ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಹಣೆಪಟ್ಟಿ ಅಮಾನವೀಯ

ಮಗುವಿನ ಜನನ ಪ್ರಮಾಣಪತ್ರದಲ್ಲಿಯೇ ‘ದಲಿತ’ ಎಂದು ನಮೂದಿಸುವ ಆಲೋಚನೆ ಸರಿಯಲ್ಲ
Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಜಾತಿಯ ಹುಟ್ಟು ಇಂದು ಮತ್ತು ನಿನ್ನೆಯದಲ್ಲ. ಮನುಪ್ರಣೀತ ವರ್ಣವ್ಯವಸ್ಥೆ ಜಾರಿಗೆ ಬಂದಾಗಿನಿಂದ ಜಾತಿ ವ್ಯವಸ್ಥೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿದೆ. ಪ್ರಕೃತಿ ನಿಯಮದಂತೆ ಮನುಷ್ಯನ ಹುಟ್ಟು ಯಾವುದೇ ಜಾತಿ ಆಧಾರದ ಮೇಲೆ ಆಗುವುದಿಲ್ಲ. ಹಾಗೆ ಹುಟ್ಟಿದ ಮಗುವಿಗೆ ಯಾವುದೇ ಜಾತಿ ಮತ್ತು ಧರ್ಮದ ಸೋಂಕು ಇರುವುದಿಲ್ಲ.

ಪರಿಶುದ್ಧವಾದ ಮಾನವ ಜನ್ಮ ಹಕ್ಕು  ಮಗುವಿನದು. ಆದರೆ ನಮ್ಮ ಜಾತಿ ವ್ಯವಸ್ಥೆಯಿಂದಾಗಿ ತಂದೆ ತಾಯಿಯ ಜಾತಿಯನ್ನಾಧರಿಸಿ ಆ ಅಮಾಯಕ ಮಗುವಿಗೆ ಸಮಾಜ ಒಂದು ಜಾತಿಯ ಹಣೆಪಟ್ಟಿ ಕಟ್ಟಿಬಿಡುವುದು ಭಾರತದಲ್ಲಿನ ಮಾನವ ಜನ್ಮದ ದುರಂತ. ನಂತರ ಜಾತಿ ವ್ಯವಸ್ಥೆಯ ಚೌಕಟ್ಟಿನಲ್ಲಿ ಬೆಳೆಯುವ ಮಗುವಿನ ಭವಿಷ್ಯ ಸಮಾಜದಲ್ಲಿನ ಆಯಾ ಜಾತಿಯ ಸ್ಥಾನಮಾನಕ್ಕನುಗುಣವಾಗಿ ನಿರ್ಧಾರವಾಗುತ್ತಾ ಹೋಗುತ್ತದೆ.

ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಉನ್ನತ ಸ್ಥಾನಮಾನಗಳಿಗೆ ಭಾಜನವಾದ ಜಾತಿಯ ಮಗು ಸಮಾಜದಲ್ಲಿ ಮುಕ್ತ ಅವಕಾಶ ಪಡೆದು ಎಲ್ಲ ಕ್ಷೇತ್ರಗಳಲ್ಲೂ ಗೌರವ ಪಡೆಯುತ್ತಾ ಬೆಳೆಯುತ್ತದೆ. ಆದರೆ, ಕೀಳೆಂದು ಪರಿಗಣಿಸಲ್ಪಟ್ಟ ಜಾತಿಗೆ ಸೇರಿದ ಮಗು ಸಮಾಜದಲ್ಲಿ ಅವಕಾಶಗಳಿಂದ ವಂಚಿತವಾಗಿ ಕೀಳರಿಮೆಯಿಂದ ಕಡೆಗಣನೆಗೆ ಗುರಿಯಾಗುತ್ತಾ ಬೆಳೆಯುತ್ತದೆ. ಮನುಪ್ರಣೀತ ಸನಾತನ ಹಿಂದೂಧರ್ಮದ ಕರ್ಮಠರ ದೃಷ್ಟಿಯಲ್ಲಿ ಇಂತಹ ಮಕ್ಕಳು ಪೂರ್ವಜನ್ಮದ ಪಾಪದ ಫಲದಿಂದ ಹುಟ್ಟಿರುವಂತಹವು. ಹೀಗಾಗಿ  ಸಮಾಜದ ಎಲ್ಲ ಹಂತಗಳಲ್ಲೂ ಈ ಮಕ್ಕಳು ತಿರಸ್ಕಾರಕ್ಕೆ ಒಳಗಾಗುತ್ತವೆ.

ನಮ್ಮ ಸಂವಿಧಾನ, ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶಗಳನ್ನು ನೀಡಿದೆ. ಅಲ್ಲದೆ,  ಸ್ವಾಭಿಮಾನ ಮತ್ತು  ಗೌರವದಿಂದ ಬಾಳುವ ಅವಕಾಶವನ್ನೂ ಕಲ್ಪಿಸಿದೆ. ಜಾತ್ಯತೀತ ರಾಷ್ಟ್ರ ಎಂಬ ಘೋಷ ವಾಕ್ಯವನ್ನು ಸಂವಿಧಾನದಲ್ಲೂ ಅಳವಡಿಸಲಾಗಿದೆ. ಹೀಗಿದ್ದೂ, ನಿರ್ಲಕ್ಷ್ಯಕ್ಕೆ ಒಳಗಾಗಿ, ಸಂವಿಧಾನ ಅಸ್ತಿತ್ವಕ್ಕೆ ಬರುವ ಮೊದಲಿನಿಂದಲೂ ಅಸ್ಪೃಶ್ಯರೆನಿಸಿಕೊಂಡು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶಗಳಿಂದ ವಂಚಿತರಾದ  ಪರಿಶಿಷ್ಟ ಜಾತಿಯ ಜನರಿಗೆ ಸಮಾಜದ ಎಲ್ಲ ಸ್ತರಗಳಲ್ಲಿ ಮುಕ್ತ ಅವಕಾಶ ಕಲ್ಪಿಸುವುದಕ್ಕಾಗಿ ಜಾತಿ ಆಧಾರಿತ ಮೀಸಲಾತಿಯನ್ನು ಒದಗಿಸುವುದೂ ಅನಿವಾರ್ಯವಾದದ್ದು ಈಗ ಇತಿಹಾಸ.

ಈ ಮೀಸಲಾತಿಯ ದೂರದೃಷ್ಟಿಯ ಗುರಿ ಸಹಸ್ರಾರು ವರ್ಷಗಳಿಂದ ಹುಟ್ಟಿನಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪರಿಶಿಷ್ಟ ಜಾತಿಯ ಜನರು ಇತರರಂತೆಯೇ ಮುಕ್ತ ಅವಕಾಶಗಳನ್ನು ಪಡೆದು ಮುಂದೆ ಬರಬೇಕೆನ್ನುವುದಾಗಿದೆ. ಆದರೆ ಸಂವಿಧಾನದ ಈ ಮೂಲ ಆಶಯ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಅಥವಾ ಅದನ್ನು ಪೋಷಿಸುವ ಉದ್ದೇಶವನ್ನು ಖಂಡಿತ ಹೊಂದಿಲ್ಲ. ದುರದೃಷ್ಟಕರ ಸಂಗತಿ ಎಂದರೆ ನಮ್ಮ ಜಾತಿಯ ಶ್ರೇಣೀಕೃತ ವ್ಯವಸ್ಥೆಯಲ್ಲಿನ ಕೆಲವೇ ಜನರು ಸಮಾಜ ಮತ್ತು ಸರ್ಕಾರದಲ್ಲಿ ಎಲ್ಲ ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ಪಡೆಯುತ್ತಾ ಬಂದದ್ದು ಬೆಳಕಿನಷ್ಟೇ ಸತ್ಯ.  

ಹೀಗಾಗಿ, ನಿರ್ಲಕ್ಷ್ಯಕ್ಕೆ ಒಳಗಾದ ಉಳಿದ ಜಾತಿಗಳ ಜನರನ್ನೂ ಸಮಾಜದ ಮುಖ್ಯವಾಹಿನಿಗೆ ತರುವುದಕ್ಕಾಗಿ ಸೃಷ್ಟಿಸಲಾದ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಈಗ ಸಾಂವಿಧಾನಿಕ ಮನ್ನಣೆ ದೊರೆಯುತ್ತಿದೆ. ಇದರ ಪರಿಣಾಮವಾಗಿ ಪ್ರತಿಯೊಂದು ಜಾತಿಯ ಜನರ ಸಂಖ್ಯೆಯ ಆಧಾರದ ಮೇಲೆ ಅವಕಾಶ ಮತ್ತು ಸರ್ಕಾರದ ಸೌಲಭ್ಯ ನೀಡುವ ದಿಕ್ಕಿನಲ್ಲಿ ಮೀಸಲಾತಿಯ ವಿಸ್ತರಣೆ ಬೆಳೆಯುತ್ತಾ ಹೋಗಿದೆ.

ಇದರಿಂದ ಸರ್ಕಾರದ ಮಟ್ಟದಲ್ಲಿಯೇ ಜಾತಿ ವ್ಯವಸ್ಥೆ ಅಕ್ಷರಶಃ ವಾಸ್ತವ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲಾಗಿದೆ. ಹೀಗಾಗಿ ಪ್ರತಿಯೊಂದು ಜಾತಿ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಆಡಳಿತದಲ್ಲಿ ಮತ್ತು ಅವಕಾಶಗಳಲ್ಲಿ ಪಾಲು ಕೇಳುತ್ತಿದೆ. ಈ ಹಕ್ಕೊತ್ತಾಯವನ್ನು ಸುಲಭವಾಗಿ ವಿವೇಚನಾರಹಿತವಾಗಿ ತಳ್ಳಿಹಾಕಲಾಗದು. ಜನತಂತ್ರ ವ್ಯವಸ್ಥೆಯಲ್ಲಿ ಈ ಪಾಲುಗಾರಿಕೆ ನ್ಯಾಯ ಸಮ್ಮತ ಎನ್ನುವ ಸಾಮಾಜಿಕ ಸಮಾನತೆಯ ಮೌಲ್ಯ ಈ ದಿನಮಾನದಲ್ಲಿ ಹೊಸ ಆಯಾಮವನ್ನು ಪಡೆದಿದೆ.

ಈ ಸಾಮಾಜಿಕ ಸಮಾನತೆಯ ಅವಕಾಶಗಳನ್ನು ಪಡೆಯುವ ಸಂದರ್ಭದಲ್ಲಿ ಪರಿಶಿಷ್ಟೇತರ ಜಾತಿಗಳ ಕೆಲವು ಜನರು ಪರಿಶಿಷ್ಟ ಜಾತಿಗಳ ಹೆಸರಿನಲ್ಲಿ ಸುಳ್ಳು ಜಾತಿ ಸರ್ಟಿಫಿಕೇಟ್‌ಗಳನ್ನು ಪಡೆದು ಮೀಸಲಾತಿಯ ದುರುಪಯೋಗ ಮಾಡಿಕೊಳ್ಳುತ್ತಿರುವ ಸಂಗತಿ ಸರ್ಕಾರಕ್ಕೆ ತಲೆನೋವಾಗಿದೆ. ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಾಗುತ್ತಿರುವ ಈ ದೋಷವನ್ನು ಈಗಿರುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ  ಮೂಲಕವೇ ತಡೆಗಟ್ಟುವ ಅವಕಾಶವಿದೆ.

ಆದರೆ, ಭ್ರಷ್ಟ ವ್ಯವಸ್ಥೆಯಿಂದ ಅದು ಸಾಧ್ಯವಾಗುತ್ತಿಲ್ಲ ಎನ್ನುವುದು ವಾಸ್ತವ ಸಂಗತಿ. ಸುಳ್ಳು ಜಾತಿ ಸರ್ಟಿಫಿಕೇಟ್‌ಗಳನ್ನು ಪಡೆದು ಪರಿಶಿಷ್ಟರ ಮೀಸಲಾತಿ ಸೌಲಭ್ಯಗಳನ್ನು ಕಬಳಿಸುತ್ತಿರುವ ದೂರುಗಳು ಬರುತ್ತಿರುವ ಕಾರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿಯ ದಂಪತಿಗಳಿಗೆ ಹುಟ್ಟುವ ಹಸುಳೆಗೆ ಜನ್ಮ ದಿನಾಂಕ ಮತ್ತು ವಾಸದ ಸ್ಥಳದ ವಿವರ ನೀಡುವುದರ ಜೊತೆಗೆ ಜಾತಿಯ ಹಣೆಪಟ್ಟಿಯನ್ನೂ ಕಟ್ಟಲು ಹೊರಟಿದೆ. ಸ್ಥಳೀಯ ಸಂಸ್ಥೆಯ ಆಡಳಿತವು ನೀಡುವ ಜನನ ಸರ್ಟಿಫಿಕೇಟ್‌ನಲ್ಲಿಯೇ ‘ದಲಿತ’ ಎಂದು ಮಗುವಿನ ಜಾತಿಯನ್ನು ನಮೂದಿಸುವ ತಿದ್ದುಪಡಿ ಕರಡು ಮಸೂದೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿರುವುದು ಅಚ್ಚರಿಯ ಸಂಗತಿ.

ಎಂಟನೇ ತರಗತಿಗೆ ಸೇರುವಾಗ ಜಾತಿ ವಿವರಗಳನ್ನು ನೀಡುವ ಸಂದರ್ಭದಲ್ಲಿ ಈ ಹೊಸ ವ್ಯವಸ್ಥೆಯಿಂದ ನಕಲಿ ಜಾತಿ ಪತ್ರ ಪಡೆಯುವ ಹಾವಳಿಯನ್ನು ಹತ್ತಿಕ್ಕಬಹುದು ಎನ್ನುವ ಉಪಾಯ ಕೇಂದ್ರ ಸರ್ಕಾರದ್ದು. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇಂದಿಗೂ ಜಾತಿಯಿಂದಾಗಿ ಅವಮಾನವನ್ನು ಅನುಭವಿಸುತ್ತಿರುವ ಪರಿಶಿಷ್ಟ ಜಾತಿಯ ಹಲವರು ಜಾತಿ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ ಜಾತಿಯ ಸೋಂಕಿಲ್ಲದೆ ಬದುಕುತ್ತಿದ್ದಾರೆ. ಇಂತಹ  ಜಾತ್ಯತೀತ ಸಂತತಿಗೆ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಮತ್ತೆ ಒಲ್ಲದ ಜಾತಿ ವ್ಯವಸ್ಥೆಗೆ ಅವರನ್ನು  ಕಟ್ಟಿಹಾಕುವ ಪ್ರಯತ್ನವಾಗಿದೆ.

ಜೊತೆಗೆ, ಆಗಷ್ಟೇ ಜನ್ಮ ತಾಳಿದ ಹಸುಳೆಗೆ ಸರ್ಕಾರದಿಂದಲೇ ಜಾತಿಯ ಹಣೆಪಟ್ಟಿ ಕಟ್ಟುವುದು ನಿಜಕ್ಕೂ ಅಮಾನವೀಯ. ಸಮಾಜದಲ್ಲಿ ತಮ್ಮನ್ನು ಕೀಳುಮಟ್ಟಕ್ಕಿಳಿಸಿರುವ ಅಮಾನುಷ ಜಾತಿ ವ್ಯವಸ್ಥೆ ತೊಲಗಬೇಕೆನ್ನುವುದು ಪ್ರತಿಯೊಬ್ಬ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಆಂತರ್ಯದ ತುಡಿತ. ಹೀಗಿರುವಾಗ ಹುಟ್ಟುವ ಮಗುವನ್ನು ಜಾತಿಯ ಸಂಕೋಲೆಗೆ ದೂಡುವ ಕೇಂದ್ರ ಸರ್ಕಾರದ ಕ್ರಮ ತಿರಸ್ಕಾರಯೋಗ್ಯವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT