ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ದಸರಾ ಮಹೋತ್ಸವಕ್ಕೆ ಕ್ಷಣಗಣನೆ

₨ 1 ಕೋಟಿ ನಿಗದಿ: ಸೆ. 25ಕ್ಕೆ ವಿಧ್ಯುಕ್ತ ಚಾಲನೆ
Last Updated 23 ಸೆಪ್ಟೆಂಬರ್ 2014, 9:51 IST
ಅಕ್ಷರ ಗಾತ್ರ

ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾದ ವಿಸ್ತರಣೆ ಭಾಗವಾಗಿ ಜಿಲ್ಲಾ ಕೇಂದ್ರದಲ್ಲೂ ಹಮ್ಮಿಕೊಂಡಿರುವ ದಸರಾ ಮಹೋತ್ಸವಕ್ಕೆ ಸೆ. 25ರಂದು ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ.

ಸುವ್ಯವಸ್ಥಿತವಾಗಿ ದಸರಾ ಮಹೋತ್ಸವ ಮತ್ತು ಗ್ರಾಮೀಣ ದಸರಾ ಆವರಣೆಗೆ ಜಿಲ್ಲಾಡಳಿತ, ಮೈಸೂರು ದಸರಾ ಮಹೋತ್ಸವ ಆಚರಣೆ ಸಮಿತಿ ಅಗತ್ಯ ಸಿದ್ಧತೆ ಕೈಗೊಂಡಿವೆ.

ಸೆ. 25ರಿಂದ ಅ. 1ರವರೆಗೆ ಚಾಮರಾಜನಗರ ದಸರಾ ಮಹೋತ್ಸವ ನಡೆಯಲಿದೆ. ಮುಖ್ಯ ಕಾರ್ಯಕ್ರಮದ ಉದ್ಘಾಟನೆಯು ಸೆ. 25ರಂದು ಸಂಜೆ 6.30ಗಂಟೆಗೆ ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯ ಆವರಣದ ವೇದಿಕೆಯಲ್ಲಿ ನೆರವೇರಲಿದೆ. ಸುಸಜ್ಜಿತ ವೇದಿಕೆ ನಿರ್ಮಾಣ ಮತ್ತು ಆಸನ ವ್ಯವಸ್ಥೆ ಕಲ್ಪಿಸುವ ಸಿದ್ಧತಾ ಕಾರ್ಯ ನಡೆದಿದೆ. ಜಿಲ್ಲೆಗೆ ಈ ಬಾರಿಯ ದಸರಾ ಮಹೋತ್ಸವಕ್ಕೆ ಸಮಿತಿಯಿಂದ ₨ 1 ಕೋಟಿ ನಿಗದಿಪಡಿಸಲಾಗಿದೆ. 

ವಿಭಿನ್ನ ಕಾರ್ಯಕ್ರಮ
‘ಚಾಮರಾಜನಗರ ಗಡಿ ಜಿಲ್ಲೆಯು ಮೈಸೂರಿನೊಂದಿಗೆ ಇಂದಿಗೂ ಪಾರಂಪರಿಕವಾಗಿ ಅವಿನಾಭಾವ ಸಂಬಂಧ ಹೊಂದಿದೆ. ಹೀಗಾಗಿ, ರಾಜ್ಯ ಸರ್ಕಾರದಿಂದ ಕಳೆದ ಸಾಲಿನಿಂದಲೇ ಚಾಮರಾಜನಗರ ಜಿಲ್ಲೆಯಲ್ಲೂ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಈ ಬಾರಿ ಮತ್ತಷ್ಟು ವಿಭಿನ್ನ ಕಾರ್ಯಕ್ರಮಗಳ ಮೂಲಕ ಚಾಮರಾಜನಗರ ದಸರಾ ಮಹೋತ್ಸವ ನಡೆಸಲು ಅಗತ್ಯ ಸಿದ್ಧತೆಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌. ಮಹದೇವ­ಪ್ರಸಾದ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲೂ ಗ್ರಾಮೀಣ ದಸರಾ ಆಚರಿಸಲಾಗುತ್ತಿದೆ. ಸೆ. 27ರಂದು ಕೊಳ್ಳೇಗಾಲ,
ಸೆ. 29ರಂದು ಯಳಂದೂರು ಮತ್ತು ಗುಂಡ್ಲುಪೇಟೆ, ಸೆ. 30ರಂದು ಹನೂರು ಪಟ್ಟಣದಲ್ಲಿ ಗ್ರಾಮೀಣ ದಸರಾ ಮೆರವಣಿಗೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸೆ. 25ರಂದು ಬೆಳಿಗ್ಗೆ 10.44 ಗಂಟೆಗೆ ಜಿಲ್ಲಾ ಕೇಂದ್ರದ ಚಾಮರಾಜೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯದೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಅಂದು ಸಂಜೆ 6ಗಂಟೆಗೆ ಜೈಭುವನೇಶ್ವರಿ ವೃತ್ತದಲ್ಲಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಉದ್ಘಾಟಿಸಲಾಗುತ್ತದೆ. ಸಂಜೆ 6.30ಗಂಟೆಗೆ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಮುಖ್ಯ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಇದೇ ವೇದಿಕೆಯಲ್ಲಿ ಪ್ರತಿದಿನ ವಿವಿಧ  ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ. 25 ರಿಂದ ಅ. 1ರವರೆಗೆ ನಡೆಯಲಿವೆ. ಕಾಲೇಜು ವಿದ್ಯಾರ್ಥಿಗಳಿಂದ ಯುವ ಸಂಭ್ರಮ, ಖ್ಯಾತ ಕಲಾವಿದರಿಂದ ಚಲನಚಿತ್ರ ಸಂಗೀತ, ಹಾಸ್ಯ ಕಾರ್ಯಕ್ರಮ, ವಿವಿಧ ನೃತ್ಯರೂಪಕ, ಶಾಸ್ತ್ರೀಯ ಸಂಗೀತ, ಜನಪದೋತ್ಸವ, ಗಾಯನ, ವಾದನ ಸೇರಿದಂತೆ ಹಲವು ಕಾರ್ಯಕ್ರಮಗಳು ಪ್ರೇಕ್ಷಕರ ಮನ ರಂಜಿಸಲಿವೆ ಎಂದರು.

ಸೆ. 30ಕ್ಕೆ ಕವಿಗೋಷ್ಠಿ
ಸೆ. 30ರಂದು ಬೆಳಿಗ್ಗೆ 11ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 4ಗಂಟೆಗೆ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಮೆರವಣಿಗೆಗೆ ಜಿಲ್ಲಾಡಳಿತ ಭವನದಿಂದ ಚಾಲನೆ ಸಿಗಲಿದೆ ಎಂದರು ಸಚಿವ ಮಹದೇವಪ್ರಸಾದ್‌.

ವೈವಿಧ್ಯಮಯ ಜನಪದ ಕಲಾ ತಂಡಗಳೊಂದಿಗೆ ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಸಂಪ್ರದಾಯ ಬಿಂಬಿಸಲು ಆನೆ ಕರೆತರುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ, ಆನೆ ಮೇಲೆ ಚಾಮುಂಡೇಶ್ವರಿ ದೇವಿಯ ಭಾವಚಿತ್ರವಿಟ್ಟು ಮೆರವಣಿಗೆ ಮಾಡುವುದಿಲ್ಲ. ಪರಂಪರೆಯ ಆಚರಣೆ ದೃಷ್ಟಿಯಿಂದ ಮಾತ್ರ ಮೆರವಣಿಗೆಯಲ್ಲಿ ಆನೆ ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ಜಿಲ್ಲಾಡಳಿತ ಭವನದಿಂದ ಹೊರಡಲಿರುವ ಮೆರವಣಿಗೆಯು ಜೋಡಿರಸ್ತೆ ಮೂಲಕ ಭುವನೇಶ್ವರಿ ವೃತ್ತಕ್ಕೆ ಸೇರಲಿದೆ. ಅಲ್ಲಿಂದ ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣ, ಗುಂಡ್ಲುಪೇಟೆ ವೃತ್ತ, ದೊಡ್ಡಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತದ ಮೂಲಕ ಸಂಜೆ 6ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಆವರಣಕ್ಕೆ ತಲುಪಲಿದೆ.

ಈ ಬಾರಿ ಆಕರ್ಷಕ ಬಾಣಬಿರುಸುಗಳ ಪ್ರದರ್ಶನವಿದೆ. 7 ದಿನಗಳ ಕಾಲವೂ ನಗರದಲ್ಲಿ ನಡೆಯಲಿರುವ ದಸರಾ ಕಾರ್ಯಕ್ರಮದ ವೀಕ್ಷಣೆಗೆ ಜಿಲ್ಲೆಯ ಜನರ ಅನುಕೂಲಕ್ಕಾಗಿ ವಿವಿಧ ಭಾಗಗಳಿಂದ ಹೋಗಿಬರಲು ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ವಿದ್ಯುತ್ ದೀಪಾಲಂಕಾರವು ಈ ಬಾರಿಯ ಪ್ರಮುಖ ಆಕರ್ಷಣೆ. ನಗರದ ಮುಖ್ಯರಸ್ತೆ, ಸರ್ಕಾರಿ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತಿದೆ. ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಗುಂಡ್ಲುಪೇಟೆ ವೃತ್ತದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾ­ಗುತ್ತದೆ. ನಗರದ ಅಂಗಡಿಗಳು, ವಾಣಿಜ್ಯ ಸಂಕೀರ್ಣ ಕಟ್ಟಡ ಹಾಗೂ ಆಯಾ ಬೀದಿಗಳನ್ನು ವಿದ್ಯುತ್ ದೀಪಗಳಿಂದ  ಅಲಂಕರಿಸಲು ವರ್ತಕರಿಗೆ ಕೋರಲಾಗಿದೆ ಎಂದರು.

ದಸರಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರಸಭೆಯು ನಗರದ ಎಲ್ಲ ಪ್ರಮುಖ ಬೀದಿ, ಮಾರ್ಗಗಳಲ್ಲಿ ಸ್ಪಚ್ಛತೆಗೆ ವಿಶೇಷ ಕ್ರಮಕೈಗೊ­ಳ್ಳಲಿದೆ. ಪ್ರಮುಖ ಮಾರ್ಗಗಳನ್ನು ಶುಚಿಗೊಳಿಸಿ ತಳಿರುತೋರಣಗಳಿಂದ ಸಿಂಗರಿಸಲಾಗುತ್ತದೆ ಎಂದರು.
ಇದೇ ವೇಳೆ ದಸರಾ ಮಹೋತ್ಸವದ ಪೋಸ್ಟರ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆಗೊಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ
ಎಸ್. ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ರಂಗಸ್ವಾಮಿ ನಾಯಕ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಅಣ್ಣೇಗೌಡ ಹಾಜರಿದ್ದರು.

ದಸರಾ ಉದ್ಘಾಟನಾ ಸಮಾರಂಭ
ಚಾಮರಾಜನಗರ:
ಚಾಮರಾಜನಗರ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮವು ನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಸೆ. 25ರಂದು ಸಂಜೆ 6.30 ಗಂಟೆಗೆ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಉದ್ಘಾಟನೆ ನೆರವೇರಿಸಲಿದ್ದಾರೆ. ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಜ್ಯೋತಿ ಬೆಳಗಿಸಲಿದ್ದಾರೆ. ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದ ಆರ್. ಧ್ರುವನಾರಾಯಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಿ.ಸಿ. ನಾಗೇಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ವಿಧಾನ ಪರಿಷತ್ ಸದಸ್ಯರಾದ ಗೋ. ಮಧುಸೂದನ, ಸಂದೇಶ್ ನಾಗರಾಜು, ಮರಿತಿಬ್ಬೇಗೌಡ, ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷ ಎಸ್. ನಂಜುಂಡಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ದಸರಾ ಪ್ರಚಾರಕ್ಕೆ ಚಾಲನೆ
ಚಾಮರಾಜನಗರ:
ಚಾಮರಾಜನಗರ ದಸರಾ ಮಹೋತ್ಸವದ ಕಾರ್ಯಕ್ರಮಗಳ ಬಗ್ಗೆ ವಿವಿಧ ಭಾಗಗಳಿಗೆ ತೆರಳಿ ಪ್ರಚುರಪಡಿಸಲು ವಿನ್ಯಾಸಗೊಳಿಸಿರುವ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ

ಎಚ್.ಎಸ್. ಮಹದೇವ ಪ್ರಸಾದ್ ಸೋಮವಾರ ಚಾಲನೆ ನೀಡಿದರು. ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿಯನ್ನು ಅಳವಡಿಸಿರುವ ವಾಹನಕ್ಕೆ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹಸಿರು ನಿಶಾನೆ ತೋರಿದರು.

ನಗರಸಭೆ ಅಧ್ಯಕ್ಷ ಎಸ್. ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌. ರಂಗಸ್ವಾಮಿ ನಾಯಕ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಸೇರಿದಂತೆ ಇತರರು  ಹಾಜರಿದ್ದರು.

ಪುಟ್ಟರಂಗಶೆಟ್ಟಿ ಕಡೆಗಣನೆ ಆರೋಪ
ಚಾಮರಾಜನಗರ:
ಚಾಮರಾಜನಗರ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಶಾಸಕರ ಬೆಂಬಲಿಗರು ಜಿಲ್ಲಾಡಳಿತ ಭವನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಜಿಲ್ಲಾಡಳಿತ ಮತ್ತು ದಸರಾ ಆಚರಣೆ ಸಮಿತಿಯು ಶಾಸಕ ಪುಟ್ಟರಂಗಶೆಟ್ಟಿ ಮತ್ತು ಸಂಸದ ಆರ್‌. ಧ್ರುವನಾರಾಯಣ ಅವರನ್ನು ಕಡೆಗಣಿಸಿದೆ. ದಸರಾ ಆಚರಣೆ ಸಂಬಂಧ ಅಳವಡಿಸಿರುವ ಪೋಸ್ಟರ್‌ಗಳಲ್ಲಿ ಈ ಇಬ್ಬರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ದೂರಿದರು.

ಈ ನಡುವೆ ಮಾಧ್ಯಮದವರ ಮುಂದೆ ಕೆಲವು ಮುಖಂಡರು ಪ್ರತಿಕ್ರಿಯೆ ಕೊಡಲು ಮುಂದಾದರು. ಆ ವೇಳೆ ತಮ್ಮ ವಾದ ಸಮರ್ಥಿಸಿಕೊಂಡು ಮಾಧ್ಯಮದವರೊಂದಿಗೆ ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು. ಕೊನೆಗೆ, ಮುಖಂಡರು ಕ್ಷಮೆಯಾಚಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT