ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನಿಗೆ ಹಣ ಹೊಂದಿಸಲು ಸುಲಿಗೆ ಸಂಚು: ಬಂಧನ

Last Updated 6 ಮೇ 2016, 19:43 IST
ಅಕ್ಷರ ಗಾತ್ರ

ಬೆಂಗಳೂರು:  ಜಾಮೀನು ಪಡೆಯಲು ಹಣ ಹೊಂದಿಸುವ ಉದ್ದೇಶದಿಂದ ಲಾಲ್‌ಬಾಗ್‌ ಪಶ್ಚಿಮ ದ್ವಾರ ರಸ್ತೆಯಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಸಂಚು ರೂಪಿಸಿದ್ದ ದುಷ್ಕರ್ಮಿಗಳ ತಂಡ ಬಸವನಗುಡಿ ಪೊಲೀಸರ ಬಲೆಗೆ ಬಿದ್ದಿದೆ.

ಕುಮಾರಸ್ವಾಮಿ ಲೇಔಟ್‌ನ ಭೈರರಾಜು, ಕೆಂಪೆಗೌಡ ಅಲಿಯಾಸ್ ಕುಂಟ ಕಿರಣ, ಗಂಗಾಧರ, ರಿಚರ್ಡ್ ಅಲಿಯಾಸ್ ರಿಚ್ಚಿ, ಗಣಪತಿಪುರದ ಉದಯ್ ಹಾಗೂ ಜೆ.ಪಿ ನಗರದ ಮಹದೇವಸ್ವಾಮಿ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮಚ್ಚು, ಚಾಕು ಹಾಗೂ ಖಾರದ ಪುಡಿ ಪೊಟ್ಟಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಆರೋಪಿಗಳು ಲಾಲ್‌ಬಾಗ್‌ ಪಶ್ಚಿಮ ದ್ವಾರದ ರಸ್ತೆಯಲ್ಲಿ ಮಾರಕಾಸ್ತ್ರಗಳೊಂದಿಗೆ ನಿಂತಿದ್ದರು. ಈ ಬಗ್ಗೆ ಆಟೊ ಚಾಲಕರೊಬ್ಬರು ಠಾಣೆಗೆ ಕರೆ ಮಾಡಿ ಹೇಳಿದರು.

ಕೂಡಲೇ 12 ಸಿಬ್ಬಂದಿ ಮಫ್ತಿಯಲ್ಲಿ ಸ್ಥಳಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದೆವು ಎಂದು ಬಸವನಗುಡಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ವಿಚಾರಣೆ ನಡೆಸಿದಾಗ, ‘ಚುಂಚಘಟ್ಟ ರಸ್ತೆಯಲ್ಲಿ ಇತ್ತೀಚೆಗೆ ಮಾದೇಶ ಎಂಬಾತನನ್ನು ಕೊಲೆ ಮಾಡಿದ್ದೆವು. ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಳ್ಳಲು ಹಾಗೂ ಇತರೆ ಖರ್ಚುಗಳಿಗೆ ನಮ್ಮ ಬಳಿ ಹಣ ಇರಲಿಲ್ಲ. ಹೀಗಾಗಿ ಸಾರ್ವಜನಿಕರ ಕಣ್ಣಿಗೆ ಖಾರದ ಪುಡಿ ಎರಚಿ, ನಗ–ನಾಣ್ಯ ದೋಚಲು ಸಂಚು ರೂಪಿಸಿಕೊಂಡಿದ್ದೆವು’ ಎಂದು ಹೇಳಿಕೆ ನೀಡಿದ್ದಾರೆ ಎಂದು  ಪೊಲೀಸರು ಹೇಳಿದರು.

ರೌಡಿ ಕೊಲೆ; ಹಂತಕರ ಸೆರೆ:  ವಿಜಯನಗರ 5ನೇ ಮುಖ್ಯರಸ್ತೆಯಲ್ಲಿ ಏಪ್ರಿಲ್ 27ರಂದು ನಡೆದಿದ್ದ ರೌಡಿ ಹರ್ಷನ (28) ಕೊಲೆ ಪ್ರಕರಣ ಸಂಬಂಧ ಪೊಲೀಸರು ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ಚೋಳರಪಾಳ್ಯ ನಿವಾಸಿಗಳಾದ ರವಿ ಅಲಿಯಾಸ್ ಗುಂಡ, ಸಂಜಯ್, ಅಭಿಷೇಕ್ ಅಲಿಯಾಸ್ ಪತಿ, ಎಸ್‌.ಸಂಜಯ್, ಸಾಗರ್, ಸಂತೋಷ್, ಶರವಣ, ನವೀನ್, ಸುಧಾಕರ ಹಾಗೂ ಪ್ರಸಾದ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆಯಾದ ಹರ್ಷ ಕೂಡ ಚೋಳರಪಾಳ್ಯದವನು. ಆತ ಮಾಗಡಿ ರಸ್ತೆ ಪೊಲೀಸ್ ಠಾಣೆಯ ರೌಡಿ ಶೀಟರ್. ಏರಿಯಾದಲ್ಲಿ ಹಿಡಿತ ಸಾಧಿಸುವ ಉದ್ದೇಶದಿಂದ ಸಹಚರರ ಮೂಲಕ ಸ್ಥಳೀಯ ಯುವಕರ ಜತೆ ಆಗಾಗ್ಗೆ ಗಲಾಟೆ ಮಾಡಿಸುತ್ತಿದ್ದ.

ಈ ಮೂಲಕ ಎಲ್ಲರನ್ನೂ ಬೆದರಿಸಿ ಇಟ್ಟುಕೊಂಡಿದ್ದ. ಅದೇ ರೀತಿ ಇತ್ತೀಚೆಗೆ ರವಿ ಹಾಗೂ ಆತನ ಸಚರರ ಮೇಲೂ ಹಲ್ಲೆ ಮಾಡಿಸಿದ್ದ. ಅದಕ್ಕೆ ಪ್ರತೀಕಾರವಾಗಿ ಆರೋಪಿಗಳು ಹರ್ಷನನ್ನು ಕೊಲ್ಲಲು ನಿರ್ಧರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಏಪ್ರಿಲ್ 27ರ ರಾತ್ರಿ 11.45ರ ಸುಮಾರಿಗೆ ಹರ್ಷ ವಿಜಯನಗರ 5ನೇ ಅಡ್ಡರಸ್ತೆ ಅಂಗಡಿಯೊಂದರ ಬಳಿ ಸಿಗರೇಟು ಸೇದುತ್ತಾ ನಿಂತಿದ್ದ. ಈ ವೇಳೆ ನಾಲ್ಕು ಬೈಕ್‌ಗಳಲ್ಲಿ ಅಲ್ಲಿಗೆ ತೆರಳಿದ್ದ ಈ ಹಂತಕರು, ಮಚ್ಚು–ಲಾಂಗುಗಳಿಂದ ಹಲ್ಲೆ ನಡೆಸಿ ಕೊಂದಿದ್ದರು.

ಸ್ಥಳೀಯರು ಹಾಗೂ ಹರ್ಷನ ಕುಟುಂಬ ಸದಸ್ಯರು ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT