ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಕಾರ್ಯಕರ್ತರ ಮನಜಲ ಕಾರ್ಯಕರ್ತರ ಮನವಿವಿ

ಅಕ್ಷರ ಗಾತ್ರ

ಜಲಕ್ಷಾಮದಿಂದ ರಾಜ್ಯದ ಜನ ತೊಂದರೆಗೆ ಸಿಲುಕಿದ್ದಾರೆ. ಕುಡಿಯುವ ನೀರಿಗೆ ಎಲ್ಲೆಡೆ ಹಾಹಾಕಾರ ಶುರುವಾಗಿದೆ. ನದಿಗಳೆಲ್ಲ ಒಣಗಿವೆ. ಜನ, ಜಾನುವಾರು, ಜಲಚರ, ವನ್ಯಜೀವಿಗಳ ಬದುಕು ದುಸ್ತರವಾಗಿದೆ. ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಜನರೆಲ್ಲ ನಾಳಿನ ನೀರ ನೆಮ್ಮದಿಗಾಗಿ ಸ್ಮರಣೀಯ ಕೆಲಸವನ್ನು ಮಾಡಬೇಕಾಗಿದೆ.

ಮುಂದಿನ ವರ್ಷಗಳಲ್ಲಿ ಮಳೆಯಿಂದ ನಾವು ಸಮೃದ್ಧಿ ಕಾಣಲು ಮಳೆ ನೀರು ಸಂಗ್ರಹದ ಕಾಯಕವನ್ನು ವ್ಯಾಪಕವಾಗಿ ಕೈಗೊಳ್ಳಬೇಕಾಗಿದೆ. ಸರ್ಕಾರ ಎಲ್ಲವನ್ನೂ ಮಾಡಬೇಕೆಂದು ಯೋಚಿಸುತ್ತ ಕೂಡುವ ಕಾಲವಿದಲ್ಲ. 

ಅಮೂಲ್ಯ ಜಲನಿಧಿಗಳಲ್ಲಿ ಇಂದು ಹೂಳು ತುಂಬಿದೆ. ಕಲ್ಯಾಣಿ, ಬಾವಡೆ, ತಲಪರಿಗೆ, ಮದಕಗಳಂಥ  ನೀರನಿಧಿಗಳು ಹಾಳಾಗಿವೆ. ಬರದಿಂದ ಸೋಲುತ್ತಿರುವ ಸಮುದಾಯಕ್ಕೆ ನೀರಿನ ನೋವು ಅರಿತು ಸ್ಥೈರ್ಯ ತುಂಬಲು ಮುಂದಾಗಬೇಕು. ಜಲಮೂಲಗಳನ್ನು ಸುಸ್ಥಿತಿಯಲ್ಲಿಡುವುದಕ್ಕೆ  ಎಲ್ಲರೂ ಮುಂದಾಗಬೇಕು.

ತೀವ್ರ ನೀರಿನ ಸಂಕಷ್ಟ ಅನುಭವಿಸುತ್ತಿರುವ ಗ್ರಾಮಗಳನ್ನು ಗುರುತಿಸಿ ಕೆರೆ, ಒಡ್ಡು, ಕೃಷಿಹೊಂಡ, ಬದುಗಳನ್ನು ನಿರ್ಮಿಸಲು ನೆರವು ನೀಡಬಹುದಾಗಿದೆ. ಕಾಡು–ಗುಡ್ಡಗಳಲ್ಲಿ ನೀರು ಹಿಡಿಯುವ ಕಣಿವೆ ಕೆರೆ ಮಾಡಿಸಬಹುದು. ಮಳೆನೀರನ್ನು ಭೂಮಿಗೆ ಇಂಗಿಸುವ, ಹಿಡಿದಿಡುವ ಕಾರ್ಯವನ್ನು ಸಾರ್ವಜನಿಕ ದಾನ, ದೇಣಿಗೆಯ ಮೂಲಕ ಸಮರೋಪಾದಿಯಲ್ಲಿ ನಡೆಸುವ ಅಗತ್ಯವಿದೆ.

ಸಂಕಷ್ಟವಿರುವ ಪ್ರದೇಶದಲ್ಲಿ ಒಮ್ಮೆ ಸುತ್ತಾಡಿ ಕಳಕಳಿಯ ವ್ಯಕ್ತಿ, ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಈ ಕಾರ್ಯ ಮಾಡಿಸಬಹುದು. ಕೆಲಸಕ್ಕೆ ಒಂದು ಹೆಜ್ಜೆ ಇಡಿರಿ, ನಿಧಾನಕ್ಕೆ ಸಲಹೆ, ಸಹಾಯ, ಮಾರ್ಗದರ್ಶನ ನೀಡುವ ಒಳ್ಳೆಯ ಮನಸ್ಸುಗಳು ನಿಮ್ಮನ್ನು ಹುಡುಕಿ ಬರಬಹುದು.

ಸುರಿಯುವ ಮಳೆ ಹನಿಯನ್ನು ಸಂರಕ್ಷಿಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಹಳೆಯ ಕೆರೆಯ ನೀರು ಹರಿಯುತ್ತಿದ್ದ ಕಾಲುವೆಗಳನ್ನು ಸರಿಪಡಿಸಿ ಕೆರೆಗಳಲ್ಲಿ ಮಳೆ ನೀರು ಶೇಖರಣೆಗೆ ಅಗತ್ಯ ಕ್ರಮ ಕೈಗೊಳ್ಳಬಹುದು.

ರಾಜ್ಯದ ಸಿನಿಮಾ ನಟರು, ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತ ಕೃಷಿಕರು, ಬ್ಯಾಂಕು, ಕೈಗಾರಿಕೆ, ಸಕ್ಕರೆ ಕಾರ್ಖಾನೆ, ಗಣಿ ಮಾಲೀಕರು, ದೇಗುಲ, ಮಠ, ಚರ್ಚ್, ಮಸೀದಿ, ಸಂಘ–ಸಂಸ್ಥೆಗಳೂ ಸೇರಿದಂತೆ ಎಲ್ಲರೂ ಜಲ ಸಂರಕ್ಷಣೆಯ ಪುಣ್ಯ ಕೆಲಸಕ್ಕೆ ಗಮನಹರಿಸಬೇಕಾಗಿದೆ. ಈಗ ನಾವು ನೀರಿನ ಕೆಲಸ ಮಾಡದಿದ್ದರೆ ಭವಿಷ್ಯ ನಮ್ಮನ್ನು ಖಂಡಿತಾ ಕ್ಷಮಿಸುವುದಿಲ್ಲ. 

ಮನಸ್ಸು ಮಾಡಿ ಹನಿ ಹನಿ ನೀರಿನಂತೆ ನೆರವು ನೀಡಿದರೂ ರಾಜ್ಯದ ಸಮಸ್ಯೆಯನ್ನು  ಸ್ವಲ್ಪವಾದರೂ ಪರಿಹರಿಸಬಹುದು. ನೂರ್ಕಾಲ ಉಳಿಯುವ ನೀರಿನ ಕೆಲಸವನ್ನು ಬರದ ಕಾಣಿಕೆಯಾಗಿ ನಾಡಿಗೆ ಅರ್ಪಿಸಬಹುದು. ವಿವಿಧ ಜಿಲ್ಲೆಗಳಲ್ಲಿರುವ ದೇಗುಲಗಳು ಆಯಾ ಸೀಮೆಯಲ್ಲಿ ಬರದ ಕಾಲಕ್ಕೆ ಕೆರೆ ನಿರ್ಮಾಣದ ಕಾಯಕ ಶುರುಮಾಡಬಹುದು.

ಗ್ರಾಮದಿಂದ ನಗರ ಸೇರಿ ಉತ್ತಮ ವೃತ್ತಿಯಲ್ಲಿರುವವರು ಊರಿನ ಕೆರೆ ಹೂಳು ತೆಗೆಯಲು ಪ್ರಾಯೋಜಕರಾಗಿ ನಿಲ್ಲಬಹುದು. ವಿವಿಧ ಜಿಲ್ಲೆಗಳಲ್ಲಿ ಸನಿಹದಲ್ಲಿರುವ  ಜಲಕಾರ್ಯಕರ್ತರ  ಸಹಾಯ ಪಡೆದು ಜಲಸಂರಕ್ಷಣೆಯ  ಸಣ್ಣಸಣ್ಣ ಹೆಜ್ಜೆಯಿಡುವ ಮೂಲಕ ನಾಡಿನ ನೀರ ನೆಮ್ಮದಿಗೆ ಶ್ರಮಿಸೋಣ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT