ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾವೃತ ಗ್ರಾಮ ಹೆಗ್ಗಸನಹಳ್ಳಿ ಜನರ ವ್ಯಥೆ

ಗ್ರಾಮಾಯಣ
Last Updated 2 ಸೆಪ್ಟೆಂಬರ್ 2014, 6:31 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಕೇಂದ್ರಕ್ಕೆ ಈ ಗ್ರಾಮ ಕೇವಲ 17 ಕಿ.ಮೀ ದೂರ. ಒಂದು ಕಡೆ ರಾಯಚೂರು ಇನ್ನೊಂದು ಕಡೆ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಇರುವ ಶಕ್ತಿನಗರ. ರಾಯಚೂರು– ಹೈದರಾ­ಬಾದ್– ಎಸ್ಎಚ್ 63 ರಸ್ತೆ ಪಕ್ಕ ಇರುವ ಈ ಪುಟ್ಟ ಗ್ರಾಮದ ಜನರಿಗೆ ಮೂಲಸೌಕರ್ಯ ಸಮಸ್ಯೆ. ಮಳೆ ಬಂದರೆ ನಡುಕ, ನಿದ್ದೆ ಇಲ್ಲ. ನಿತ್ಯ ಪ್ರಾಣಭಯ.

ಗ್ರಾಮದ ಪಕ್ಕದಲ್ಲಿಯೇ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 8 ಘಟಕಗಳು ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯಕ್ಕೆ ಪೂರೈಸುತ್ತವೆ. ಆದರೆ, ಈ ಗ್ರಾಮಕ್ಕೆ ಸದಾ ವಿದ್ಯುತ್ ಸಮಸ್ಯೆ. ಧಾರಾಕಾರ ಮಳೆ ಸುರಿದು ಊರಿಗೆ ಊರೇ ಜಲಾವೃತಗೊಂಡು ಜನ ದಿಕ್ಕಾಪಾಲಾಗಿ ರಕ್ಷಣೆ ಬಾಯ್ಬಿಡುವಾಗಲೇ ವಿದ್ಯುತ್ ಇರಲಿಲ್ಲ. ಶಾಲೆ, ರಸ್ತೆ ಬದಿ ಎತ್ತರ ಪ್ರದೇಶದ ಮನೆಗಳಿಗೆ ನುಗ್ಗಿ ರಕ್ಷಣೆ ಪಡೆದು ಪ್ರಾಣ ಉಳಿಸಿಕೊಂಡಿದ್ದಾರೆ.

ಇದು ಒಂದು ದಿನ, ಒಂದು ವರ್ಷದ ಕಥೆಯಲ್ಲ. ಪ್ರತಿ ವರ್ಷ, ವರ್ಷದುದ್ದಕ್ಕೂ ಈ ಗ್ರಾಮದ ಜನತೆಯ ಪಡಿಪಾಟಲು ಇದೇ ಆಗಿದೆ.
ಇದು ರಾಯಚೂರು ತಾಲ್ಲೂಕಿನ ಹೆಗ್ಗಸನಹಳ್ಳಿ ಗ್ರಾಮದ ಜನತೆ ಅಸಹಾಯಕ ಬದುಕಿನ ಚಿತ್ರಣವಿದು.  ಪ್ರತಿ ವರ್ಷ ಮಳೆ ಬಂದಾಗಲೂ ಜನ ರಕ್ಷಣೆಗಾಗಿ ಮೊರೆ ಇಡುತ್ತಾರೆ. ಕಾರಣ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ‘ಕೋಣದಹಳ್ಳ’. ಮಳೆ ಬಂದಾಗ  ಹಳ್ಳ ಉಕ್ಕಿ ಹರಿಯುತ್ತದೆ. ಪಕ್ಕದ ಗ್ರಾಮಕ್ಕೂ ನುಗ್ಗಿ ಜಲಾವೃತಗೊಳಿಸುತ್ತದೆ. ಮಳೆ ನಿಂತು ಈ ನೀರು ಕ್ರಮೇಣ ಕಡಿಮೆ ಆಗಲು ಕನಿಷ್ಠ 15 ದಿನ ಬೇಕು ಎನ್ನುತ್ತಾರೆ ಗ್ರಾಮಸ್ಥರು.

‘ಶೀಘ್ರ ಮೂಲಸೌಕರ್ಯ’
ಗ್ರಾಮಸ್ಥರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿತ್ತು. ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿ ಸಮಸ್ಯೆ ಆಲಿಸಿದ್ದಾರೆ. ಕೆಲ ದಿನಗಳಲ್ಲಿ ಆಸರೆ ವಸತಿ ಇರುವ ಪ್ರದೇಶಕ್ಕೆ ಮೂಲಸೌಕರ್ಯ ಕಲ್ಪಿಸಿ ಸ್ಪಂದಿಸುವುದಾಗಿ ಹೇಳಿದ್ದಾರೆ.– ಬಾಲರಾಜ ದೇವರಕದ್ರ, ತಹಶೀಲ್ದಾರ.

‘ಮೂಲಸೌಕರ್ಯ ಇಲ್ಲದೆ ವಸತಿ’
ಜಲಾವೃತಗೊಳ್ಳುವ ಹೆಗ್ಗಸನಹಳ್ಳಿ, ಚಿಕ್ಕಸುಗೂರು ಮತ್ತು ವಡ್ಲೂರು ಗ್ರಾಮದ ನಿವಾಸಿಗಳಿಗೆ ಆಸರೆ ಯೋಜನೆಯಡಿ ಸರ್ಕಾರ ಚಿಕ್ಕಸುಗೂರು ಗ್ರಾಮದ ಪಕ್ಕ 2010ರಲ್ಲೇ 560ಕ್ಕೂ ಹೆಚ್ಚು ಮನೆ ನಿರ್ಮಿಸಿದೆ. ಆದರೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಹೆಗ್ಗಸನಹಳ್ಳಿ ಗ್ರಾಮದ 200, ಚಿಕ್ಕಸುಗೂರು ಗ್ರಾಮದ 250ಕ್ಕೂ ಹೆಚ್ಚು ಹಾಗೂ ವಡ್ಲೂರು ಗ್ರಾಮದ 150 ಕುಟುಂಬಗಳಿಗೆ ಮನೆ ಕೊಡಲಾಗಿದೆ. ಆದರೆ, ವಿದ್ಯುತ್ ಇಲ್ಲ. ನೀರಿಲ್ಲ. ರಸ್ತೆ ಇಲ್ಲ ಹಾಗೂ ಇತರೆ ಮೂಲಸೌಕರ್ಯ ಇಲ್ಲ. ಮುಳ್ಳು ಗಿಡ ಬೆಳೆದಿದೆ.

ಮೂಲಸೌಕರ್ಯ ಕಲ್ಪಿಸಿದರೆ ಅಲ್ಲಿ ಹೋಗಿ ಜನ ವಾಸಿಸುತ್ತಾರೆ. ಅಲ್ಲಿ ಸೌಕರ್ಯ ಇಲ್ಲ. ಇಲ್ಲಿ ನೀರಲ್ಲಿ ಮುಳುಗುವುದು ತಪ್ಪಿಲ್ಲ. ಒಟ್ಟಾರೆ ಎರಡೂ ಗ್ರಾಮದ ಬಹುಪಾಲು ಕುಟುಂಬಗಳು ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದಾರೆ.
– ಬಸವರಾಜ, ವಕೀಲ, ಚಿಕ್ಕಸುಗೂರು

ಕೇವಲ ಹೆಗ್ಗಸನಹಳ್ಳಿ ಗ್ರಾಮಕ್ಕಷ್ಟೇ ಅಲ್ಲ. ಮೇಲ್ಭಾಗದ ಚಿಕ್ಕಸುಗೂರು ಗ್ರಾಮಕ್ಕೂ ಈ ಹಳ್ಳದ ಉಪದ್ರವ ಇದೆ. ಆ ಗ್ರಾಮದೊಳಗೂ ನುಗ್ಗಿ ಅಲ್ಲಿಯೂ ಒಂದಿಷ್ಟು ಮನೆಗಳನ್ನು ನೀರಲ್ಲಿ ಮುಳುಗಿಸುತ್ತದೆ.

ಹೆಗ್ಗಸನಹಳ್ಳಿ ಮತ್ತು ಚಿಕ್ಕಸುಗೂರು ಈ ಎರಡೂ ಗ್ರಾಮದವರೂ ಈ ಹಳ್ಳದ ನೀರು ಗ್ರಾಮದೊಳಗೆ ನುಗ್ಗದಂತೆ ತಡೆಯಲು ಹಳ್ಳಕ್ಕೆ ಹೊಂದಿಕೊಂಡಂತೆ ತಡೆಗೋಡೆ ನಿರ್ಮಾಣ ಮಾಡಿದರೆ ಉಪ­ಕಾರವಾಗುತ್ತದೆ ಎಂದು ಬೇಡಿ­ಕೊಳ್ಳುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಕಣ್ತೆರೆದಿಲ್ಲ.

2013 ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಮಕ್ಕೆ ಹಳ್ಳದ ನೀರು ನುಗ್ಗಿ ಜನ ತೊಂದರೆ­ಗೀಡಾದಾಗ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅವರು ಅಧಿಕಾರಿ­ಗಳೊಂದಿಗೆ ಭೇಟಿ ನೀಡಿ ಅಹವಾಲು ಆಲಿಸಿದ್ದರು. ಆಗಲೂ ಗ್ರಾಮಸ್ಥರು ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದರು. ಕೇಶಮ್ಮ ಎಂಬ ವೃದ್ದೆ ವಾಸಿಸುವ ಶೆಡ್‌ಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು. ಒಂದು ವರ್ಷ ಕಳೆದಿದೆ. ತಡೆಗೋಡೆ ನಿರ್ಮಾಣ ಆಗಿಲ್ಲ. ಕೇಶಮ್ಮ ವಾಸಿಸುವ ಟಿನ್ ಶೆಡ್‌ ಇನ್ನೂ ಹಾಗೆಯೇ ಇದೆ. ಈ ವರ್ಷ ಆಗಸ್ಟ್ 23ರ ರಾತ್ರಿ ಗ್ರಾಮಕ್ಕೆ ಮತ್ತೆ ಹಳ್ಳದ ನೀರು ನುಗ್ಗಿ ಜನರನ್ನು ಬೀದಿಪಾಲು ಮಾಡಿದೆ. ಶಾಲೆ, ದೇವಸ್ಥಾನ, ಎತ್ತರ ಪ್ರದೇಶದ ಮನೆಗಳಲ್ಲಿ ಜನ ರಕ್ಷಣೆ ಪಡೆದಿದ್ದರು. ಈಗಲೂ ಭಯದಲ್ಲಿಯೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT