ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಾ ಅರ್ಜಿ 7ಕ್ಕೆ ವಿಚಾರಣೆ

ಅಭಿಮಾನಿಗಳಿಂದ ಉರುಳು ಸೇವೆ
Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ ಹಾಗೂ ಇತರರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಇದೇ 7ಕ್ಕೆ ನಿಗದಿಪಡಿಸಿದೆ. ಈ ಪ್ರಕರಣದ ವಿಚಾರಣೆಗೆಂದೇ ನಿಯುಕ್ತಿಗೊಂಡಿದ್ದ ವಿಶೇಷ ಏಕಸದಸ್ಯ ಪೀಠವು ಬುಧವಾರ ವಿಚಾರಣೆ ಮುಂದು­ವರಿಸಿತು.

ಕೋರ್ಟ್‌ ಕಲಾಪ ನಿಗದಿತ ಸಮಯಕ್ಕೆ ಸರಿಯಾಗಿ ಬೆಳಿಗ್ಗೆ 10.30ಕ್ಕೆ ಆರಂಭವಾಯಿತು. ನ್ಯಾಯಮೂರ್ತಿ ರತ್ನಕಲಾ ಅವರು ನ್ಯಾಯಪೀಠವನ್ನು ಅಲಂಕರಿಸಿದ ಕ್ಷಣ ಮಾತ್ರ­ದಲ್ಲಿಯೇ ‘ಪ್ರಾಸಿಕ್ಯೂಷನ್‌ ಪರ ಪ್ರತಿನಿಧಿ ಯಾರಿದ್ದಾರೆ’ ಎಂದು ಪ್ರಶ್ನಿಸಿದರು. ಆಗ ಸರ್ಕಾರಿ ವಕೀಲರ ಬೆಂಚಿನ ಕಡೆ­ಯಿಂದ ‘ಭವಾನಿ ಸಿಂಗ್’ ಎಂಬ ಉತ್ತರ ತೂರಿ ಬಂತು. ‘ಅವರು ಎಲ್ಲಿದ್ದಾರೆ’ ಎಂದು ನ್ಯಾಯಮೂರ್ತಿಗಳು ಮರು ಪ್ರಶ್ನಿಸಿ ಅವರ ಸೀಟಿನತ್ತ ಕಣ್ಣಾಡಿಸಿದರು. ಆದರೆ ಅವರು ಸೀಟಿ­ನಲ್ಲಿ ಕಾಣದೇ ಹೋದದ್ದನ್ನು ಕಂಡು ‘ಗೈರು ಹಾಜರಾಗಿ­ದ್ದಾರಾ’ ಎಂದರು.

ಇದೇ ಭರದಲ್ಲಿ ಸ್ಟೆನೋಗ್ರಾಫರ್‌ ಅವರಿಗೆ ಆದೇಶವನ್ನು ಬರೆದುಕೊಳ್ಳು­ವಂತೆ ಸೂಚಿಸಲೂ ಮುಂದಾದರು. ಆಗ ಕೆಲ ವಕೀಲರು, ‘ಕೋರ್ಟಿಗೆ ಸುತ್ತಲೂ ಬಿಗಿ ಭದ್ರತೆ ಹಾಕಲಾಗಿದೆ. ಹೊರಗಡೆ ಜನಜಂಗುಳಿ ಮತ್ತು ಕಟ್ಟುನಿಟ್ಟಿನ ತಪಾಸಣೆ­ಯಿದೆ. ಭವಾನಿ ಸಿಂಗ್‌ ಇನ್ನೇನು ಕೆಲವೇ ಕ್ಷಣಗಳಲ್ಲಿ ಬಂದು ಬಿಡುತ್ತಾರೆ’ ಎಂದು ನ್ಯಾಯಮೂರ್ತಿ­ಗಳು ಆದೇಶ ನೀಡು­ವುದನ್ನು ತಡೆಯಲು ಮುಂದಾದರು. ಈ ವೇಳೆ  ಜಯಾ ಪರ ಹಿರಿಯ ವಕೀಲರಾದ ರಾಮ್‌ ಜೇಠ್ಮಲಾನಿ ಅವರು ಎದ್ದು­ನಿಂತು, ‘ಸಿಆರ್‌ಪಿಸಿ ಸೆಕ್ಷನ್‌ 389ರ ಪ್ರಕಾರ ಪ್ರಾಸಿಕ್ಯೂಟರ್‌ ಇಲ್ಲದೆಯೇ ಈ ಪ್ರಕರಣ­ವನ್ನು ಪೀಠವು ವಿಚಾರಣೆ ನಡೆಸ­ಬಹುದು’ ಎಂದು ಪುನರುಚ್ಚರಿಸಿದರು.

ಈ ಹೊತ್ತಿಗೆ ವಕೀಲರ ಗುಂಪು, ‘ಭವಾನಿ ಸಿಂಗ್ ಬಂದರು, ಬಂದರು’ ಎಂದು ಜೋರಾಗಿ ಹೇಳುತ್ತಾ ಅವರಿಗೆ ದಾರಿ ಮಾಡಿಕೊಟ್ಟರು.

ಏದುಸಿರು ಬಿಡುತ್ತಾ ಬಂದ ಭವಾನಿ ಸಿಂಗ್, ‘ನಾನು ಪ್ರಾಸಿಕ್ಯೂಷನ್‌ ಪರ ಹಾಜರಾಗುತ್ತಿದ್ದೇನೆ. ತಮಿಳುನಾಡಿನ ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ವಿಶೇಷ ಘಟಕ (ಡಿವಿಎಸಿ) ನನಗೆ ಈ ಕೇಸಿನಲ್ಲಿ ಹಾಜರಾಗಲು ಅನುಮತಿ ನೀಡಿದೆ. ದಾಖಲೆಗಳು ಇಲ್ಲಿವೆ. ಈ ಸಂಬಂಧ ಲಿಖಿತ ದಾಖಲೆ (ಮೆಮೊ) ಸಲ್ಲಿ­ಸುತ್ತಿದ್ದೇನೆ’ ಎಂದು ಕಡತ ನೀಡಿದರು.

ಆಗ ನ್ಯಾಯಮೂರ್ತಿಗಳು, ‘ಅರ್ಜಿ­ದಾರರ ಮನವಿಗೆ ಏನಾದರೂ ಆಕ್ಷೇಪ ಸಲ್ಲಿಸುವುದು ಇದೆಯೇ’ ಎಂದು ಕೇಳಿದರು. ‘ಹೌದು’ ಎಂದು ಭವಾನಿ ಸಿಂಗ್‌ ಹೇಳುತ್ತಿದ್ದಂತೆಯೇ ನ್ಯಾಯ-ಮೂರ್ತಿ-ಗಳು ‘ವಿಚಾರಣೆ-ಯನ್ನು ನಿಯಮಿತ ಕಲಾಪಗಳ ನ್ಯಾಯ-ಪೀಠವೇ ನಡೆಸ-ಲಿದೆ. ಇದೇ 7ಕ್ಕೆ ಮುಂದೂ-ಡ­ಲಾಗಿದೆ’ ಎಂದು ಕ್ಲುಪ್ತ ಆದೇಶ ಪ್ರಕಟಿಸಿ ಪೀಠದಿಂದ ನಿರ್ಗಮಿಸಿ-ದರು.

ಐದು ನಿಮಿಷದ ಕಲಾಪ: ನ್ಯಾಯಮೂರ್ತಿ-ಗಳು ಕೇವಲ ಐದು ನಿಮಿಷಗಳಲ್ಲಿ ಕಲಾಪವನ್ನು ಪೂರೈಸಿದರು.

ಕಂಗಾಲು–ಗದ್ದಲ: ನ್ಯಾಯಮೂರ್ತಿಗಳು ಪೀಠದಿಂದ ನಿರ್ಗಮಿ­ಸುತ್ತಿದ್ದಂತೆಯೇ ಜಯಲಲಿತಾ ಪರ ವಕೀಲರು ದಿಕ್ಕು ತೋಚ­ದಂತಾದರು.  ಜೇಠ್ಮಲಾನಿಯವರಂತೂ ಕಂಗಾಲಾಗಿ ಮೌನಕ್ಕೆ ಜಾರಿದರು. ತಮ್ಮ ಆಸನದಲ್ಲಿ ಸುಮಾರು 15 ನಿಮಿಷ ಸುಮ್ಮನೆ ಕುಳಿತು ಬಿಟ್ಟರು.

ಆಗ ಅವರ ಪರ ವಕೀಲರು, ‘ಮುಖ್ಯ ನ್ಯಾಯ-ಮೂರ್ತಿಗಳನ್ನು ಭೇಟಿ ಮಾಡಿ ಬರೋಣ’ ಎಂಬ ಸಲಹೆ ನೀಡಿದರು. ಇದಕ್ಕೆ ಜೇಠ್ಮಲಾನಿ, ‘ಸಿ.ಜೆ. ಗುಜ­ರಾತ್‌ನಲ್ಲಿ ಇದ್ದಾರೆ’ ಎಂದು ಮತ್ತೆ ಮೌನ ವಹಿಸಿದರು. ನಂತರ ‘ಫ್ಲೈಟ್‌ ಎಷ್ಟೊತ್ತಿಗಿದೆ’ ಎಂದು ಎದ್ದು ಹೊರಗೆ ನಡೆದರು. ಸಭಾಂಗಣ ಬಿಟ್ಟು ನಡೆಯು­ತ್ತಿದ್ದಂತೆಯೇ ಅವರನ್ನು 100ಕ್ಕೂ ಹೆಚ್ಚು ವಕೀಲರು ಭಾರವಾದ ಹೆಜ್ಜೆ ಹಾಕುತ್ತಾ ಹಿಂಬಾಲಿಸಿದರು. ಕೋರ್ಟ್ ಸಭಾಂಗಣದಿಂದ ಹೊರಗೆ ಬರುತ್ತಿ­ದ್ದಂತೆಯೇ ಮಾಧ್ಯಮದವರು ಜೇಠ್ಮ-ಲಾನಿ­ಯವರಿಗೆ ಪ್ರಶ್ನಿಸಲು ಮುಂದಾದರು. ಅಸಹನೆಯಿಂದ ಉತ್ತರಿಸಿದ ಜೇಠ್ಮಲಾನಿ ‘ಹೋಗಿ ನಿಮ್ಮ ಜಡ್ಜ್‌ ಕೇಳಿ. ನಿಮ್ಮ ಜಡ್ಜ್‌ರನ್ನೇ ಸಂದರ್ಶಿಸಿ’ ಎಂದೆನ್ನುತ್ತಾ ಕಾರು ಹತ್ತಿ ಹೊರಟೇ ಬಿಟ್ಟರು.

ಇತ್ತ ಕೋರ್ಟ್‌ ಸಭಾಂಗಣದಲ್ಲಿ ರಾಜ್ಯ­ಸಭಾ ಸದಸ್ಯರೂ ಹಿರಿಯ ವಕೀಲರೂ ಆದ ನವನೀತ್‌ ಕೃಷ್ಣನ್‌ ಅವರಂತೂ ಗದ್ಗದಿತರಾಗಿ ನ್ಯಾಯ­ಪೀಠದ ಮುಂದೆ ಸ್ತಂಭೀಭೂತರಾಗಿ ನಿಂತಿದ್ದರು. ಅವರ ಕಣ್ಣಾಲಿಗಳಲ್ಲಿ ನೀರು ತುಳುಕಾಡುತ್ತಿತ್ತು. ಆದರೂ ಸಾವರಿಸಿಕೊಳ್ಳುತ್ತಲೇ ಮುಂದೇನು ಮಾಡಬೇಕೆಂದು ಆಲೋಚನೆಯಲ್ಲಿ ಮಗ್ನರಾಗಿದ್ದರು.

ಮತ್ತೆ ವಿಚಾರಣೆ ಕೋರಿಕೆ ಯತ್ನ: ಅನಿರೀಕ್ಷಿತ ಬೆಳವಣಿಗೆಯಿಂದ ಸಂಕಟ­ದಲ್ಲಿದ್ದ ಜಯಾ ಪರ ವಕೀಲರು ಮತ್ತೊಮ್ಮೆ ಮಧ್ಯಾಹ್ನ ವಿಶೇಷ ಪೀಠ-ವನ್ನು ಆಯೋಜಿಸುವಂತೆ ಕೋರುವ ಪ್ರಸ್ತಾವ ಕುರಿತು ಚರ್ಚಿಸಿ­ದರು. ಆದರೆ ಈ ಯತ್ನಕ್ಕೆ ಇಳವರಸಿ ಪರ ವಕೀಲರಾದ ಹಸ್ಮತ್‌ ಪಾಷಾ ಸಮ್ಮತಿಸಲಿಲ್ಲ.

ಪ್ರತಿಭಟನೆ: ವಿಚಾರಣೆ ಮುಂದಕ್ಕೆ ಹೋದ ವಿಷಯ ತಿಳಿಯುತ್ತಿದ್ದಂತೆಯೇ ಕೋರ್ಟ್‌ ಆವರಣದ ಹೊರಗೆ ಕಾದಿದ್ದ ಜಯಾ ಅಭಿಮಾನಿಗಳು ಹಾಗೂ ತಮಿಳು­-ನಾಡಿನ ಹಲವು ಗಣ್ಯ ಜನಪ್ರತಿನಿಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
‘ಇದು ಅನ್ಯಾಯ ಅನ್ಯಾಯ’ ಎಂದು ಕೂಗಾಡಿದರು. ಈ ವೇಳೆ ಕೋರ್ಟ್‌ ಹೊರಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ವಕೀಲ ಹಸ್ಮತ್‌ ಪಾಷಾ ‘ಇದು ದುರದೃಷ್ಟಕರ. ಇವತ್ತೇ ವಿಚಾರಣೆ ಪೂರೈಸಬಹುದಿತ್ತು’ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT