ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಮಸೂದೆ ಮಂಡನೆ

ಬಜೆಟ್‌ ಅಧಿವೇಶನದಲ್ಲಿ ಚರ್ಚೆ– ಜೇಟ್ಲಿ
Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತೆರಿಗೆ ವ್ಯವಸ್ಥೆ­ಯಲ್ಲಿ ಭಾರಿ ಬದಲಾವಣೆಗಳನ್ನು ತರಲಿ­ರುವ ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಯನ್ನು ಲೋಕ­ಸಭೆಯಲ್ಲಿ ಶುಕ್ರವಾರ ಮಂಡಿಸ­ಲಾ­ಯಿತು.

ಈ ಸಂಬಂಧ ರಾಜ್ಯಗಳ ಅಭಿಪ್ರಾಯ, ಸಲಹೆಗಳನ್ನೆಲ್ಲಾ ಗಮನ­ದಲ್ಲಿರಿಸಿಕೊ­ಳ್ಳ­ಲಾ­ಗುವುದು ಎಂದು ಕೇಂದ್ರ ಸರ್ಕಾರವು ಈ ಸಂದರ್ಭದಲ್ಲಿ ಭರವಸೆ ನೀಡಿತು.

ಹೊಸ ಮಸೂದೆಯಿಂದ ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಲಾಭವಾ­ಗ­ಲಿದೆ ಎಂದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಈ ಮಸೂದೆ­ಯನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಗು­ವುದು ಎಂದು ಸ್ಪಷ್ಟಪಡಿಸಿದರು. ಜತೆಗೆ, ಮಸೂದೆಗೆ ಅಂಗೀಕಾರ ನೀಡುವ ಕೊನೆಯ ಕ್ಷಣದವರೆಗೂ ಯಾವುದೇ ಸಲಹೆಯ ಬಗ್ಗೆ ತೆರೆದ ಮನಸ್ಸು ಹೊಂದಿರುವುದಾಗಿ ಅವರು ತಿಳಿಸಿದರು.

ಸಚಿವ ಸಂಪುಟ ಬುಧವಾರ ಅಂಗೀಕರಿಸಿದ ಕರಡು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ಜೇಟ್ಲಿ ಅವರು ಇದರಿಂದ ರಾಜ್ಯಗಳಿಗೆ ಒಂದೇ ಒಂದು ರೂಪಾಯಿಯೂ ನಷ್ಟವಾಗುವುದಿಲ್ಲ ಎಂದರು.

ರಾಜ್ಯಸಭೆಯಲ್ಲಿ ಮಾತನಾಡಿದ ಜೇಟ್ಲಿ ಅವರು, ಈ ತೆರಿಗೆ ಪದ್ಧತಿಯು ಸಹಕಾರ ತತ್ವ ಆಧಾರಿತ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲಿದೆ ಎಂದರು.

ಕರಡಿನಲ್ಲಿ ಏನೇನಿದೆ?
*ರಾಜ್ಯಗಳಿಗೆ ಪರ್ಯಾಯ ನಿಧಿ ಮಂಜೂರು, ಮೊದಲ ಕಂತು ಮಾ. 31ರೊಳಗೆ ಬಿಡುಗಡೆ
*ರಾಜ್ಯಗಳಿಗೆ ಆಗುವ ಸಂಭಾವ್ಯ ನಷ್ಟವನ್ನು ಐದು ವರ್ಷಗಳ ಅವಧಿಯವರೆಗೆ ಕೇಂದ್ರದಿಂದ ತುಂಬಿಕೊಡುವ ಬಗ್ಗೆ ಸಾಂವಿಧಾನಿಕ ಖಾತ್ರಿ
*ಸರಕು ಮತ್ತು ಸೇವೆಗಳಿಗೆ ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸುವ ಉದ್ದೇಶ
ಮಾನವ ಬಳಕೆಯ ಮದ್ಯ ಸಂಬಂಧಿ ಉತ್ಪನ್ನ ಹೊರತುಪಡಿಸಿ ಮಿಕ್ಕೆಲ್ಲಾ ಸರಕು ಮತ್ತು ಸೇವೆಗಳಿಗೆ ಅನ್ವಯ
*ಪೆಟ್ರೋಲ್‌ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ಸರ್ಕಾರ ಅಧಿಸೂಚನೆ ಹೊರಡಿಸುವ ತನಕ ಅನ್ವಯವಿಲ್ಲ
*ರಾಜ್ಯಗಳಿಗೆ ಹೆಚ್ಚುವರಿ ಶೇ 1ರಷ್ಟು ತೆರಿಗೆ ವಿಧಿಸಲು ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT