ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಜ್ಞಾಸೆ

ಕವಿತೆ
Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹರಿ ಮತ್ತು ಗಿರಿ, ಅವಳಿ ಜವಳಿ,
ಒಬ್ಬರಿನ್ನೊಬ್ಬರ ತದ್ರೂಪಿ;
ಕಂಡವರಿಗೆಲ್ಲ ಅಚ್ಚರಿಯೋ ಅಚ್ಚರಿ!
‘ಇದೆಂಥ ಜ಼ೆರಾಕ್ಸ್ ಕಾಪಿ!’

ದುರ್ದೈವದಿಂದ, ಪುಟ್ಟಮಕ್ಕಳಾಗಿದ್ದಾಗಲೇ
ಇವರಲ್ಲೊಬ್ಬ ಮೃತಪಟ್ಟ;
ಸತ್ತವನ್ಯಾರು? ಹರಿಯೋ? ಗಿರಿಯೋ?
ಸ್ವತಃ ಹೆತ್ತವರಿಗೂ ಅಸ್ಪಷ್ಟ.

ಹರಿಯೇ ಇರಬೇಕೆಂದು ಹೇಗೋ ಅಂದಾಜಿಸಿ,
ಉಳಿದವ ಗಿರಿ ಎಂದುಕೊಂಡರು;
ಹೀಗಾಗಿ ಉಳಿದವನ ಪಾಲಾಗಿ ಉಳಿಯಿತು
ಗಿರಿ ಎಂಬ ಹೆಸರು.

ಗಿರಿ ಕನ್ನಡಿ ನೋಡಿಕೊಂಡಾಗಲೆಲ್ಲ ಅಲ್ಲಿ
ಕಂಡಂತಾಗುತ್ತಿತ್ತು ಹರಿ;
ಹರಿ ಹೇಳುತ್ತಿದ್ದ, ‘ಲೋ ಗಿರಿ,
ಚೆನ್ನಾಗಿ ಓದು, ಬರಿ’.

ತಪ್ಪು ಮಾಡಿದಾಗ ಗಿರಿ, ಅನ್ನುತ್ತಿದ್ದ ಹರಿ,
‘ಅದು ತಪ್ಪಲ್ಲವೇನೋ, ಮರಿ?’
ಗಿರಿ ಅವನ ಮಾತಿಗೆ ಹಾಕುತ್ತಿದ್ದ ಕತ್ತರಿ,
‘ಈ ಕಾಲಕ್ಕೆ ಇದೇ ಸರಿ’.

ಮುಂದೆ ಗಿರಿ ಖ್ಯಾತ ಕಲಾವಿದನಾಗಿ ಬೆಳೆದ;
ಪಡೆದ ಹಲವು ಪ್ರಶಸ್ತಿಗಳ ಗರಿ;
ಆದರೆ ಅವನ ಮನಸ್ಸನ್ನು ಒಳಗೇ ಕೊರೆಯುತ್ತಿತ್ತು
ಸದಾ ಒಂದು ಕಿರಿಕಿರಿ.

‘ನಾನು ಗಿರಿಯೇ ಆಗಿದ್ದರೆ ಸರಿ, ಹಾಗಲ್ಲದೆ
ನಾ ನಿಜಕ್ಕೂ ಆಗಿದ್ದರೆ ಹರಿ,
ಕಷ್ಟ ಪಟ್ಟು ನಾ ಗಳಿಸಿದ ಈ ಹೆಸರು, ಪ್ರತಿಷ್ಠೆ,
ನನಗೇ ಇಲ್ಲವಾಯ್ತಲ್ಲರಿ!’

ಹರಿಯ ಈ ಪರಿಯ ಕಿರಿಕಿರಿಯ ಪರಿಹರಿಸಲು
ನಿರ್ಧರಿಸಿದ ಕೊನೆಗೆ ಗಿರಿ;
ಕನ್ನಡಿಯ ಮುಂದೆ ಹರಿಗೆದುರಾಗಿ ನಿಂತು
ಮಾಡಿಕೊಂಡ ಹರಾಕಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT