ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಸರ್ಕಾರ ಕಸರತ್ತು

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ
Last Updated 25 ನವೆಂಬರ್ 2015, 20:20 IST
ಅಕ್ಷರ ಗಾತ್ರ

ನವದೆಹಲಿ: ಗುರುವಾರದಿಂದ ಆರಂಭಗೊಳ್ಳಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ‘ಸರಕು ಮತ್ತು ಸೇವಾ ತೆರಿಗೆ ಮಸೂದೆ’ಗೆ ಅಂಗೀಕಾರ ಪಡೆಯಲು ಸರ್ಕಾರ ಶತಾಯಗತಾಯ ಪ್ರಯತ್ನ ನಡೆಸಿದೆ.

ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ವಿರೋಧಪಕ್ಷಗಳಿಗೆ ಈ ಸಂಬಂಧ ಮನವಿ ಮಾಡಿಕೊಂಡಿದ್ದಾರೆ.
ಚಳಿಗಾಲ ಅಧಿವೇಶನವನ್ನು ಸುಸೂತ್ರವಾಗಿ ನಡೆಸಲು ಸಹಕರಿಸುವಂತೆ ಕೋರಿಕೊಂಡಿರುವ ಮೋದಿ ಅವರು, ರಾಷ್ಟ್ರದ ಹಿತದೃಷ್ಟಿಯಿಂದ ‘ಸರಕು ಮತ್ತು ಸೇವಾ ತೆರಿಗೆ ಮಸೂದೆ’ (ಜಿಎಸ್‌ಟಿ)ಗೆ ಒಪ್ಪಿಗೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಬುಧವಾರ ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಣಕಾಸು ಸಚಿವ ಅರುಣ್‌ ಜೇಟ್ಲಿ ನಿಮ್ಮೊಂದಿಗೆ ಮಾತನಾಡಲಿದ್ದಾರೆ. ಪ್ರಮುಖ ಸುಧಾರಣೆ ವಿಷಯದಲ್ಲಿ ನಿಮ್ಮ ಸಂಶಯಗಳೇನಾದರೂ ಇದ್ದರೆ ಪರಿಹಾರ ಮಾಡಲಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕರಿಗೆ ಭರವಸೆ ನೀಡಿದರು.

ಜಿಎಸ್‌ಟಿ ಮಸೂದೆ ಅಂಗೀಕಾರಕ್ಕಾಗಿ ಕಲಾಪ ಸುಗಮವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಅಸಹಿಷ್ಣುತೆ ಕುರಿತ ಚರ್ಚೆಗೆ ಅವಕಾಶ ನೀಡಲೂ ಸರ್ಕಾರ ತೀರ್ಮಾನಿಸಿದೆ. ಆದರೆ, ಜಿಎಸ್‌ಟಿ ಮಸೂದೆ ಕುರಿತು ಗಂಭೀರ ಆಕ್ಷೇಪಗಳಿದ್ದು, ಮುಕ್ತ ಚರ್ಚೆಗೆ ಸಿದ್ಧವಿರುವುದಾಗಿ ಕಾಂಗ್ರೆಸ್‌ ಸ್ಪಷ್ಟಪಡಿಸಿದೆ. 

ಜಿಎಸ್‌ಟಿಗೆ ಸಂಬಂಧಿಸಿದಂತೆ ನಾವೂ ಕೆಲವು ಸಲಹೆಗಳನ್ನು ನೀಡಿದ್ದೇವೆ. ಅವುಗಳನ್ನು ಪರಿಗಣಿಸಿದರೆ ಮಸೂದೆಗೆ ಒಪ್ಪಿಗೆ ಕೊಡಲು ಸಿದ್ಧ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌, ಲೋಕಸಭೆ ಕಾಂಗ್ರೆಸ್‌ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಜಿಎಸ್‌ಟಿ ನಮ್ಮ ಮಸೂದೆ. ಅದು ಗ್ರಾಹಕರು, ವ್ಯಾಪಾರಿಗಳು ಹಾಗೂ ಉದ್ಯಮಿಗಳ ಪರವಾಗಿರಬೇಕು. ಯಾವುದೋ ಒಂದು ಗುಂಪಿಗೆ ಅನುಕೂಲ ಮಾಡುವಂತೆ ಇರಬಾರದು ಎನ್ನುವುದು ನಮ್ಮ ನಿಲುವು. ಈ ನಿಲುವನ್ನು ಗೌರವಿಸಿದರೆ ಸಹಕಾರ ಕೊಡಲು ಸಿದ್ಧ ಎಂದು ಗುಲಾಂ ನಬಿ ಮತ್ತು ಖರ್ಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಾವು ಅಸಹಿಷ್ಣುತೆ, ದಾದ್ರಿ ಘಟನೆ, ಬೆಲೆ ಏರಿಕೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಕುರಿತು ಚರ್ಚೆಗೆ ಅವಕಾಶ ಕೇಳಿದ್ದೇವೆ. ನಮ್ಮ ಅಭಿಪ್ರಾಯವನ್ನು ಗೌರವಿಸಿ, ಸದನ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಖರ್ಗೆ ಹೇಳಿದರು.

ಆದರೆ, ಈ ವಿಷಯದಲ್ಲಿ ರಾಜ್ಯಗಳ ಜತೆ ಸಮಾಲೋಚಿಸಬೇಕು. ಜಿಎಸ್‌ಟಿ ಜಾರಿಯಾದರೆ ತೆರಿಗೆ ಸಂಬಂಧದ ಶಾಸನಾತ್ಮಕ ಅಧಿಕಾರಗಳನ್ನು ರಾಜ್ಯಗಳು ಕಳೆದುಕೊಳ್ಳುತ್ತವೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಯೆಚೂರಿ ಸಲಹೆ ಮಾಡಿದರು.

ಜೆಡಿಯು ಬೆಂಬಲ: ಈ ಮಧ್ಯೆ, ಜಿಎಸ್‌ಟಿ ಬೆಂಬಲಿಸಲು ಜೆಡಿಯು ತೀರ್ಮಾನಿದೆ.
*
ಸಂಸತ್ತಿನ ಕಲಾಪವನ್ನು ಸುಸೂತ್ರವಾಗಿ ನಡೆಸಲು ಎಲ್ಲ ಪಕ್ಷಗಳ ಸಹಕಾರ ಅಗತ್ಯ. ಕಲಾಪ ಅಡೆತಡೆಯಿಲ್ಲದೆ ನಡೆದರೆ ಮಾತ್ರ ಜನರ ಆಶೋತ್ತರ ಈಡೇರಿಸಬಹುದು
- ನರೇಂದ್ರ ಮೋದಿ,
ಪ್ರಧಾನಿ
*
ಅಂಗೀಕಾರಕ್ಕೆ ರಾಹುಲ್‌ ಷರತ್ತು
ಬೆಂಗಳೂರು:
‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಬಗ್ಗೆ ಚರ್ಚಿಸಲು ಸಿದ್ಧ. ಆದರೆ, ಆಡಳಿತ ಪಕ್ಷಕ್ಕೇ ಅಂತಹ ಆಸಕ್ತಿ ಇಲ್ಲ. ಸಂಸತ್ತಿನಲ್ಲಿ ನಾವು ಮಾತನಾಡುವಾಗ ಮೈಕ್‌ಗಳನ್ನೇ ಆಫ್‌ ಮಾಡುವ ಕೆಟ್ಟ ಸಂಪ್ರದಾಯ ಈ ಸರ್ಕಾರ ಬಂದ ಮೇಲೆ ಆರಂಭವಾಗಿದೆ’ ಎಂದು  ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ನಾವು ಜಿಎಸ್‌ಟಿ ಪರ ಇದ್ದೇವೆ. ಅದನ್ನು ನಾವು ಈ ಹಿಂದೆ (ಯುಪಿಎ ಸರ್ಕಾರ) ಜಾರಿ ಮಾಡಲು ಮುಂದಾದಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇದೇ ಬಿಜೆಪಿಯವರು. ಈಗ ಕೆಲ ಬದಲಾವಣೆ ಮಾಡಿ ಜಾರಿಗೆ ತರಬೇಕು ಎನ್ನುತ್ತಿದ್ದಾರೆ. ಅದಕ್ಕೆ ನಮ್ಮ ಒಪ್ಪಿಗೆ ಇಲ್ಲ. ತೆರಿಗೆ ಪ್ರಮಾಣ ಸೇರಿದಂತೆ ಹಲವು ವಿಷಯಗಳಲ್ಲಿ ನಮ್ಮ ತಕರಾರು ಇದೆ. ಅದನ್ನು ಸರಿಪಡಿಸಿದರೆ ನಾವು ಬೆಂಬಲ ಕೊಡುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT