ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಅಸಹನೆಯ ವಿಷ

Last Updated 27 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಂತರ್ಜಾತಿ ವಿವಾಹಕ್ಕೆ ಅವಕಾಶ ನೀಡುವ ಐತಿಹಾಸಿಕ ನಿರ್ಧಾರ­ವನ್ನು ಹರಿಯಾಣದ ನಾರ್ನಿಡ್ ಗ್ರಾಮದ ಸತ್ರೋಲ್ ಖಾಪ್ ಪಂಚಾ­ಯಿತಿ  ಕಳೆದ ವಾರವಷ್ಟೇ  ತೆಗೆದುಕೊಂಡಿದೆ. ಹರಿಯಾಣ­ದಲ್ಲಿ ಕುಸಿ­ಯು­ತ್ತಿರುವ ಹೆಣ್ಣುಮಕ್ಕಳ ಸಂಖ್ಯೆಯಿಂದಾಗಿ ಉಂಟಾಗಿರುವ ಸಾಮಾಜಿಕ ತಳ­ಮಳ ಇದಕ್ಕೆ ಕಾರಣ.

ಇಂತಹದೊಂದು ಬೆಳವಣಿಗೆ ನಡೆದಿರುವ ವೇಳೆ­ಯಲ್ಲೇ ನಮ್ಮದೇ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹ ಮಾಡಿ­ಕೊಂಡ ತಪ್ಪಿಗಾಗಿ ಹೆಣ್ಣುಮಗಳೊಬ್ಬಳನ್ನು ಜೀವಂತವಾಗಿ ದಹಿಸಿ­ರು­ವುದು ನಾಗರಿಕ ಸಮಾಜಕ್ಕೆ ಎಸಗಿದ ಕಳಂಕ.  ನಾಯಕ ಜನಾಂಗಕ್ಕೆ ಸೇರಿದ ಶಿಲ್ಪಾ ನಾಯಕ್ ಳ ಜೊತೆ ವಿವಾಹಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಅಭಿಜಿತ್ ಕುಟುಂಬ­ದವರ ವಿರೋಧ ಇತ್ತು ಎನ್ನಲಾಗಿದೆ.  ಈ ವಿರೋಧ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕನ್ನಹಳ್ಳಿ ಬಳಿ ಶಿಲ್ಪಾಳ  ಬರ್ಬರ ಹತ್ಯೆ­ಯಲ್ಲಿ ಕೊನೆಗೊಂಡಿರುವುದು ವಿಷಾದನೀಯ. ಹಿತೈಷಿಗಳಂತೆ ನಾಟಕ­ವಾಡಿ ಗಂಡನ ಬಂಧುಗಳೇ  ಕೊಲೆ ಮಾಡಿರುವುದಂತೂ ತಣ್ಣನೆಯ ಕ್ರೌರ್ಯಕ್ಕೆ ಉದಾ­ಹರಣೆ. ಜಾತಿ ಅಸಹನೆಯ ವಿಷದ ಪರಾಕಾಷ್ಠೆ ಇದು.

ಮಂಡ್ಯ ಜಿಲ್ಲೆಯಲ್ಲಿ  ಇಂತಹ ಪ್ರಕರಣ ನಡೆಯುತ್ತಿರುವುದು ಇದೇ ಮೊದ­ಲೇ­ನಲ್ಲ. ಮದ್ದೂರು ತಾಲ್ಲೂಕಿನ ಅಂಬಲಪಾಡಿಯಲ್ಲಿ  ದಲಿತ ಯುವ­ಕ­ನನ್ನು ಪ್ರೀತಿಸಿದ ಯುವತಿಯನ್ನು ಆಕೆಯ ತಂದೆ ಹಾಗೂ ಬಂಧು­ಗಳು ನೇಣುಹಾಕಿ ಕೊಂದ ಆರೋಪದ ವಿಚಾರವೂ ದೊಡ್ಡ ಸುದ್ದಿ­ಯಾ­ಗಿತ್ತು. ಸಕ್ಕರೆಯ ಕಣಜವೆನಿಸಿದ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಗಳ ಹತ್ಯೆ ಪ್ರಮಾಣ ಹೆಚ್ಚಿದೆ ಎಂಬ ಕಳಂಕ ಈಗಾಗಲೇ ಇದೆ. ಈಗ ಅಂತರ್ಜಾತಿ ವಿವಾಹ­ಗಳ ಬಗ್ಗೆ ಈ ಜಿಲ್ಲೆಯಲ್ಲಿ ವ್ಯಕ್ತವಾಗುತ್ತಿರುವ ಅಸಹನೆ ಗಂಭೀರ­ವಾದದ್ದು.

ರಾಷ್ಟ್ರ ಸ್ವತಂತ್ರವಾಗಿ ಆರು ದಶಕಗಳು ಕಳೆದರೂ ಜಾತಿ ತಾರ­ತಮ್ಯಗಳು ಅಳಿಯಲಿಲ್ಲ. ಬದಲಿಗೆ  ಆಧುನಿಕ ನಾಗರಿಕ ಸಮಾಜಕ್ಕೆ ಸಡ್ಡು ಹೊಡೆ­ಯುವ ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು ಪೋಷಿಸುವಂತಹ ಮನಸ್ಸು­ಗಳು ನಿರ್ಮಾಣವಾಗುತ್ತಿರುವುದು ವಿಪರ್ಯಾಸ. ನಾಗರಿಕ ಸಮಾಜಕ್ಕೆ ಅಡ್ಡ­ಗಾಲಾಗುವ ಇಂತಹ ಪ್ರವೃತ್ತಿಗಳ ಬೆಳವಣಿಗೆಯನ್ನು  ಆರಂಭದಲ್ಲೇ ನಿಯಂತ್ರಿ­ಸುವುದು ಆಡಳಿತ ಯಂತ್ರದ ಜವಾಬ್ದಾರಿ. ಶಿಲ್ಪಾ ಹತ್ಯೆಗೆ ಕಾರಣ­ರಾದ­ವರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಅಪರಾಧವನ್ನು ಸಹಿಸ­ಲಾಗದು ಎಂಬಂತಹ ಸಂದೇಶ ಸಮಾಜಕ್ಕೆ ರವಾನೆಯಾಗಬೇಕು. 

ಆಧುನಿಕ ಸಮಾ­ಜ­ದಲ್ಲಿ ತಲೆ ಎತ್ತುತ್ತಿರುವ ಇಂತಹ ಪಿಡುಗುಗಳ ಕುರಿತು ಸಮಾಜ­ಶಾಸ್ತ್ರೀಯ ಅಧ್ಯಯನಗಳು ನಡೆಯಬೇಕು. ಹರಿಯಾಣ ಮತ್ತಿತರ ರಾಜ್ಯ­ಗಳಲ್ಲಿ  ಪ್ರಬಲವಾಗಿರುವ ಜಾತಿ ಪಂಚಾಯಿತಿಗಳು ಸೃಷ್ಟಿಸಿದ  ಅವಾಂತರ­ಗಳ ಕೆಡುಕುಗಳನ್ನು ನಾವು ಮನಗಾಣಬೇಕು.  ಹೀಗಾಗಿ ಜಾತಿಭೇದದ ಪಿಡುಗು ಸೇರಿದಂತೆ ಎಲ್ಲಾ ಸಾಮಾಜಿಕ ಪಿಡುಗುಗಳ ವಿರುದ್ಧವೂ ಗ್ರಾಮ ಮಟ್ಟ­ಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT