ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಪಂಚಾಯತಿ ಸದಸ್ಯರು ಅಧಿಕಾರಿಗಳ ಜಟಾಪಟಿ

Last Updated 25 ಏಪ್ರಿಲ್ 2015, 10:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯಸಭೆಯು ಅಧಿಕಾರಿಗಳು ಮತ್ತು ಸದಸ್ಯರ ಮಧ್ಯೆ ಮಾತಿನ ಚಕಮಕಿಗೆ ವೇದಿಕೆಯಾಯಿತು.

‘ಎಲ್ಲ ವಿಷಯಕ್ಕೂ ನಮ್ಮನ್ನು ಗುರಿಯಾಗಿಟ್ಟುಕೊಂಡು ಟೀಕಿಸಬೇಡಿ’ ಎಂದು ಅಧಿಕಾರಿಗಳು ಹೇಳಿದರೆ, ‘ಎಲ್ಲವನ್ನೂ ನೀವು ನಿರ್ಧರಿಸುವುದಾದರೆ ನಾವು ಜಿಲ್ಲಾ ಪಂಚಾಯಿತಿ ಸದಸ್ಯರು ಯಾಕಿರಬೇಕು’ ಎಂದು ಸದಸ್ಯರು ಕಿಡಿಕಾರಿದರು. ಮಾತಿನ ಚಕಮಕಿ ಕಾವೇರುತ್ತಿರುವುದು ಕಂಡು ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಸಮಾಧಾನಪಡಿಸಲು ಯತ್ನಿಸಿದರು. ಸದಸ್ಯರನ್ನು ಕೆ.ಎನ್‌.ಕೇಶವರೆಡ್ಡಿಮತ್ತು ಅಧಿಕಾರಿಗಳನ್ನು ಬಿ.ಬಿ.ಕಾವೇರಿಸುಮ್ಮನಾಗಿಸಿದರು. ಶಾಂತಿಯುತವಾಗಿ ಸಭೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ನಮ್ಮನ್ನು ದೂಷಿಸಬೇಡಿ:  ಬಾಗೇಪಲ್ಲಿ ತಾಲ್ಲೂಕು ಯಲ್ಲಂಪಲ್ಲಿಯಲ್ಲಿ ಶಾಲಾ ರಂಗಮಂದಿರಕ್ಕೆ ಅಡ್ಡವಾಗಿ ಆರ್‌ಎಂಎಸ್‌ಎ ಯೋಜನೆಯಡಿ ಕಟ್ಟಡ ಕಟ್ಟಲಾಗುತ್ತಿದೆ. ಹೀಗಾದರೆ ರಂಗಮಂದಿರ ಅಲ್ಲಿದ್ದು ಏನು ಪ್ರಯೋಜನ? ಕಟ್ಟಡ ಕಟ್ಟಿಸುವ ಮುನ್ನ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಿಸಬೇಕಿತ್ತು. ಕಟ್ಟಡ ಕಳಪೆ ಗುಣಮಟ್ಟದಿಂದ ಕೂಡಿದೆ. ನಾವು ವಾಸಿಸುವ ಮನೆ ಸೋರುವುದಿಲ್ಲ. ಆದರೆ ಸರ್ಕಾರಿ ಕಟ್ಟಡಗಳು ಉದ್ಘಾಟನೆಗೊಳ್ಳುವ ಮುನ್ನವೇ ಸೋರುತ್ತವೆ’ ಎಂದು ಸದಸ್ಯೆ ಬಿ.ಸಾವಿತ್ರಮ್ಮ ತಿಳಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ.ಅಶ್ವತ್ಥರೆಡ್ಡಿ ಮಾತನಾಡಿ, ‘ಬೇರೆಯಲ್ಲೂ ಜಾಗವಿರದ ಕಾರಣ ಅಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಸರ್ಕಾರಿ ಕಟ್ಟಡ ಕಟ್ಟುವ ಹಿಂದೆ ವಿಧಾನಸೌಧದಲ್ಲಿ ಮೇಲಿನಿಂದ ಕೆಳಗಿನವರೆಗೆ ಎಲ್ಲರ ಕೈವಾಡ ಇರುತ್ತದೆ.

ಯಾರ್‌್ಯಾರಿಗೆ ಜವಾಬ್ದಾರಿ ವಹಿಸಬೇಕು ಎಂದು ವಿಧಾನಸೌಧದಲ್ಲಿ ನಿಶ್ಚಯವಾಗುತ್ತದೆ. ಆದರೆ ಇಂತಹ ಸಭೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು, ಎಂಜಿನಿಯರ್‌ಗಳನ್ನು ಮತ್ತು ಇತರೆ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಟೀಕಿಸುವುದು ಸರಿಯಲ್ಲ. ಕಟ್ಟಡ ನಿರ್ಮಾಣ ನಮ್ಮೊಬ್ಬರದೇ ಜವಾಬ್ದಾರಿಯಲ್ಲ’ ಎಂದರು.

ಅಧಿಕಾರಿಗಳೇ ನಿರ್ಧರಿಸಲಿ: ಚಿಂತಾಮಣಿ ತಾಲ್ಲೂಕಿನ ನಂದನವನದ ಮಿಟ್ಟಹಳ್ಳಿಯಲ್ಲಿ ಕೊಳವೆಬಾವಿ ಕೊರೆದು ಎರಡು ವರ್ಷಗಳಾದರೂ ಈವರೆಗೆ ಪಂಪ್‌–ಮೋಟರ್‌ ಅಳವಡಿಸಿಲ್ಲ. ಈ ಬಗ್ಗೆ ಪ್ರತಿ ಸಭೆಯಲ್ಲಿ ಪ್ರಸ್ತಾಪಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಎನ್‌.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಮೂರ್ತಿ, ಈ ಸಲದ ಕಾರ್ಯಯೋಜನೆ ಪಟ್ಟಿಯಲ್ಲಿ ಸೇರಿಸಿಲ್ಲ. ಶಾಸಕರ ಸೂಚನೆ ಮೇರೆಗೆ ಕೆಲ ಕೊಳವೆಬಾವಿಗಳಿಗೆ ಪಂಪ್–‌ಮೋಟರ್‌ ಅಳವಡಿಸಲಾಗುತ್ತಿದೆ’ ಎಂದರು.
ಇದರಿಂದ ಸಿಟ್ಟಿಗೆದ್ದ ಶ್ರೀರಾಮರೆಡ್ಡಿ, ಎಲ್ಲ ಅಧಿಕಾರಿಗಳೇ ನಿರ್ಧರಿಸುವುದಾದರೆ, ನಾವ್ಯಾಕೆ ಇರಬೇಕು? ಜಿಲ್ಲಾ ಪಂಚಾಯತಿ ಎಂಬುದು ಯಾಕಿರಬೇಕು? ಯಾಕೆ ಇಲ್ಲಿ ಚರ್ಚಿಸಬೇಕು? ನಾನು ಸೂಚಿಸಿದ ಪಂಪ್‌–ಮೋಟರ್‌ ವಿಷಯವನ್ನು ಸಭೆ ನಡಾವಳಿಯಲ್ಲೂ ದಾಖಲಿಸಿಲ್ಲ. ಅದರ ಸ್ಥಿತಿ ಏನಾಯಿತು ಎಂಬ ಬಗ್ಗೆ ಸರಿಯಾದ ಮಾಹಿತಿಯೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪೂರಕವಾಗಿ ಬಿ.ಬಿ.ಕಾವೇರಿ, ‘ನೀವು ಹೀಗೆಲ್ಲ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ. ನಿಯಮಾನುಸಾರವಾಗಿ ಕೆಲಸ ಮಾಡುತ್ತಿದ್ದು, ಅವರ ಮನೋಸ್ಥೈರ್ಯ ಕುಗ್ಗಿಸಬೇಡಿ. ಮನಬಂದಂತೆ ಟೀಕಿಸಬೇಡಿ’ ಎಂದರು. ಇದರಿಂದ ಇನ್ನೂ ಸಿಟ್ಟಿಗೆದ್ದ ಶ್ರೀರಾಮರೆಡ್ಡಿ ಸಭಾತ್ಯಾಗ ಮಾಡಲು ಮುಂದಾದರು. ಅವರು ಬಾಗಿಲಿನತ್ತ ಹೊರಡುತ್ತಿದ್ದಂತೆಯೇ ಕೆ.ಎನ್‌.ಕೇಶವರೆಡ್ಡಿ ಸಮಾಧಾನಪಡಿಸಿ ಮತ್ತೆ ಕೂರಿಸಿದರು.

ಸೌಹಾರ್ದದಿಂದ ಕೆಲಸ ಮಾಡೋಣ: ‘ಅಧಿಕಾರಿಗಳ ಮೇಲೆ ನಮಗೆ ದ್ವೇಷ ಅಥವಾ ಸಿಟ್ಟಿಲ್ಲ. ನೀವು ಉತ್ತಮ ರೀತಿಯಲ್ಲಿ ಕೆಲಸ ಮಾಡಿದರೆ ಶ್ಲಾಘಿಸುತ್ತೇವೆ. ಲೋಪ–ದೋಷಗಳು ಕಂಡು ಬಂದರೆ ಅದನ್ನು ಪ್ರಶ್ನಿಸುತ್ತೇವೆ. ಗ್ರಾಮಗಳಲ್ಲಿ ನೀರು ಬಾರದಿದ್ದರೆ, ಜನರು ನಮ್ಮ ಮನೆಬಾಗಿಲಿಗೆ ಬರುತ್ತಾರೆ. ನಾವು ಉತ್ತರ ನೀಡಬೇಕಾಗುತ್ತದೆ. ಅಧಿಕಾರಿಗಳು ಕೂಡ ನಮ್ಮ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಸೌಹಾರ್ದಯುತವಾಗಿ ಜನ ಪರವಾಗಿ ಕೆಲಸ ಮಾಡೋಣ’ ಎಂದು ಕೆ.ಎನ್‌.ಕೇಶವರೆಡ್ಡಿ ತಿಳಿಸಿದರು.

‘ಕಾರ್ಯಪಡೆ ಮತ್ತು ಇನ್ನಿತರ ಸಭೆಗಳಲ್ಲಿ ಅಧಿಕಾರಿಗಳು ಶಾಸಕರ ಮಾತು ಕೇಳುತ್ತಾರೆ ಎಂಬ ಭಾವನೆ ಜಿಲ್ಲಾ ಪಂಚಾಯತಿ ಸದಸ್ಯರಲ್ಲಿ ಮೂಡಿದೆ. ಇಂಥದ್ದಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು. ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಅನುಷ್ಠಾನಗೊಳಿಸುವ ಮುನ್ನ ಆಯಾ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯರೊಂದಿಗೆ ಚರ್ಚಿಸಿ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಪ್ಪಿಗೆ ಪಡೆದ ಬಳಿಕ ಕಾಮಗಾರಿ ಆರಂಭಿಸಿ’ ಎಂದು ಬಿ.ಬಿ.ಕಾವೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT