ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ ಇಂದು

ಬರ ಪರಿಸ್ಥಿತಿ: ಬಿಜೆಪಿ ತಂಡ ಪರಿಶೀಲನೆ
Last Updated 28 ಜುಲೈ 2014, 10:27 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಅಂತರ್ಜಲ ಕುಸಿತದ ಪ್ರಭಾವ ಕೆರೆಕಟ್ಟೆಗಳಲ್ಲಿ ನೀರಿಲ್ಲದೇ, ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಫಸಲು ಇಲ್ಲದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಬೆಳೆ ವಿಮೆ ನೀಡುವ ಜತೆಗೆ ಕೃಷಿ ಕಾರ್ಮಿಕರಿಗೂ ಪರಿಹಾರ ಹಾಗೂ ತಕ್ಷಣದಿಂದಲೇ ನದಿ ಮೂಲಗಳಿಂದ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಯೋಜನೆಗಳು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಮೂಲಕ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ವರದಿ ಸಲ್ಲಿಸುವುದಾಗಿ ಬಿಜೆಪಿ ರೈತ ಮೋರ್ಚಾದ ನೇತೃತ್ವದ ತಂಡ ತಿಳಿಸಿದೆ.

ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟಗಳನ್ನು ತಿಳಿದು, ಕೇಂದ್ರಕ್ಕೆ ವರದಿ ನೀಡುವ ಸಂಬಂಧ ರಾಜ್ಯ ಬಿಜೆಪಿ ರೈತ ಮೋರ್ಚಾದ ನಿರ್ದೇಶನದಂತೆ ಜಿಲ್ಲಾ ರೈತ ಮೋರ್ಚಾದ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಹಾಗೂ ಕೊಳ್ಳೇಗಾಲ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ  ಪರಿಶೀಲನೆ ನಡೆಸಿದರು.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಅಮ್ಮಣ್ಣಿ ಕೆರೆ, ರೈತರ ಜಮೀನಿನಲ್ಲಿ ಟೋಪಿ ಕಳಚಿ ನಿಂತಿರುವ ತೆಂಗಿನ ತೋಟ,  ಬೇಗೂರು ಹಾಗೂ ಹರವೆ ಹೋಬಳಿಯಲ್ಲಿ ಒಣಗಿ ನಿಂತಿರುವ ಫಸಲು, ಕೆರೆಹಳ್ಳಿ ಕೆರೆ ಬಳಿ ನಿರ್ಮಾಣ ಹಂತದಲ್ಲಿರುವ ಪಂಪ್ ಹೌಸ್, ಬೆಂಡರವಾಡಿ ಕೆರೆ, ಉಮ್ಮತ್ತೂರು ಕೆರೆ ಹಾಗೂ ಕುದೇರು ಭಾಗಗಳಿಗೆ ತೆರಳಿ ರೈತರಿಂದ ಮಾಹಿತಿ ಪಡೆದರು.

ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಮಾತನಾಡಿ, ‘ರಾಜ್ಯ ಸರ್ಕಾರ ನಿದ್ರೆ ಮಾಡುತ್ತಿದೆ. ಜಿಲ್ಲೆಯಲ್ಲಿ ರೈತರು ಮಳೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವಿಳಂಬವಾಗುತ್ತಿದೆ. ಉಮ್ಮತ್ತೂರು ಹಾಗೂ ಕುದೇರು ಭಾಗಗಳಲ್ಲಿ ಕುಡಿಯುುವ ನೀರಿಗಾಗಿ ನದಿ ಮೂಲದಿಂದ ಶಾಶ್ವತ ನೀರು ಕಲ್ಪಿಸುವ ಯೋಜನೆ  ತ್ವರಿತಗತಿಯಲ್ಲಿ ಆಗಬೇಕು ಎಂದ ಅವರು, ಈ ಸಮಸ್ಯೆಗಳನ್ನು ಮುಂದಿಟ್ಟುಕೊಂಡ ಬಿಜೆಪಿ ನಿರಂತರ ಹೋರಾಟ ಮಾಡಲಿದೆ’ ಎಂದರು.

ರೈತ ಮೊರ್ಚಾದ ಉಪಾಧ್ಯಕ್ಷ ಮಹೇಂದ್ರ ಮಾತನಾಡಿ, ‘ಈ ಭಾಗದಲ್ಲಿ ಸತತ ಮೂರು ವರ್ಷಗಳಿಂದ ಬರ ಆವರಿಸಿದೆ, ರೈತರು ಫಸಲು ಇಲ್ಲದೇ ಕಂಗಾಲಾಗಿದ್ದಾರೆ. ತಕ್ಷಣದಿಂದಲೇ ರಾಜ್ಯ ಸರ್ಕಾರ ಬರ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು’ ಎಂದರು. ಕಬಿನಿಯಿಂದ ಜಿಲ್ಲೆಯ 20ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾದರೆ ಹೆಚ್ಚಿನ ಅನುಕೂಲವಾಗಿದೆ. ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರು ಗುಳೆ ಹೋಗುವುದು ತಪ್ಪುತ್ತದೆ.

ಕೇಂದ್ರ ಸರ್ಕಾರ ಸಹ ವಿಶೇಷ ಆಸಕ್ತಿ ವಹಿಸಿ ರಾಜ್ಯದ ಬರ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದು ಕೃಷಿ ಸಚಿವರನ್ನು ಒತ್ತಾಯಿಸಲಾಗುವುದು ಎಂದು  ತಿಳಿಸಿದರು. ಮೂರು ದಿನಗಳ ಜಿಲ್ಲೆಯಲ್ಲಿ ಪ್ರವಾಸ ಮಾಡಿ ವಾಸ್ತವ ವರದಿಯನ್ನು ತಂಡ ಜುಲೈ 28 ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದೆ. ನಂತರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಮೂಲಕ ಕೇಂದ್ರ ಸರ್ಕಾರದ ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದರು.

ಮುಖಂಡರಾದ ಎಸ್. ಮಹದೇವಯ್ಯ, ಸಿ.ಎಸ್. ನಿರಂಜನ್‌ಕುಮಾರ್, ಎಸ್. ಸೋಮನಾಯಕ, ಆರ್. ಸುಂದರ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಮೇಲಾಜಿಪುರ ನಾಗೇಂದ್ರ, ಉಮ್ಮತ್ತೂರು ನಾಗೇಶ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮೂಡ್ನಾಕೂಡು ಕುಮಾರ್, ಹೊನ್ನಹಳ್ಳಿ ಸೋಮಣ್ಣ, ಮಂಡಲದ ಅಧ್ಯಕ್ಷ ಸತೀಶ್, ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT