ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಹೀರಾತು ಮಾಫಿಯಾಗೆ ಮೂಗುದಾರ

ಪಾಲಿಕೆ ವ್ಯಾಪ್ತಿಯಲ್ಲಿ ಶೀಘ್ರ ಹೊಸ ನೀತಿ: ಮುಖ್ಯಮಂತ್ರಿ ಘೋಷಣೆ
Last Updated 26 ಮಾರ್ಚ್ 2015, 19:36 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಜಾಹೀರಾತು ಮಾಫಿಯಾಗೆ ಕಡಿವಾಣ ಹಾಕಲು ಹೊಸ ಜಾಹೀರಾತು ನೀತಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನ ಪರಿಷತ್‌ನಲ್ಲಿ ಪ್ರಕಟಿಸಿದರು.

ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಜಾಹೀರಾತು ಜಾಲವಿರುವುದು ಸತ್ಯ. ಅನಧಿಕೃತ ಜಾಹೀರಾತು ಫಲಕಗಳು ನಾವು ಅಂದಾಜಿಸಿರುವುದಕ್ಕಿಂತ ಹೆಚ್ಚಿರುವ ಸಾಧ್ಯತೆ ಇದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ’ ಎಂದರು.

‘ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೂ ಈ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ಕೆಲವೊಮ್ಮೆ ರಾಜಕೀಯ ಒತ್ತಡವೂ  ಇರುತ್ತದೆ. ನೋಟಿಸ್‌ ನೀಡಿದರೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ‘ನೂತನ ನೀತಿ ರೂಪಿಸಿ ಎಲ್ಲಿ ಜಾಹೀರಾತು ಫಲಕ ಅಳವಡಿಸಬೇಕು, ಎಲ್ಲಿ ಅಳವಡಿಸಬಾರದು ಎಂಬುದನ್ನು ನಿಗದಿಪಡಿಸಲಾಗುವುದು.  ನಗರದ ಸೌಂದರ್ಯಕ್ಕೆ ಹಾಗೂ ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ಮಾಹಿತಿ ತಪ್ಪು : ಅನಧಿಕೃತ ಜಾಹೀರಾತು ಫಲಕಗಳ ಅಂಕಿ ಅಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಾರಾಯಣಸ್ವಾಮಿ, ‘ನಗರದಲ್ಲಿ 1156 ಅನಧಿಕೃತ ಜಾಹೀರಾತು ಫಲಕಗಳಿವೆ ಎಂದು ಹೇಳುತ್ತಿದ್ದೀರಿ. ಆದರೆ ವಾಸ್ತವವಾಗಿ 21 ಸಾವಿರ ಅನಧಿಕೃತ ಜಾಹೀರಾತು ಫಲಕಗಳಿವೆ.  ತೆರಿಗೆ ಕಟ್ಟದೆ ವಂಚನೆ ಮಾಡಲಾಗುತ್ತಿದೆ. ನಗರದಲ್ಲಿ ಜಾಹೀರಾತು ಫಲಕಗಳಿಂದ ವಾರ್ಷಿಕ    ₹ 2 ಸಾವಿರ ಕೋಟಿ ತೆರಿಗೆ ವಸೂಲಿ ಮಾಡಬಹುದಾಗಿದೆ’ ಎಂದು ವಿಮಾನ ನಿಲ್ದಾಣದ ಉದಾಹರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT