ನಡೆ ಸಾಧಿಸಿತು. ಒತ್ತಡದಲ್ಲಿದ್ದ ಪಟ್ನಾ ತಂಡವನ್ನು ಹಣಿಯಿತು.

ಪಂದ್ಯದ ಉತ್ತಮ ರೈಡರ್ ಗೌರವಕ್ಕೆ ತೆಲುಗು ಟೈಟಾನ್ಸ್‌ನ ಪ್ರಶಾಂತ್ ರೈ, ಉತ್ತಮ ಡಿಫೆಂಡರ್ ಪ್ರಶಸ್ತಿಗೆ ಸಂದೀಪ್ ಪಾತ್ರರಾದರು.
ಅವಕಾಶವಿದೆ:  ನಮ್ಮ ತವರಿನ ಅಂಗಳದಲ್ಲಿ ಇದು ನಮ್ಮ ಮೊದಲ ಪಂದ್ಯ. ಈ ಸೋಲಿನಿಂದ ನಾವು ಎದೆಗುಂದಿಲ್ಲ. ನಮಗೆ ಇನ್ನೂ ಒಳ್ಳೆಯ ಅವಕಾಶಗಳು ಇವೆ ಎಂದು ಪಟ್ನಾ ಪೈರೆಟ್ಸ್ ಫ್ರ್ಯಾಂಚೈಸ್ ಮಾಲೀಕ ರಾಜೇಶ್ ವಿ ಷಾ ಹೇಳಿದ್ದಾರೆ.

ಟೂರ್ನಿಯಲ್ಲಿ ನಮ್ಮ ತಂಡದ ಆಟಗಾರರು ಉತ್ತಮವಾಗಿ ಆಡುತ್ತಿದ್ದಾರೆ.  ಪಟ್ನಾ ಪೈರೆಟ್ಸ್‌ ಸವಾಲು ಎದುರಿಸಿದ್ದು ವಿಶೇಷ ಅನುಭವ. ಶುಕ್ರವಾರ ಬೆಂಗಳೂರು ಬುಲ್ಸ್‌ ತಂಡದ ಎದುರು ಆಡಲು ನಾವು ಉತ್ಸುಕ ರಾಗಿದ್ದೇವೆ ಎಂದು ಸುಖೇಶ್ ನುಡಿದರು.

ಇಂದಿನ ಪಂದ್ಯಗಳು
ಬೆಂಗಳೂರು ಬುಲ್ಸ್– ತೆಲುಗು ಟೈಟಾನ್ಸ್ (ರಾತ್ರಿ 8ರಿಂದ)
ಪಟ್ನಾ ಪೈರೆಟ್ಸ್ – ದಬಾಂಗ್ ಡೆಲ್ಲಿ (ರಾತ್ರಿ 9)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT