ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸಾರಿಗೆ: ಸಮಗ್ರ ಬಳಕೆ ಹೇಗೆ?

Last Updated 22 ಜನವರಿ 2015, 19:30 IST
ಅಕ್ಷರ ಗಾತ್ರ

ದೇಶದ 101 ನದಿಗಳಲ್ಲಿ ಕಾಲುವೆ, ಖಾರಿ, ಹಿನ್ನೀರುಗಳ ಮೂಲಕ ಹೊಸ­ದಾಗಿ ಜಲಮಾರ್ಗಗಳನ್ನು ರೂಪಿಸಿ, ಒಳನಾಡ ಜಲ ಸಾರಿಗೆ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡು­ವುದಾಗಿ ರಸ್ತೆ, ಸಾರಿಗೆ ಮತ್ತು ಬಂದರು ಸಚಿ­ವರು ಹೇಳಿದ್ದಾರೆ. ಇದು ಸ್ವಾಗತಾರ್ಹವಾ­ದರೂ, ಈಗಾಗಲೇ ಬಳಕೆಯಲ್ಲಿರುವ ರಾಷ್ಟ್ರೀಯ ಜಲಮಾರ್ಗಗಳು ಎದುರಿಸುತ್ತಿರುವ ಸಮಸ್ಯೆಗ­ಳನ್ನು ಬಗೆಹರಿಸದ ಹೊರತು ಈ ವಲಯದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ.

ನಮ್ಮ ಒಳನಾಡ ಜಲಮಾರ್ಗಗಳು ಅಗ್ಗ ಹಾಗೂ ಪರಿಸರ ಸ್ನೇಹಿ ಎಂಬುದನ್ನು ಅನೇಕ ಅಧ್ಯ­ಯನಗಳು ಸ್ಪಷ್ಟವಾಗಿ ತೋರಿಸಿದ್ದರೂ, ಒಳನಾಡ ಜಲ ಸಾರಿಗೆ ಎಂದಿಗೂ ಸರ್ಕಾರಕ್ಕೆ ಆದ್ಯತೆಯ ವಿಷಯವಾಗಿರಲಿಲ್ಲ. ಹೀಗಾಗಿಯೇ ಇಂದಿಗೂ ಶೇ 75ರಷ್ಟು ಸರಕು ರಸ್ತೆ ಮೂಲಕ ಸಾಗಣೆ­ಯಾಗು­ತ್ತದೆ. ಉಳಿದಂತೆ ರೈಲು, ವಿಮಾನ ಹಾಗೂ ಜಲಮಾರ್ಗಗಳ ಮೂಲಕ ಅನುಕ್ರಮವಾಗಿ ಶೇ 24, ಶೇ 0.6, ಶೇ 0.4ರಷ್ಟು ಸರಕು ಸಾಗಣೆ­ಯಾ­ಗುತ್ತದೆ.

ಒಳನಾಡ ಜಲಮಾರ್ಗ ಸಾರಿಗೆ ವ್ಯವಸ್ಥೆ ಉಳಿದೆಲ್ಲ ಮಾರ್ಗಗಳಿಗಿಂತ ಅಗ್ಗ ಎನ್ನುವುದರಲ್ಲಿ ಎರಡು ಮಾತಿಲ್ಲ. ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‌ ತನ್ನ ಇತ್ತೀಚಿನ ಅಧ್ಯಯನದಲ್ಲಿ, ಒಂದು ಮಧ್ಯಮ ಗಾತ್ರದ ಬಾರ್ಜ್‌ (ಚಪ್ಪಟೆ ತಳದ ದೋಣಿ) 15 ರೈಲ್ವೆ ವ್ಯಾಗನ್‌ಗಳಷ್ಟು ಅಥವಾ 60 ಲಾರಿಗಳಲ್ಲಿ ಹಿಡಿಯು­ವಷ್ಟು ಸಾಮಗ್ರಿಗಳನ್ನು ರವಾನಿಸ­ಬಲ್ಲದೆಂದು ತಿಳಿಸಿದೆ. ರಾಷ್ಟ್ರೀಯ ಸಾರಿಗೆ ನೀತಿ ಅಭಿವೃದ್ಧಿ ಸಮಿತಿಯ ವರದಿಯಂತೆ, ಒಂದು ಟನ್ ಸರಕನ್ನು ರಸ್ತೆಯ ಮೂಲಕ ಒಂದು ಕಿ.ಮೀ ದೂರ ಸಾಗಿಸಲು 2.75 ರೂಪಾಯಿ ತಗುಲಿ­ದರೆ, ರೈಲಿನ ಮೂಲಕ ಸಾಗಿಸಲು 1.32 ರೂಪಾಯಿ ಹಾಗೂ ಜಲಮಾರ್ಗದ ಮೂಲಕ 53 ಪೈಸೆ ಬೇಕಾಗು­ತ್ತದೆ.

ಇಂಧನದ ಬಗೆಗೂ ಈ ವರದಿಯಲ್ಲಿ ಪ್ರಸ್ತಾಪವಿದೆ. ಒಂದು ಲೀಟರ್ ಡೀಸೆಲ್ ಬಳಸಿ 24 ಟನ್‌ಗಳಷ್ಟು ಸಾಮಗ್ರಿಗ­ಳನ್ನು ರಸ್ತೆಯಲ್ಲಿ ಒಂದು ಕಿ.ಮೀ ದೂರದವರೆಗೆ ಸಾಗಿಸಬಹುದು. ಅದೇ ಒಂದು ಲೀಟರ್ ಡೀಸೆ­ಲ್‌­ನಿಂದ 85 ಟನ್‌ಗಳಷ್ಟು ಸರಕನ್ನು ರೈಲಿ­ನಲ್ಲಿ, 105 ಟನ್‌ಗಳಷ್ಟು ಸರಕನ್ನು ಜಲಮಾರ್ಗದಲ್ಲಿ ಒಂದು ಕಿಲೊ  ಮೀಟರ್ ದೂರದವರೆಗೆ ಸಾಗಿ­ಸಬಹುದು. ಒಂದು ಕಿಲೊ ಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸುವ ವೆಚ್ಚದ ಶೇಕಡಾ 10ರಷ್ಟು ಬಂಡವಾಳದಲ್ಲಿ ಒಂದು ಕಿಲೊ ಮೀಟರ್ ಜಲ­ಮಾರ್ಗವನ್ನು ರೂಪಿಸಬಹುದು. ರಸ್ತೆ ಅಥವಾ ರೈಲು ದಾರಿಯ ನಿರ್ಮಾಣ ವೆಚ್ಚದ ಶೇಕಡ 60 ಭಾಗ ಭೂ ಸ್ವಾಧೀನಕ್ಕೆ ಬೇಕಾಗುತ್ತದೆ.

ಜಲಮಾರ್ಗದ ಬಳಕೆ ಪರಿಸರ ಸ್ನೇಹಿಯೂ ಹೌದು. 2007ರಲ್ಲಿ ಸಾರಿಗೆ ವಲಯದಿಂದ ವಾಯು­ಮಂಡಲಕ್ಕೆ ಸೇರಿದ ಹಸಿರು ಮನೆ ಅನಿಲ­ಗಳ ಪ್ರಮಾಣ 142 ಶತಕೋಟಿ ಟನ್‌­ಗಳು. ಇದ­ರಲ್ಲಿ, ಶೇ 87ರಷ್ಟು ರಸ್ತೆ ಸಾರಿಗೆಯಿಂದ ಬಂದರೆ, ವಿಮಾನ, ರೈಲು ಮತ್ತು ಜಲ ಸಾರಿಗೆ­ಗಳ ಕೊಡುಗೆ ಅನುಕ್ರಮವಾಗಿ ಶೇ 7, ಶೇ 5 ಮತ್ತು ಶೇ 1 ಆಗಿತ್ತು. ‘ಇಂಡಿಯನ್ ನೆಟ್‌­ವರ್ಕ್‌ ಆನ್ ಕ್ಲೈಮೇಟ್ ಚೇಂಜ್ ಅಸೆಸ್‌­ಮೆಂಟ್’ ಪರಿಣತರ ಅಭಿಪ್ರಾಯದಂತೆ 2035ರ ವೇಳೆಗೆ, ರಸ್ತೆ ಸಾರಿಗೆಯಿಂದ ವಾಯುಮಂಡಲಕ್ಕೆ ಸೇರುತ್ತಿರುವ ಹಸಿರು ಮನೆ ಅನಿಲದ ಪ್ರಮಾಣ 2005ರ ಮಟ್ಟದ ಆರು ಪಟ್ಟು ಹೆಚ್ಚಲಿದೆ.

ಭಾರತದ ‘ಒಳನಾಡ ಜಲ ಸಂಚಾರ ಪ್ರಾಧಿ­ಕಾರ’ದ ಅಂದಾಜಿನಂತೆ, ನಮ್ಮ ದೇಶದಲ್ಲಿ ಅಭಿ­ವೃದ್ಧಿ­ಪಡಿಸಿ, ಬಳಸಬಹುದಾದ ಜಲ ಸಂಚಾರ ಮಾರ್ಗದ ಒಟ್ಟು ಉದ್ದ 14,500 ಕಿ.ಮೀ. ಸದ್ಯದಲ್ಲಿ 1716 ಕಿ.ಮೀ.ಗಳಷ್ಟು ಉದ್ದದ 3 ಮುಖ್ಯ ಜಲಮಾರ್ಗಗಳು ಬಳಕೆಯಾಗುತ್ತಿವೆ. ಇವುಗಳೆಂದರೆ, ಅಲಹಾಬಾದಿನಿಂದ ಪಶ್ಚಿಮ ಬಂಗಾಳದ ಹಾಲ್ಡಿಯಾವರೆಗಿನ ಗಂಗಾ–ಭಾಗೀ­ರಥಿ-–-ಹೂಗ್ಲಿ ಜಲಮಾರ್ಗ (1620 ಕಿ.ಮೀ), ಬ್ರಹ್ಮ­ಪುತ್ರಾ ನದಿಯಲ್ಲಿ ಸಾದಿಯಾದಿಂದ ಧೂಬ್ರಿ­ವರೆಗಿನ ಜಲಮಾರ್ಗ (891 ಕಿ.ಮೀ) ಹಾಗೂ ತಮಿಳುನಾಡಿನ ಉದ್ಯೋಗಮಂಡಲದಿಂದ ಕೇರ­ಳದ ಕೊಲ್ಲಂವರೆಗಿನ 205 ಕಿ.ಮೀ ಜಲ­ಮಾರ್ಗ.

ಈ ಮೂರೂ ಜಲ ಹೆದ್ದಾರಿಗಳ ಮೂಲಕ, 2011–12ರ ಅವಧಿಯಲ್ಲಿ ಸಾಗಣೆ­ಯಾದ ಪೆಟ್ರೋಲಿಯಂ, ತೈಲ, ರಾಸಾಯನಿಕ ಗೊಬ್ಬರ, ಅದಿರು, ಕಟ್ಟಡದ ಸಾಮಗ್ರಿಗಳು, ಆಹಾರ ಪದಾರ್ಥ ಮುಂತಾದವುಗಳ ಒಟ್ಟು ಪ್ರಮಾಣ ಕೇವಲ 70 ಲಕ್ಷ ಟನ್‌ಗಳಷ್ಟು ಮಾತ್ರ. ಗೋದಾ­ವರಿ–-ಕೃಷ್ಣಾ-–-ಕಾಕಿನಾಡ ಕಾಲುವೆ, ಉತ್ತರ ಬಂಕಿಂಗ್‌­ಹ್ಯಾಮ್------–ದಕ್ಷಿಣ ಬಂಕಿಂಗ್‌ಹ್ಯಾ--ಮ್ ಕಾಲುವೆ-–ಪುದುಚೇರಿಯ 1095 ಕಿ.ಮೀ ಉದ್ದದ ನಾಲ್ಕನೆಯ ಮುಖ್ಯ ಜಲಮಾರ್ಗ, ಹಾಲ್ಡಿಯಾ– -ಬ್ರಹ್ಮಿಣಿ -ಮಹಾನದಿಯ ಮೂಲಕ ಒಡಿಶಾದ ಪಾರಾ­ದೀಪ್ ಬಂದರುವರೆಗಿನ ಐದನೆಯ ಮುಖ್ಯ ಜಲ­ಮಾರ್ಗ ವಿವಿಧ ಹಂತಗಳಲ್ಲಿದ್ದು, ಸಂಪೂರ್ಣ ಬಳಕೆ ಇನ್ನೂ ಸಾಧ್ಯವಾಗಿಲ್ಲ.   
           
ಈಗಾಗಲೇ ಬಳಕೆಯಲ್ಲಿರುವ ರಾಷ್ಟ್ರೀಯ ಜಲಮಾರ್ಗಗಳು ಅನೇಕ ಸಮಸ್ಯೆಗಳನ್ನು ಎದುರಿ­ಸುತ್ತಿವೆ. ಗಂಗಾ, -ಬ್ರಹ್ಮಪುತ್ರದಂಥ ನದಿಗಳು ಪ್ರತಿ ವರ್ಷವೂ ಹೊತ್ತು ತರುವ ಅಪಾರ ಪ್ರಮಾಣದ ಹೂಳು ಮುಖ್ಯವಾದ ಸಮಸ್ಯೆಗಳಲ್ಲೊಂದು. ಇದರಿಂದ ನದಿಯ ಆಳ ಕಡಿಮೆಯಾಗಿ ನೌಕಾ ಸಂಚಾರ ಕಷ್ಟವಾಗುತ್ತದೆ. ಉದಾಹರಣೆಗೆ ಅಲ­ಹಾಬಾದ್ ಬಳಿ ಗಂಗೆಯ ಕನಿಷ್ಠ ಆಳ 1.5 ಮೀಟರುಗಳಷ್ಟು ಮಾತ್ರ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ 140 ದಿನಗಳಲ್ಲಿ ಮಾತ್ರ ಇಲ್ಲಿ ನೌಕಾ ಸಂಚಾರ ಸಾಧ್ಯವಾಗುತ್ತದೆ. ಈ ಜಲಮಾರ್ಗಗಳಲ್ಲಿ ಸಂಚರಿಸುವ 17,000 ಬಾರ್ಜ್‌ಗಳು -‘ಒಳನಾಡ ಜಲಮಾರ್ಗ ಪ್ರಾಧಿ­ಕಾರ’ದಲ್ಲಿ ನೋಂದಾಯಿಸಿಕೊಂಡಿವೆ.

ಇವುಗ­ಳಲ್ಲಿ ಬಹುತೇಕ ನೌಕೆಗಳ ಸಾಮರ್ಥ್ಯ 750 ಟನ್‌ಗಳು ಮಾತ್ರ. 1500-– -2000 ಟನ್‌ಗ­ಳಷ್ಟು ಸಾಮಗ್ರಿ ಹೊರಬಲ್ಲ ನೌಕೆಗಳನ್ನು ಬಳಸಿ­ದಾಗ ಮಾತ್ರ ನಿರ್ವಹಣಾ ವೆಚ್ಚ ಲಾಭದಾಯಕ­ವಾಗುತ್ತದೆ. ಆದರೆ ಇಂಥ ನೌಕೆಗಳ ಸಂಚಾರಕ್ಕೆ ಜಲಮಾರ್ಗಗಳ ಕನಿಷ್ಠ ಆಳ 2.5 ಮೀಟರುಗ­ಳಷ್ಟಿರಬೇಕು. ಹೂಳಿನಿಂದ ಅದು ಸಾಧ್ಯವಾಗು­ತ್ತಿಲ್ಲ. ಜಲಮಾರ್ಗ ಪಾತ್ರದ ಅನೇಕ ಕಡೆಗಳಲ್ಲಿ ಈ ಹೂಳು ಸಣ್ಣ ಸಣ್ಣ ಗುಡ್ಡೆಗಳಾಗಿ, ದ್ವೀಪಗ­ಳಾಗಿ ಬೆಳೆಯುತ್ತಿರುವುದರಿಂದ ಅವುಗಳ ನಡುವಿನ ಸಂಚಾರ ಶ್ರಮದಾಯಕವಾಗುತ್ತಿದೆ.

ರಾಷ್ಟ್ರೀಯ ಜಲಮಾರ್ಗಗಳ ಉದ್ದಕ್ಕೂ ಸರಕು ಸರಂಜಾಮುಗಳನ್ನು ತುಂಬಿ ಇಳಿಸಲು ಬಂದರು, ಕಟ್ಟೆ, ನಿಲ್ದಾಣಗಳಿವೆ. ಉದಾಹರಣೆಗೆ, ಅಲಹಾ­ಬಾದ್-–ಹಾಲ್ಡಿಯಾ ನಡುವೆ 35 ಬಂದರು ಕಟ್ಟೆ­ಗ­ಳಿವೆ. ಆದರೆ ಇವುಗಳನ್ನು ನಿರ್ಮಿ­ಸುವಾಗ ನೌಕೆ ಅಗತ್ಯಗಳನ್ನು ಪರಿಗಣಿಸಿಲ್ಲ­ವಾದ ಕಾರಣ, ಅನೇಕ ನೌಕೆಗಳು ಇಂತಹ ನಿಲ್ದಾಣಗಳನ್ನು ಪ್ರವೇಶಿಸಲಾ­ಗುವುದಿಲ್ಲ. ಸೇತು­ವೆ­ಗ­ಳದೂ ಇದೇ ಕಥೆ. ಅಲ­ಹಾಬಾದ್–-ಹಾಲ್ಡಿಯಾ ನಡುವೆ ಸುಮಾರು ಇನ್ನೂರು ಸೇತು­ವೆ­ಗಳಿವೆ.

ಇವುಗಳನ್ನು  ನಿರ್ಮಿಸು­ವಾಗ ಜಲ­ಸಾರಿಗೆ ಗಮನದಲ್ಲಿಲ್ಲದಿದ್ದ ಕಾರಣ, ದೊಡ್ಡ ಬಾರ್ಜ್‌­ಗಳು ಸೇತುವೆಗಳ ಕೆಳಗೆ ಹೋಗ­ಲಾಗು­ವುದಿಲ್ಲ. ಈ ಸಮಸ್ಯೆಯ ಪರಿಹಾರಕ್ಕೆ ಪ್ರಾಧಿ­ಕಾರವು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಕೇಂದ್ರ ಸರ್ಕಾರಗಳ ನೆರವನ್ನು ಕೋರಿದೆ. ಮಹಾನಂದ, ಕೋಸಿ, ಬಾಗ್ಮತಿಗ­ಳಂಥ ಹಲ­ವಾರು ನದಿಗಳು ದಡ ಮೀರಿ ಹರಿದು ಏಕಾ­ಏಕಿ ತಮ್ಮ ಪಥವನ್ನು ಬದಲಿಸುವು­ದುಂಟು. ಇಂಥ ನದಿಗಳನ್ನು ಜಲ ಸಾರಿಗೆಗೆ ಬಳಸುವಾಗ ನದಿ ಆಳ­ವನ್ನು ಹೂಳಿನಿಂದ ಕಡಿಮೆಯಾಗ­ದಂತೆ ಕಾಯ್ದು­­ಕೊಂಡು, ಎರಡೂ ದಡಗಳನ್ನು ಬಲಪ­ಡಿ­ಸ­ಬೇಕು. ಇದು ಹೆಚ್ಚು ಬಂಡವಾಳ ಬೇಕಿರುವ ಕೆಲಸ.

ಜಲ ಸಾರಿಗೆಗೆ ಕೇವಲ ರಾಷ್ಟ್ರೀಯ ಜಲ­ಮಾರ್ಗಗಳನ್ನು ಬಲಪಡಿಸಿದರೆ ಸಾಲದು. ರಾಜ್ಯ­ದ­ಲ್ಲಿನ ನದಿಗಳನ್ನೂ ಬಳಸಿಕೊಳ್ಳಬೇಕು. ಇದ­ಕ್ಕಾಗಿ 13 ರಾಜ್ಯಗಳಲ್ಲಿ 95 ಕೋಟಿ ರೂಪಾಯಿ ವೆಚ್ಚದಲ್ಲಿ 31 ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಬ್ರಹ್ಮಪುತ್ರಾದ 21 ಉಪನದಿ­ಗಳಲ್ಲಿ, 50ರಿಂದ 150 ಟನ್ ಸಾಮರ್ಥ್ಯದ ಬಾರ್ಜ್‌ಗಳು ಸಂಚರಿಸುವಂಥ ಜಲಮಾರ್ಗ­ಗಳು ಈಗ ರೂಪುಗೊಳ್ಳುತ್ತಿವೆ. ಗಂಗಾ ನದಿಗೂ ಇದೇ ಮಾದರಿಯ ಯೋಜನೆ ಬರಲಿದೆ. ರಾಷ್ಟ್ರೀಯ ಜಲಮಾರ್ಗಗಳ ನಿರ್ಮಾಣದಲ್ಲಿ ಕಂಡುಬಂದಿ­ರುವ ಕುಂದು ಕೊರತೆಗಳು ಇಲ್ಲಿ ಮರುಕಳಿಸ­ದಿದ್ದರೆ ಮಾತ್ರ ಇವು ಉಪಯುಕ್ತ­ವಾಗುತ್ತವೆ.

ಒಳನಾಡ ಜಲಮಾರ್ಗಗಳ ನಿರ್ಮಾಣ, ಬಳಕೆ, ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪ್ರಾಧಿಕಾ­ರದ ಬಹು ದೊಡ್ಡ ಸಮಸ್ಯೆಯೆಂದರೆ ಹಣಕಾಸಿ­ನದು. ಜಲಮಾರ್ಗದಲ್ಲಿನ ಹೂಳು ತೆಗೆದು, ನಿರ್ದಿಷ್ಟ ಆಳವನ್ನು ಕಾಯ್ದುಕೊಂಡು, ವೇಗವಾಗಿ ಚಲಿ­ಸುವ ಆಧುನಿಕ ಬಾರ್ಜ್‌ಗಳನ್ನು ಕೊಂಡು ಬಂದರು, ಕಾಪು, ಕಟ್ಟೆಗಳನ್ನು ನಿರ್ಮಿಸಿ, ನಿರ್ವಹಿ­ಸಲು ಸರ್ಕಾರದಿಂದ ಬರುವ ಹಣ ಸಾಲದು. ಮಾರುಕಟ್ಟೆಯಿಂದ ಸಾಲ ಎತ್ತಲು, ಬೇರೆ ವಿಧಾನ­ಗಳಿಂದ ನಿಧಿ ಕೂಡಿಸಲು ಪ್ರಾಧಿಕಾರ ಪ್ರಯತ್ನಿಸು­ತ್ತಿದೆ.

ಖಾಸಗಿ ಸಂಸ್ಥೆಗಳ ಸಹಭಾಗಿತ್ವ­ದಲ್ಲಿ 2012–-30ರ ಅವಧಿಯಲ್ಲಿ 64,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಲ್ಲ ಸಮಸ್ಯೆ­ಗಳಿಗೂ ಪರಿಹಾರ ಹುಡುಕಿ, ಸೂಕ್ತ ಸ್ಥಳಗಳಲ್ಲಿ ರಸ್ತೆ, -ರೈಲುಗಳೊಂದಿಗೆ ಜಲಮಾರ್ಗ­ವನ್ನು ಜೋಡಿಸಿ, ಒಳನಾಡ ಜಲ ಸಾರಿಗೆಯನ್ನು ಹೆಚ್ಚು ಸಮರ್ಥವ­ನ್ನಾಗಿ ಮಾಡುವ ಭರವಸೆ­ಯನ್ನು ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರ ನೀಡಿವೆ. ಫಲಿತಾಂಶ­ವನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT