ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ: ‘ನಿಮಗೆಷ್ಟು ಗಂಡಂದಿರು’

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ವಿವಾಹಿತ ಪುರುಷರಿಗಾದರೆ ‘ನೀವು ಬಹುಪತ್ನಿ­ಯರನ್ನು ಹೊಂದಿ­ದ್ದೀರಾ’ ಎಂದು ಕೇಳಬೇಕು. ಅದರಂತೆ ವಿವಾ­ಹಿತ ಮಹಿಳೆಯರಿಗೆ, ‘ನಿಮಗೆ ಎಷ್ಟು ಜನ ಗಂಡಂದಿರು (ಬಹು ಪತಿತ್ವ)’ ಎಂಬ ಪ್ರಶ್ನೆಯನ್ನೂ ಕೇಳಬೇಕು!

ರಾಜ್ಯ ಸರ್ಕಾರ ನಡೆಸಲಿರುವ ಜಾತಿ­ಗಣತಿ ಮಾಹಿತಿ ನಮೂನೆಯ ಕಾಲಂ ನಂ. 14ರ ವೈವಾಹಿಕ ಸ್ಥಾನಮಾನದ ವಿವ­ರದಲ್ಲಿ ಈ ರೀತಿಯ ಪ್ರಶ್ನೆಗಳಿವೆ. ‘ನಿಮಗೆಷ್ಟು ಹೆಂಡಂದಿರು ಎಂದು ಗಂಡಸರಿಗೆ ಕೇಳಿದರೆ ಅಪಾರ್ಥ ಮಾಡಿಕೊಳ್ಳದೇ ಇರಬ­ಹುದು, ಕೆಲ­ವರು ಖುಷಿ ಪಡ­ಲೂಬಹುದು. ಆದರೆ, ನಿಮಗೆಷ್ಟು ಗಂಡಂದಿರು ಎಂದು  ಮಹಿಳೆ­ಯರಿಗೆ  ಹೇಗೆ ಕೇಳುವುದು? ಹೀಗೆ ಕೇಳಿ­ದರೆ ಅವರು ನಮ್ಮ ಕಪಾಳಕ್ಕೆ ಹೊಡೆಯದೆ ಹಾಗೇ ಬಿಡು­ತ್ತಾ­ರೆಯೇ’ ಎನ್ನುವುದು  ಗಣತಿಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಆತಂಕ.

ಜಾತಿ ಗಣತಿಯ ಮಾಹಿತಿ ಕೈಪಿಡಿಯ ಪುಟ ಸಂಖ್ಯೆ 23ರಲ್ಲಿ ‘ವಿವಾಹ ಆದ ಸಮಯದ ವಯಸ್ಸನ್ನು ತಿಳಿಸಿದಂತೆ ನಮೂದಿಸು­ವುದು. ಕೆಲವು ಕಡೆ ಅಲ್ಪ ವಯಸ್ಕರು ವಿವಾಹ ಆದ ಪ್ರಸಂಗಗಳಲ್ಲಿ ಅವರು ತಿಳಿಸಿದ ವಯಸ್ಸನ್ನು ನಮೂದಿಸುವುದು. ಸದ್ಯದಲ್ಲಿ ವಿವಾಹಿತ ಸ್ಥಿತಿಯಲ್ಲಿರುವವರು ಅಥವಾ ವಿಧವೆ ಅಥವಾ ವಿಧುರ­ರಾ­ಗಿರುವವರು ಅಥವಾ ಬೇರ್ಪಡೆಯಾಗಿರುವವರು ಅಥವಾ ವಿವಾಹ ವಿಚ್ಛೇದನ ಪಡೆದವರಿಂದ ಅವರ ವಿವಾಹವಾದ ವಯಸ್ಸನ್ನು ಕೇಳಿ ನಮೂದಿಸುವುದು.

ಮರು ಮದುವೆಯಾದ ಮತ್ತು ಬಹುಪತಿ/ ಬಹು ಪತ್ನಿಯನ್ನು ಹೊಂದಿದ ವ್ಯಕ್ತಿಯ ಮೊದ­ಲನೆಯ ಮದುವೆಯಾದಾಗಿನ ವಯಸ್ಸನ್ನು ಕೇಳಿ ನಮೂದಿ­ಸ­ಬೇಕು’ ಎಂದು ತಿಳಿಸಲಾಗಿದೆ. ಆದರೆ, ‘ಅವಿವಾಹಿತ ಎಂದು ಹೇಳಿ­ಕೊಂಡ ವ್ಯಕ್ತಿಗೆ ಈ ಪ್ರಶ್ನೆ ಕೇಳಬಾರದು’ ಎಂಬ ಸೂಚನೆ ನೀಡಲಾಗಿದೆ.

‘ಗಣತಿ ಕಾರ್ಯಕ್ಕೆ ನಿಯೋಜನೆಗೊಂಡವರಿಗೆ ಈಗ ತರಬೇತಿ ನಡೆಯುತ್ತಿದೆ. ಬಹುಪತಿತ್ವದ ಪ್ರಶ್ನೆ ಏಕೆ ಬೇಕು? ಅದನ್ನು ತೆಗೆದು­ಹಾಕಿ ಎಂದು ಕೇಳಿದರೆ, ನಮೂನೆಯಲ್ಲಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಪಡೆದು ನಮೂದಿಸುವುದು ಕಡ್ಡಾಯ ಎಂದು ಅಧಿಕಾ­ರಿಗಳು ಹೇಳುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಈ ಪ್ರಶ್ನೆ ಕೇಳಿದರೆ ಮನೆಯವರೆಲ್ಲ ಸೇರಿ ನಮ್ಮನ್ನು ಹೊಡೆಯುತ್ತಾರೆ ಅಷ್ಟೆ’ ಎಂದು ಗಣತಿ ಸಿಬ್ಬಂದಿಯೊಬ್ಬರು ಹೇಳಿದರು. 

‘ವಿಧವೆಯರ ಬಳಿ, ನೀವು ಮರು ವಿವಾಹವಾಗಿದ್ದೀರಾ ಎಂದು  ಪ್ರಶ್ನಿಸಲಿಕ್ಕೇ ಮುಜುಗರವಾಗುತ್ತದೆ. ಇನ್ನು ಬಹುಪತಿತ್ವದ ಬಗ್ಗೆ ವಿಚಾರಿಸುವುದಂತೂ ಸಾಧ್ಯವೇ ಇಲ್ಲ. ನಮೂನೆಯಿಂದ ಈ ಪ್ರಶ್ನೆಯನ್ನು ತೆಗೆದುಹಾಕಬೇಕು’ ಎಂದು ಆಗ್ರಹಿಸುತ್ತಾರೆ ಅವರು.
‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗವೇ ಪ್ರಶ್ನಾವಳಿ ಸಿದ್ಧ­ಪ­ಡಿಸಿದೆ. ಅವರು ಕಳಿಸಿರುವ ಮಾಹಿತಿ ಕೈಪಿಡಿ ಮತ್ತಿತರ ಸಾಮಗ್ರಿ­ಯನ್ನು ಗಣತಿ ಸಿಬ್ಬಂದಿಗೆ ತಲುಪಿಸುವುದಷ್ಟೇ ನಮ್ಮ ಕೆಲಸ’ ಎನ್ನು­ತ್ತಾರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT