ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಂಬಿಯಾ ಅಧ್ಯಕ್ಷ ಮೈಕೆಲ್‌ ಸತಾ ಸಾವು

ಸ್ವಚ್ಛತೆ ಕಾರ್ಮಿಕನಿಂದ ಅಧ್ಯಕ್ಷ ಹುದ್ದೆಗೇರಿದ್ದ ನಾಯಕ­
Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಲುಸಾಕಾ (ಐಎಎನ್‌ಎಸ್‌): ಜಾಂಬಿ­ಯಾದ ಅಧ್ಯಕ್ಷ ಮೈಕೆಲ್‌ ಸತಾ ಅವರು (77) ಲಂಡನ್‌ನ ಆಸ್ಪತ್ರೆ­ಯಲ್ಲಿ ಮೃತ­ಪಟ್ಟಿ­ರು­ವುದಾಗಿ ಮಾಧ್ಯಮ ವರದಿ­ಗಳು ಬುಧವಾರ ತಿಳಿಸಿದ್ದು, ಸರ್ಕಾರ ಕೂಡ ಇದನ್ನು ಖಚಿತಪಡಿಸಿದೆ.

ಸತಾ ಅವರು ಮಂಗಳವಾರ ರಾತ್ರಿ  ಲಂಡನ್‌ನ 7ನೇ ಕಿಂಗ್‌ ಎಡ್ವರ್ಡ್‌ ಆಸ್ಪ­ತ್ರೆ­­ಯಲ್ಲಿ ಅಸುನೀಗಿರುವು­ದಾಗಿ ಜಾಂಬಿ­ಯಾದ ಖಾಸಗಿ ಟಿವಿ ಕೇಂದ್ರ ಮುಝಿ ಮತ್ತು  ಜಾಂಬಿಯನ್ ವಾಚ್‌ಡಾಗ್‌ ವೆಬ್‌ಸೈಟ್‌ ವರದಿ ಮಾಡಿ­ರುವುದಾಗಿ ಕ್ಸಿನ್‌ಹುವಾ ಹೇಳಿದೆ. ಜಾಂಬಿಯಾ ಸಚಿವ ಸಂಪುಟ ಮತ್ತು ಸರ್ಕಾರಿ ವಕ್ತಾರರು ಅಧ್ಯಕ್ಷರ ಸಾವನ್ನು ದೃಢಪಡಿಸಿರುವುದಾಗಿ ‘ಜಾಂಬಿಯಾ ಡೈಲಿ ಮೇಲ್‌’ ಸುದ್ದಿ ಪ್ರಕಟಿಸಿದೆ.

ಹಂಗಾಮಿ ಅಧ್ಯಕ್ಷ: ಜಾಂಬಿಯಾದ ಉಪಾಧ್ಯಕ್ಷ, ಶ್ವೇತ ವರ್ಣೀಯ ಗೈ ಸ್ಕಾಟ್‌ ಅವರನ್ನು ಹಂಗಾಮಿ ಅಧ್ಯಕ್ಷ­ರಾಗಿ ನೇಮಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಉಪ ಚುನಾ­ವ­ಣೆಯು 90 ದಿನಗಳೊ­ಳಗೆ ನಡೆ­ಯುವ ಸಾಧ್ಯತೆ ಇದೆ ಎಂದು  ರಕ್ಷಣಾ ಸಚಿವ ಎಡ್ಗರ್‌ ಲುಂಗು ಹೇಳಿದ್ದಾರೆ.  ಸತಾ ಅವರನ್ನು ಈ ತಿಂಗಳ 19­ರಂದು ವಿಶೇಷ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆ­ದೊಯ್ದಿದ್ದು, ಅವರ ಪತ್ನಿ ಕ್ರಿಸ್ಟಿನ್‌ ಕಸೆಬಾ ಸತಾ ಮತ್ತು ಕುಟುಂಬದ ಸದ­ಸ್ಯರು ಜತೆಗಿದ್ದರು. ಅವರಿಗೆ ಯಾವ ಕಾಯಿಲೆ ಇತ್ತು ಎಂಬುದನ್ನು ಬಹಿರಂಗ­ಪಡಿ­ಸಿಲ್ಲ. ಆದರೆ ಮಂಗಳವಾರ ಸಂಜೆ ದಿಢೀರ್‌ ಹೃದಯ ಬಡಿತ ಹೆಚ್ಚಾಗಿತ್ತು.

ಸತಾ ಅವರು ಕಳೆದ ಜೂನ್‌­ನಿಂದ ಮೂರು ತಿಂಗಳ ಕಾಲ ಸಾರ್ವಜನಿಕ­ವಾಗಿ ಕಾಣಿಸಿಕೊಳ್ಳ­ದಿದ್ದ ಕಾರಣ ಅವರ ಆರೋಗ್ಯದ ಬಗ್ಗೆ ಸಾಕಷ್ಟು ಚರ್ಚೆ­ ನಡೆದಿತ್ತು. ಅವರು ಇಸ್ರೇಲ್‌ಗೆ ವಿಶೇಷ ಚಿಕಿತ್ಸೆ ಪಡೆಯಲು ಹೋಗಿದ್ದಾರೆ ಎಂಬ ವದಂತಿಗಳ ಮಧ್ಯೆ ಸರ್ಕಾರವು ರಜೆ ಮೇಲೆ ತೆರಳಿರುವುದಾಗಿ ಹೇಳುತ್ತಿತ್ತು.

ಆದರೆ ಕಳೆದ ತಿಂಗಳು ವಿಶ್ವ­ಸಂಸ್ಥೆಯ ಮಹಾಸಭೆ ಅಧಿವೇಶನದಲ್ಲಿ ಪಾಲ್ಗೊಂ­ಡಿ­ದ್ದಾಗ ಸತಾ ಕುಸಿದು ಬಿದ್ದ ವರದಿ ಬಂದಾಗ, ಜಾಂಬಿಯಾದಲ್ಲಿ ಆತಂಕ ಮೂಡಿತ್ತು. 2011ರ ಚುನಾವಣೆ­ಯಲ್ಲಿ ಜಯಗಳಿಸಿದ ನಂತರ ಸತಾ ಅವರು ಜಾಂಬಿಯಾ ಅಧ್ಯಕ್ಷ­ರಾಗಿ­ದ್ದರು.
ಲಂಡನ್‌ ರೈಲ್ವೆ ಪ್ಲ್ಯಾಟ್‌ಫಾರ್ಮ್‌ ಶುಚಿ­ಗೊಳಿ­ಸುವ ಕೆಲಸದಿಂದ ಜಾಂಬಿಯಾದ ಅಧ್ಯಕ್ಷರಾ­ಗುವ ತನಕ ಉನ್ನತ ಹುದ್ದೆಗೆ ಏರಿದ ಅವರು, ರಾಜಕೀಯ ವೈರತ್ವದ ನಡುವೆಯೂ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲ­ನೆಗಾಗಿ ಶ್ರಮಿಸಿ, ‘ಕಿಂಗ್‌ ಕೋಬ್ರಾ’ ಎಂಬ ಬಿರುದು ಪಡೆದಿದ್ದರು. 1937ರಲ್ಲಿ ಉತ್ತರ ರೊಡೇಸಿ­ಯಾದ ಬ್ರಿಟಿಷ್‌ ಕಾಲೋನಿಯಲ್ಲಿ ಜನಿಸಿದ ಅವರು 1963­ರಲ್ಲಿ ರಾಜ­ಕೀಯ ಸೇರುವ ಮುಂಚೆ ಪೊಲೀಸ್‌ ಅಧಿ­ಕಾರಿ, ರೈಲ್ವೆ ನೌಕರ ಹಾಗೂ ಕಾರ್ಮಿಕ ಸಂಘದ ನಾಯಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT