ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಕಂಪೆನಿಗಳೂ, ಚೀನಾ ಆಹಾರ ಮಾರುಕಟ್ಟೆ ತಲ್ಲಣಗಳೂ

Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಚೀನಾ ಮಾತ್ರವಲ್ಲ, ಇಡೀ ಜಾಗತಿಕ ಸಮುದಾಯದಲ್ಲಿ ಕೋಲಾಹಲ ಉಂಟುಮಾಡಿದ್ದ ಕಳಪೆ ಶಿಶು ಆಹಾರ ದುರ್ಘಟನೆ ಕುಖ್ಯಾತಿಯ ನ್ಯೂಜಿಲೆಂಡ್‌ನ ಡೈರಿ ಉತ್ಪನ್ನ ಕಂಪೆನಿ ಫಾಂಟೆರಾ ಸುರಕ್ಷಿತ ಆಹಾರದ ಘೋಷಣೆಯೊಂದಿಗೆ ಮತ್ತೆ ಚೀನಾ ಮಾರುಕಟ್ಟೆ ಪ್ರವೇಶಿಸಲು ಹಾತೊರೆಯುತ್ತಿದೆ. ಅದಕ್ಕೆ ಬಾಗಿಲುಗಳೂ ತೆರೆದುಕೊಳ್ಳುತ್ತಿವೆ!

ಆರು ವರ್ಷಗಳ ಹಿಂದೆ ನಡೆದ ಘಟನೆ ಈಗಲೂ ಚೀನೀಯರ ಮನದಿಂದ ಅಳಿಸಿಲ್ಲ. ಮೆಲಮೀನ್‌ ಎಂಬ ವಿಷಕಾರಿ ರಾಸಾಯನಿಕ ಬೆರೆಸಿದ ಹಾಲುಪುಡಿ ಸೇವಿಸಿ ಆರು ಮಕ್ಕಳು ಸಾವಿಗೀಡಾಗಿದ್ದರೆ, ಅಸ್ವಸ್ಥಗೊಂಡ ಮಕ್ಕಳ ಸಂಖ್ಯೆ ಸುಮಾರು 3 ಲಕ್ಷ. ಚೀನಾ ಆಹಾರೋದ್ಯಮ ಈ ದುರ್ಘಟನೆಯಿಂದ ಅಕ್ಷರಶಃ ತಲ್ಲಣಗೊಂಡಿತ್ತು. ಜಾಗತಿಕ ಮಟ್ಟದಲ್ಲಿಯೂ ಮಕ್ಕಳ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಏಕೆಂದರೆ ಈ ಘಟನೆಯ ಮುಖ್ಯ ಹೊಣೆಗಾರ ಜಾಗತಿಕ ಶಿಶು ಆಹಾರ ವಲಯದಲ್ಲಿ ಅತಿ ದೊಡ್ಡ ಹೂಡಿಕೆದಾರ ಕಂಪೆನಿಗಳಲ್ಲಿ ಒಂದಾದ ನ್ಯೂಜಿಲೆಂಡ್‌ನ ಫಾಂಟೆರಾ ಸಹಕಾರ ಸಮೂಹ.

ಚೀನಾದ ಸನ್ಲು ಎಂಬ ಶಿಶು ಆಹಾರ ಉತ್ಪಾದಕ ಕಂಪೆನಿಯೊಂದಿಗೆ ಕೈ ಜೋಡಿಸಿದ್ದ ಫಾಂಟೆರಾ ಕೋಟ್ಯಂತರ ಡಾಲರ್ ಹಣವನ್ನು ಅದರಲ್ಲಿ ಹೂಡಿಕೆ ಮಾಡಿತ್ತು. ಈ ಹಾಲಿನ ಪುಡಿಯೊಂದಿಗೆ ಈ ಕೈಗಾರಿಕಾ ರಾಸಾಯನಿಕವನ್ನು ಬೆರೆಸಿಕೊಟ್ಟರೆ ಮಕ್ಕಳು ಚೆನ್ನಾಗಿ ಬೆಳವಣಿಗೆ ಹೊಂದುತ್ತಾರೆ ಎಂದು ನಂಬಿಸಿ ಲಾಭ ಮಾಡಿಕೊಳ್ಳುವ ಕಂಪೆನಿಗಳ ಸಾಲಿನಲ್ಲಿ ಸನ್ಲು ಕೂಡ ಒಂದು. ಹಾಲಿನಲ್ಲಿ ಕೃತಕವಾಗಿ ಪ್ರೊಟೀನ್ ಅಂಶವನ್ನು ಹೆಚ್ಚಿಸಲು ಈ ಕಂಪೆನಿಗಳು ಬಳಸುವುದು ಮೆಲಮೀನ್ ಎಂಬ ನಿಷೇಧಿತ ಕೈಗಾರಿಕಾ ರಾಸಾಯನಿಕವನ್ನು. ಈ ರಾಸಾಯನಿಕ ಎಷ್ಟು ಪರಿಣಾಮಕಾರಿ ಎಂದರೆ, ಆರೇಳು ತಿಂಗಳ ಮಕ್ಕಳಲ್ಲಿ ಮೂತ್ರಕೋಶದಲ್ಲಿ ಕಲ್ಲು ಬೆಳೆದು, ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ. ಈ ದುರ್ಘಟನೆ ನಡೆಯುವ ನಾಲ್ಕು ವರ್ಷದ ಹಿಂದೆಯೇ ಡೇರಿ ಉತ್ಪನ್ನಗಳಲ್ಲಿ ಮೆಲಮೀನ್ ಕಂಡು ಬಂದು ಮಕ್ಕಳು ಅಸ್ವಸ್ಥರಾಗಿದ್ದರಿಂದ ಚೀನಾ ಸರ್ಕಾರ ಈ ರಾಸಾಯನಿಕದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಆದರೆ ಕಾನೂನು ಬಾಹಿರವಾಗಿ ಇದರ ಬಳಕೆ ನಡೆದೇ ಇತ್ತು. ಹಾಲಿನಪುಡಿ ಸೇವಿಸಿದ ಮಕ್ಕಳು ಇದ್ದಕ್ಕಿದ್ದಂತೆ ಅಸ್ವಸ್ಥರಾದ ಘಟನೆ ಚೀನಾವನ್ನು ಬೆಚ್ಚಿಬೀಳಿಸಿತು.ಸರ್ಕಾರ ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಂಡಿತು. ಸನ್ಲು ಕಂಪೆನಿಯನ್ನು ದಿವಾಳಿ ಎಂದು ಘೋಷಿಸಲಾಯಿತು. ಅದರ ನಾಲ್ವರು ಕಾರ್ಯನಿರ್ವಾಹಕರನ್ನು ಜೈಲಿಗೆ ಕಳುಹಿಸಲಾಯಿತು.

ಈಗ ಅದೇ ಫಾಂಟೆರಾ ಸುರಕ್ಷಿತ ಆಹಾರ ಒದಗಿಸುವ ಘೋಷಣೆಯೊಂದಿಗೆ ಮತ್ತೆ ಚೀನಾ ಡೇರಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಶಿಶು ಆಹಾರ ತಯಾರಿಕಾ ಕಂಪೆನಿ ಬಿಂಗ್ಮೇಟ್ ಬೇಬಿ ಅಂಡ್ ಚೈಲ್ಡ್ ಫುಡ್ ಕಂಪೆನಿಯೊಂದಿಗೆ 500 ಕೋಟಿ ಡಾಲರ್‌ಗೂ ಅಧಿಕ ಮೊತ್ತದ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ಅದು ಹೇಳಿದೆ. ಅದಕ್ಕೆ ಒಂದು ದಿನ ಮೊದಲು ಅಮೆರಿಕದ ಖಾಸಗಿ ಷೇರು ಕ್ಷೇತ್ರದ ಬೃಹತ್ ಕಂಪೆನಿ ಕೊಹ್ಲ್‌ಬರ್ಗ್ ಕ್ರಾವಿಸ್ ರಾಬರ್ಟ್ಸ್ ಚೀನಾದ ಅತಿ ದೊಡ್ಡ ಕೋಳಿ ಮಾಂಸ ಉತ್ಪಾದಕ ಫುಜಿಯನ್ ಸುನ್ನರ್ ಡೆವಲಪ್ಮೆಂಟ್ ಜತೆ 400 ಕೋಟಿ ಡಾಲರ್ ಹೂಡಿಕೆ ಒಪ್ಪಂದ ಘೋಷಿಸಿದೆ. ಇದು ಚೀನಾದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಸುಧಾರಿಸುವ ಕುರಿತು ಮಾಡಿಕೊಂಡ ಒಪ್ಪಂದ. ಸನ್ಲು ಕಂಪೆನಿಯ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಸುದ್ದಿಗಾರರಿಗೆ ಫಾಂಟೆರಾದ ಮುಖ್ಯ ಕಾರ್ಯನಿರ್ವಾಹಕ ಥಿಯೊ ಸ್ಪೀರಿಂಗ್ಸ್, ‘ಚೀನಾದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅಲ್ಲದೆ, ಬಿಂಗ್ಮೇಟ್ ಕೂಡ ವಿಭಿನ್ನ ಪಾಲುದಾರ. ಭೂತದ ತಪ್ಪುಗಳಿಂದ ಕಲಿತು ಭವಿಷ್ಯದಲ್ಲಿ ಮುಂದುವರಿಯು ವುದರತ್ತ ಗಮನ ಹರಿಸಿದ್ದೇವೆ’ ಎಂದು ಹೇಳಿದ್ದಾರೆ.

ಆಹಾರ ಸುರಕ್ಷತೆಯ ಹಗರಣಗಳು ಚೀನಾವನ್ನು ಮತ್ತೆ ಮತ್ತೆ ಅಲುಗಾಡಿಸುತ್ತಲೇ ಇವೆ. ಕೋಳಿ ಮಾಂಸ ಚೀನಾದಲ್ಲಿ ಅತಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಆಹಾರ. ಸರ್ಕಾರದ ಮಾಧ್ಯಮಗಳ ವರದಿಯ ಪ್ರಕಾರ ಅಧಿಕಾರಿಗಳು ಕಳೆದ ಒಂದೇ ವಾರದಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬೆರೆಸಿದ್ದ 30 ಸಾವಿರ ಟನ್ ಕೋಳಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧದಲ್ಲಿ ಝೆಜಿಯಾಂಗ್ ಪ್ರಾಂತ್ಯದಲ್ಲಿ 38 ಟನ್ ನಾಯಿ ಮಾಂಸವನ್ನು ದೇಶದಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ, 17 ಜನರನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿದೆ. ಸೈನೈಡ್ ಅಥವಾ ಅನಸ್ತೇಷಿಯಾ ಅತಿಯಾಗಿ ನೀಡುವುದರ ಮೂಲಕ ನಾಯಿಗಳನ್ನು ಕೊಲ್ಲಲಾಗುತ್ತಿತ್ತು. ಇದೇ ವಿಷ ಮಾನವರ ದೇಹಕ್ಕೂ ಸೇರುತ್ತಿತ್ತು. ಕಳಪೆ ಆಹಾರ ಉತ್ಪನ್ನಗಳನ್ನು ತಡೆಗಟ್ಟುವುದು ಚೀನಾ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಒಂದು ಮಟ್ಟಿಗಿನ ನಿರ್ಲಕ್ಷ್ಯವೂ ಈ ಅವಘಡಗಳಿಗೆ ಕಾರಣ ಎನ್ನುತ್ತಾರೆ ಪರಿಣತರು.

‘ಕೆಲವೊಂದು ವಿಷಯಗಳನ್ನು ರಹಸ್ಯವಾಗಿ ಇರಿಸಲಾಗಿದೆ ಎಂದು ಹೇಳಲಾಗದು. ಅದಕ್ಕಿಂತಲೂ ಮಿಗಿಲಾಗಿ ಜನರಿಗೆ ಈ ಪಾಶ್ಚಿಮಾತ್ಯ ಕಂಪೆನಿಗಳು ನಿರೀಕ್ಷಿಸುತ್ತಿರುವ ಗುಣಮಟ್ಟದ ತಿಳಿವಳಿಕೆಯೇ ಇಲ್ಲ’ ಎನ್ನುತ್ತಾರೆ ಏಷ್ಯಾ ತಪಾಸಣೆಯ ಮುಖ್ಯ ಕಾರ್ಯನಿರ್ವಾಹಕ ಸೆಬಾಸ್ಟಿಯನ್ ಬ್ರೆಟು. ಈ ಸಂಸ್ಥೆ ಆಹಾರ ಉತ್ಪನ್ನಗಳೂ ಸೇರಿದಂತೆ ಎಲ್ಲಾ ಬಗೆಯ ಕಂಪೆನಿಗಳು ಪೂರೈಸುವ ಉತ್ಪನ್ನಗಳ ಪರಿಶೀಲಿಸು ತ್ತದೆ. ಇದರ ಪ್ರಕಾರ ಈ ವರ್ಷ ಗುಣಮಟ್ಟ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಉತ್ಪನ್ನಗಳ ಪ್ರಮಾಣ ಶೇ 50ಕ್ಕೂ ಅಧಿಕ.

ಚೀನಾದಲ್ಲಿರುವ ಆಹಾರ ಉತ್ಪಾದನಾ ಕಂಪೆನಿಗಳು ವಿದೇಶಿ ಕಂಪೆನಿಗಳ ಬೆಂಬಲದೊಂದಿಗೆ ಆರ್ಥಿಕವಾಗಿ ಪ್ರಬಲವಾಗಿದ್ದು, ಅತ್ಯಧಿಕ ಗುಣಮಟ್ಟ ಮತ್ತು ಸುರಕ್ಷತಾ ಮಟ್ಟವನ್ನು ಹೊಂದಿರುವುದಾಗಿ ಪ್ರತಿಪಾದಿಸುತ್ತವೆ. ದೊಡ್ಡ ಪ್ರಮಾಣದ ಪ್ರಮಾದಗಳಾದರೂ ಇಂಥ ಕಂಪೆನಿಗಳು ಚೀನಾದಲ್ಲಿ ಯಾವುದೇ ಅಡೆತಡೆ ಇಲ್ಲದೆಯೇ ಮುಂದುವರೆಯಬಲ್ಲವು. ಕಳೆದ ತಿಂಗಳು ಜಗತ್ತಿನ ಅತಿದೊಡ್ಡ ಫಾಸ್ಟ್‌ಫುಡ್ ಕಂಪೆನಿಗಳು ಸುದ್ದಿಯಲ್ಲಿದ್ದವು. ಈ ವಿದ್ಯಮಾನ ಕೂಡ ನಡೆದದ್ದು ಚೀನಾದಲ್ಲೆ. ಶಾಂಘೈನಲ್ಲಿ ಮೆಕ್‌ಡೊನಾಲ್ಡ್, ಕೆಎಫ್‌ಸಿ ಮತ್ತಿತರ ಫಾಸ್ಟ್‌ಫುಡ್ ಆಹಾರ ಕಂಪೆನಿಗಳಿಗೆ ಮಾಂಸ ಪೂರೈಕೆ ಮಾಡುವ ಅಮೆರಿಕ ಮೂಲದ ಒಎಸ್ಐ ಸಮೂಹವನ್ನು ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅವಧಿ ಮೀರಿದ ಕೋಳಿ ಮತ್ತು ದನದ ಮಾಂಸದ ಉತ್ಪನ್ನಗಳಿಗೆ ಹೊಸ ಅವಧಿಯ ಲೇಬಲ್ ಹಚ್ಚುವುದನ್ನು, ಉಳಿದ ಮಾಂಸವನ್ನು ತಂದು ಪರಿಷ್ಕರಣೆಗೆ ರವಾನಿಸುವುದನ್ನು ಸ್ಥಳೀಯ ಟೀವಿ ವಾಹಿನಿ ಬಿತ್ತರಿಸಿದ್ದು ದೊಡ್ಡ ಕೋಲಾಹಲವನ್ನು ಉಂಟುಮಾಡಿತ್ತು.

ಮಾಂಸ ಪೂರೈಕೆಯಲ್ಲಿ ಮುಂಚೂಣಿ ಕಂಪೆನಿಯಾಗಿರುವ ಒಎಸ್ಐ ಗುಣಮಟ್ಟ ನಿಯಂತ್ರಣದಲ್ಲಿಯೂ ಹೆಸರುವಾಸಿ. ಆದರೆ ಈ ಸುದ್ದಿ ಎಲ್ಲರಿಗೂ ತೀವ್ರ ಆಘಾತ ಉಂಟುಮಾಡಿತು. ಕೋಳಿ ಮಾಂಸ ಪೂರೈಕೆ ಸರಪಣಿಯಲ್ಲಿ ಫೀಡ್ ಮಿಲ್, ಸಂಗ್ರಹಣೆ ಮತ್ತು ಕತ್ತರಿಸುವ ಕಾರ್ಯ ವಿಧಾನಗಳಿಗಾಗಿಯೇ ಚೀನಾದಲ್ಲಿ ನೂರಾರು ಲಕ್ಷ ಡಾಲರ್ ಹಣವನ್ನು ಈ ಕಂಪೆನಿ ವಿನಿಯೋಗಿಸಿದೆ. ಈ ಕಂಪೆನಿ ಬೇರೆ ಪೂರೈಕೆದಾರರಿಂದ ಕೊಂಡ ಮಾಂಸವನ್ನು ಸಂಸ್ಕರಿಸುವ ಕೆಲಸವನ್ನು ಮಾತ್ರ ಅಮೆರಿಕದಲ್ಲಿ ಮಾಡುತ್ತದೆ.

ಬಿಂಗ್ಮೇಟ್‌ನ ಶೇ 20ರಷ್ಟು ಷೇರನ್ನು ಫಾಂಟೆರಾ ಪಡೆದುಕೊಂಡಿದೆ. ಈ ಒಪ್ಪಂದದ ಪ್ರಕಾರ ಈ ಎರಡು ಕಂಪೆನಿಗಳು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಯುರೋಪ್‌ಗಳಲ್ಲಿನ ಫಾಂಟೆರಾ ಡೇರಿ ಹಾಗೂ ಉತ್ಪಾದನಾ ಘಟಕಗಳಿಂದ ಶಿಶು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಂಡು ಚೀನಾದಲ್ಲಿ ಮಾರುತ್ತವೆ. ಅಂದರೆ, ಇಲ್ಲಿ ಚೀನಾದಲ್ಲಿಯೇ ಉತ್ಪಾದನೆಯಾಗುವ ಪದಾರ್ಥಗಳ ಬಳಕೆ ಆಗುವುದಿಲ್ಲ. ‘ಆಡಳಿತ ನಿರ್ವಹಣೆಯ ವ್ಯವಸ್ಥೆಯನ್ನು ಸ್ಪಷ್ಟವಾಗಿ ಮಾಡಿಕೊಳ್ಳಲಾಗಿದೆ’ ಎಂದು ಫಾಂಟೆರಾ ಹೇಳಿದೆ. ಚೀನಾದ ಆಹಾರ ಮಾರುಕಟ್ಟೆಯಲ್ಲಿ ಅಧಿಕ ಸ್ಪರ್ಧೆ ಹಾಗೂ ಕಡಿಮೆ ಲಾಭದ ಸ್ಥಿತಿ ಏರ್ಪಡಬೇಕಿದೆ. ವ್ಯವಹಾರವು ಹಣ ಉಳಿತಾಯಕ್ಕೆ ಕೆಲವು ಪ್ರಕ್ರಿಯೆಗಳನ್ನು ತಪ್ಪಿಸಲು ಪ್ರಚೋದನೆ ನೀಡುತ್ತದೆ. ಕೆಲವು ಪ್ರಕರಣಗಳಲ್ಲಿ ಗ್ರಾಹಕರಿಗೆ ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿದಾಗಲೂ ಕಣ್ಣು ಕುರುಡಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಚೀನಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಹಾರ ಪರೀಕ್ಷಕರು ಇಲ್ಲದಿರುವುದೂ ಒಂದು ಮುಖ್ಯ ಕಾರಣ ಎಂದು ಅಭಿಪ್ರಾಯ ಪಡುತ್ತಾರೆ ಚೀನಾ ಮಾಂಸ ಸಂಸ್ಥೆಯ ಗವೊ ಗುವಾನ್. ‘ನಿಯಂತ್ರಣ ಮತ್ತು ಕಾನೂನುಗಳ ಕಟ್ಟುನಿಟ್ಟಾದ ಅಳವಡಿಕೆ ಇಲ್ಲಿ ತುಂಬಾ ಕೆಳಮಟ್ಟದಲ್ಲಿದೆ. ನೀವು ಒಂದೇ ಸಂಸ್ಕರಣಾ ಕಂಪೆನಿಯನ್ನು ನೆಚ್ಚಿಕೊಂಡಿದ್ದರೆ ಅವರ ಮೇಲೆ ಸುರಕ್ಷತಾ ಗುಣ ಮಟ್ಟದ ಒತ್ತಡ ಹೇರಲು ಆಗುವುದಿಲ್ಲ. ಏಕೆಂದರೆ ಎಲ್ಲರೂ ವೇಗ ವಾಗಿ ಹಣ ಗಳಿಸುವುದಕ್ಕಾಗಿಯೇ ಪ್ರಯತ್ನಿಸುತ್ತಿರುತ್ತಾರೆ’ ಎನ್ನುವ ಗುವಾನ್, ಮಾಂಸ ಸಂಸ್ಕರಣೆಯಲ್ಲಿನ ನಿರಂತರ ಸಮಸ್ಯೆಗಳು ಅವರ ಲಾಭದ ಗುರಿಹೊಂದಿರುವ ಅವರನ್ನು ದಾರಿ ತಪ್ಪಿಸುತ್ತವೆ ಎಂದು ಹೇಳುತ್ತಾರೆ. ಸನ್ಲು ದುರ್ಘಟನೆ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಲಕ್ಷಾಂತರ ಮಕ್ಕಳ ಪಾಲಿಗೆ ಅಪಾಯಕಾರಿ ಯಾಗಿರುವ ಫಾಂಟೆರಾದಂಥ ಕಂಪೆನಿ ಮತ್ತೆ ಚೀನಾದ ಶಿಶು ಆಹಾರ ಮಾರುಕಟ್ಟೆ ಪ್ರವೇಶಿಸುತ್ತಿರುವುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT