ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿಗೆ ಒಪ್ಪಿಗೆ

ಮಸೂದೆ ಲೋಕಸಭೆ ಅನುಮೋದನೆ l ರಾಜ್ಯಸಭೆ ಅಂಗೀಕಾರ ಅಗತ್ಯ
Last Updated 6 ಮೇ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಯತ್ನಕ್ಕೆ ಮೊದಲ ಯಶಸ್ಸು ದೊರೆತಿದೆ.

ಇದಕ್ಕಾಗಿ, ದೂರಗಾಮಿ ಪರಿಣಾಮಗಳುಳ್ಳ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆ ಬುಧವಾರ ಅನುಮೋದನೆ ನೀಡಿದೆ. ಇದು ಕೇಂದ್ರ ಮತ್ತು ರಾಜ್ಯಗಳ ಬಹುತೆರಿಗೆ ವ್ಯವಸ್ಥೆಯನ್ನು ರದ್ದುಪಡಿಸಲು ನೆರವಾಗಲಿದೆ.

336 ಸಂಸದರು ಮಸೂದೆ ಪರವಾಗಿ ಮತ ಹಾಕಿದರು. 11 ಸದಸ್ಯರು ವಿರುದ್ಧ ಮತ ಹಾಕಿದರೆ, 10 ಸಂಸದರು ತಟಸ್ಥವಾಗಿದ್ದರು. ಕಾಂಗ್ರೆಸ್‌ ಪಕ್ಷ ಸಭಾತ್ಯಾಗ ಮಾಡಿತು. ಮೂರನೇ ಎರಡು ಬಹುಮತದಿಂದ ಮಸೂದೆ ಅಂಗೀಕಾರವಾಗಿದೆ ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಘೋಷಿಸಿದರು.  

ಇದಕ್ಕೂ ಮೊದಲು ಮಾತನಾಡಿದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ‘ಸರ್ಕಾರವು ಸದನವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲವು ತಿದ್ದುಪಡಿಗಳಿಗೆ ಉತ್ಸಾಹ ತೋರುತ್ತದೆ. ಅವುಗಳನ್ನು ಸಂಸದೀಯ ಸಮಿತಿಗೆ ಒಪ್ಪಿಸಲು ನಿರಾಕರಿಸುತ್ತಿದೆ’ ಎಂಬ ಪ್ರತಿಪಕ್ಷಗಳ ಆಕ್ಷೇಪವನ್ನು ತಳ್ಳಿಹಾಕಿದರು.

ಹಿಂದೆ ಮೂಲ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿತ್ತು. ಆಗ ಸಮಿತಿಯು ಸಲ್ಲಿಸಿದ ಶಿಫಾರಸುಗಳನ್ನು ಹೊಸ ಮಸೂದೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಜೇಟ್ಲಿ ಹೇಳಿದರು.

ಮತ್ತೆ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಿದರೆ ಮುಂದಿನ ಏಪ್ರಿಲ್‌ 1 ರಂದು ಅನುಷ್ಠಾನಗೊಳಿಸುವ ಗುರಿ ಸಾಧನೆ ಸಾಧ್ಯವಿಲ್ಲ ಎಂದು ನೆನಪಿಸಿದರು. ವ್ಯಾಪಕ ಸಮಾಲೋಚನೆ ಮೂಲಕ ಮಸೂದೆ ಬಗ್ಗೆ ವಿಸ್ತ್ರತ ಒಮ್ಮತಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಇದು ಕಾನೂನಾಗಿ ಪರಿವರ್ತನೆಯಾಗಬೇಕಿದ್ದರೆ ಎರಡೂ ಸದನಗಳಲ್ಲಿ ಮೂರನೇ ಎರಡು ಬಹುಮತದಲ್ಲಿ ಅಂಗೀಕಾರವಾಗಬೇಕು. ಜೊತೆಗೆ  ಅರ್ಧದಷ್ಟು ರಾಜ್ಯಗಳು ಅಂಗೀಕರಿಸಬೇಕು.

ತೊಡಕು: ಮುಖ್ಯ ವಿರೋಧ ಪಕ್ಷ ಕಾಂಗ್ರೆಸ್‌ ಜಿಎಸ್‌ಟಿಗೆ ಬೆಂಬಲ ವ್ಯಕ್ತಪಡಿಸಿದೆ. ಆದರೆ ಮಸೂದೆಗೆ ಎನ್‌ಡಿಎ ಸರ್ಕಾರ ಮಾಡಿರುವ ತಿದ್ದುಪಡಿಗಳನ್ನು ರಾಜ್ಯಸಭೆಯ ಆಯ್ಕೆ ಸಮಿತಿಯ ಪರಿಶೀಲನೆಗೆ ಒಳಪಡಿಸಲು ಒತ್ತಾಯಿಸುತ್ತಿದೆ.

ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದೇ ಇರುವುದರಿಂದ ಮಸೂದೆ ಆಯ್ಕೆ ಸಮಿತಿಯ ಪರಿಶೀಲನೆಗೆ ಒಳಪಡುವುದು ಖಚಿತ ಎಂದೇ ಹೇಳಲಾಗುತ್ತಿದೆ.

ಮುಜುಗರ ತಂದ ಪ್ರಸಂಗ: ಆಡಳಿತಾರೂಢ ಬಿಜೆಪಿಯ 12 ಸದಸ್ಯರು ಜಿಎಸ್‌ಟಿ ಮಸೂದೆಯ ಪರವಾಗಿ ಮತ ಚಲಾಯಿಸುವ ಬದಲು ವಿರುದ್ಧ ಮತ ಹಾಕುವುದರೊಂದಿಗೆ ಸರ್ಕಾರ ಮುಜುಗರಕ್ಕೆ ಒಳಗಾದ ಪ್ರಸಂಗವೂ ನಡೆಯಿತು.

ಮತ ವಿಭಜನೆಗಾಗಿ ಸ್ಪೀಕರ್‌ ಅವರು ಮಸೂದೆಯ 2ನೇ ಕಲಂ ಅನ್ನು ಮತಕ್ಕೆ ಹಾಕಿದಾಗ ಬಿಜೆಪಿಯ 12 ಸಂಸದರು ಹಸಿರು ಗುಂಡಿ (ಪರ) ಒತ್ತುವ ಬದಲು ಕೆಂಪು ಗುಂಡಿ (ವಿರೋಧ) ಒತ್ತಿದರು.

ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಈ ಬೆಳವಣಿಗೆ ಇರುಸುಮುರುಸು ಉಂಟು ಮಾಡಿತು. ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ರಾಜೀವ್‌ ಪ್ರತಾಪ್‌ ರೂಡಿ ಅವರೊಂದಿಗೆ ಜೇಟ್ಲಿ ಮಾತನಾಡಿದರು.

ತಪ್ಪಾಗಿ ಮತ ಚಲಾಯಿಸಿದ ಸದಸ್ಯರಿಗೆ ಯಾವ ರೀತಿ ಮತ ಚಲಾಯಿಸಬೇಕು ಎಂಬುದನ್ನು ರೂಡಿ ಮನವರಿಕೆ ಮಾಡಿಕೊಟ್ಟರು.  ಈ ಮಧ್ಯೆ, ‘ವಿದ್ಯುನ್ಮಾನ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಿಲ್ಲ. ಹಾಗಾಗಿ ಕಲಂ ಅನ್ನು ಮತ್ತೆ ಮತಕ್ಕೆ ಹಾಕಿ’ ಎಂದು ಜೇಟ್ಲಿ ವಿನಂತಿಸಿದರು. ವಿನಂತಿಗೆ ಸ್ಪೀಕರ್‌ ಮನ್ನಣೆ ನೀಡಿದರು.

ರಾಜ್ಯಗಳಿಗೆ ಪರಿಹಾರ
ಕೇಂದ್ರ ಮಾರಾಟ ತೆರಿಗೆಯನ್ನು ಶೇ 4ರಿಂದ 2ಕ್ಕೆ ಇಳಿಸಲಾಗುತ್ತದೆ. ಇದು ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ದೊಡ್ಡ ನಷ್ಟ. ಈ ನಷ್ಟವನ್ನು ಐದು ವರ್ಷಗಳ ಕಾಲ ಕೇಂದ್ರ ಸರ್ಕಾರ ಭರಿಸಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

ಈ ನಷ್ಟವನ್ನು ತುಂಬಿ ಕೊಡಲು 5 ವರ್ಷಗಳ ಅವಧಿಗೆ ₨ 33 ಸಾವಿರ ಕೋಟಿ ಬೇಕಾ ಗಬಹುದು ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಅಂದಾಜಿಸಿದ್ದಾರೆ. ಹೊಸ ವ್ಯವಸ್ಥೆಗೆ ಹೊಂದಿ ಕೊಳ್ಳುವ ಅವಧಿಯಲ್ಲಿ, ರಾಜ್ಯಗಳ ನಷ್ಟ ವನ್ನು ಇನ್ನಷ್ಟು ಕಡಿಮೆಗೊ ಳಿಸು ವುದಕ್ಕಾಗಿ ಅಂತರರಾಜ್ಯ ಸರಕು ಮಾರಾಟದ ಮೇಲೆ ಶೇ ಒಂದ ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವುದಕ್ಕೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT