ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ರಾಜ್ಯಗಳ ಹಣಕಾಸು ಸಚಿವರ ಮನವೊಲಿಸಿದ ಜೇಟ್ಲಿ

Last Updated 27 ಜುಲೈ 2016, 0:00 IST
ಅಕ್ಷರ ಗಾತ್ರ

ನವದೆಹಲಿ: ಹಲವು ವರ್ಷಗಳಿಂದ ಭಾರಿ ಚರ್ಚೆಗೆ ಕಾರಣವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸುವುದಕ್ಕೆ ಕಾಂಗ್ರೆಸ್‌ ವಿರೋಧದ ನಡುವೆಯೇ ರಾಜ್ಯಗಳ ಹಣಕಾಸು ಸಚಿವರ ಮನವೊಲಿಸುವಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಯಶಸ್ವಿಯಾಗಿದ್ದಾರೆ.

ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡುವ ಮತ್ತು ರಾಜ್ಯಗಳ ವರಮಾನ ಹೆಚ್ಚಿಸುವ ಜಿಎಸ್‌ಟಿ  ದರ ಚೌಕಟ್ಟಿಗೆ ರಾಜ್ಯಗಳ ಹಣಕಾಸು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.

ಈಗಿರುವ ಅಂತರರಾಜ್ಯ ತೆರಿಗೆ ಪ್ರಮಾಣಕ್ಕಿಂತ ಕಡಿಮೆ ತೆರಿಗೆ ವಿಧಿಸುವ ಹಾಗೂ ತೆರಿಗೆ ದರವನ್ನು ಕಾನೂನಿನಲ್ಲಿ ಸೇರಿಸದೇ ಇರುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಒಮ್ಮತ ಮೂಡಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ರಾಜ್ಯಗಳ ಹಣಕಾಸು ಸಚಿವರ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಜಿಎಸ್‌ಟಿ ಬಗ್ಗೆ ಇದ್ದ ಭಿನ್ನಾಭಿಪ್ರಾಯ ಬಗೆಹರಿದಿದೆ. ಮೊದಲ ಐದು ವರ್ಷ ಗಳಲ್ಲಿ ರಾಜ್ಯಗಳಿಗೆ ವರಮಾನ ನಷ್ಟವಾ ದರೆ ಸೂಕ್ತ ಪರಿಹಾರ ನೀಡುವುದಕ್ಕೆ ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಅವಕಾಶ ಇರಬೇಕು ಎಂಬ ಒಡಂಬಡಿಕೆಗೆ ಬರಲಾಗಿದೆ.

‘ಜಿಎಸ್‌ಟಿ ಜಾರಿಯಿಂದ ಸಾಮಾನ್ಯ ಜನರಿಗೆ ಮತ್ತು ವ್ಯಾಪಾರಸ್ಥರಿಗೆ ಲಾಭವಾಗಲಿದೆ. ರಾಜ್ಯಗಳ ವರಮಾನಕ್ಕೆ ಯಾವುದೇ ಧಕ್ಕೆಯಾಗದು’ ಎಂದು ಉನ್ನತಾಧಿಕಾರ ಸಮಿತಿಯ ಮುಖ್ಯಸ್ಥ ಹಾಗೂ ಪಶ್ಚಿಮ ಬಂಗಾಳ ಹಣಕಾಸು ಸಚಿವರೂ ಆಗಿರುವ ಅಮಿತ್‌ ಮಿತ್ರಾ ಅವರು ಐದು ಗಂಟೆ ನಡೆದ ಸಭೆಯ ಬಳಿಕ ತಿಳಿಸಿದ್ದಾರೆ.

‘ವಾರ್ಷಿಕ ₹1.5 ಕೋಟಿ ವಹಿ ವಾಟು ನಡೆಸುವ ಉದ್ಯಮಿಗಳು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಬರಬೇಕು. ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸು ವವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡಬೇಕು ಎಂಬ ನಿರ್ಧಾ ರವನ್ನು ಉನ್ನತಾಧಿಕಾರ ಸಮಿತಿ          ಸದಸ್ಯರು ತೆಗೆದುಕೊಂಡಿದ್ದಾರೆ’ ಎಂದಿದ್ದಾರೆ.

ಶೇ 1ರಷ್ಟು ಹೆಚ್ಚುವರಿ ತೆರಿಗೆ ಹೇರಲು ರಾಜ್ಯಗಳಿಗೆ ಅವಕಾಶ ನೀಡುವ ಪ್ರಸ್ತಾವ ಕೈಬಿಡಲಾಗಿದೆ ಎಂದು ಕೇರಳದ ಹಣಕಾಸು ಸಚಿವ ಕೆ.ಎಂ. ಮಾಣಿ ಹೇಳಿದ್ದಾರೆ.

ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್‌ ಸೇರಿದಂತೆ ಕೆಲವು ಕೈಗಾರಿಕಾ ರಾಜ್ಯಗಳ ಅನುಕೂಲಕ್ಕಾಗಿ ಶೇ 1 ರಷ್ಟು  ಹೆಚ್ಚುವರಿ ತೆರಿಗೆ ವಿಧಿಸಲು ಅವಕಾಶ ಪ್ರಸ್ತಾವ ಮಸೂದೆಯಲ್ಲಿದೆ. ಇದು ಜಿಎಸ್‌ಟಿಯ ಮೂಲತತ್ವಕ್ಕೆ ಅನುಗುಣವಾಗಿಲ್ಲ ಎಂದು ಹೇಳಿ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು.

ಮಸೂದೆ ಜಾರಿಗೆ ಎಐಎಡಿಎಂಕೆ ಹೊರತುಪಡಿಸಿ ಎಲ್ಲ ಪ್ರಾದೇಶಿಕ ಪಕ್ಷಗಳ ಬೆಂಬಲ ದೊರೆಯಬಹುದು ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.

ಮುಖ್ಯಾಂಶಗಳು
* ತೆರಿಗೆ ಹೊರೆ ಕಡಿಮೆ ಹಾಗೂ ವರಮಾನ ಹೆಚ್ಚಿಸುವ ದರ ಚೌಕಟ್ಟಿಗೆ ಒಪ್ಪಿಗೆ

* ಐದು ಗಂಟೆ ನಡೆದ ಸಭೆ
* ಶೇ 1 ರಷ್ಟು  ಹೆಚ್ಚುವರಿ ತೆರಿಗೆ ವಿಧಿಸಲು ಅವಕಾಶ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT