ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತ ತಳಹದಿ ಬಲಪಡಿಸಲು ‘ಸಂಹಿತೆ’

ಧಾರ್ಮಿಕ ವಿಚಾರಗಳಲ್ಲಿ ಮಹಿಳೆಯರು ಇನ್ನೂ ತಾರತಮ್ಯ ಅನುಭವಿಸುತ್ತಿದ್ದಾರೆ
Last Updated 21 ಜುಲೈ 2016, 4:58 IST
ಅಕ್ಷರ ಗಾತ್ರ

ಮಹಿಳೆಯರಿಗೆ ದೇವಸ್ಥಾನ ಪ್ರವೇಶಿಸಲು ಶನಿ ಶಿಂಗ್ಣಾಪುರ ಮತ್ತು ತ್ರಯಂಬಕೇಶ್ವರ ದೇವಸ್ಥಾನ ಟ್ರಸ್ಟ್‌ಗಳು ಅವಕಾಶ ನೀಡಲು ಈಚೆಗೆ ತೀರ್ಮಾನಿಸಿರುವುದು ಲಿಂಗ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ನಡೆದ ಸ್ವಾಗತಾರ್ಹ ಬೆಳವಣಿಗೆ.  ಸರಣಿ ಪ್ರತಿಭಟನೆಗಳು ನಡೆದ ನಂತರ ಅವು ಈ ತೀರ್ಮಾನಕ್ಕೆ ಬಂದಿವೆ.

ಈ ತೀರ್ಮಾನ ಹಾಗೂ ಅದಕ್ಕೂ ಮೊದಲಿನ ಪ್ರತಿಭಟನೆಗಳು, ವ್ಯಾಪಕವಾಗಿರುವ ಲಿಂಗ ತಾರತಮ್ಯವನ್ನು (ಅದರಲ್ಲೂ ಧರ್ಮದ ಆಧಾರದಲ್ಲಿ ನಡೆಯುವ ತಾರತಮ್ಯ) ಅಂತ್ಯಗೊಳಿಸುವ ಕುರಿತು ದೇಶದಾದ್ಯಂತ ಚರ್ಚೆಯ ಕಿಡಿ ಹೊತ್ತಲು ಕಾರಣವಾದವು.  ಅತ್ಯಾಧುನಿಕವಾಗಿರುವ ವಿಮಾನಯಾನ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಕೂಡ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಹೆಜ್ಜೆಹಾಕುತ್ತಿದ್ದಾರೆ. ಆದರೆ  ಧಾರ್ಮಿಕ ವಿಚಾರಗಳಲ್ಲಿ ಮಹಿಳೆಯರು ಇನ್ನೂ ತಾರತಮ್ಯ ಅನುಭವಿಸುತ್ತಿದ್ದಾರೆ. ಇದು ಕಳವಳದ ಸಂಗತಿ.

ಗೋವಾದಲ್ಲಿರುವ ‘ಗೋವಾ ಕುಟುಂಬ ಕಾನೂನಿನ’ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ನಡೆಸಿ, ಅದನ್ನು ದೇಶದ ಇತರೆಡೆಯೂ ಪಾಲಿಸಬಹುದೇ ಎಂಬುದನ್ನು ಪರಿಶೀಲಿಸುವ ಕಾಲ ಬಂದಿರುವಂತಿದೆ. 1867ರ ‘ಪೋರ್ಚುಗೀಸ್ ನಾಗರಿಕ ಸಂಹಿತೆ’ಯನ್ನು ‘ಗೋವಾ ವಿಮೋಚನೆ’ಯ ನಂತರವೂ ಆ ರಾಜ್ಯದಲ್ಲಿ ಉಳಿಸಿಕೊಳ್ಳಲಾಯಿತು. ಇದು ಇತರ ರಾಜ್ಯಗಳಿಗೆ ಮಾದರಿಯಾಗಬೇಕು. ಪ್ರಗತಿಪರವಾಗಿರುವ ಈ ಕಾನೂನು ಆಸ್ತಿ ಮತ್ತು ಆದಾಯವನ್ನು ಪತಿ–ಪತ್ನಿ ಹಾಗೂ ಮಕ್ಕಳ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅವಕಾಶ ಕಲ್ಪಿಸುತ್ತದೆ. ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳಿಗೂ ಇದು ಅನ್ವಯವಾಗುತ್ತದೆ.

ಎಲ್ಲ ಧರ್ಮದವರನ್ನೂ ಒಳಗೊಳ್ಳುವ ಸಮಾನ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯ. ನೈಜ ಜಾತ್ಯತೀತತೆಗೆ ಇದು ಅಡಿಗಲ್ಲು. ಯಾವುದೇ ತೀರ್ಮಾನವನ್ನು, ಅದು ಸುಧಾರಣೆಯ ಪರವಾಗಿದ್ದರೂ, ಜನರ ಒಪ್ಪಿಗೆಯಿಲ್ಲದಿದ್ದರೆ ಅವರ ಮೇಲೆ ಹೇರಲಾಗದು. ಹಾಗಾಗಿ, ಸಮಾನ ನಾಗರಿಕ ಸಂಹಿತೆಯ ಸಾಧಕ–ಬಾಧಕಗಳ ಬಗ್ಗೆ ಚರ್ಚೆಯಾಗಿ, ಎಲ್ಲ ಧರ್ಮಗಳ ಜನರಿಂದ ಬೆಂಬಲ ಸಿಕ್ಕಾಗಲೇ ಇದನ್ನು ಅನುಷ್ಠಾನಕ್ಕೆ ತರಲು ಸಾಧ್ಯ. ಈ ವಿಚಾರದಲ್ಲಿ ಮುನ್ನಡೆ ಸಾಧಿಸಲು, ಸಂಹಿತೆ ಬಗ್ಗೆ ಇರುವ ಸಂದೇಹಗಳನ್ನು ಯೋಗ್ಯ ರೀತಿಯಲ್ಲಿ ಪರಿಹರಿಸಬೇಕು. ವೈಯಕ್ತಿಕ ಕಾನೂನುಗಳ ವಿಚಾರದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ನೀಡುವ, ಧರ್ಮದ ಹೆಸರಿನಲ್ಲಿ ನಡೆಯುವ ತಾರತಮ್ಯದ ಆಚರಣೆಗಳನ್ನು ಕೊನೆಗಾಣಿಸುವ ಸುಧಾರಣೆಗಳನ್ನು ಋಜು ಮಾರ್ಗದಲ್ಲಿ ಚಿಂತಿಸುವ ಯಾವುದೇ ವ್ಯಕ್ತಿ ಕುರುಡಾಗಿ ವಿರೋಧಿಸಲಾರ. ಧಾರ್ಮಿಕ ಪದ್ಧತಿಗಳನ್ನು ಆಧರಿಸಿ ರೂಪುಗೊಂಡಿರುವ ವೈಯಕ್ತಿಕ ಕಾನೂನುಗಳ ಜಾಗದಲ್ಲಿ ಏಕರೂಪದ ನಾಗರಿಕ ಸಂಹಿತೆ ಅಸ್ತಿತ್ವಕ್ಕೆ ಬರುತ್ತದೆ.

ದೇಶದ ಎಲ್ಲ ನಾಗರಿಕರಿಗೆ ಅನ್ವಯವಾಗುವಂತಹ ‘ಸಮಾನ ನಾಗರಿಕ ಸಂಹಿತೆ’ ಜಾರಿಗೆ ತರಲು ಪ್ರಭುತ್ವ ಪ್ರಯತ್ನಿಸಬೇಕು ಎಂದು ಸಂವಿಧಾನದ 44ನೇ ವಿಧಿ ಹೇಳುತ್ತದೆ. ಸಂವಿಧಾನ ಕರಡು ರಚನಾ ಸಭೆಯಲ್ಲಿ ನಡೆದ ಚರ್ಚೆಯ ವೇಳೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾನ ನಾಗರಿಕ ಸಂಹಿತೆಯ ಜಾರಿ ಸಂಪೂರ್ಣ ಐಚ್ಛಿಕವಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು.

‘ವ್ಯಕ್ತಿಯ ಇಡೀ ಜೀವನವನ್ನು ವ್ಯಾಪಿಸುವಷ್ಟು, ಶಾಸಕಾಂಗ ಯಾವುದೇ ಕಾನೂನುಗಳನ್ನು ರೂಪಿಸಲು ಆಗದಷ್ಟು ವ್ಯಾಪ್ತಿಯನ್ನು ಧರ್ಮಕ್ಕೆ ಏಕೆ ನೀಡಬೇಕು ಎಂಬುದು ವೈಯಕ್ತಿಕವಾಗಿ ನನಗೆ ಅರ್ಥವಾಗುತ್ತಿಲ್ಲ. ಅಷ್ಟಕ್ಕೂ ನಾವು ಈ ಮುಕ್ತತೆಯನ್ನು ಹೊಂದಿರುವುದು ಯಾವ ಕಾರಣಕ್ಕೆ? ನಮ್ಮ ಮೂಲಭೂತ ಹಕ್ಕುಗಳ ಜೊತೆ ಸಂಘರ್ಷಕ್ಕೆ ಇಳಿಯುವ ತಾರತಮ್ಯ, ಅಸಮಾನತೆಗಳಿಂದ ತುಂಬಿರುವ ಸಮಾಜವನ್ನು ಸುಧಾರಿಸಲು ನಾವು ಈ ಮುಕ್ತತೆಯನ್ನು ಹೊಂದಿದ್ದೇವೆ’ ಎಂದಿದ್ದರು ಅಂಬೇಡ್ಕರ್. ಪ್ರಾಯೋಗಿಕ ದೃಷ್ಟಿಕೋನದಿಂದ ಬಾಬಾಸಾಹೇಬರು ಆಡಿದ ಈ ಮಾತುಗಳು, ಭಾರತೀಯ ಸಮಾಜಕ್ಕೆ ಇಂದು ಪ್ರಸ್ತುತವಾಗಿವೆ.

ದೇಶದ ಎಲ್ಲ ಧರ್ಮಗಳ, ಜಾತಿಗಳ, ಪಂಗಡಗಳ ಹಾಗೂ ಪ್ರದೇಶಗಳ ಜನರಿಗೆ ಅನ್ವಯವಾಗುವ ಕ್ರಿಮಿನಲ್ ಕಾನೂನು ಜಾರಿಯಲ್ಲಿದೆ. ಆದರೆ ವಿವಾಹ ವಿಚ್ಛೇದನ, ಆಸ್ತಿ ಹಕ್ಕುಗಳ ವಿಚಾರದಲ್ಲಿ ಎಲ್ಲರಿಗೂ ಅನ್ವಯವಾಗುವ ಕಾನೂನು ಇಲ್ಲ. ಈ ವಿಚಾರಗಳು ವೈಯಕ್ತಿಕ ಕಾನೂನುಗಳ ವ್ಯಾಪ್ತಿಯಲ್ಲಿವೆ. ಇಂತಹ ವೈಯಕ್ತಿಕ ಕಾನೂನುಗಳ ಬದಲು, ಎಲ್ಲರಿಗೂ ಅನ್ವಯವಾಗುವ, ಜಾತ್ಯತೀತ ಕಾನೂನು ತರುವುದು ಸಮಾನ ನಾಗರಿಕ ಸಂಹಿತೆಯ ಉದ್ದೇಶ.
ಪತಿಯಿಂದ ವಿಚ್ಛೇದನಗೊಂಡಿದ್ದ ಶಾ ಬಾನು ಅವರಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125ರ ಅನುಸಾರ ಜೀವನಾಂಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ 1985ರಲ್ಲಿ ತೀರ್ಪು ನೀಡಿತು. ಸಮಾನ ನಾಗರಿಕ ಸಂಹಿತೆ ರೂಪಿಸುವಂತೆಯೂ ನ್ಯಾಯಾಲಯ ಸಂಸತ್ತಿಗೆ ಹೇಳಿತ್ತು. ಸಮಾನ ನಾಗರಿಕ ಸಂಹಿತೆಯು ವಿರೋಧಾಭಾಸದ ಸಿದ್ಧಾಂತಗಳನ್ನು ಹೊಂದಿರುವ ಕಾನೂನುಗಳನ್ನು ನಿವಾರಿಸಿ ರಾಷ್ಟ್ರದಲ್ಲಿ ಭಾವೈಕ್ಯ ತರಲು ಸಹಾಯವಾಗುತ್ತದೆ ಎಂದು ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್ ಹೇಳಿದ್ದರು.

‘1954ರಲ್ಲಿ, ಸಮಾನ ನಾಗರಿಕ ಸಂಹಿತೆ ಬದಲು ಹಿಂದೂ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದನ್ನು ಸಮರ್ಥಿಸುವ ವೇಳೆ ಪಂಡಿತ್ ಜವಾಹರಲಾಲ್ ನೆಹರೂ ಅವರು, ‘ಸಮಾನ ಸಂಹಿತೆಗೆ ದೇಶದಲ್ಲಿ ಕಾಲ ಪಕ್ವವಾಗಿದೆ ಎಂದು ನನಗೆ ಈಗ ಅನಿಸುತ್ತಿಲ್ಲ’ ಎಂದಿದ್ದರು. ಅದಾದ 41 ವರ್ಷಗಳ ನಂತರವೂ ಸಂವಿಧಾನದ 44ನೇ ವಿಧಿಯನ್ನು ನೆನಪಿಸಿಕೊಳ್ಳಲು ಆಡಳಿತಾರೂಢರಿಗೆ ಮನಸ್ಸಿಲ್ಲ ಎಂದು ಕಾಣುತ್ತಿದೆ. ಎಲ್ಲ ಭಾರತೀಯರಿಗೆ ಅನ್ವಯವಾಗುವ ಸಮಾನ ನಾಗರಿಕ ಸಂಹಿತೆ ರೂಪಿಸುವತ್ತ ಪ್ರಯತ್ನಿಸಲು ಎಲ್ಲ ಸರ್ಕಾರಗಳೂ ವಿಫಲವಾಗಿವೆ. ಇದಕ್ಕೆ ಕಾರಣಗಳು ಸ್ಪಷ್ಟ. ಹಿಂದೂ ಕಾನೂನುಗಳನ್ನು ಒಂದೇ ಸಂಹಿತೆಯಡಿ ತರಲು ಮಾಡಿರುವ ದೊಡ್ಡ ಪ್ರಯತ್ನವೆಂದರೆ ಹಿಂದೂ ವಿವಾಹ ಕಾಯ್ದೆ – 1955, ಹಿಂದೂ ಉತ್ತರಾಧಿಕಾರ ಕಾಯ್ದೆ – 1956, ಹಿಂದೂ ಅಪ್ರಾಪ್ತ ಮತ್ತು ಪೋಷಕತ್ವ ಕಾಯ್ದೆ – 1956 ಹಾಗೂ ಹಿಂದೂ ದತ್ತು ಮತ್ತು ಜೀವನಾಂಶ ಕಾಯ್ದೆ – 1956 ಜಾರಿಗೆ ತಂದಿದ್ದು. ಇವು ಬೇರೆ ಬೇರೆ ವಿಚಾರಗಳು ಮತ್ತು ಶಾಸ್ತ್ರಗಳನ್ನು ಆಧರಿಸಿದ್ದ ಹಿಂದೂ ಕಾನೂನುಗಳ ಬದಲು ಒಂದು ಏಕರೂಪ ಸಂಹಿತೆಯ ರೂಪದಲ್ಲಿ ಜಾರಿಗೆ ಬಂದಿವೆ. ದೇಶದ ಶೇಕಡ 80ರಷ್ಟು ನಾಗರಿಕರನ್ನು ಏಕರೂಪದ ಕಾನೂನಿನ ಅಡಿ ತಂದಿರುವಾಗ, ದೇಶದ ಎಲ್ಲರಿಗೂ ಅನ್ವಯವಾಗುವಂತಹ ಸಮಾನ ನಾಗರಿಕ ಸಂಹಿತೆ ಜಾರಿಗೆ ತರದಿರುವುದಕ್ಕೆ ಸಮರ್ಥನೆ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ 1995ರಲ್ಲಿ ಸರಳಾ ಮುದ್ಗಲ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಹೇಳಿದೆ.

‘ಸಂವಿಧಾನದ 44ನೇ ವಿಧಿಯನ್ನು ಜಾರಿಗೆ ತಾರದಿರುವುದು ವಿಷಾದದ ಸಂಗತಿ. ಸಿದ್ಧಾಂತಗಳ ಆಧಾರದಲ್ಲಿ ರೂಪುಗೊಳ್ಳುವ ವಿರೋಧಾಭಾಸಗಳನ್ನು ಇಲ್ಲವಾಗಿಸಿ, ರಾಷ್ಟ್ರದ ಭಾವೈಕ್ಯ ಹೆಚ್ಚಿಸುವಲ್ಲಿ ಸಮಾನ ನಾಗರಿಕ ಸಂಹಿತೆ ಸಹಾಯ ಮಾಡುತ್ತದೆ’ ಎಂದು 2003ರ ಜಾನ್ ವಳ್ಳಮಟ್ಟಂ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿ.ಎನ್. ಖರೆ ಹೇಳಿದ್ದಾರೆ.

ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಹಲವಾರು ವೈಯಕ್ತಿಕ ಕಾನೂನುಗಳಿಂದಾಗಿ ದೇಶದಲ್ಲಿ ಗೊಂದಲ ನಿರ್ಮಾಣವಾಗಿದೆ. ಸಮಾನ ನಾಗರಿಕ ಸಂಹಿತೆ ಅನುಷ್ಠಾನಕ್ಕೆ ತರಲು ಸರ್ಕಾರಕ್ಕೆ ಮನಸ್ಸಿದೆಯೇ ಎಂಬುದನ್ನು ತಿಳಿಯುವ ಇಚ್ಛೆ ತನಗಿದೆ ಎಂದು ಸುಪ್ರೀಂ ಕೋರ್ಟ್‌ 2015ರ ಅಕ್ಟೋಬರ್‌ನಲ್ಲಿ ಹೇಳಿದೆ. ಆದರೆ, ಸಮಾನ ನಾಗರಿಕ ಸಂಹಿತೆಗಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿದ ಕೋರ್ಟ್‌, ಈ ವಿಚಾರದಲ್ಲಿ ಸಂಸತ್ತಿಗೆ ನಿರ್ದೇಶನ ನೀಡಲು ನಿರಾಕರಿಸಿತು.

ವಿಶ್ವವೇ ಒಂದು ಹಳ್ಳಿಯಾಗುತ್ತಿರುವ ಈ ಹೊತ್ತಿನಲ್ಲಿ ಕರ್ಮಠ  ಧಾರ್ಮಿಕ ಮತ್ತು ಸಾಮಾಜಿಕ ಬೇಲಿಗಳು ಜನರ, ಅದರಲ್ಲೂ ಪ್ರಮುಖವಾಗಿ ಮಹಿಳೆಯರ ವಿಮೋಚನೆಗೆ ಅಡ್ಡಿಯಾಗಿ ನಿಂತಿವೆ. ಬದಲಾಗುತ್ತಿರುವ ಕಾಲ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಜನರ ಆಕಾಂಕ್ಷೆಗಳನ್ನು ಗುರುತಿಸಿ, ಅಂಧ ಆಚರಣೆಗಳಿಂದ ಮಹಿಳೆಯರನ್ನು ಮುಕ್ತರನ್ನಾಗಿಸುವ ಪ್ರಗತಿಪರ ಕ್ರಮಗಳನ್ನು ಎಲ್ಲ ಧರ್ಮಗಳ ಜನ ಬೆಂಬಲಿಸಬೇಕು.

ಬೇರೆ ಬೇರೆ ರಂಗಗಳನ್ನು ಪ್ರತಿನಿಧಿಸುವ ಹಲವು ಜನ ಹಿರಿಯರು ಸಮಾನ ನಾಗರಿಕ ಸಂಹಿತೆ ಜಾರಿಯನ್ನು ವಿರೋಧಿಸುವ ತಮ್ಮ ವಾದಗಳನ್ನು ಮುಂದಿಟ್ಟಿದ್ದಾರೆ. ಅವುಗಳಲ್ಲಿ ಪ್ರಮುಖವಾದುದು ಇದು: ‘ಧರ್ಮವನ್ನು ಆಧರಿಸಿ ರೂಪುಗೊಂಡಿರುವ ವೈಯಕ್ತಿಕ ಕಾನೂನುಗಳನ್ನು ಒಂದೇ ಸಂಹಿತೆಯಡಿ ತರಲು ಬ್ರಿಟಿಷರೂ ಮುಂದಾಗಿರಲಿಲ್ಲ. ಅಂಥದ್ದೊಂದು ಸಂಹಿತೆಯನ್ನು ಜಾರಿಗೊಳಿಸುವ ಪ್ರಯತ್ನದಿಂದ ಜನರ, ಅದರಲ್ಲೂ ಪ್ರಮುಖವಾಗಿ ಅಲ್ಪಸಂಖ್ಯಾತರ ಧಾರ್ಮಿಕ ವಿಚಾರಗಳಲ್ಲಿ ಪ್ರಭುತ್ವ ಮಧ್ಯಪ್ರವೇಶಿಸಿದಂತೆ ಆಗುತ್ತದೆ.’ ಈ ವಾದ ಸರಿಯಲ್ಲ.

ಮಹಾತ್ಮ ಗಾಂಧಿ ಆಡಿದ ಒಂದು ಮಾತನ್ನು ಇಲ್ಲಿ ಸ್ಮರಿಸುವುದು ಸೂಕ್ತವಾಗುತ್ತದೆ. ‘ಧಾರ್ಮಿಕ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ಕೆಟ್ಟ ವಾತಾವರಣದಿಂದ ನಾವು ಹೊರಬರಬೇಕು.’ ಸಮಾನ ನಾಗರಿಕ ಸಂಹಿತೆ ತರುವುದೆಂದರೆ ಈ ಮಾತಿನ ಅನುಷ್ಠಾನ.
ಸಮಾನ ನಾಗರಿಕ ಸಂಹಿತೆಯ ಪರಿಕಲ್ಪನೆ ರೂಪುಗೊಂಡಿರುವುದು ನಿರ್ದಿಷ್ಟ ಧರ್ಮ ಅಥವಾ ಅದರ ಆಚರಣೆಗಳ ವಿರುದ್ಧವಾಗಿ ಅಲ್ಲ. ಸಂಹಿತೆಯ ಉದ್ದೇಶ ಧರ್ಮದ ಹೆಸರಿನಲ್ಲಿ ನಡೆಯುವ ತುಳಿತವನ್ನು ತಪ್ಪಿಸುವುದು. ನಾಗರಿಕ ಸಂಹಿತೆಯು ಸಹಜವಾಗಿಯೇ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವೀಕೃತವಾಗಿರುವ ನ್ಯಾಯಶಾಸ್ತ್ರದ ಆಧಾರದಲ್ಲಿ ರೂಪುಗೊಳ್ಳುತ್ತದೆ. ಬೇರೆ ಬೇರೆ ಧರ್ಮಗಳ ಜನರಲ್ಲಿ ಭದ್ರತೆಯ ಭಾವ ಮೂಡಿಸುವಲ್ಲಿ ನೆರವಾಗುತ್ತದೆ.

ಉದಾಹರಣೆಗೆ, ಭಾರತೀಯ ಮಹಿಳಾ ಮುಸ್ಲಿಂ ಆಂದೋಲನದ (ಬಿಎಂಎಂಎ) ಸಹ ಸಂಸ್ಥಾಪಕರಾದ ನೂರ್‌ಜಹಾನ್ ಸಫಿಯಾ ನಿಯಾಜ್ ಮತ್ತು ಝಾಕಿಯಾ ಸೋಮನ್ ಅವರು 2015ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಈ ಮಾತು ಹೇಳಿದ್ದರು: ‘ಭಾರತೀಯ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಮತ್ತು ಸಮಾನತೆ ದೊರಕಿಸುವ ವಿಚಾರದಲ್ಲಿ ನಮ್ಮ ಕಳಕಳಿ ದಾಖಲಿಸಲು ಈ ಪತ್ರ ಬರೆಯುತ್ತಿದ್ದೇವೆ. ನಮ್ಮ ದೇಶದ ರಾಜಕೀಯದ ಕಾರಣದಿಂದಾಗಿ, 1985ರ ಶಾ ಬಾನು ಪ್ರಕರಣದಿಂದ ಇದುವರೆಗೆ ತಮ್ಮ ಜೀವನಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಭಾರತೀಯ ಮುಸ್ಲಿಂ ಮಹಿಳೆಯರ ಮಾತನ್ನು ಯಾರೂ ಆಲಿಸುತ್ತಿಲ್ಲ. ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ಸಂಪ್ರದಾಯವಾದಿಗಳ, ಪುರುಷ ಪ್ರಧಾನ ವ್ಯವಸ್ಥೆ ಪರ ಇರುವವರ ಮಾತುಗಳೇ ಹೆಚ್ಚು ಪ್ರಾಧಾನ್ಯ ಪಡೆದುಕೊಂಡಿವೆ.

ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಯಾವುದೇ ಸುಧಾರಣೆಗೆ ಮುಂದಾದರೂ ಅವರು ಅದನ್ನು ಪಕ್ಕಕ್ಕೆ ತಳ್ಳಿಬಿಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಮುಸ್ಲಿಂ ಮಹಿಳೆಯರು ಪವಿತ್ರ ಕುರಾನ್‌ನಲ್ಲಿ ಹೇಳಿರುವ ಹಕ್ಕುಗಳನ್ನು, ಭಾರತೀಯ ನಾಗರಿಕರಿಗೆ ಸಿಗಬೇಕಿರುವ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಮದುವೆ ಮತ್ತು ಕುಟುಂಬದ ವಿವಾದಗಳಿಗೆ ಸಂಬಂಧಿಸಿದಂತೆ ಮೊರಾಕ್ಕೊ, ಟ್ಯುನಿಷಿಯಾ, ಟರ್ಕಿ, ಈಜಿಪ್ಟ್, ಜೋರ್ಡಾನ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ ಬಹುಪಾಲು ಮುಸ್ಲಿಂ ರಾಷ್ಟ್ರಗಳಲ್ಲಿ ವೈಯಕ್ತಿಕ ಕಾನೂನುಗಳಿಗೆ ಸಂಹಿತೆಯ ರೂಪ ನೀಡಲಾಗಿದೆ.  ಆದರೆ, ಭಾರತದ ಸ್ವಘೋಷಿತ ಸಂಪ್ರದಾಯವಾದಿ ನಾಯಕರಿಂದಾಗಿ, ಇಲ್ಲಿನ ಮುಸ್ಲಿಮರಿಗೆ ಈ ಅವಕಾಶ ಸಿಕ್ಕಿಲ್ಲ. ಹಾಗಾಗಿ ನಮ್ಮ ದೇಶದಲ್ಲಿ ಮೂರು ಬಾರಿ ತಲಾಖ್‌ ಎಂದು ವಿಚ್ಛೇದನ ನೀಡುವುದು, ಬಹುಪತ್ನಿತ್ವ ಆಚರಿಸುವುದು ಜಾರಿಯಲ್ಲಿದೆ.’

10 ರಾಜ್ಯಗಳ 4,710 ಮುಸ್ಲಿಂ ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿ ಸಿದ್ಧಪಡಿಸಿರುವ ಸಂಶೋಧನಾ ವರದಿಯೊಂದನ್ನು ಪ್ರಕಟಿಸಿರುವುದಾಗಿಯೂ ಅವರು ಪತ್ರದಲ್ಲಿ ಹೇಳಿದ್ದರು. ಆ ಅಧ್ಯಯನದ ಪ್ರಕಾರ, ಏಕಪಕ್ಷೀಯವಾಗಿ/ ಮೌಖಿಕವಾಗಿ ನೀಡುವ ವಿವಾಹ ವಿಚ್ಛೇದನವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಶೇಕಡ 92.1ರಷ್ಟು ಮಹಿಳೆಯರು ಹೇಳಿದ್ದರು. ಶೇಕಡ 91.7ರಷ್ಟು ಮಹಿಳೆಯರು ಬಹುಪತ್ನಿತ್ವ ವಿರೋಧಿಸಿದ್ದರು. ಮುಸ್ಲಿಂ ಕೌಟುಂಬಿಕ ಕಾನೂನುಗಳನ್ನು ಸಂಹಿತೆಯ ರೂಪಕ್ಕೆ ತರುವುದರಿಂದ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಪಡೆಯಲು ಸಹಾಯವಾಗುತ್ತದೆ ಎಂದು ಶೇಕಡ 83.3ರಷ್ಟು ಮಹಿಳೆಯರು ಅನಿಸಿಕೆ ವ್ಯಕ್ತಪಡಿಸಿದ್ದರು.

ಮದುವೆಯ ವಯಸ್ಸು, ಮೆಹರ್್‌, ತಲಾಖ್‌, ಬಹುಪತ್ನಿತ್ವ, ಜೀವನಾಂಶ, ಮಕ್ಕಳ ಪಾಲನೆಯ ಹಕ್ಕುಗಳ ಕುರಿತು ಕುರಾನ್‌ ಏನು ಹೇಳುತ್ತದೆ ಎಂಬುದನ್ನು ಆಧರಿಸಿ ಕರಡು ಮುಸ್ಲಿಂ ವೈಯಕ್ತಿಕ ಕಾನೂನನ್ನು ಬಿಎಂಎಂಎ ಸಿದ್ಧಪಡಿಸಿರುವುದಾಗಿಯೂ ಪತ್ರದಲ್ಲಿ ಹೇಳಲಾಗಿತ್ತು.
ಮುಸ್ಲಿಂ ಯುವತಿಗೆ 18 ವರ್ಷ, ಯುವಕನಿಗೆ 21 ವರ್ಷವಾಗದೆ ಮದುವೆ ಮಾಡುವಂತಿಲ್ಲ. ಮದುವೆಯನ್ನು ಇಬ್ಬರ ಸಹಮತಿ ಪಡೆದು ಮಾಡಬೇಕು. ಮೆಹರ್ (ಮದುವೆ ಸಂದರ್ಭದಲ್ಲಿ ವರನ ಕಡೆಯವರು ವಧುವಿಗೆ ಕೊಡಬೇಕಿರುವ ಹಣ ಅಥವಾ ಚಿನ್ನ) ಮೊತ್ತ ವರನ ಒಂದು ವರ್ಷದ ಆದಾಯಕ್ಕೆ ಸಮವಾಗಿರಬೇಕು. ಮೌಖಿಕವಾಗಿ, ಏಕಪಕ್ಷೀಯವಾಗಿ ತಲಾಖ್‌ ನೀಡುವು ದನ್ನು ಅಕ್ರಮವೆಂದು ಪರಿಗಣಿಸಬೇಕು. ಬಹುಪತ್ನಿತ್ವಕ್ಕೆ ಮಾನ್ಯತೆ ನೀಡಬಾರದು. ತಂದೆಯ ಆಸ್ತಿಯಲ್ಲಿ ಮಗಳಿಗೂ ಸಮಾನ ಪಾಲು ಸಿಗಬೇಕು. ಮದುವೆಯ ನೋಂದಣಿ ಕಡ್ಡಾಯವಾಗಬೇಕು. ತಲಾಖ್‌ ಸಂದರ್ಭದಲ್ಲಿ ಆಗುವ ಕಾನೂನು ಉಲ್ಲಂಘನೆಗಳಿಗೆ ಖಾಜಿಯನ್ನು ಹೊಣೆ ಮಾಡಬೇಕು ಎಂಬುದು ಕರಡಿನಲ್ಲಿದ್ದ ಪ್ರಮುಖ ಅಂಶಗಳಾಗಿದ್ದವು.

ಶಾ ಬಾನುವಿನಿಂದ ಆರಂಭವಾಗಿ, ಶಾಯರಾ ಬಾನುವರೆಗೆ (ಮೂರು ಬಾರಿ ತಲಾಖ್‌ ಹೇಳುವ ಪದ್ಧತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಮುಸ್ಲಿಂ ಮಹಿಳೆ) ಮಹಿಳಾ ಸ್ನೇಹಿ ಸುಧಾರಣೆಗಳು ವೈಯಕ್ತಿಕ ಕಾನೂನುಗಳಲ್ಲಿ ಬರಬೇಕು ಎಂಬುದು ಚರ್ಚೆಯ ಕೇಂದ್ರ ಬಿಂದುವಾಗಿದೆ. ಕಾಲ ಬದಲಾಗುತ್ತಿರುವಂತೆಯೇ, ಎಲ್ಲ ಧರ್ಮೀಯರಿಗೂ ಅನ್ವಯವಾಗುವ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಅಗತ್ಯ ಎದುರಾಗಿದೆ. ಇದು ನಾಗರಿಕರ ಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಅವಶ್ಯಕ. ಈ ವಿಚಾರದಲ್ಲಿ ಯಾರಿಗೂ ಸಂಶಯ ಬೇಡ.

ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದರಿಂದ ಜಾತ್ಯತೀತ ಮೌಲ್ಯಗಳ ತಳಹದಿ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ ಎಂಬುದನ್ನು ಒತ್ತಿಹೇಳುತ್ತಾ, ಮಹಾತ್ಮ ಗಾಂಧಿ ಆಡಿದ ಮಾತಿನ ಮೂಲಕ ಲೇಖನ ಮುಗಿಸುವೆ. ‘ನನ್ನ ಕನಸಿನ ಭಾರತ ಒಂದು ಧರ್ಮವನ್ನು ಮಾತ್ರ ಹೊಂದಿರಬೇಕು ಎಂದು ನಾನು ಬಯಸುವುದಿಲ್ಲ. ಅದು ಪೂರ್ತಿ ಹಿಂದೂ, ಪೂರ್ತಿ ಮುಸ್ಲಿಂ ಅಥವಾ ಪೂರ್ತಿ ಕ್ರೈಸ್ತ ರಾಷ್ಟ್ರ ಆಗಬಾರದು. ದೇಶ ಸಂಪೂರ್ಣವಾಗಿ ಸಹಿಷ್ಣುವಾಗಬೇಕು. ದೇಶದ ಧರ್ಮಗಳು ಜೊತೆಜೊತೆಯಾಗಿ ಕೆಲಸ ಮಾಡಬೇಕು’ ಎಂದಿದ್ದರು ಮಹಾತ್ಮ.

ಸಂವಿಧಾನದ ನಿರ್ದೇಶನ ತತ್ವಗಳಲ್ಲಿ ಸಮಾನ ನಾಗರಿಕ ಸಂಹಿತೆ ಬಗ್ಗೆ ಉಲ್ಲೇಖ ಬಂದು 67 ವರ್ಷಗಳು ಸಂದಿವೆ. ಈಗ ಸಂಹಿತೆ ಕುರಿತು ಎಲ್ಲ ಆಯಾಮಗಳ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಕಾನೂನು ಆಯೋಗಕ್ಕೆ ಸರ್ಕಾರ ಸೂಚಿಸಿದೆ. ಸಂಹಿತೆಯ ಬಗ್ಗೆ ದೇಶದಲ್ಲಿ ವಿಚಾರಪೂರ್ಣ ಚರ್ಚೆ ಆಗಬೇಕು, ದೇಶ ಒಮ್ಮತಕ್ಕೆ ಬರಬೇಕು. ಆ ಕಾಲ ಈಗ ಬಂದಿದೆ.

ಲೇಖಕ ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT