ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಸಹಮತಕ್ಕೆ ಯತ್ನ

ಸೋನಿಯಾ, ಸಿಂಗ್‌ ಜೊತೆ ಪ್ರಧಾನಿ ಮೋದಿ ‘ಚಾಯ್ ಪೆ ಚರ್ಚಾ’
Last Updated 27 ನವೆಂಬರ್ 2015, 19:38 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ವರ್ಷಗಳಿಂದ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರುವ ‘ಸರಕು ಹಾಗೂ ಸೇವಾ ತೆರಿಗೆ ಮಸೂದೆ’ (ಜಿಎಸ್‌ಟಿ)ಗೆ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲೇ ಒಪ್ಪಿಗೆ ಪಡೆಯಲು ಶತಾಯಗತಾಯ ಪ್ರಯತ್ನ ನಡೆಸಿರುವ ಸರ್ಕಾರ ಶುಕ್ರವಾರ ಕೊನೆಗೂ ಕಾಂಗ್ರೆಸ್‌ ಮುಖಂಡರ ಜತೆ ಸಮಾಲೋಚನೆ ಆರಂಭಿಸಿತು.

ಇಲ್ಲಿಯ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಅವರನ್ನು ಚಹಾಕ್ಕೆ ಆಹ್ವಾನಿಸಿ, ಜಿಎಸ್‌ಟಿ ಬಗ್ಗೆ ಉದ್ಭವಿಸಿರುವ ಬಿಕ್ಕಟ್ಟು ಬಗೆಹರಿಸಲು ಪ್ರಯತ್ನಿಸಿದರು.

ಜಿಎಸ್‌ಟಿ ಸಂವಿಧಾನ ತಿದ್ದುಪಡಿ ಮಸೂದೆ ಆಗಿರುವುದರಿಂದ  ಬೆಂಬಲ ನೀಡುವಂತೆ ಪ್ರಧಾನಿ ಮೋದಿ ಕಾಂಗ್ರೆಸ್‌ ನಾಯಕರಿಗೆ ಮನವಿ ಮಾಡಿದರು. ಮಾತುಕತೆ ವೇಳೆ ಕಾಂಗ್ರೆಸ್‌ ಮೂರು ವಿಷಯಗಳ ಸಂಬಂಧ ತನಗಿರುವ ತಕರಾರು ಏನು ಎಂಬುದನ್ನು ವಿವರಿಸಿತು.

ಸುಮಾರು 45 ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ ಕಾಂಗ್ರೆಸ್‌ ನಾಯಕರು, ಜಿಎಸ್‌ಟಿ ಕುರಿತ ತಮ್ಮ  ನಿಲುವನ್ನು ಸರ್ಕಾರದ ಮುಂದಿಟ್ಟರು. ಸರ್ಕಾರ ಸಹ ಕಾಂಗ್ರೆಸ್‌ ಎತ್ತಿರುವ ಪ್ರಶ್ನೆಗಳಿಗೆ ತನ್ನ ಪ್ರತಿಕ್ರಿಯೆ ಏನೆಂಬುದನ್ನು ಸ್ಪಷ್ಟಪಡಿಸಿತು. ಉಭಯತ್ರರ ನಿಲುವುಗಳ ಬಗ್ಗೆ ಆಯಾ ಪಕ್ಷಗಳೊಳಗೆ ಚರ್ಚಿಸಿ ಮಾತುಕತೆ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. 

ನರೇಂದ್ರ ಮೋದಿ ಅವರು ಪ್ರಧಾನಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಸಲ ಸೋನಿಯಾ ಗಾಂಧಿ ಅವರು ಪ್ರಧಾನಿ ನಿವಾಸಕ್ಕೆ ಬಂದು ಮಾತುಕತೆಯಲ್ಲಿ ಭಾಗವಹಿಸಿದ್ದರು. ಹಣಕಾಸು ಸಚಿವ ಅರುಣ್‌ ಜೇಟ್ಲಿ, ಸಂಸದೀಯ ವ್ಯವಹಾರ ಸಚಿವ ಎಂ. ವೆಂಕಯ್ಯ ನಾಯ್ಡು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತೆರೆಮರೆಯ ಬಿರುಸಿನ ಕಸರತ್ತಿನ ಬಳಿಕ ಪ್ರಧಾನಿ ಮತ್ತು ಕಾಂಗ್ರೆಸ್‌ ನಾಯಕರ ನಡುವೆ ಮಾತುಕತೆ ಸಾಧ್ಯವಾಯಿತು. ಜಿಎಸ್‌ಟಿ ಕುರಿತು ತಲೆದೋರಿರುವ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಆರಂಭವಾದ ಸಮಾಲೋಚನೆ ಸಕಾರಾತ್ಮಕವಾಗಿವೆ ಎಂದು ಸರ್ಕಾರ ಮತ್ತು ಕಾಂಗ್ರೆಸ್‌ ನಾಯಕರು ಹೇಳಿಕೊಂಡಿದ್ದಾರೆ.

ಸಂಸತ್ತಿನ ಮುಂದಿರುವ ಅನೇಕ ಮಸೂದೆಗಳ ಅಂಗೀಕಾರಕ್ಕೆ ವಿರೋಧ ಪಕ್ಷಗಳ ಸಹಕಾರ ಅಗತ್ಯವಿದೆ. ಸಚಿವ ವೆಂಕಯ್ಯ ನಾಯ್ಡು ಪ್ರತಿಯೊಂದು ಮಸೂದೆಗಳ ಬಗ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂನಬಿ ಆಜಾದ್‌, ಲೋಕಸಭೆ ಕಾಂಗ್ರೆಸ್‌ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಅರುಣ್‌ ಜೇಟ್ಲಿ  ತಿಳಿಸಿದರು.

ಸರ್ಕಾರ ಕಾಂಗ್ರೆಸ್‌ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಸುಳಿವು ನೀಡಿದೆ. ಏಪ್ರಿಲ್‌ 2016ರಿಂದ ಜಿಎಸ್‌ಟಿ ಜಾರಿಗೆ ತರಲು  ಸರ್ಕಾರ ಉದ್ದೇಶಿಸಿದೆ.
*
ಕಾಂಗ್ರೆಸ್‌ ಆಕ್ಷೇಪ
ಸರಕು ಮತ್ತು ಸೇವಾ ತೆರಿಗೆ ಮಿತಿ ಪ್ರಮಾಣ ಶೇ.18 ಮೀರಬಾರದು. ಮಸೂದೆಯಲ್ಲೇ ಇದನ್ನು ಸ್ಪಷ್ಟವಾಗಿ ನಮೂದಿಸಬೇಕು. ರಾಜ್ಯಗಳು ಹೆಚ್ಚುವರಿಯಾಗಿ ಜಿಎಸ್‌ಟಿ ಮೇಲೆ ಶೇ.1ರಷ್ಟು ತೆರಿಗೆ ಹಾಕಲು ಅಧಿಕಾರ ಕೊಡಬಾರದು ಎಂಬುದೂ ಸೇರಿದಂತೆ ಮೂರು ಆಕ್ಷೇಪಗಳನ್ನು ಕಾಂಗ್ರೆಸ್‌ ಎತ್ತಿದೆ. ತಾನು ಎತ್ತಿರುವ ಆಕ್ಷೇಪಗಳನ್ನು ಪರಿಹರಿಸದ ಹೊರತು ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದೂ ಪಟ್ಟು ಹಿಡಿದಿದೆ.

*
ಬಹುಮತ ಅಗತ್ಯ
ಜಿಎಸ್‌ಟಿ ಸಂವಿಧಾನ ತಿದ್ದುಪಡಿ ಮಸೂದೆ ಆಗಿರುವುದರಿಂದ ಅಂಗೀಕಾರ ಪಡೆಯಲು ಎರಡನೇ ಮೂರರಷ್ಟು  ಬಹುಮತ ಅಗತ್ಯ. ಎನ್‌ಡಿಎಗೆ ರಾಜ್ಯಸಭೆಯಲ್ಲಿ ಅಗತ್ಯ ಸಂಖ್ಯೆಯಲ್ಲಿ ಸದಸ್ಯರು ಇಲ್ಲದಿರುವುದರಿಂದ ಅಂಗೀಕಾರವಾಗದೆ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT