ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ನಲ್ಲಿ ದೆಹಲಿ ಮುಖ್ಯಮಂತ್ರಿ

ಕೆಮ್ಮು–ಸಕ್ಕರೆ ಕಾಯಿಲೆಯಿಂದ ಬಳಲಿಕೆ; 10 ದಿನ ಚಿಕಿತ್ಸೆ
Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ತೀವ್ರ ಕೆಮ್ಮು ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿ­ವಾಲ್‌ ಹತ್ತು ದಿನಗಳ ನ್ಯಾಚುರೋಪಥಿ ಚಿಕಿತ್ಸೆ ಪಡೆಯಲು ಗುರುವಾರ ನಗರದ ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾದರು.
ವಿಮಾನ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಎಎಪಿ ಕಾರ್ಯಕರ್ತರು  ಸ್ವಾಗತಿಸಿದರು. ಅಲ್ಲಿಂದ ಕೇಜ್ರಿವಾಲ್‌ ನೇರವಾಗಿ ತುಮಕೂರು ರಸ್ತೆಯ ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಿದರು. ಅವರ ತಂದೆ ಗೋವಿಂದರಾಮ್‌, ತಾಯಿ ಗೀತಾ ದೇವಿ ಅವರೂ ಜತೆಗಿದ್ದರು.

ಔಷೋಧಪಚಾರ: ‘ನಿರ್ವಿಷೀಕರಣ (ಡಿಟಾಕ್ಸಿಫಿಕೇಷನ್) ಹಾಗೂ ಬಸಿ ಚಿಕಿತ್ಸೆಯನ್ನು ಕೇಜ್ರಿವಾಲ್‌ ಅವರಿಗೆ ನೀಡಲಾಗುತ್ತದೆ’ ಎಂದು ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಬಬಿನಾ ನಂದಕುಮಾರ್‌ ಮಾಹಿತಿ ನೀಡಿದರು. ‘ಹತ್ತು ದಿನಗಳ ಔಷಧೋಪಚಾರ­ದಲ್ಲಿ ಕಾಯಿಲೆ ನಿಯಂತ್ರಣಕ್ಕೆ ಬರಲಿದೆ. ಆದರೆ, ದೆಹಲಿಗೆ ವಾಪಸಾದ ಬಳಿಕವೂ ಕೆಲವೊಂದು ಯೋಗ ಚಿಕಿತ್ಸೆಗಳನ್ನು ಅವರು ಮುಂದುವರಿಸುವ ಅಗತ್ಯವಿದೆ’ ಎಂದು ಹೇಳಿದರು.

ಮಾಲಿನ್ಯದ ಪ್ರಭಾವ: ಕೇಜ್ರಿವಾಲ್‌ ಅವರ ಸಕ್ಕರೆ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ. ಸಕ್ಕರೆ ಕಾಯಿಲೆ ನಿಯಂತ್ರಣಕ್ಕಾಗಿ ಅವರಿಗೆ ನೀಡಲಾಗುತ್ತಿ ರುವ ಇನ್ಸುಲಿನ್‌ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಲಾಗಿತ್ತು. ಇತರ ಔಷಧಗಳ ಪ್ರಮಾಣವನ್ನು ಎರಡು ಪಟ್ಟು ಹೆಚ್ಚಿಸಲಾಗಿತ್ತು.  ದೆಹಲಿ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್‌ ಅವರ ಕೆಮ್ಮು ಜಾಸ್ತಿಯಾಗಿತ್ತು. 110ಕ್ಕೂ ಹೆಚ್ಚು ಜನ­ಸಭಾಗಳಲ್ಲಿ ಅವರು ಭಾಷಣ ಮಾಡಿ­ದ್ದರು. ದೂಳು ಮತ್ತು ಮಾಲಿನ್ಯದಿಂದ ಕೆಮ್ಮು ನಿಯಂತ್ರಣಕ್ಕೆ ಬಂದಿರಲಿಲ್ಲ ಎಂದು ಎಎಪಿ ಮೂಲಗಳು ತಿಳಿಸಿವೆ.

ಅಣ್ಣಾ ಹಜಾರೆ ಅವರು 2012ರಲ್ಲಿ ಅಧಿಕ ರಕ್ತದೊತ್ತಡದಿಂದ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ಕೇಜ್ರಿ­ವಾಲ್‌ ಸಹ 10 ದಿನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ತಂಗಿದ್ದರು. ಆಗ ಸಕ್ಕರೆ ಕಾಯಿಲೆಗೆ ಚಿಕಿತ್ಸೆಯನ್ನೂ ಪಡೆದಿದ್ದರು. ದೆಹಲಿ ಪೊಲೀಸ್‌ ಇಲಾಖೆಯ ‘ಅಟ್‌ ಹೋಮ್‌’ ಕಾರ್ಯಕ್ರಮದಲ್ಲಿ ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನ್ಯಾಚುರೋಪಥಿ ಚಿಕಿತ್ಸೆ ಪಡೆಯುವಂತೆ ಪ್ರಧಾನಿ ಸಲಹೆ ನೀಡಿದ್ದರು.

ಪ್ರತಿಭಟನೆ: ಯೋಗೇಂದ್ರ ಯಾದವ್‌, ಪ್ರಶಾಂತ್‌ ಭೂಷಣ್‌ ಅವರನ್ನು ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ)ಯಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಆಪ್‌ ಕಾರ್ಯಕರ್ತ ಬಾಲಾಜಿ ಎಂಬುವವರು ಗುರುವಾರ  ಚಿಕಿತ್ಸಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರಿ ವಾಹನ ಬೇಡ ಎಂದರು: ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದ್ದ ವಾಹನ ಬಳಸಲು ನಿರಾಕರಿಸಿದ ಕೇಜ್ರಿವಾಲ್‌ ಅವರು, ಎಎಪಿ ರಾಜ್ಯ ಘಟಕದ ಸಂಚಾಲಕ ಪೃಥ್ವಿ ರೆಡ್ಡಿ ಅವರ ಕಾರಿನಲ್ಲಿ ಚಿಕಿತ್ಸಾ ಕೇಂದ್ರದ ಕಡೆಗೆ ಪಯಣ ಬೆಳೆಸಿದರು.

ಚಿಕಿತ್ಸೆ ಆರಂಭ
ಮೊದಲ ದಿನ ಯೋಗ ಹಾಗೂ ಮಸಾಜ್‌ ಉಪಚಾ­ರ­ವನ್ನು ಗುರು ವಾರ ಆರಂಭಿಸಿದ ವೈದ್ಯರು, ಶುಕ್ರ ವಾರ ಬೆಳಿಗ್ಗೆ 5.45­ರಿಂದ ರಾತ್ರಿ 8.30ರವರೆಗೆ ವಿವಿಧ ಹಂತಗಳಲ್ಲಿ ಚಿಕಿತ್ಸೆ ನೀಡಲಿದ್ದಾರೆ. ಗುರುವಾರ ಚಪಾತಿ ಹಾಗೂ ಹಣ್ಣಿನ ರಸ ಕೊಡ ಲಾಯಿತು. ಪ್ರತಿ 2  ಗಂಟೆಗೊಮ್ಮೆ ಅವರಿಗೆ ಗಿಡಮೂಲಿಕೆ ಗಳ ರಸವನ್ನು ಕುಡಿಯಲು ಕೊಡಲಾ ಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT